ಅಜ್ಞಾತ
ವಿವೇಕಾನಂದ ಕಾಮತ್ Vivekananda Kamath
ಕಾಯಕನಾಥನ ಬಾಳಿನಲ್ಲಿ ನಡೆದ ಎರಡು ದುರಂತಗಳು ಆತನ ಮನಸ್ಸಿಗೆ ಆಘಾತವನ್ನುಂಟುಮಾಡಿತ್ತು, ಹಾಗಾಗಿ ಆತನಿಗೆ ಬದುಕಿನಲ್ಲಿ ಯಾವ ಉತ್ಸಾಹವೂ ಇರಲಿಲ್ಲ, ಮಿನಾಲಿ ಸಾರಂಗನನ್ನು ಕಳೆದುಕೊಂಡು ಒಬ್ಬಂಟಿಯಾಗಿದ್ದಾಗ, ತನ್ನ ಪಾಡಿಗೆ ತಾನು ಅಜ್ಜರಕಾಡಿನಲ್ಲಿದ್ದಾಗ ತನ್ನ ಬಾಳಿನಲ್ಲಿ ಬಂದ ಜಂಪಯ್ಯ, ಕಮಲಿ, ಪಾಂಡುರಂಗರಿಂದ ಮತ್ತೆ ಹೊಸ ಜೀವನ ಸಾಗಿಸಲು ನಿರ್ಧರಿಸುವಾಗ ಕಮಲಿ ಪಾಂಡುರಂಗನನ್ನೂ ಕಳೆದುಕೊಂಡು ಪೂರ್ತಿಯಾಗಿ ದಗ್ಧನಾಗಿ ಹೋಗಿದ್ದ. ಕುಮುದಿನಿ ನದಿಯನ್ನು ನೋಡುತ್ತಾ ತಲ್ಲೀನನಾಗಿದ್ದ ಕಾಯಕನಾಥ ತನ್ನ ಬಾಳಿನಲ್ಲಿ ನಡೆದ ಪ್ರಸಂಗಗಳನ್ನು ನೆನೆಯುತ್ತಾ ಹೋಗುತ್ತಾನೆ.
ಕಾಯಕನಾಥ ಮತ್ತು ಮಿನಾಲಿ ಬಂಗಾಳದ ಯಾವುದೋ ಊರಲ್ಲಿ ಕೂಲಿ ಮಾಡಿಕೊಂಡಿದ್ದರು, ಇಬ್ಬರು ಇಷ್ಟ ಪಟ್ಟು ಓಡಿ ಹೋಗಿ ಮದುವೆಯಾಗಿ ಸುಖ���ಿಂದ ಕಾಲಕಳೆಯುತ್ತಿದ್ದರು, ಅಂತೂ ದಾಂಪತ್ಯ ಅನ್ಯೋನ್ನವಾಗಿತ್ತು, ಸಾರಂಗ ಹುಟ್ಟಿದನಂತರ ತಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ. ಹೀಗೆ ಕಷ್ಟಪಟ್ಟು ಉತ್ತರ ಕರ್ನಾಟಕದಲ್ಲಿ ಕಟ್ಟಡ ಕೆಲಸದಲ್ಲಿ ತಮ್ಮ ಜೀವನ ಸಾಗಿಸುತ್ತಿದ್ದರು, ಕಾಯಕನಾಥ ಕಷ್ಟಪಟ್ಟು ಕನ್ನಡ ಕಲೆತ. ಒಂದು ದಿವಸ ಮಿನಾಲಿ ಕೆಲಸ ಮಾಡುವ ಜಾಗದಲ್ಲಿ ತಲೆ ತಿರುಗಿ ಬೀಳುತ್ತಾಳೆ, ಆಕೆಯನ್ನು ಉಳಿಸಿಕೊಳ್ಳಲು ಬಂಗಾಳಕ್ಕೆ ಹೋಗಿ ಪ್ರಯತ್ನಪಟ್ಟ ಆದರೆ ಆಕೆ ಉಳಿಯಲಿಲ್ಲ, ನಂತರ ಸಾರಂಗನಿಗೆ ಹಾವು ಕಚ್ಚಿ ಆತನನ್ನು ಆಸ್ಪತ್ರೆ ಸೇರಿಸುವ ಹೊತ್ತಿಗೆ ವಿಷವೇರಿ ತೀರಿಕೊಂಡ ಹೀಗೆ ಇವರಿಬ್ಬರನ್ನು ಕಳೆದುಕೊಂಡು ಏಕಾಂಗಿಯಾದ. ಬಂಗಾಳದಿಂದ ವಾಪಸ್ಸು ಬರುವಾಗ ಟಿಕೇಟ್ ಇಲ್ಲದೇ ರೈಲು ಪ್ರಯಾಣದ ಸಮಯದಲ್ಲಿ ಜೀವನದಲ್ಲಿ ಆಸೆ ಆಕಾಂಕ್ಷೆಗಳಿಲ್ಲದೆ ಮಾರ್ಗದ ಮಧ್ಯೆ ಕಾಡಿನಲ್ಲಿ ಇಳಿದುಬಿಟ್ಟ. ಇನ್ನು ತನ್ನ ಅಜ್ಞಾತವಾಸವನ್ನು ಈ ಕಾಡಿನಲ್ಲೇ ಕಳೆಯೋಣವೆಂದು ನಿರ್ಧರಿಸಿದ. ಆದರೆ ಅಲ್ಲಿದ್ದ ಅರಣ್ಯ ಇಲಾಖೆಯ ಅಧಿಕಾರಿ ಯೋಗೀಶ ಕಾಯಕನಾಥನನ್ನು ಅಲ್ಲಿರಲು ಬಿಡಲಿಲ್ಲ, ಉಳಿಯಲು ಅಜ್ಜರಕಾಡು ಪ್ರದೇಶವನ್ನು ತೋರಿಸಿ ಹೊರಟುಹೋದ. ಅಂತು ಕಾಡಿನಲ್ಲೇ ವಾಸಿಸಲು ಶುರುಮಾಡಿದ ಅಲ್ಲಿನ ಪ್ರಕೃತಿ ಕಂಡು ಬೆರಗಾದ, *ಪ್ರಾಣಿ, ಪಕ್ಷಿಗಳು ತಮ್ಮ ಉದರ ತುಂಬಿದ ಬಳಿಕ ಬೇರೆ ಗೊಡೆವಗೆ ಹೋಗದೆ ತಮ್ಮ ಪಾಡಿಗೆ ತಾವಿರುತ್ತವೆ, ಆದರೆ ಮನುಷ್ಯ ಎಂಬ ಪ್ರಾಣಿ ಎಷ್ಟು ಕ್ರೂರ*. ಬದುಕೇ ಬೇಡವೆನಿಸಿ ಕಾಡಿನಲ್ಲಿ ಕಳೆಯಲು ನಿರ್ಧರಿಸಿದ ಆದರೆ ತನ್ನ ಹೊಟ್ಟೆ ಕೇಳಬೇಕಲ್ಲ, *ಈ ಹಸಿವು ಎಷ್ಟು ಕ್ರೂರ, ಮನುಷ್ಯನಿಗೆ ಒಂದಾ ಎರಡಾ , ಕಾಮದ ಹಸಿವು, ಹೊಟ್ಟೆಯ ಹಸಿವು, ಜ್ಞಾನದ ಹಸಿವು, ಮಹತ್ವಾಕಾಂಕ್ಷೆಗಳ ಹಸಿವು ತನ್ನ ಜೀವನವಿಡೀ ಅದನ್ನು ತೀರಿಸಿಕೊಳ್ಳುವುದೇ ಅವನ ಧ್ಯೇಯವಾಗಿಬಿಡುತ್ತದೆ*. ಹೀಗೆ ಅಜ್ಜರ ಕಾಡಿನಲ್ಲಿ ಕುಮುದಿನಿ ನದಿಯ ತೀರದಲ್ಲಿ ತನ್ನ ಜೀವನ ಸಾಗಿಸಲು ಶುರುಮಾಡುತ್ತಾನೆ.
