ಗೈರ ಸಮಜೂತಿ ಎಂದರೆ ತಪ್ಪು ತಿಳುವಳಿಕೆ (misunderstandings). ಸ್ವತಂತ್ರ ಪೂರ್ವದ ಹೋರಾಟದಲ್ಲಿ ಒಬ್ಬ ವ್ಯಕ್ತಿಯ wrong identity ಇಂದಾಗಿ ಘಟಿಸುವ ಪೋಲೀಸರ ಅನಿರೀಕ್ಷಿತ ಭೇಟೆಗೆ ಬಲಿಯಾಗುವುದು ಒಬ್ಬ ಅಮಾಯಕ ಅಚ್ಯುತ. ತನ್ನ ಗಂಡನನ್ನು ಕಳೆದುಕೊಳ್ಳುವ ಎಳೆವಯಸ್ಸಿನ ಮುಗ್ಧ ಬಾಲೆ ತನ್ನ ವಿಧವಾ ಮಡಿ ಜೀವನವನ್ನು ಕಟ್ಟಿಕೊಳ್ಳುವ ಬಗೆ ಕೃತಿಯ ಕಥಾವಸ್ತು ಎಂದರೆ ತಪ್ಪಾಗುತ್ತದೆ. ಇದರ ಜೊತೆಜೊತೆಗೆ ತನ್ನ ಸುತ್ತಲೂ ಹೆಣೆದುಕೊಳ್ಳುವ ಕುಟುಂಬ-ಸಮಾಜದ ಸ್ಥಿತಿ, ವೇದ ಉಪನಿಷತ್, ಸಂಸ್ಕೃತಿಯ ಜೊತೆ ಆಧ್ಯಾತ್ಮಿಕ ವಿಚಾರಗಳು, ಇತಿಹಾಸ ಪುರಾಣ, ಕಾವ್ಯ, ಜನಪದ, ವೈದ್ಯಕೀಯ ಪ್ರಸೂತಿ ಮತ್ತು ಕೃತಿಯ ಬೆಳಗಾವಿಯ ಸಮೃದ್ಧ ಘನಭಾಷೆ ಕೃತಿಯ ಗಟ್ಟಿತನವನ್ನು ಸಮೃದ್ಧಗೊಳಿಸುತ್ತದೆ. ಈ ಜವಾರಿ ಭಾಷೆಯ ಹಿಡಿತ ಪಾಟೀಲರಿಗೆ ದಕ್ಕಿರುವ ವರವೆನಿಸುತ್ತದೆ ಮತ್ತು ಅವರ ಎಲ್ಲಾ ಕೃತಿಗಳ ವಿಶೇಷತೆಯೆಂದರೆ ಶಾರೀರಿಕ ಕಾಮದ ಬಗ್ಗೆ ಒಂದು ವಾಕ್ಯನೂ ಬರೆಯದೇ ಇರೋದು. ಪ್ರೀತಿ-ಪ್ರೇಮ ಸಂಬಂಧಗಳ ನಡುವೆ ಅನೈತಿಕ ಬಾಂಧವ್ಯ ಬೆಳೆಸಿ ದೇಹ ತಿಕ್ಕಾಟಗಳ ವಿವರಣೆಗಳನ್ನು ಹೊಂದಿ ಪುಸ್ತಕ ಗಾತ್ರವನ್ನು ಹೆಚ್ಚಿಸುವ ಕೃತಿಗೆ ಕನ್ನಡದಲ್ಲಿ ಬರವಿಲ್ಲ, ಇಂತಹ ಕೃತಿಗಳು ಓದುಗನಲ್ಲಿ ರಸಾನುಭವ ಉಂಟುಮಾಡಲೆಂದೇ ಬರೆಯುವಂಥವು.. ಇವೆಲ್ಲವುಗಳ ನಡುವೆ ಮೌಲ್ಯಯುತ ಇಂತಹ ಕೃತಿಗಳನ್ನು ಓದಲು ಸಾವಧಾನಬೇಕು.
