||• ಅವಸಾನ •||
ಒಂದು ಪುಸ್ತಕ, ಒಂದು ಸಿನಿಮಾ ಅಥವಾ ಒಂದು ಕವನ ಒಡಲು ಹೀಗೆ ಇಷ್ಟು ಎಂದು ಸುಲಭವಾಗಿ ಬರೆಯಬಹುದು. ಹೇಳಲೂಬಹುದು ಒಟ್ಟು ಆಶಯ ಹೀಗಿದೆ ಎಂದು. ಅದು ಸರ್ವೇ ಸಾಮಾನ್ಯ!! ಆದರೆ ಈ ರೀತಿಯ "ಒಂದು ಆಶಯದ ಪರಿಧಿಗೆ" ಸಿಗದೇ ಓದುಗನಿಗೆ ಹಲವಾರು ರೀತಿಯ ಅನುಭವಗಳನ್ನು ಅವಸಾನ ಪುಸ್ತಕ ನೀಡುತ್ತದೆ ಹಾಗೂ ಈ ಪುಸ್ತಕ ವಿಶೇಷವೆನಿಸುವುದು ಅದೇ ಕಾರಣಕ್ಕೆ. ಇಲ್ಲಿ ಹೊಸತನವಿದೆ, ಆಧುನಿಕತೆಯಿದೆ, ಆಧುನಿಕ ಜೀವನ ಶೈಲಿಯ ಜಂಜಾಟಗಳಿವೆ. ಹೀಗೆ ಬರೆಯುತ್ತಾ ಹೋದರೆ ನೂರು ವಿಷಯಗಳಾದರೂ ಅಚ್ಚರಿಯಿಲ್ಲ.
ಸೊಲ್ಲಾಪುರದ ಮೇಲ್ಮಧ್ಯವರ್ಗದ ಕುಟುಂಬವೊಂದರ ಕಥೆಯಿದು ಎಂದು ಶುರುವಾತಿನಲ್ಲಿ ಅನಿಸಿದರೂ ಕಾದಂಬರಿ ಮುಂದೆ ಸಾಗಿದಂತೆ ನಮ್ಮ ಕಲ್ಪನೆಗೆ ನಿಲುಕದಷ್ಟು ತೆರೆದುಕೊಳ್ಳುತ್ತದೆ. ಮೊದಲ ಎರಡು ಮೂರು ಅಧ್ಯಾಯದಲ್ಲಿ ಆ ಕುಟುಂಬ ಮತ್ತು ಅವರ ವ್ಯಾಪಾರ ವಹಿವಾಟಿನ ಸುತ್ತಲೂ ನಡೆಯುವ ಕಾದಂಬರಿಯಲ್ಲಿ ಬರುವ ತಿರುವು ಪುಸ್ತಕದ ತೀವ್ರತೆಯನ್ನು ಮತ್ತು ಓಘವನ್ನು ನೂರ್ಮಡಿಗೊಳಿಸಿದೆ ಎಂಬುದು ಅತಿಶಯೋಕ್ತಿ ಅಲ್ಲವೇ ಅಲ್ಲ.
ಆರೇಳು ಪಾತ್ರಗಳು ಮುಖ್ಯ ಭೂಮಿಕೆಯಲ್ಲಿವೆ. ಒಂದೊಂದು ಪಾತ್ರದ್ದು ಒಂದೊಂದು ಕಥೆ. ತಮ್ಮವೇ ಆದ ವಿವರಣೆಗಳೊಂದಿಗೆ ತಮ್ಮನ್ನು ರೂಪಿಸಿಕೊಂಡಿವೆ. ಅವು ಕಾದಂಬರಿಯೊಂದಿಗೆ ಮಿಳಿತಗೊಂಡು ಓದುಗನನ್ನು ಎಡಬಿಡದೆ ಕಾಡುತ್ತವೆ!!!
೩೫೨ ಪುಟಗಳ ಅತ್ಯುತ್ಕೃಷ್ಟ ಓದಿನ ನಂತರ ವೈಯಕ್ತಿಕವಾಗಿ ಕಾಡಿದ ವಿಷಯಗಳೆಂದರೆ - ವ್ಯಕ್ತಿತ್ವ, ಕುಟುಂಬ, ಕಾನೂನು ಮತ್ತು ಭಾವನೆ, ಸಂಸ್ಕಾರ.
ನಮ್ಮ ವ್ಯಕ್ತಿತ್ವ ರೂಪವಾಗುವುದು ನಮ್ಮ ಪರಿಸರದ ಮೂಲಕ ಎನ್ನುತ್ತಾರೆ. ನಾನು ಅದನ್ನು ನಂಬಿದವನಲ್ಲ. ಅದೇ ರೀತಿಯ ಎರಡು ಪಾತ್ರಗಳು ಬೆಳೆದಿವೆ ಅವಸಾನ ಪುಸ್ತಕದಲ್ಲಿ. ತಾವು ಬೆಳೆದುಬಂದ ಪರಿಸರಕ್ಕೂ ತಮ್ಮ ವ್ಯಕ್ತಿತ್ವಕ್ಕೂ ಹೊಂದಿಕೆಯಾಗದೇ ತಮ್ಮ ಆಲೋಚನೆಗಳನ್ನು ಆಂದೋಲನಗಳನ್ನು ಬೆಳೆಸಿಕೊಂಡಿವೆ.