ಯೋಗೀಶರು ಮತ್ತೆ ಬರುವಾಗ ಕಾರಗದ್ದೆಯಿಂದ ಜಂಪಯ್ಯನನ್ನು ಕರೆತರುತ್ತಾರೆ, ಕಾಯಕನಾಥನ ಬಗ್ಗೆ ಗಮನ ಕೊಡಲು ಕರೆತರುತ್ತಾರೆ, ಆದರೆ ಕಾರೆಗದ್ದೆಯಲ್ಲಿ ಹಲವಾರು ಮನೆಗಳಲ್ಲಿ ಚಾಕರಿ ಮಾಡುತ್ತಾ ಸ್ವಂತ ಮನೆಯಿಲ್ಲದೇ ಪರದಾಡುತ್ತಿದ್ದ ಜಂಪಯ್ಯ ಈ ಅಜ್ಜರ ಕಾಡನ್ನು ನೋಡಿ ಅಲ್ಲಿ ಮನೆ ಮಾಡಲು ನಿರ್ಧರಿಸುತ್ತಾನೆ, ಯಾರದೋ ಜಾಗ ಎಷ್ಟು ವರ್ಷಗಳಾದರು ಅವರ ಸುಳಿವಿಲ್ಲ, ಅಂತೂ ಧೈರ್ಯ ಮಾಡಿ ಕಾಯಕನಾಥನ ಸಹಾಯದಿಂದ ನಿರ್ಮಿಸುತ್ತಾನೆ. ಕಾಯಕನಿಗೆ ಜಂಪಯ್ಯನ ದುರಾಸೆ ಕಂಡು ಮರಗುತ್ತಾನೆ *ಇರೋ ನಾಲ್ಕು ದಿನಕ್ಕೆ ಮನುಷ್ಯನಿಗೆ ಎಷ್ಟೆಲ್ಲಾ ಆಸೆ, ಹುಟ್ಟುವಾಗಲೇ ಸಾವನ್ನು ಹೊತ್ತುಕೊಂಡೇ ಬಂದಿರುತ್ತಾನೆ, ಆದರೂ ತಾನು ಬದುಕುವುದಕ್ಕೆ ಒಂದು ನೆಲ ಬೇಕು, ಅಲ್ಲಿ ಮನೆ ಕಟ್ಟಿ ಅದೇ ತನ್ನ ನೆಲ ಎಂದು ಭಾವಿಸುತ್ತಾನೆ, ಅದರೇ ಯಾವುದೂ ಶಾಶ್ವತವಲ್ಲ, ಒಂದಲ್ಲ ಒಂದು ದಿನ ತೆರಳಲೇಬೇಕು*. ಅಂತೂ ಜಂಪಯ್ಯ ತನ್ನ ಹಟದಿಂದ ಮನೆ ಮಾಡುತ್ತಾನೆ, ಧೃಡ ನಿರ್ಧಾರದಿಂದ ಕಾಯಕನಾಥನು ಜಂಪಯ್ಯನ ಮನೆಗೆ ಹೋಗದೆ ಕಡೆಗೆ ಅವನ ಬಲವಂತದಿಂದ ಜಗುಲಿಯಲ್ಲಿರಲು ನಿರ್ಧರಿಸುತ್ತಾನೆ, ಒಬ್ಬರು ಬಂದು ನೆಲಸಿದರೆ ಹೇಳಬೇಕೆ ಇನ್ನು ಸುಂದರವಾಗಿದ್ದ ಈ ಅಜ್ಜರ ಕಾಡಿನ ಪರಿಸರ ಹಾಳಾಗುವುದು ಖಂಡಿತ, ಆದರೆ ತನ್ನ ಮಾತನ್ನು ಯಾರು ಕೇಳಲು ಇಷ್ಟ ಪಡುವುದಿಲ್ಲ, ಕಾರಣ ತನ್ನ ಮನಸ್ಸಿಗೆ ಹತ್ತಿರವಾದವರನ್ನು ಕಳೆದುಕೊಂಡು ಜೀವನದಲ್ಲಿ ವಿರಕ್ತಿಭಾವ ಬೆಳೆದು ಇರೋವರೆಗು ಹೇಗೋ ಜೀವನ ನಡೆಸಿದರಾಯ್ತು ಎಂಬುದು ತನ್ನ ನಿರ್ಧಾರ.
ಅಂತೂ ತಾನು ಎಣಿಸಿದ್ದ ಹಾಗೆ ಆಯಿತು, ಜಂಪಯ್ಯ ಕಾರಗದ್ದೆಯಿಂದ ಶಿವಣ್ಣನನ್ನು ಕರೆತರುತ್ತಾನೆ, ಸುತ್ತಮುತ್ತಲಲ್ಲಿ ಹಣ್ಣು, ತರಕಾರಿ ಬೆಳೆಯಲು ಜಾಗ ನಿರ್ಧರಸಿ ತನ್ನನ್ನೂ ಸೇರಿಸಿಕೊಂಡು ಕಷ್ಟಪಟ್ಟು ಗಿಡಗಳನ್ನು ನೆಟ್ಟು ಕುಮುದಿನಿ ನದಿಯ ನೀರನ್ನು ಅದಕ್ಕೆ ಉಪಯೋಗ ಆಗುವಹಾಗೆ ಮಾಡುತ್ತಾರೆ, ಅಂತೂ ಮನುಷ್ಯ ತನ್ನ ಹೊಟ್ಟೆ ಪಾಡಿಗಾಗಿ, ಹಣ ಸಂಪಾದಿಸಲು ಪರಿಸರದಲ್ಲಿ ಸಿಗುವುದೆಲ್ಲವನ್ನೂ ಬಳಸುತ್ತಾನೆ, ಇಲ್ಲದೇ ಇದ್ದರೆ ಆತನಿಗೆ ಬದುಕಲೇ ಅಸಾಧ್ಯವಾಗುತ್ತದೆ, ಇರುವುದಕ್ಕೆ ಮನೆ ಎಂದು ಶುರುಮಾಡಿದ ಜಂಪಯ್ಯ, ಕಾಡಿನಲ್ಲಿ ಹಣ್ಣು ತರಕಾರಿ ಬೆಳೆದು ಅವನ್ನು ಮಾರಿ ಹಣ ಸಂಪಾದಿಸಿ ತನ್ನ ಹೊಟ್ಟೆಯ ಹಸಿವು, ಹಣದ ಹಸಿವೂ ತೀರಿಸಿಕೊಂಡ. ಕ್ರಮೇಣ ಅಲ್ಲಿ ಎಂಟು ಮನೆಗಳಾದವು, ಮನುಷ್ಯನ ಸಂಪರ್ಕವೂ ಹೆಚ್ಚಿತು.
