ಈ ಪುಸ್ತಕ ಓದುಗರನ್ನು ಪಶ್ಚಿಮ ಘಟ್ಟಗಳ ಸುಂದರ ಬೆಟ್ಟಗಳ ನಡುವೆ ಒಮ್ಮೆ ಪದಗಳ ಪುಷ್ಪಕವಿಮಾನದಲ್ಲಿ ಕುಳ್ಳಿರಿಸಿ ಗಸ್ತು ಹೊಡೆಸುತ್ತದೆ. ಇದರಲ್ಲಿ ಮಳೆಯಲ್ಲಿ ಮೈತೊಳೆದು ನಿಂತ ಬೆಟ್ಟಗಳ ಹಸಿರಿನ ಆರ್ದತೆ ಇದೆ. ಚಳಿಗಾಲದಲ್ಲಿ ಬರಿಗಾಲಲ್ಲಿ ತರಗೆಲೆಗಳ ಮೇಲೆ ನಡೆದಾಡಿದ ಬೆಚ್ಚನೆಯ ಅನುಭವವಿದೆ.ಬೇಸಿಗೆಯ ಬೇಗೆಯಲ್ಲಿ ಕಾಡಿನ ಅನಾಮಧೇಯ ಜಲಪಾತಗಳಲ್ಲಿ ಮಿಂದು ಮೈಮರೆತ ಆಹ್ಲಾದಕತೆ ಇದೆ. ಈ ಎಲ್ಲ ಕಾಲಗಳಲ್ಲಿ ಹಸಿರ ಮೈಸಿರಿ ಹೇಗೆಲ್ಲ ಚೆಂದ ಕಾಣುತ್ತದೆ ಎಂಬ ಕಣ್ಣಿಗೆ ಕಟ್ಟುವ ವರ್ಣನೆ ಇದರಲ್ಲಿದೆ.ಇದಿಷ್ಟೇ ಅಲ್ಲದೆ ಕಾಡಿನ ಸೆರಗಿನ ನಡುವೆ ಬೆಚ್ಚಗೆ ಅಡಗಿ ಕುಳಿತ ಮನೆಗಳು,ಅದರಲ್ಲಿ ವಾಸವಾಗಿರುವವರು ಬಾಳ ಬವಣೆಗಳು, ಮಲೆನಾಡಿಗರ ಅತಿಥಿಸತ್ಕಾರ, ಹಿರಿಯ ಜೀವಗಳ ಕಾಡಿನ ಕಥೆಗಳು, ಕಿರಿಯ ಕಂದಮ್ಮಗಳ ಅಚ್ಚರಿಯ ನೋಟಗಳು ಇದರಲ್ಲಿದೆ. ಕಾಲ ಬದಲಾದಂತೆ ಮಲೆನಾಡು ಹೇಗೆ ಬದಲಾಗುತ್ತಿದೆ, ಕಾಡಿಗೆ ಹಾಸು ಹೊಕ್ಕಾಗಿ ಬದುಕಿರುವ ಬೆಟ್ಟದ ಜೀವಗಳು ಹೇಗೆ ಈ ಬದಲಾವಣೆಗೆ ಒಗ್ಗಿಕೊಂಡಿದ್ದಾರೆ ಎನ್ನುವ ನೈಜ ವಿವರಗಳಿವೆ. ಕೆಲವರು ಕಾಲದ ಹರಿವಿಗೆ ಸೇರಿ ಇನ್ನೆಲ್ಲೋ ಪಯಣವನ್ನು ಬದಲಿಸಿದರೆ, ಇನ್ನು ಕೆಲವರು ಕಾಲದ ಹೊಡೆತಕ್ಕೆ ಸೆಡ್ಡುಹೊಡೆದು ನಿಲ್ಲುವ ಗಟ್ಟಿ ಮರಗಳಂತೆ ಬೇರೂರಿರುವ ಚಿತ್ರಣ ಇದರಲ್ಲಿ ವ್ಯಕ್ತವಾಗಿದೆ.
ಚಾರಣ ಕೇವಲ ಮೋಜಿಗಾಗಿ, ಸೆಲ್ಫಿಗಾಗಿ ಫೋಟೋಗಳಿಗಾಗಿ, ಹೋಗುವ ಕ್ರೀಡೆಯಲ್ಲ ಅದೊಂದು ತಪಸ್ಸು. ಚಾರಣದಲ್ಲಿ ಏನೆಲ್ಲ ಅನುಭವಿಸಬೇಕು, ಅನುಭವಕ್ಕೆ ಮೀರಿದ್ದನ್ನು , ಕಾಡಿನ ಮೌನವನ್ನು ಅರ್ಥೈಸಿಕೊಂಡು ಅದಕ್ಕೆ ಅಕ್ಷರರೂಪ ನೀಡುವಲ್ಲಿ ಲೇಖಕರ ಯಶಸ್ವಿಯಾಗಿದ್ದಾರೆ, ‘ಮಲೆನಾಡಿನ ಚಳಿಯು ಐಸ್ಕ್ಯಾಂಡಿಯೇ ಬಂದು ನಮ್ಮನ್ನು ಚೀಪಿದ ಹಾಗೆ’, ‘ಕಾಡಿನಲ್ಲಿ ನಡೆದಾಗ ನಾಡಿನಿಂದ ಹೊತ್ತುಕೊಂಡು ಬಂದ ಬೆವರ ಹನಿಗಳು ಸತ್ತೇಹೋಗಿತ್ತು’ ಹೀಗೆ ಅನೇಕ ಉಪಮೆಯಗಳು ಲೇಖಕರ ಬರವಣಿಗೆಯ ಪ್ರಬುದ್ಧತೆಯನ್ನು ಹೊರ ಚೆಲ್ಲುತ್ತದೆ. ಪರಿಸರ ನಾಶ, ಹೆಚ್ಚುತ್ತಿರುವ ಅಕ್ರಮ ಕಾರ್ಯಗಾರಗಳು, ರಾಜಕೀಯ ಹೀಗೆ ಇವೆಲ್ಲದರ ನಡುವೆ ಕಾಡನ್ನು ಕಾಪಿಟ್ಟುಕೊಳ್ಳುವ ಯುವಜನತೆಯ ಜವಾಬ್ದಾರಿಯನ್ನು ಓದುಗರಿಗೆ ನೀಡುವುದರಲ್ಲಿ ಕೃತಿ ಯಶಸ್ವಿಯಾಗಿದ್ದಾರೆ. ಮಲೆನಾಡಿಗರು ಅಸ್ತೆಯಿಂದ ಓದಿ ಪಾಲಿಸ ಬೇಕಾದ ಅನಿವಾರ್ಯತೆ ಪ್ರಸ್ತುತ ಪರಿಸ್ತಿತಿಯಲ್ಲಿ ಅತ್ಯಗತ್ಯ ಎನ್ನುವುದು ನನ್ನ ಅಭಿಪ್ರಾಯ.
ಪೇಟೆಯಲ್ಲಿರುವವರಿಗೆ ಧಿಗ್ಗನೆ ಮಲೆನಾಡಿನ ನೆನಪು ಒತ್ತರಿಸಿ ಬರುವಂತೆ ಮಾಡುವ ಕೃತಿ ಇದು. ಹಾಗೇ ಮಲೆನಾಡಿವರಿಗೆ ನಮ್ಮನೆ ಆಚೆ ಕಾಡು ಅದ್ನೇ ಎಂತ ಬರ್ದಿದ್ದ ಅನಿಸುವಂತೆ ಮಾಡುವುದೂ.. ಅಲೆಮಾರಿಗಳಿಗೆ ಈ ಕಾಲದಲ್ಲಿ ತಮ್ಮ ಅಂದಕಾಲತ್ತಿಲ್ ನಡೆದ ಸಾಹಸಗಳ ನೆನಪು ಮಾಡಿಕೊಳ್ಳುವಂತೆ ಇದು ಮಾಡುತ್ತದೆ. ಚಾರಣ ಅಲೆದಾಟದ ನಡುವೆ ಹಿರಿಯರ ಬಾಯಲ್ಲಿ ಹಳೆಯ ಕತೆಗಳ ಕೇಳಿಸಿಕೊಳ್ಳುವ ಗಮ್ಮತ್..ಕತೆಯನ್ನು ಬಗೆಯದ ಪ್ರಜ್ಞಾವಂತಿಕೆ ಮತ್ತು ದಟ್ಟ ಹಸಿರು ಈ ಪುಸ್ತಕದ ಜೀವಾಳ. ಲೇಖಕರದು ಒಂದಾದರೂ ಭಯಂಕರ ಫಜೀತಿ ಅಥವಾ ಸಾಹಸದ ಕತೆ ಇರಬೇಕಿತ್ತು ಅನ್ನೋದು ನಾನು ಎತ್ತಿದ ಕೊರೆ. ತಡ ಮಾಡದೆ ಈ ಮಳೆಗಾಲದಲ್ಲಿ ನಿಮ್ಮ ಅಪಾರ್ಟ್ಮೆಂಟ್‌ನ ಬಾಲ್ಕನಿಯಲ್ಲಿ ಕೂತ್ಕೊಂಡು ಓದಿ. ಕಳೆದು ಹೋಗಿ.