ಕುಟುಂಬ ಬೇಕು! ಅದಕ್ಕೊಂದು ಚಿತ್ರ ಮೂಡಬೇಕು. ಹೆತ್ತವರು ಹಡೆದವರೇ ಆಗಬೇಕಂತಿಲ್ಲ. ವಿಠ್ಠಲ ಹೇಳುವಂತೆ ಯಾರಿಗಾದರೂ ಸೇವೆ ಮಾಡಬಹುದು. ಅವರೇ ನಮ್ಮ ಕುಟುಂಬವೆಂದುಕೊಳ್ಳಬಹುದು. ಇರುವವರಿಗೆ ಅದರ ಮಹತ್ವ ತಿಳಿದಿರುವುದಿಲ್ಲ. ಇಷ್ಟೆಂದ ಮಾತ್ರಕ್ಕೆ ನಿಮ್ಮೊಳಗಿನ ಓದುಗ ಇದು ಅನಾಥನೊಬ್ಬನ ಕಥೆಯೆಂದುಕೊಂಡರೇ ನೀವು ಅಕ್ಷರಶಃ ತಪ್ಪಾಗಿ ಎಣಿಸುತ್ತಿದ್ದೀರಿ.
ಕಾನೂನು ಮತ್ತು ಭಾವನೆ - ಎಷ್ಟೋ ಬಾರಿ ಕೆಲವು ಪ್ರಕರಣಗಳಿಗೆ ಕಾನೂನಿನಲ್ಲಿ ಉತ್ತರವೇ ಇರುವುದಿಲ್ಲ. ಉದಾಹರಣೆಗೆ ತಾಯಿಯೊಬ್ಬಳು ಮಗಳನ್ನು ದೈಹಿಕವಾಗಿ ಹಿಂಸಿಸುತ್ತಿದ್ದ ತಂದೆಯ ಕೊಂದರೆ ಅವಳನ್ನು ಶಿಕ್ಷಿಸಬಹುದಾ? ಕಾನೂನಿನ ಪ್ರಕಾರ ಹೌದು, ಭಾವನೆಗಳ ಪ್ರಕಾರ ಇಲ್ಲ!!! ನ್ಯಾಯವೆಂಬುದು ಶುದ್ದವಾಗಿ ಭಾವನೆಗಳನ್ನು ಅವಲಂಬಿಸಿರಬೇಕೆ ಹೊರತು ಕಾನೂನನ್ನಲ್ಲ.
ಸಂಸ್ಕಾರ - ಪೋಷಕರನ್ನು ನೋಡಿ ಮಕ್ಕಳ ಸಂಸ್ಕಾರವನ್ನು ಎಣಿಸುವುದು ಎಂಥ ಮೂರ್ಖತನ. ಬಾಹ್ಯವಾಗಿ ಬರುವ ಹೋಲಿಕೆಗಳಷ್ಟೇ ಹೆತ್ತವರಿಂದ ಬರುವುದು. ಅಂತರಂಗದಲ್ಲಿ ಪ್ರತಿಯೊಬ್ಬರಿಗೂ ಹೇಗೆ ರೂಪುಗೊಳ್ಳಬೇಕು ಎಂಬುದರ ಆಯ್ಕೆಗಳಿರುತ್ತವೆ.
ಈ ನಾಲ್ಕು ಪ್ಯಾರಾಗಳು ಅಸಂಬದ್ಧವೆನಿಸಬಹುದು. ಆದರೆ, ಪುಸ್ತಕ ಓದಿದ ನಂತರ ಈ ವಿಷಯಗಳು ನಿಮ್ಮನ್ನು ಕೆದಕಲಿವೆ. ಮತ್ತಷ್ಟು ವಿಷಯಗಳನ್ನು ಬೆದಕುವಂತೆ ಮಾಡಲಿವೆ.
