ಹಾಣಾದಿ- ಕಪಿಲ ಪಿ ಹುಮನಾಬಾದೆ ಅವರ ಮೊದಲ ಕಾದಂಬರಿ. ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರರ ಚೊಚ್ಚಲ ಕೃತಿ ಪ್ರೋತ್ಸಾಹಧನಕ್ಕೆ ಆಯ್ಕೆಯಾಗಿರುವ ಈ ಕೃತಿ ಹಲವು ಕಾರಣಗಳಿಂದ ಗಮನ ಸೆಳೆಯುತ್ತದೆ. ವರ್ತಮಾನ ಮತ್ತು ಭೂತಕಾಲದ ಜತೆಜತೆಗೆ ಸಾಗುವ, ನೆನಪುಗಳ ಸಿಕ್ಕುಗಳಲ್ಲಿ ಓದುಗನನ್ನು ಸಿಲುಕಿಸುವ ಕಾದಂಬರಿ ವಾಸ್ತವತೆಯ ತಂತ್ರವನ್ನು ಬಳಸುತ್ತದೆ. ಕಥೆಯೊಳಗೆ ಕಥೆ, ಅದರೊಳಗಿನ್ನೊಂದು ಕಥೆ ಎಂಬಂತೆ ಇದರ ನಿರೂಪಣೆ. ಕಾದಂಬರಿಯಲ್ಲಿ ಜನಪದ ರಮ್ಯಾದ್ಬುತ ಕಥೆಗಳಲ್ಲಿರುವಂತೆ ಗುಬ್ಬಿ ಆಯಿ ಎಂಬ ಆಡಗೊಳಜ್ಜಿ ಒಬ್ಬಳಿದ್ದಾಳೆ. ಬೇತಾಳವನ್ನು ಬೆನ್ನಿಗೆ ಹಾಕಿಕೊಂಡಿರುವ ರಾಜಾ ತ್ರಿವಿಕ್ರಮನಂತೆ ನೆನಪುಗಳ ಪಾಥೆಯವನ್ನು ಹೊತ್ತ ಕಥಾನಿರೂಪಕನಿದ್ದಾನೆ. ಅವರ ಮಾತುಕತೆ, ನೆನಪು, ಉಪಕಥೆಗಳು ಭ್ರಮ-ವಿಭ್ರಮ ಲೋಕವನ್ನು ಸೃಷ್ಟಿಸುತ್ತವೆ. ಒಂದು ಗ್ರಾಮದ ಅವನತಿ, ಸಾವು-ನೋವು, ವಿಷಮ ಸಂಸಾರ, ಸಂಬಂಧಗಳು, ಮಾನವ ಸಹಜ ದ್ವೇಷಾಸೂಯೆ ಬದುಕು ಬಲಿ ಕೊಡುವ ನಂಬಿಕೆ ಇತ್ಯಾದಿಗಳು ಈ ಗಾರುಡಿ ಲೋಕದಲ್ಲಿ ಬಿಚ್ಚಿಕೊಳ್ಳುತ್ತವೆ
ನೆನಪುಗಳ ಮಾಲೆಯಲ್ಲಿ ಸಿಹಿ-ಕಹಿ ಮೇಳೈಸಿ ಹೀಗೊಂದು ಕಾದಂಬರಿ -
ಓದಲೆಂದು ಚಿಕ್ಕ ವಯಸ್ಸಿಗೇ ದೂರ ಕಳಿಸುವ ಅಪ್ಪ, ಮನಿ ಆರ್ಡರ್ರಿಗಷ್ಟೇ ಅಪ್ಪನೆಡೆಗಿನ ಜವಾಬ್ದಾರಿಯನ್ನು ಸೀಮಿತಗೊಳಿಸಿಕೊಂಡ ಮಗ ಮತ್ತೊಂದಷ್ಟು ಸಂಬಂಧಗಳಿಲ್ಲದ ಬಂಧುಗಳ ಕತೆ ನೆನಪುಗಳ ಸರಮಾಲೆಯ ಸುತ್ತ ಹೆಣೆಯಲ್ಪಟ್ಟಿದೆ. 'ಈ ಮುದುಕಿಯರ ಬಾಯಿಂದ ಕಥೆಯ ಕೇಳಬಾರದು ನೋಡು! ಎದುರಿನವರಿಗೆ ಬೇಕಾದ್ದು ಬಿಟ್ಟು ಉಳಿದೆಲ್ಲವನ್ನು ಹೇಳುತ್ತಾರೆ' ಎನ್ನುತ್ತಲೇ ಇಡೀ ಕಥೆಯ ಸೂತ್ರಧಾರಿಯಾದ ಗುಬ್ಬಿ ಅಜ್ಜಿಯ ಪಾತ್ರವಂತೂ ಅದ್ಬುತ!