ಕೆಲವು ಓದು ಮನಸ್ಸು/ಬುದ್ದಿಗೆ ರಸದೌತಣವಾಗಿ ಹಸಿವು ತಣಿಸಿ i am full ಅನ್ನೋ ಭಾವಕ್ಕೆ ಕಾರಣವಾಗ್ತವೆ ಇನ್ನು ಕೆಲವು; ಅಂದ್ರೆ ಈ 'ಒಂದು ಕಾಡಿನ ಪುಷ್ಪಕ ವಿಮಾನ'ದಂಥವು ಮಡಕೆ ನೀರಿನ ಜೊತೆ ತಿಂದ ಬೆಲ್ಲದ ಚೂರಿನಂತೆ ಓದುವ ಹೃದಯ ತಂಪಾಗಿಸ್ತವೆ. ಆ ತಂಪಿಗಿಂತ ಹೆಚ್ಚಿನ ಏನನ್ನಾದರೂ ಬಯಸಿದ್ದೇ ಆದರೆ ನಮ್ಮ ಆಸೆಬುರುಕತನವಾದೀತು. ಅತಿ ಭಾವುಕತೆ ಮತ್ತು ರಮ್ಯ ಕಲ್ಪನೆ ಈ ಪುಸ್ತಕಕ್ಕೆ ಎಷ್ಟು ಧನಾತ್ಮಕವಾಯ್ತೋ ಅಷ್ಟೇ ಋಣಾತ್ಮಕ ಅಂಶವಾಗಿವೆ (ಅತಿಯಾದರೆ ಅಮೃತವೂ ವಿಷ ಎಂದಂತೆ). ಮಲೆನಾಡಿನಲ್ಲೇ ಹುಟ್ಟಿ ಬೆಳೆದಿದ್ದಕ್ಕೋ ಅಥವಾ ಈ ಹೊತ್ತು ಅದೇ ಮಲೆನಾಡಿನ ಬೆಚ್ಚನೆ ಮಡಿಲಲ್ಲಿ ಕೂತು ಈ ಪುಸ್ತಕ ಓದಿದ್ದಕ್ಕೋ ನನಗೆ ತೀರ ವಿಶೇಷ ಅನ್ನುವಂತದ್ದು ಏನೂ ಕಾಣಲಿಲ್ಲ. ದೂರದಲ್ಲೆಲ್ಲೋ ಕುಳಿತು ಮಲೆನಾಡನ್ನು ಹಂಬಲಿಸುವವರೂ ಬೆಟ್ಟ-ಗುಡ್ಡ ಕಾಡಿನ ಸಂದಿನಲ್ಲಿರುವ ಚಿಕ್ಕಪುಟ್ಟ ಊರುಗಳ ಮಾಯಾಜಗತ್ತಿನ ಪರಿಚಯವೇ ಇಲ್ಲದ ಪಟ್ಟಣವಾಸಿಗಳೂ ಕುಳಿತಲ್ಲೇ ಕಾಡನಡುವಿನ ಕನಸಿನ ಸಾಮ್ರಾಜ್ಯದಲ್ಲಿ ವಿಹಾರ ಹೊಕ್ಕು ಬರಲು ಒಮ್ಮೆ ಖಂಡಿತಾ ಓದಬಹುದು.
ಮೌನವೊಂದು ಜಗತ್ತಿನ ಅತ್ಯಂತ ದೊಡ್ಡ ಮಾತು ಅನ್ನಿಸೋದು, ಈ ಕಾಡಿನ ತಪ್ಪಲಲ್ಲಿ ನಿಂತಾಗ...
ಇಡೀ ಪುಸ್ತಕ ಈ ಮೇಲಿನ ಸಾಲಿನ ಮೇಲೆ ನಿಂತಿದೆ ಎಂದರೆ ತಪ್ಪಾಗಲಾರದು. ಈ ಪುಷ್ಪಕ ವಿಮಾನ ಮಳೆಗಾಲದ ಬೇಸಿಗೆ ಕಾಲದ ಹಾಗೂ ಚಳಿಗಾಲದ ಕಾಡಿನ ಅನುಭವಗಳನ್ನು ನಿಮಗೆ ತಿಳಿಸಿಕೊಡುತ್ತ ಒಂದು ಸುತ್ತು ಹಾಕಿಸುತ್ತದೆ. ಈಗಾಗಲೇ ಮಲೆನಾಡಿನ ಕಾಡಿನ ಬಗ್ಗೆ ತುಂಬಾ ಪುಸ್ತಕಗಳು ಬಂದು ಹೋದ ಕಾರಣವೋ ಅಥ್ವಾ ನಾನು ಮಲೆನಾಡಿನವಳೆ ಆದ ಕಾರಣವೋ ತುಂಬಾ ವಿಶೇಷ ಅನಿಸದೇ ಹೋದರು ಅಲ್ಲಲ್ಲಿ ನಮ್ಮ ಒಂದಿಷ್ಟು ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿತು. ಇನ್ನು ಆಗಾಗ ತೇಜಸ್ವಿಯವರ ನೆನಪುಗಳು ಇಲ್ಲಿ ಅಚ್ಚಾಗಿವೆ. ಧನ್ಯವಾದಗಳು.
A well written book on the forest, a small village Maala, it's beaty in rain, the mysteries of the forest when you have eyes to see it. Also there's a constant concern about the nature being continuously manipulated by human for his benefits. The book reminds us that it's everyone's duty to save the nature.