ಶಿವಣ್ಣನ ಮನೆಯಲ್ಲಿ ತನ್ನ ಪತ್ನಿ ರತ್ನ ಹಾಗು ರತ್ನನ ತಂಗಿ ಕಮಲಿ, ಕಮಲಿಯ ಮಗ ಪಾಂಡುರಂಗ ವಾಸಿಸುತ್ತಿದ್ದರು, ಪಾಂಡುರಂಗ ಕಾಯನಿಗೆ ತುಂಬಾ ಹಚ್ಚಿಕೊಳ್ಳುವುದಕ್ಕೆ ಶುರುಮಾಡಿದ, ಪಾಂಡುರಂಗನಲ್ಲಿ ತನ್ನ ಮಗ ಸಾರಂಗನನ್ನು ಹಾಗು ಕಮಲಿಯಲ್ಲಿ ತನ್ನ ಪತ್ನಿ ಮಿನಾಲಿಯನ್ನು ಕಾಣುತ್ತಾನೆ, ಕಾಯಕನಾಥನಿಗೆ ಆಶ್ಚರ್ಯವಾಗುತ್ತದೆ, ಎಲ್ಲವನ್ನು ತ್ಯಜಿಸಿದ ತನಗೆ ಇವರಿಬ್ಬರ ಮೇಲೆ ಏಕೆ ಪ್ರೀತಿ ಬೆಳೆಯುತ್ತಿದೆ ಎಂದು ಯೋಚಿಸಲು ಶುರುಮಾಡುತ್ತಾನೆ. ಗಂಡನ ಹಾಗು ಅತ್ತೆಯ ಕಿರುಕುಳದಿಂದ ಕಮಲಿ ಅವರನ್ನು ತ್ಯಜಿಸಿ ಬಂದಿರುತ್ತಾಳೆ, ತಮ್ಮಿಬ್ಬರ ಜೀವನವೂ, ಹಾಗೆ ದಿನ ಕಳೆದಂತೆ ಪಾಂಡುರಂಗನು ಕಾಯಕನಿಗೆ ತುಂಬಾ ಹತ್ತಿರವಾಗುತ್ತಾನೆ, ಎಲ್ಲರ ಹಿತವಚನಗಳಿಂದ ಹಾಗು ಕಮಲಿಯ ಹಾಗು ತನ್ನ ನಿರ್ಧಾರದಿಂದ ಅವರಿಬ್ಬರು ಪ್ರಕೃತಿಯ ಸಮಕ್ಷಮದಲ್ಲಿ ಮದುವೆಯಾಗುತ್ತಾರೆ, ಶಿವಣ್ಣನ ಕುಟುಂಬ ಕಾರಗದ್ದೆಗೆ ಹೊರಟುಹೋಗುತ್ತದೆ, ತಾನು ಕಮಲಿ ರಂಗ ಶಿವಣ್ಣನ ಮನೆಯಲ್ಲಿ ಇದ್ದು ಜಂಪಯ್ಯನಿಗೆ ಸಹಾಯವಾಗುತ್ತಾ ಕಷ್ಟಪಟ್ಟು ದುಡಿದು ಜೀವನ ಸಾಗಿಸುತ್ತಾರೆ. ಕೆಲವೇ ಸಮಯದಲ್ಲಿ ಅಜ್ಜರಕಾಡಿನ ಮಾಲೀಕ ಬಂದು ಇವರನ್ನು ಒಂದೇ ದಿನದಲ್ಲಿ ಬಿಡಬೇಕು ಇಲ್ಲ ಪೋಲೀಸರಿಗೆ ತಿಳಿಸುವುದಾಗಿ ಎಚ್ಚರಕೊಟ್ಟು ಹೋಗುತ್ತಾನೆ, ಹೇಗೋ ಎರಡು ದಿನ ಸಮಯ ತೆಗೆದುಕೊಂಡು ಕಾರಗದ್ದೆಗೆ ಹೋಗುತ್ತಾರೆ, ಹೋದಾಗ ವಿಪರೀತ ಮಳೆ, ಆ ಮಳೆ ತಮ್ಮ ಜೀವನದಲ್ಲೇ ಎಂದೂ ಕಂಡಿರುವುದಿಲ್ಲ, ಅತಿ ಮಳೆಯಿಂದ ಪ್ರವಾಹ ವಾಗಿ ಕುಮುದಿನಿ ಸೇತುವೆ ಬಿದ್ದುಹೋಗಿ ಅಜ್ಜರ ಕಾಡಿನಲ್ಲಿದ್ದ ಮನೆಗಳು ಆ ಮಳೆಗೆ ಕೊಚ್ಚಿಕೊಂಡು ಹೋಗುತ್ತದೆ, ಕಮಲಿ ಪಾಂಡುರಂಗ ನೀರನಲ್ಲೇ ಕೊಚ್ಚಿಕೊಂಡು ಹೋಗುತ್ತಾರೆ.