ಮಗನನ್ನು ನಿರಾಯಾಸವಾಗಿ ದೂರ ಮಾಡಿಕೊಂಡ ಅಪ್ಪ ಮರವೊಂದನ್ನು ಹಚ್ಚಿಕೊಂಡು ಅದನ್ನೇ ಬಂಧುವಾಗಿಸಿಕೊಳ್ಳುವುದು, ಯಾರೋ ಗದರಿಸಿ ಹೋದಂತೆ ಮುಗಿಲು ಗಂಭೀರವಾಗಿತ್ತು ಎನ್ನುತ್ತಾ, ಬರೀ ಮೈಯಲ್ಲಿ ನಿಂತ/ ಮುಗಿಲನ್ನು ದಿಟ್ಟಿಸುವ ಅಂಗಳ ಎನ್ನುತ್ತಾ ಜೀವವಿಲ್ಲದ್ದಕ್ಕೂ ವ್ಯಕ್ತಿತ್ವ ಆರೋಪಿಸುವ ಮಗನ ಸ್ವಭಾವಗಳು ವೈರುಧ್ಯದಲ್ಲೂ ಸಾಮ್ಯವೆನಿಸಿ ಆಶ್ಚರ್ಯ ಉಂಟುಮಾಡುತ್ತದೆ.
ಒಬ್ಬ ವ್ಯಕ್ತಿಯ ಒಂದು ಮರದೆಡೆಗಿನ ಪ್ರೀತಿ ಹಾಗೂ ಅದರ ವಿರುದ್ಧ ಇಡೀ ಊರಿನ ಕುತೂಹಲ, ಭಯ, ಸಿಟ್ಟು, ರಾಜಕೀಯ ಹಾಗೂ ಹಠದ ಪರಿಣಾಮವಾಗಿ ಜರುಗುವ ವಿಚಿತ್ರ, ಅತಿ ಸೂಕ್ಷ್ಮ ಘಟನೆಗಳನ್ನೊಳಗೊಂಡ ಕಾದಂಬರಿ ಒಂದೊಳ್ಳೇ suspense thriller cinemaದಂತಿದೆ. ತಮ್ಮ ಮೊದಲ ಕಾದಂಬರಿಯಲ್ಲೇ ಗಟ್ಟಿ ಕಥಾವಸ್ತು ಹಾಗೂ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಲೇಖಕ ಬರವಸೆ ಮೂಡಿಸಿದ್ದಾರೆ. *ರಸ್ತೆ ಮೇಲೆ ಡಾಂಬರಿನ ಅಸ್ಥಿಪಂಜರ ಮಾತ್ರ ಉಳಿದಿತ್ತು , *ನನ್ನೂರು ಸುತ್ತುವರಿಯಲ್ಪಟ್ಟ ಗುಡ್ಡಗಳ ಮಧ್ಯೆ ಗುಬ್ಬಿ ಮರಿಯಂತೆ ಮುದುಡಿ ಕುಳಿತಿತ್ತು, *ಈಗಿನವರಿಗೆ ಕಷ್ಟಗಳ ಸುಖ ಗೊತ್ತಿಲ್ಲ. ಸುಖದ ಸುಖ ಮಾತ್ರ ಗೊತ್ತು ಮಗ *ಮನುಷ್ಯನ ಬದುಕೇ ವಿಚಿತ್ರವಪ್ಪ, ಎಲ್ಲವೂ ನೆನಪಿರುತ್ತದೆ ಆದರೆ ಎಲ್ಲೋ ಹೊಲಿಗೆ ಬಿಚ್ಚಿರುತ್ತದೆ ಅಷ್ಟೇ - ಇಂತಹ ಹಲವಾರು ಸಾಲುಗಳು ಕಥೆಯ ಅಂದ ಹೆಚ್ಚಿಸಿವೆ. ಓದಿನ ಆರಂಭದಲ್ಲಿ ಪ್ರಕಾಶಕರ ಮಾತುಗಳಲ್ಲಿ ಹೇಳಿರುವಂತೆ "ಹಾಣಾದಿ" ಎಂದರೆ ಹೊಲಕ್ಕೆ ಹೋಗುವ ದಾರಿ. ಹೊಲಕ್ಕೆ ಹೋಗುವುದು ಎಂದರೆ ಬರಿದೆ ವಾಚ್ಯಾರ್ಥವಲ್ಲದ ಬೇರೊಂದೇ ಗಹನ ಅರ್ಥ ಕಥೆಯ ತಿರುವುಗಳಲ್ಲಿ ಹಾದು ಬಂದರಷ್ಟೇ ತಿಳಿಯಲು ಸಾಧ್ಯ. Don't miss it
"ವಿಕ್ರಮ- ಬೇತಾಳ ಕಥೆ ಅಂತ್ಯವನ್ನು ನಾವೆಲ್ಲ ಬಲ್ಲೆವು. ಹಾಣಾದಿ ಕೃತಿಯ ಅಂತ್ಯವನ್ನು ಓದಿಯೇ ಅರಿತುಕೊಳ್ಳಬೇಕು." - ಕೇಶವ ಮುಳಗಿ - (ಹಿಂಬದಿ ರಕ್ಷಾಪುಟದಿಂದ)
ವಯಸ್ಸಿನ ಹಂಗನ್ನೂ ಮೀರಿ ರೂಪುಗೊಂಡಿರುವ ಅದ್ಭುತ ಮತ್ತು ವಿಶಿಷ್ಟ ಕಾದಂಬರಿ “ಹಾಣಾದಿ”. ಕಪಿಲ ಪಿ ಹುಮನಾಬಾದೆಯವರು ತಮ್ಮ ಇಪ್ಪತ್ತೆರಡನೇ ವಯಸ್ಸಿಗೆ ಹೀಗೊಂದು ಕಾದಂಬರಿ ಬರೆದಿರುವುದು ನಿಜಕ್ಕೂ ನನ್ನನ್ನ ಅಚ್ಚರಿಗೊಳಪಡಿಸಿದೆ.
ಹಳ್ಳಿ ತೊರೆದ ಯುವಕೊನಬ್ಬ ಮನಿಯಾರ್ಡರ್ ಸ್ವೀಕರಿಸದ ಅಪ್ಪನನ್ನು ಕಾಣಲು ಮರಳಿ ಮಣ್ಣಿಗೆ ಬಂದು ದಾರುಣ ಕತೆಗೆ ಸಾಕ್ಷಿಯಾಗುವುದೇ ಹಣಾದಿಯ ಒನ್ಲೈನ್ ಸ್ಟೋರಿ. ಬರೀ ಇಷ್ಟೇ ಆಗಿದ್ದರೆ ಅಂತಹ ವಿಶೇಷತೆಯೆನಿರುತ್ತಿರಲಿಲ್ಲ, ಆದರೆ ತನ್ನ ಅಪ್ಪನ ಹುಡುಕುವಿಕೆಯಲ್ಲಿ ಭೂತ ಮತ್ತು ವರ್ತಮಾನಗಳ ನೆನಪುಗಳ ಸರಣಿ ಬಿಚ್ಚಿಕೊಳ್ಳುವ ಪರಿ, ಆ ನೆನಪುಗಳು ಕಾದಂಬರಿಯುದ್ದಕ್ಕೂ ಹಿಂದುಮುಂದು ಚಲಿಸಿ ಆ ನೆನಪಿನ ಸರಪಳಿಯಲ್ಲಿ ಓದುಗರನ್ನು ಬಂಧಿಸುವಂತಹ ಲೇಖಕರ ಸೃಜನಶೀಲ ಬರವಣಿಗೆ ಮೆಚ್ಚುವಂತದ್ದು.
