Jump to ratings and reviews
Rate this book

ಪ್ರಿಯೇ ಚಾರುಶೀಲೆ

Rate this book
Priyee Chaarusheele(Kannada) A novel in Kannada by Nagaraja Vastarey Published by Chanda Pustaka,

316 pages, Paperback

First published January 1, 2019

1 person is currently reading
29 people want to read

About the author

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
9 (45%)
4 stars
7 (35%)
3 stars
4 (20%)
2 stars
0 (0%)
1 star
0 (0%)
Displaying 1 - 10 of 10 reviews
Profile Image for Abhi.
89 reviews20 followers
May 1, 2022
||• ಪ್ರಿಯೇ ಚಾರುಶೀಲೆ •||

5/5

"ಸಾಮಾನ್ಯವಾಗಿ ಹೊಸ ಬರಹಗಾರರ ಪುಸ್ತಕಗಳನ್ನು ಓದುವಾಗ ಹಳೆ ಬರಹಗಾರರನ್ನೇ ಓದುವಂತೆ ಅನಿಸುವುದು ಸಾಮಾನ್ಯ. ಬೇಂದ್ರೆ ಅಜ್ಜನದ್ದೋ, ಬೆಳಗೆರೆಯವರದ್ದೋ, ಭೈರಪ್ಪನವರದ್ದೋ ಇನ್ನೊಬ್ಬ ಬರಹಗಾರರದ್ದೋ ಶೈಲಿ ನುಸುಳಿ ಹೋಗಿರುತ್ತದೆ"

ನಾಗರಾಜ ವಸ್ತಾರೆ ಎಂಬ ಅದ್ಭುತ ಲೇಖಕ ಈ ಮೇಲಿನ ಥಿಯರಿಗೆ ಹೊರತಾಗಿದ್ದಾರೆ. ಅವರದ್ದೇ ವಿಭಿನ್ನ ಶೈಲಿಯನ್ನು ಬಳಸಿ ಓದುಗರನ್ನು ಬೆಕ್ಕಸ ಬೆರಗಾಗಿಸುತ್ತಾರೆ‌. ಈ ಪುಸ್ತಕ ೨೦೧೯-೨೦ರ ಪ್ರಸ್ತುತತೆ, ಕಂಗ್ಲೀಷ್, ಭಾಷಾ ಪ್ರಯೋಗ, ವಸ್ತು ವೈಶಿಷ್ಟ್ಯ, ನಿರೂಪಣೆ ಎಲ್ಲದರಲ್ಲೂ ನವೀನ ಎನಿಸುತ್ತದೆ. ಹೆಸರೇ ಎಷ್ಟು ಮೋಹಕ - "ಪ್ರಿಯೇ... ಚಾರುಶೀಲೆ". ಹೆಸರಿನಿಂದಲೇ ಒಂದು ಅಪರಿಚಿತ ಮುಗುಳ್ನಗು ಮೂಡಿಸಬಲ್ಲ ಪುಸ್ತಕದ ಒಡಲು ಇನ್ನೂ ಮೋಹಕ!!!

ಪುಸ್ತಕಗಳನ್ನು ಮುಖಪುಟ ನೋಡಿ ನಿರ್ಧರಿಸಬೇಡಿ ಎಂಬ ಮಾತು ಚಾಲ್ತಿಯಲ್ಲಿದೆ. ಹಲಬಾರಿ ಇದು ನಿಜವೂ ಕೂಡ. ಹಾಗೇ ಕೇವಲ ಪುಸ್ತಕದ ಹೆಸರಿಗೆ ಆಕರ್ಷಿತನಾಗಿ ಈ ಪುಸ್ತಕ ಕೊಂಡುಕೊಂಡೆ. ಪುಸ್ತಕ ನಿರಾಸೆ ಮಾಡಲಿಲ್ಲ!!! ಪುಸ್ತಕದ ಒಡಲು ಹೀಗೆ ಇಷ್ಟೇ ಎಂದು ಬರೆಯುವುದು ಸುಲಭವಲ್ಲ‌. ಅಪರಿಚಿತ ಜಾಗದಲ್ಲಿ ಭೇಟಿಯಾಗುವ ಅಪರಿಚಿತ ಜೀವಗಳು ಬೆರೆಯುವ, ಮೊರೆಯುವ, ಕರೆಯುವ, ತೆರೆಯುವ, ಮುರಿಯುವ ಸುಂದರ ಕಥಾಹಂದರವನ್ನು ಹೊತ್ತು ಪ್ರಿಯೇ ಚಾರುಶೀಲೆ ಸಾಗುತ್ತದೆ.

