ರಮೇಶ ಶೆಟ್ಟಿಗಾರರ ಈ ಸಂಕಲನದ ಕಥೆಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಎರಡು ಕಥೆಗಳಿಗೆ ಬಹುಮಾನವೂ ದೊರೆತಿದೆ. ಇಲ್ಲಿನ ಕಥೆಗಳು ನೇರ ಬರವಣಿಗೆಯ ಮಾದರಿಯವು. ಒಂದು ಸಮಸ್ಯೆ ಅಥವಾ ಅಪನಂಬಿಕೆ ಅದರಿಂದಾಗುವ ತೊಂದರೆ ಕೊನೆಗೆ ಪರಿಹಾರ ಈ ತೆರನಾದವು. ಇಲ್ಲಿ ಸುತ್ತಿ ಬಳಸುವ ತಂತ್ರವಾಗಲೀ, ಅರ್ಥವಾಗದ ಮಾತುಗಳಾಗಲೀ ಇಲ್ಲ. ಹಾಗಾಗಿ ಓದಿಸಿಕೊಂಡು ಹೋಗುತ್ತವೆ. ಕಥೆ ಈಗ ಮುಗಿಯಬೇಕು ಅನ್ನುವಾಗ ಲಂಬಿಸುವುದೊಂದು ಕೊರತೆ ಎನ್ನುವುದು ಬಿಟ್ಟರೆ ಬೇರೆಲ್ಲ ಚೆನ್ನಾಗಿದೆ. ಕಥೆಗಳಲ್ಲೇ ಎಲ್ಲವೂ ವಾಚ್ಯವಾಗುವ ಕಾರಣ ಓದುಗನಿಗೆ ಓದುವುದು ಬಿಟ್ಟರೆ ಗುಟ್ಟು ಬಿಡಿಸುವ ಕೆಲಸವೇನಿಲ್ಲ.