ಇಷ್ಟಲ್ಲದೇ, ಕಾಮಾಠಿಪುರ ಮತ್ತು ಅಲ್ಲಿನವರ ಬದುಕನ್ನು ಬಿಚ್ಟಿಡುವಲ್ಲಿ ಕಾದಂಬರಿ ಯಶಸ್ವಿಯಾಗಿದೆ. ಅಲ್ಲಿಯವರಿಗೆ ಹುಟ್ಟಿದ ಮಕ್ಕಳಿಗೆ "ಸೂಳೆಯ ಮಗ" ಎಂದು ಕರೆಯುತ್ತಾರೆ. ಆ ಪರಿಸರದಿಂದಾಚೆ ಹುಟ್ಟಿದ ಮಕ್ಕಳಿಗೆ ಅಪ್ಪನ ಹೆಸರು ಸಿಗುತ್ತದೆ. ಕಾಮಾಠಿಪುರದಲ್ಲಿ ಹುಟ್ಟಿದ ಮಗುವಿಗೂ ಅಂಥ ಗಂಡಸೇ ಕಾರಣವಲ್ಲವೇ? ಆ ವೃತ್ತಿಯಲ್ಲಿನ ಹೆಣ್ಣೊಬ್ಬಳನ್ನು ದೂರವಿರಿಸುವ ನಾವು, ಅವರ ಸಹವಾಸ ಮಾಡಿದ ಗಂಡಿನೆಡೆಗೆ ತೋರುವ ತಾರತಮ್ಯ ಅಸಹನೀಯ. ಆ ಪರಿಸರದ ಹೆಣ್ಣುಮಕ್ಕಳನ್ನು ಉಳಿಸುವುದು, ಅವರ ಸೇವೆ ಮಾಡುವುದು ಈಗ ರಾಜಕೀಯದ ಮಾರ್ಕೆಟಿಂಗ್ ಆಗುತ್ತಿರುವುದು ಅಂತ್ಯದ ಆರಂಭ. ಪುನಶ್ಚೇತನ ಕೇಂದ್ರ ಸ್ಥಾಪಿಸಿ ಅಲ್ಲಿನ ಮುಖ್ಯಸ್ಥನೇ ಅವಳನ್ನು ಬಳಸಿಕೊಂಡದ್ದನ್ನು ನಾವು ಕೇಳಿದ್ದೇವೆ.
ನಾಲ್ಕೈದು ವರ್ಷಗಳ ಹಿಂದೆ ಮೆಜೆಸ್ಟಿಕ್ ಬಸ್‌ಸ್ಟಾಪಿನಲ್ಲಿ ತಮ್ಮನಂತೆ ಕಂಡು ತನ್ನ ಅಂತರಾಳವನ್ನು ತೆರೆದು ಮಾತನಾಡಿದ್ದ ಒಬ್ಬ ಸೆಕ್ಸ್ ವರ್ಕರ್‌ನ ಅಷ್ಟೂ ಮಾತುಗಳೂ ಇಲ್ಲಿ ಪುನರ್ಮನನ ಮಾಡಿಕೊಂಡೆ. ಅವರ ನೋವುಗಳನ್ನು ಶಮನ ಮಾಡಲು ಗುಳಿಗೆ, ನಿರೋಧಕಗಳು, ಆಯಿಂಟ್‌ಮೆಂಟುಗಳಷ್ಟೇ ಸಾಲುವುದಿಲ್ಲ. ಬದಲಾಗಬೇಕಿರುವುದು ಸಮಾಜ!!! ಇರಲಿ :)
ಲೇಖಕಿಯವರಿಗೆ ಇಂಥದೊಂದು ಅದ್ಬುತ ಕಾದಂಬರಿ ಬರೆದದ್ದಕ್ಕೆ ಅಭಿನಂದನೆಗೆಳು.
ಸಮಾಜದಲ್ಲಿನ ಓರೆಕೋರೆಗಳನ್ನು ಮುಕ್ತವಾಗಿ ಲೇಖಕಿ ಸಹನಾ ವಿಜಯಕುಮಾರ್ ಬರೆದಿದ್ದಾರೆ. "ಅಪ್ಪ ಒಬ್ಬ ನೆಟ್ಟಗಿದ್ದಿದ್ರೆ ನಾವ್ ಯಾಕ್ ಹೀಗಾಗ್ತಿದ್ವಿ" ಎನ್ನುವ ಮಕ್ಕಳು ಈ ಪುಸ್ತಕ ಓದಬೇಕು. "ಅಮ್ಮ ಸರಿ ಇರ್ಲಿಲ್ಲ" ಎನ್ನುವವರು ಓದಬೇಕು. ಅವರನ್ನು ದೇವರಂತೆ ಪೂಜಿಸುವವರು ಓದಬೇಕು. ಈ ಪುಸ್ತಕ ಕೇವಲ ಪುಸ್ತಕವಾಗಿರದೇ ನಮ್ಮದೇ ಬದುಕಿನ ಚಿತ್ರಣ ಎನಿಸಿಬಿಡುತ್ತದೆ.
ಬರೆಯುತ್ತಾ ಹೋದರೆ, ಪುಟಗಳಷ್ಟು ಬರೆಯಬಹುದು. ಆದರೆ ಇಲ್ಲಿಗೆ ನಿಲ್ಲಿಸುತ್ತೇನೆ!! ಈ ವ್ಯಕ್ತಿತ್ವ, ಕಾನೂನು, ಭಾವನೆ, ತಂದೆ ತಾಯಿ, ಕುಟುಂಬ ಸತ್ಯ ಸಂಸ್ಕಾರ ಎಲ್ಲದರ ನಡುವೆ ಸೊಲ್ಲಾಪುರದಿಂದ ಕಾಮಾಠಿಪುರದ ಸುಕಲಾಜಿಗಲ್ಲಿಗೆ ಕಾದಂಬರಿ ಹೇಗೆ ಸಾಗಿತು. ಉತ್ತರ ಪುಸ್ತಕದಲ್ಲಿ!! ಓದಿ
ಶುಭವಾಗಲಿ
ಅಭಿ...