ಇಲ್ಲಿ ಹೆಚ್ಚು ಪಾತ್ರಗಳ ಗೌಜು ಗೊಂದಲ ಗದ್ದಲಗಳಿಲ್ಲ, ಈಗಾಗಲೇ ರಾಶಿ ರಾಶಿ ಬರೆದಿಟ್ಟಿರುವ ಜಾತಿ ಮತಗಳಿಲ್ಲ, ಮತ್ತದೇ ಪ್ರೀತಿ ಪ್ರೇಮ ‌ಊಹೂಂ ಅದು ಇಲ್ಲ. ಇಡೀ ಪುಸ್ತಕವೇ ಒಂದು ಕೌತುಕ. ಓದುಗನೆದೆಗೆ ತೋಂತನನಗಳ ಸುರಿದು ತಾನು ಬರಿದಾಗಿ ಓದುಗನಲೊವನು ಸುರಿದುಕೊಳ್ಳುವ ಮನಮೋಹಕ ಕಾದಂಬರಿ ಪ್ರಿಯೇ ಚಾರುಶೀಲೆ!!!

ಎರಡೇ ಮುಖ್ಯ ಪಾತ್ರಗಳು ಸಮರ್ಥವಾಗಿ ಇಡೀ ಕಾದಂಬರಿಯನ್ನು ಹೊತ್ತಿವೆ. ಅವರದೇ ನಿರೂಪಣೆ, ನವಿರು ಸಂಭಾಷಣೆ.‌ ಅವನು ಮಾತಿಗೊಮ್ಮೆ ಮೀಸೆಯ ಮೇಲೆ ಕೈ ಇರಿಸಿ ನಕ್ಕರೆ ಇವಳು ಘಳಿಗೆಗೊಮ್ಮೆ ಅದನ್ನು ನೋಡಿ ನಾಚುವ ಹಸಿಬಿಸಿ ಭಾವ. ಅವಳು ಮತ್ಸ್ಯ ಕನ್ಯೆಯೇನೋ ಎಂಬ ಮಟ್ಟಿಗಿನ ಅವನ ಭ್ರಮಾ ಭಾವ, ಹೀಗೆ ಹಲವಾರು ಸುಂದರ ವೈಶಿಷ್ಟ್ಯ ವೈಚಿತ್ರ್ಯಗಳು ಓದುಗನಿಗೆ ಆಪ್ಯಾಯ ಭಾವವನ್ನು ‌ಉಳಿಸುತ್ತವೆ.

ಪುಸ್ತಕಗಳು ಮನಸಿನಲ್ಲುಳಿಯಬೇಕು, ಕಾಡಬೇಕು, ಎಡಬಿಡದೆ ಯೋಚನೆಗೀಡು ಮಾಡಬೇಕು ಎಂಬ ಸಿದ್ದಾಂತವಿರಿಸಿಕೊಂಡು ಓದುವವರಲ್ಲಿ ನಾನು ಒಬ್ಬ. ಹಾಗಾಗಬೇಕು ಎಂದರೆ ವಿಷಯ ಗಹನವಾಗಿರಬೇಕು ಎಂಬ ಪೂರ್ವಾಗ್ರಹವನ್ನು ನನ್ನೊಳಗೆ ಸೃಷ್ಟಿಸಿಕೊಂಡಿದ್ದೆ. ಪ್ರಿಯೇ ಚಾರುಶೀಲೆಯ ವಿಷಯ ಗಹನವೋ ಅಲ್ಲವೋ ಎಂಬುದು ಪ್ರತಿ ಓದುಗನ‌ ತರ್ಕಕ್ಕೆ ಸೀಮಿತವಾಗಲಿದೆ. ಆದರೆ ಸೀಮಾತೀತವಾಗಿರುವುದು ಕಾದಂಬರಿ ಓದುವಾಗಿನ ಅನುಭವ. ಪುಸ್ತಕ ಮನಸಿನಲ್ಲುಳಿಯುತ್ತದೆ, ಕಾಡುತ್ತದೆ. ಸಿಹಿಯಾಗಿ... ನವಿರಾಗಿ... ಹಸಿರಾಗಿ... ಬೆಳಕಾಗಿ... ಬದುಕಾಗಿ... ಪ್ರಿಯೇ ಚಾರುಶೀಲೆ ಎಂಬ ಹೆಸರು ಸೃಷ್ಟಿಸಿದ ಮುಗುಳ್ನಗು ಪುಸ್ತಕದುದ್ದಕ್ಕೂ ಮರೆಯಾಗುವುದಿಲ್ಲ. ಅವರೇ ನಾವೋ, ನಾವೇ ಅವರೋ, ಅವರು ನಾವುಗಳಿಗೆಲ್ಲ, ನಾವು ಅವರುಗಳಿಗೆಲ್ಲಾ ಇದುವೇ ತಾವೋ. ಹಾ! ದಿಸ್ ಬುಕ್ ಇಸ್ ಬೇಯಾಂಡ್ ಅವರ್ ಇಮ್ಯಾಜಿನೇಷನ್!!! ಇರಲಿ...