ಅಂತೂ ಕಾಯನು ಜಂಪಯ್ಯನೊಡನೆ ತಾವು ಈ ಜನ್ಮದಲ್ಲಿ ಭೇಟಿಯಾದುದು, ಕಮಲಿ, ರಂಗ ಹೀಗೆ ಯಾವುದಾವುದೋ ಸಂಬಂಧದ ಹೆಸರಿನಲ್ಲಿ ಒಂದಾದುದು, ಮತ್ತೊಂದು ಜನ್ಮ ಹೇಗೋ ಏನೋ ನಾನೆಲ್ಲೋ ಇವರೆಲ್ಲೋ . ನೀನು ನನ್ನದು ಅಂತ ಮನೆ ಕಟ್ಟಿದೆ, ಅದು ಹಾಗು ಅದರ ಸುತ್ತಮುತ್ತಲಿನ ಜಾಗ ತನಗೇ ಬೇಕೆಂದು ಆಸೆಪಟ್ಟೆ, ಆದರೆ ಪ್ರಕೃತಿಯ ಮುಂದೆ ಇವೆಲ್ಲ ಯಾವ ಲೆಕ್ಕ, ಪ್ರವಾಹ ಬಂದು ಏನೂ ಉಳಿಯಲಿಲ್ಲ, ಅಂತೂ ಬದುಕಿನಲ್ಲಿ ಇದೊಂದು ಒಳ್ಳೆಯ ಪಾಠವೆಂದು ಜಂಪಯ್ಯನ ಬಳಿ ಕಾಯಕನಾಥನು ತನ್ನ ಮನಸ್ಸಿನ ತೊಳಲಾಟಗಳನ್ನು ತೋಡಿಕೊಂಡ. ಮಿನಾಲಿ, ಸಾರಂಗನನ್ನು ಕಳೆದುಕೊಂಡಾಗ ಬದುಕೇ ಬೇಡವೆನಿಸಿದಾಗ ತನಗೆ ಜಂಪಯ್ಯ, ಶಿವಯ್ಯರು ಬದುಕಲು ಮತ್ತೆ ಆಸರೆಯಾದರು, ನಂತರ ಕಮಲಿ, ಪಾಂಡುರಂಗ ತನ್ನ ಜೀವನದಲ್ಲಿ ಕೆಲವು ಸಮಯ ಇದ್ದು ಅವರೂ ಮರೆಯಾದರು. ಇನ್ನು ತಾನು ಬದುಕಿದ್ದೂ ಪ್ರಯೋಜನವೇನೆಂದು ತನ್ನ ಬದುಕಿನಲ್ಲಿ ನಡೆದ ಈ ಎರಡು ದುರಂತಗಳನ್ನು ಮರೆಯಲಾಗದೇ ಕುಮುದಿನಿ ನದಿಯನ್ನು ನೋಡುತ್ತಾ ತಲ್ಲೀನನಾಗಿದ್ದ ಕಾಯಕನಾಥ ತನ್ನ ಬಾಳಿನಲ್ಲಿ ನಡೆದ ಪ್ರಸಂಗಗಳನ್ನು ಹೀಗೆ ನೆನೆಯುತ್ತಾನೆ.
*ಕಾರ್ತಿಕೇಯ*