ಕಥೆಯ ನಿರೂಪಣೆಯಲ್ಲಿ ಹೊಸಕ್ರಮ ಮೊದಲ ಇಪ್ಪತ್ತು ಪುಟಗಳಲ್ಲಿ ಹಳಿ ತಪ್ಪಿದಂತೆ ಭಾಸವಾದರೂ ನಂತರದ ಭಾಗದಲ್ಲಿ ಅಚ್ಚುಕಟ್ಟಾಗಿ ಮೂಡಿಬಂದಿದೆ. ಕವಿಸಹಜ ಬರವಣಿಗೆ ಮತ್ತು ಪ್ರಬುದ್ಧ ರೂಪಕಗಳೂ ಹೆಚ್ಚಿವೆ. ಬಾಲ್ಯದ ಅಖಂಡ ನೆನಪುಗಳು ಮತ್ತು ಭೌಗೋಳಿಕ ಚಿತ್ರಣ ಕಾದಂಬರಿಯ ಶಕ್ತಿ. ಇವೆಲ್ಲೆದರ ಜೊತೆ ಮಿಳಿತವಾಗಿರುವ ಮಾಂತ್ರಿಕವಾಸ್ತವವಾದ ಕಾದಂಬರಿಯ ಉತ್ಕೃಷ್ಟತೆಯನ್ನು ಹೆಚ್ಚಿಸುತ್ತದೆ.
ನನ್ನ ಪ್ರಕಾರ ಕತೆಗಳಲ್ಲಿ ಎರಡು ತರಹ ಇರುತ್ತವೆ. ಕೆಲವು ಕತೆಗಳನ್ನು ಓದುವಾಗ ಮುಂದೇನಾಗುತ್ತದೆ ಅನ್ನುವ ಕುತೂಹಲ ಇಮ್ಮಡಿಯಾಗಿ, ಓದಿ ಮುಗಿಸಿದರೆ ಸಾಕು ಅಂತೆನಿಸುತ್ತವೆ. ಇನ್ನು ಕೆಲವು ಕತೆ ಹೇಳುವ ಪರಿಯೇ ನಮ್ಮನು ಮಂತ್ರ ಮುಗ್ಧಗೊಳಿಸುತ್ತವೆ. ಕತೆ ಮುಗಿಯೋದೇ ಬೇಡ ಹಾಗೆ ಓದ್ತಾ ಇರೋಣ ಅನುಸುತ್ತೆ. ಹಾಣಾದಿ ಎರಡನೇ ಸಾಲಿಗೆ ಸೇರಿದ ಕತೆ.
ಹಾಣಾದಿ ಎಂದರೆ ಎತ್ತಿನ ಬಂಡಿ ಸಾಗುವ ದಾರಿ. ಕತೆಯಲ್ಲಿ ನಾಯಕ ತನ್ನ ಊರಿಗೆ ವಾಪಸಾಗಿ, ಖಾಲಿಯಾಗಿರುವ ಊರನ್ನು ಕಂಡು ವಿಚಲಿತನಾಗಿ ತನ್ನ ತಂದೆಯನ್ನು ಅರಸುತ್ತಾನೆ. ಪ್ರಥಮ ವ್ಯಕ್ತಿಯಲ್ಲಿರುವ ನಿರೂಪಣೆ ಪುಸ್ತಕವನ್ನು ಇನ್ನಷ್ಟು ಹತ್ತಿರಗೊಳಿಸುತ್ತದೆ. ಜಾರಿ ಹೋದ ಬಾಲ್ಯದ ಕ್ಷಣಗಳು, ಹಾಗೂ ನಗರದಲ್ಲಿ ಕಾಡುವ ಅನಾಥ ಪ್ರಜ್ಞೆಯಿಂದ ಕತೆ ಆರಂಭವಾದರೆ, ಮುಂದುವರಿಯುತ್ತಾ ಆತನ ಮನೆ ಮುಂದಿನ ಬಾದಾಮಿ ಮರದಲ್ಲಿ ಕೇಂದ್ರೀಕರಿಸುತ್ತದೆ. ನಾಯಕನ ತಂದೆಯ ಬಾದಾಮಿ ಮರದ ಮೇಲಿನ ಪ್ರೇಮ ಹಾಗೂ ಅದರ ಸುತ್ತ ರೂಪುಗೊಳ್ಳುವ ಊಹಾಪೋಹಗಳ ಹತ್ತಾರು ಕತೆಗಳ ಮಧ್ಯೆ ಕಾದಂಬರಿ ಸಾಗುತ್ತದೆ. ಇದರ ನಡುವಲ್ಲಿ ಬರುವ ಕತೆಗಾರ್ತಿ, ಅಜ್ಜಿ ಗುಬ್ಬಿ ಆಯಿಯ ಪಾತ್ರ ಮಹತ್ವದ್ದು. ವಾಸ್ತವದ ಮತ್ತು ಕಲ್ಪನಾ ಲೋಕದ ( ಫ್ಯಾಂಟಸಿ ) ನಡುವಿನ ನವಿರು ರೇಖೆಯ ಮೇಲೆ ಕತೆ ಅಂತ್ಯವಾಗುತ್ತದೆ. ಕತೆಯ ಮುಕ್ತಾಯ ಬಹಳ ಸೊಗಸಾಗಿದ್ದು ಮೈ ನವಿರೇಳಿಸುವುದರಲ್ಲಿ ಅನುಮಾನವಿಲ್ಲ.