ಇಡೀ ಕಾದಂಬರಿ ರೂಪುಗೊಂಡಿರುವುದು ಬೆಟಗೇರಿ ಮತ್ತು ಐನಾಪುರ ಎಂಬ ಊರಿನೊಳಗಿನ ಮಾಧ್ವ ಬ್ರಾಹ್ಮಣ ಮನೆತ್ತನದೊಳಗೆ. ಕೃತಿಯನ್ನು ಓದುತ್ತಾ ಹೋದಂತೆ ಬ್ರಾಹ್ಮಣ ಮನೆಯೊಳಗಿರುವ ದಿನನಿತ್ಯ ಬದುಕನ್ನು ಓದುಗನಾದ ನಾನೂ ಅದೃಶ್ಯ ಪಾತ್ರವಾಗಿ ಜೀವಿಸಿದ್ದು ನಿಜ, ಈ ರೀತಿ ಭಾವನಾತ್ಮಕವಾಗಿ ಬರೆಯುವುದು ಲೇಖಕರ ಜೀವನಾನುಭವಗಳ ಮೇಲೆ ನಿರ್ಧರಿತವಾಗಿರುತ್ತದೆ ಮತ್ತು ಅದನ್ನು ಓದುಗನ ಅನುಭವಕ್ಕೆ ಒಡ್ಡಿಕೊಳ್ಳುತ್ತಾ ಕಣ್ಣಮುಂದೆ ಪಾತ್ರಗಳನ್ನು ಪರದೆಯಮೇಲೆ ಬಿಟ್ಟಂತೆ ಕುಣಿಸುವುದು ಲೇಖಕನ ಸೂಕ್ಷ್���ಗ್ರಹಿಕೆಗೆ ಬಿಟ್ಟದ್ದು, ಹಾಗೂ ಉತ್ತಮ ಲೇಖಕ ಅತ್ಯುತ್ತಮ ಓದುಗನಾಗಿರಬೇಕೆಂಬ ಜವಾಬುದಾರಿಯನ್ನ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆಂದರೆ ತಪ್ಪಿಲ್ಲ. ಸೂರ್ಯ-ಚಂದ್ರರ ಮುಖೇನ ಪಾತ್ರಗಳ ಒಳಹೊಕ್ಕು ಅವರ ಮನಸ್ಥಿತಿಯನ್ನು ಚಿತ್ರಿಸುವ ಧಾಟಿ ಅಪೂರ್ವವೆನಿಸಿತು.
ಕೃತಿಯಲ್ಲಿ ಹೆಚ್ಚಾಗಿ ಹಿಡಿಸಿದ್ದೆಂದರೆ ಕುಮಾರಿಲನಾಥರ ಪಾತ್ರದ ಮೂಲಕ ವಿವರಿಸಿರುವ ವೇದ, ಉಪನಿಷತ್ತು, ಕಠೋಪನಿಷತ್ತಿನ ಭಾಗ. ಸಾವಿನ ಬಗ್ಗೆ ಇರುವ ಈ ಬ್ರಹ್ಮಜ್ಞಾನ ಗಾಢ ವಿಷಯವನ್ನು ಇಷ್ಟು ಸುಲಲಿತವಾಗಿ, ಸಂಕ್ಷಿಪ್ತವಾಗಿ, ಅರ್ಥಗರ್ಭಿತವಾಗಿ ವಿವರಿಸಿರುವುದು ನಿಜಕ್ಕೂ ನನ್ನನ್ನು ಅಚ್ಚರಿಗೊಳಿಸಿತು. ಸಂಸಾರದ ಮೋಹಕ್ಕೆ ಒಳಗಾಗದೆ, ಆತ್ಮಜ್ಞಾನ ತಿಳಿದಂಥಾ ಧೀರ ಹರ್ಷ ಶೋಕಗಳಿಗೆ ಒಳಗಾಗುದಿಲ್ಲ, ಅವಂಗ ಹರ್ಷ ಶೋಕಗಳ ಘಟನಾಗಳೂ ಅನುಭವಗಳೂ ಒದಗೂದೇ ಇಲ್ಲ ಅಂತಲ್ಲ, ಅವುಗಳ ಪರಿಣಾಮಕ್ಕ ಒಳಗಾಗುದಿಲ್ಲ ಅಂತ ಸರಳವಾಗಿ ಓದುಗನ ಮುಂದೆ ಇಟ್ಟಿದ್ದಾರೆ. ಜೊತೆಗೆ ವೇಶ್ಯೆಗೂ ಒಂದು ಜೀವನ ಕೊಟ್ಟು ಅರ್ಥ ಕೊಡುವಂತ ತಾಯಿತನ ದೊರಕಿಸಿ ಅದನ್ನ ಅನುಭವಿಸಲಾರದೇ ಸಾಯುವ ಜಬಾಲೆ, ಅನಾಥೆಯಾಗಿ ಜೀವನ ನಡೆಸುತ್ತಿದ್ದ ಹೆಂಗಸು ಅವಕ್ಕನಾಗಿ ತಾಯಿಯಾಗಿ ಬಡ್ತಿ ಪಡೆಯುವ ಪರಿ , ಬುದ್ಧಿಮಾಂದ್ಯವಾಗಿ ಹುಟ್ಟು ಪಡೆಯುವ ಸತ್ಯಕಾಮನ ಸಾವನ್ನು ಅಮೋಘವಾಗಿ ಚಿತ್ರಿಸಿದ್ದಾರೆ.ಇದೇ ಬ್ರಹ್ಮಜ್ಞಾನಿ ಕುಮಾರಿಲನಾಥವೆಂಬ ಪಾತ್ರ ಎಸ್.ಎಲ್ ಭೈರಪ್ಪನವರ “ಸಾರ್ಥ” ಕೃತಿಯಲ್ಲೂ ಬರುತ್ತದೆ.