ಪುಸ್ತಕದಲ್ಲಿ ಯಥೇಚ್ಛವಾಗಿ, ಭಿನ್ನವಾದ ಉಪಮೇಯಗಳು ಇದ್ದು ಆಪ್ಯಾಯಮಾನವಾಗಿ ಕತೆಯನ್ನು ಮಂದಗತಿಯಲ್ಲಿ ಮುನ್ನಡಿಸುತ್ತವೆ. ಕತೆ ಸಾಗುತ್ತ ಹಾಣಾದಿಯಲ್ಲಿನ ಕೆಸರಿನ ಹೊಂಡಗಳಂತೆ ಓದುಗರನ್ನು ಅದರೊಳಗೆ ಸಿಕ್ಕಿಸಿ, ಹೊರಬರಲು ಪ್ರಯತ್ನಿಸಿದಷ್ಟೂ ತನ್ನೊಳಗೆ ಕೊಂಡೊಯುತ್ತದೆ. ಓದಿ ಮುಗಿಸಿದ ಮೇಲೂ ಮನಸ್ಸನ್ನು ಆವರಿಸುತ್ತದೆ. ಈಗಾಗಲೇ ಎರಡನೇ ಮುದ್ರಣ ಕಂಡಿರುವ ಈ ಕೃತಿ ಚೆನ್ನಾಗಿದೆ ಅಂತ ಹೇಳಲು ಬೇರೆ ಪುರಾವೆಗಳು ಬೇಕಿಲ್ಲ.
ಪುಸ್ತಕ: ಹಾಣಾದಿ ಲೇಖಕರು: ಕಪಿಲ ಪಿ ಹುಮನಾಬಾದೆ ಪ್ರಕಾಶಕರು: ಕಾವ್ಯಮನೆ ಪ್ರಕಾಶನ ಬಳ್ಳಾರಿ
ಹಾಣಾದಿ ನಾನು ಓದಿದ ವಿಭಿನ್ನ ಕಥಾನಿರೂಪಣಾ ಶೈಲಿಯ ಪುಸ್ತಕ. ಮೂಲತಃ ಉಡುಪಿ ಜಿಲ್ಲೆಗೆ ಸೇರಿದವನಾದ್ದರಿಂದ ಉತ್ತರ ಕರ್ನಾಟಕದ ಭಾಷೆಯ ಬಳಕೆ ಓದಿನ ಓಘಕ್ಕೆ ಸ್ವಲ್ಪ ತಡೆಯೊಡ್ಡಿತು.
ಉದ್ಯೋಗ ನಿಮಿತ್ತ ನಗರ ಸೇರಿದ ನಿರೂಪಕನು ತಂದೆಗೆ ಕಳುಹಿಸಿದ ಮನಿಯಾರ್ಡರ್ ಹಿಂದಿರುಗಿ ಬಂದಾಗ ಊರ ಕಡೆ ಮುಖ ಮಾಡುತ್ತಾನೆ. ಊರನ್ನು ಪ್ರವೇಶಿಸಿದಾಗ ಅವನ ಮನೆಯು ಸೇರಿ ಊರಿಗೆ ಊರೇ ಪಾಳು ಬಿದ್ದಿರುತ್ತದೆ. ಮನೆಯಲ್ಲಿ ಗುಬ್ಬಿ ಆಯಿ ಎಂಬ ಅಜ್ಜಿಯೊಬ್ಬಳು ಇರುತ್ತಾಳೆ. ಅಲ್ಲಿಂದ ಮುಂದೆ ತನ್ನ ಅಪ್ಪ ಏನಾದ, ಹಳ್ಳಿಗೆ ಏನಾಯಿತು ಎಂಬುದನ್ನು ಅವಳ ಮೂಲಕ ತಿಳಿದುಕೊಳ್ಳುತ್ತಾನೆ. ಇಡೀ ಕಾದಂಬರಿಯು ನಿರೂಪಕನ ತಂದೆಯು ಬೆಳೆಸಿದ ಬಾದಾಮಿ ಗಿಡದ ಸುತ್ತ ಗಿರಕಿಹೊಡೆಯುತ್ತದೆ. ಹಳ್ಳಿಯ ಎಲ್ಲ ದುರಂತಗಳಿಗೆ ಸಾಕ್ಷಿಯಾಗುವ ಈ ಮರ,ಹಳ್ಳಿಗರ ಮೂಢನಂಬಿಕೆಗೆ ಬಲಿಯಾಗಿ ಅವನ ತಂದೆಯ ಜೊತೆ ಸುಟ್ಟು ಬೂದಿಯಾಗುತ್ತದೆ.
ಇಲ್ಲಿ ಲೇಖಕರು ತಮ್ಮ ಬಾಲ್ಯದ ಅನುಭವಗಳನ್ನು ಬಹಳ ರಸವತ್ತಾಗಿ ಬಿಚ್ಚಿಟ್ಟಿದ್ದಾರೆ. ನಾವುಗಳು ನಗರಗಳನ್ನು ಸೇರಿದ ಮೇಲೆ ನಮ್ಮ ಸ್ಮೃತಿ ಪಟಲದಿಂದ ಮರೆಯಾಗಿರುವ ಅನೇಕ ನೆನಪುಗಳನ್ನು ಮತ್ತೆ ಜೀವಂತವಾಗಿಸಿದ್ದಾರೆ. ಇಲ್ಲಿ ಕಂಡುಬರುವ ಅನೇಕ ಉಪಮೇಯಗಳು ಓದುಗರನ್ನು ಹುಬ್ಬೇರಿಸುವಂತೆ ಮಾಡುತ್ತದೆ. ನಾವು ಸಾಗಿಬಂದ ಹಾದಿಯ ನೆನಪುಗಳನ್ನು ಮತ್ತೆ ನೆನಪಿಸುತ್ತ "ಹಾಣಾದಿ" ಕಾದಂಬರಿಯು ಮನಸ್ಸಿಗೆ ಬೆಚ್ಚನೆಯ ಅನುಭವನ್ನು ನೀಡುತ್ತದೆ.
ಕಾದಂಬರಿಯಲ್ಲಿ ಇಷ್ಟವಾದ ಸಾಲುಗಳು:
"ಸುಣ್ಣದಗೋಡೆಗಳ ಮೇಲೆ ಸೋರಿರುವ ಕೆಂಪುಮಣ್ಣಿನ ಗೆರೆ ಗುರುತುಗಳು ಗಾಯದ ಸಾಕ್ಷಿಯಾಗಿ ನಿಂತಿದ್ದವು"
"ಈ ಬಿಸಿಲಂದ್ರೆ ಅಪ್ಪ. ಮುಂಜಾನೆ ಎಳೆ ಮಗುವಿನಂತೆ, ಮಧ್ಯಾಹ್ನ ಉರಿ ಬಿಸಿಲಿನಂತೆ. ರಾತ್ರಿ ಬಿಸಿಲು ಬಿಟ್ಟುಹೋದ ಅವಶೇಷದಂತೆ. ಬಿಸಿಲಿನಷ್ಟೇ ಸದ್ದಿಲ್ಲದೇ ಕುದಿಯುತ್ತಿರುವ ಮನುಷ್ಯ."
"ಮನುಷ್ಯ ಬೆಳೆದ ಹಾಗೆ ಕಳಚಿತ್ತಿರುವುದನ್ನು ಎತ್ತಿಕೊಂಡೆ ಸಾಗಬೇಕೆಂದರೂ ಆಗದ ಕೆಲಸ. ಬಾಲ್ಯ ಮತ್ತೆಂದು ಬರುವುದಿಲ್ಲ."
"ವೃತ್ತವೊಂದರ ಮೇಲಿನ ನಡಿಗೆಯಂತಹ ಬದುಕಿಗೆ ಹೊರ ದಾರಿಗಳು ಇರುತ್ತವೆಯಾದರೂ ಹೊರಳಿ ನೋಡಲು ನನಗೆ ಸಮಯವೇ ಇರಲಿಲ್ಲ"
ಈ ರೀತಿಯ ಅನೇಕ ವಿವೇಕ�� ಸಾಲುಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ
Surreal and dream like narrative wherein the nostalgia feels more real and rooted than the movement of the characters in the present and the story itself.