“ಅಚ್ಯುತನ ಗೈರ ಸಮಜೂತಿಯ ಕೇಸು ನನ್ನನ್ನು ಅತ್ಯಂತ ಭಾವುಕನನ್ನಾಗಿ ಮಾಡಿ ತುಂಬಾ ಸಮಯ ಓದಲಿಕ್ಕೆ ಆಗದಷ್ಟು ಕಾಡಿತು, ಸತ್ಯಭೋದಾಚಾರ್ಯರ ಗೈರ ಸಮಜೂತಿನು ಕೂಡ ಓದುಗನ ಅಂತರಂಗವನ್ನು ಅಲ್ಲಾಡಿಸಿಬಿಡುತ್ತದೆ. ಇನ್ನು ಭಾರತೀಯ ಸಹಿಷ್ಣುಗಳು ಸ್ವತಂತ್ರ ನಂತರ ಎಲ್ಲೋ ನಡೆದ ಗಲಭೆಯ ಗೈರ ಸಮಜೂತಿಗೆ ಹಿಂದೂ-ಮುಸ್ಲಿಂ ಪ್ರಜೆಗಳು ಅಸಹಿಷ್ಣುಗಳಾಗಿ ರೂಪಾಂತರಗೊಳ್ಳುವ ಪರಿ ಅಂದಿಗೂ ಇಂದಿಗೂ ಪ್ರಮಾಣವಾರು ಹೆಚ್ಚೇ ಆಗುತ್ತಿದೆ. ಈ ತಪ್ಪು ತಿಳುವಳಿಕೆಗಳು ಕುಟುಂಬದೊಳಗಿರುವುದು ಸರ್ವೇ ಸಾಮಾನ್ಯ, ಅದೆಲ್ಲವನ್ನೂ ಮೀರಿ ಮನುಷ್ಯ ಮನುಷ್ಯನನ್ನೇ ದ್ವೇಷಿಸಿ ಕೊಲ್ಲುವ ಕೀಳುಮಟ್ಟದ ಮನಸ್ಥಿತಿಯ ಜಾತಿ-ಧರ್ಮಗಲಭೆ ಜನಗಳ ಸುಪ್ತ ಮನಸ್ಸಿನಲ್ಲಿ ಸೇಡಿನ ಮತ್ಸರವಾಗಿ ಇವತ್ತಿಗೂ ಅಚ್ಚಾಗಿ ಉಳಿದುಬಿಟ್ಟಿದೆ. ಗಾಂಧೀಜಿಯನ್ನು ಒಂದೇ ಸಲ ಕೊಂದಿದ್ದಾದ್ರೆ ಪರವಾಗಿಲ್ಲ, ಆದರೆ ಅವರ ಆಚಾರ ವಿಚಾರಗಳನ್ನು ರಾಜಕೀಯ ಷಡ್ಯಂತ್ರಗಳಿಗೆ ಒಡ್ಡಿ ಪದೇ-ಪದೇ ಕೊಲ್ಲುವುದು ಇಂದಿಗೂ ನಡೆದಿದೆ.
“ಬ್ರಿಟಿಷರ ಕಾಲಘಟ್ಟದಲ್ಲಿ ಅವರದೇ ಪಾರುಪತ್ಯ ನಡೆಸಿದರೂ ಅಭಿವ್ಯಕ್ತಿ ಸ್ವಾತಂತ್ರ ಇರಲಿಲ್ಲ, ಕೂಲಿ ಕಾರ್ಮಿಕರಾಗಿದ್ದರು ಆದರೆ ಸ್ವತಂತ್ರ ಪಡೆದು ನಮ್ಮವರೇ ಅಧಿಕಾರ ವಹಿಸಿಕೊಂಡರೂ ಅಧಿಕಾರದ ದುರ್ಬಳಕೆಯಿಂದ ರಾಜಕಾರಣಿಗಳು ಒಡ್ಡಿರುವ ಜಾತಿ, ಧರ್ಮದ ಬಿಕ್ಕಟ್ಟಿನಿಂದ ಜನಗಳ ಮನಸ್ಥಿತಿ ಇವತ್ತಿಗೂ ಕೂಪ ಮಂಡೂಕನಂತೆ ದ್ವೇಷದ ಉರಿಯ ಕಿಡಿಯಾಗಿ ಪ್ರತಿ ವ್ಯಕ್ತಿಯಲ್ಲೂ ಅಡಕವಾಗಿದ್ದು ಜ್ವಾಲಾಮುಖಿಯಂತೆ ಸ್ಫೋಟಗೊಳ್ಳಲು ಕಾತರಿಸುತ್ತಿದೆ.
ಕೃತಿಯಲ್ಲಿನ ವಿಧವಾ ಮಡಿವಂತಿಕೆ ಕೇವಲ ಬ್ರಾಹ್ಮಣ ಸಮುದಾಯಕ್ಕೆ ಸೀಮಿತಗೊಂಡದ್ದು ಎನಿಸುತ್ತದೆ, ಇತರ ಸಮುದಾಯಗಳಲ್ಲಿನ ಕಟ್ಟಳೆಗಳನ್ನು ಅನುಭವಿಸುವವರು ವಿಭಿನ್ನವಾಗಿ ನೋಡಬಹುದು, ಪಾಲಿಸದೇ ಇರುವವರು, ಈ ಧಾರ್ಮಿಕ ವಿಧಾನಗಳನ್ನು ತಿರಸ್ಸ್ಕರಿಸುವವರು ಕೃತಿಯನ್ನು ಮೆಚ್ಚಿಕೊಳ್ಳದಿರಬಹುದು ಹಾಗೂ ಗಾಂಧಿ ತತ್ವವನ್ನು ದ್ವೇಷಿಸುವವರು ಕೃತಿಯನ್ನು ಸ್ವೀಕರಿಸುವುದು ಕಷ್ಟವೆನಿಸುತ್ತೆ ಯಾಕಂದರೆ ಪ್ರಸ್ತುತ ಕಾಲಘಟ್ಟದಲ್ಲಿ ವ್ಯಕ್ತಿ ಮಾಡಿದ ಒಳಿತನ್ನು ಬಿಟ್ಟು ಕೆಟ್ಟದನ್ನೇ ಆರಾಧಿಸುವ ಮನೋಭಾವ ಹೆಚ್ಚಾಗಿದೆ.
“ಸ್ವತಂತ್ರ ಪೂರ್ವ ಮತ್ತು ನಂತರದ ಜನರ ಜೀವನ, ರಾಜಕೀಯ ಸ್ಥಿತಿ ಕಾಲಕ್ಕೆ ನಮ್ಮನ್ನು ತೊಡಗಿಸಿಕೊಂಡು , ಬ್ರಾಹ್ಮಣ ಸಮುದಾಯದಲ್ಲಿನ ಜೀವನವನ್ನು ಅರಿಯುವ ದೃಷ್ಟಿಯಿಂದ ಓದಿದ್ದಲ್ಲಿ ಉತ್ತಮ ಕೃತಿಯೆನಿಸುವುದರಲ್ಲಿ ಸಂಶಯವಿಲ್ಲ.
-ಭರತ್ ಎಂ.
ಓದಿದ್ದು ೩೧.೧೨.೨೦೨೫