ಅಲ್ಲಲ್ಲಿ ಬರುವ ಕವಿ ಜಯದೇವನ ಅಷ್ಟಪದಿಗಳು ಪುಸ್ತಕವನ್ನು ಇಂದು ಚಂದಗಾಣಿಸಿವೆ. ಪುರಿಯ ಜಗನ್ನಾಥನ ಸನ್ನಿಧಿಯಲ್ಲಿ ಜರುಗುವ ಈ ಕಥೆಯೊಂದಿಗೆ ಜಯದೇವನ ಕವಿತೆಗಳಿದ್ದರೆ ಓದುಗ ಸಮ್ಮೋಹಿತನಾಗದೇ ಇರಲಾರ. ಜೊತೆಗೆ ಇತಿಹಾಸದ‌ ಪರಿಚಯವೂ ಇದೆ. ಬೋರು ಹಿಡಿಸದಷ್ಟು. ಒಟ್ಟಿನಲ್ಲಿ ಎಲ್ಲವೂ ಎಷ್ಟು ಬೇಕೋ ಅಷ್ಟು. ಅಷ್ಟೇ. ಅಪರಿಚಿತ ಜಾಗವಾದ ಪುರಿಯಲ್ಲಿ ಸಿಕ್ಕ ಅಪರಿಚಿತ ಜೀವಗಳಾವುವು? ಅವರ ಕಥನವೇನು? ಪುಸ್ತಕದ ಒಡಲಾದರೂ ಏನು? ಊಹಿಸಬೇಡಿ. ನಿಮ್ಮ ಊಹೆ ತಪ್ಪಾಗಿರಲಿದೆ. ಇದೊಂದು ಪುಸ್ತಕವನ್ನು ಓದಿ. ಹೊಸತನಕ್ಕಾಗಿ, ಪ್ರಸ್ತುತತೆಗಾಗಿ!!!

ಶುಭವಾಗಲಿ...

ಅಭಿ...
Profile Image for ತುಳಸಿ .
5 reviews13 followers
July 21, 2023
"ಗೊತ್ತಿದ್ರೆ ಗೊತ್ತಿದೆ ಅಂತ್ಹೇಳಿ.. ಗೊತ್ತಿಲ್ಲ ಅಂದ್ರೆ ಗೊತ್ತಿಲ್ಲ ಅಂತ್ಹೇಳಿ. ಗೊತ್ತಿದ್ರೂ ಗೊತ್ತಿಲ್ಲ ಅಂದ್ರೆ ಗೊತ್ತಿಲ್ಲ್ದೆ ಇದ್ದಿದ್ದು ಗೊತ್ತಿಲ್ಲದೇ ಇದ್ದಾಂಗೆ ಗೊತ್ತಾಗಿಹೋಗ್ತು!!"
ಕನ್ನಡ ಶಾಲೆಯಲ್ಲಿ ನಾಲಿಗೆ ಹೊರಳಿಸೋದಕ್ಕೆ ಹೇಳ್ತಿದ್ದ ವಾಕ್ಯವಾಗಿತ್ತು ಇದು.

ಈ ಪುಸ್ತಕ ಓದಿ ನನಗೆ ಅದೇ ಸಾಲುಗಳು ನೆನಪಾದ್ವು. ಹೊಸತನ ತುಂಬಿರುವ ಪುಸ್ತಕ. ಲೇಖಕರು ಒಂದೆರಡು ದಿನದ ಕಥೆಯನ್ನು, ಕೆಲವೇ ಕೆಲವು ಮುಖ್ಯ ಪಾತ್ರಧಾರಿಗಳನ್ನಿಟ್ಟುಕೊಂಡು ಭಾಷೆಯನ್ನು ಚೆಂದದ ರೀತಿಯಲ್ಲಿ ಬಳಸಿಕೊಂಡು ಕತೆಯನ್ನು ಬೆಳೆಸಿಕೊಂಡು ಹೋಗಿದ್ದು ಇಷ್ಟ ಆಯ್ತು.

ಈ ಕಥೆ ಓದಿ ಮುಗಿಸಿದ ಮೇಲೆ ಪುರಿಯ ಜಗನ್ನಾಥನ ರಥ ಯಾತ್ರೆಗೆ ಹೋಗಲೇ ಬೇಕು ಅಂತನ್ನಿಸೋದು ಸುಳ್ಳಲ್ಲ.
5 reviews6 followers
February 12, 2022
ತಂಗಾಳಿಯೊಂದಿಗೊಂದು ಅಸ್ಪಷ್ಟ ಗಂಧ!

ಒಂದು ಕವಿತೆ, ಒಂದು ಕತೆ, ಒಂದು ಕಾದಂಬರಿ ಅಥವಾ ಒಂದು ಪುಸ್ತಕ ಓದುವಾಗ ಕೊಡುವ ಅನುಭವಕ್ಕಿಂತ, ಓದಿ ಮುಗಿದ ಮೇಲೆ ಕೊಡುವ ಅನುಭವದ ಗಾಢತೆಯನ್ನು ಆಧರಿಸಿ ಅದರ ಕುರಿತಾಗಿ ಬರೆಯುವುದು ನನ್ನ ಪದ್ಧತಿ. ಹಾಗಾಗಿಯೇ ಓದಿದ ಕೂಡಲೇ ಅದರ ಕುರಿತಾಗಿ ಬರೆಯುವುದಕ್ಕೆ ಹೋಗುವುದಿಲ್ಲ; ಒಂದೊಮ್ಮೆ ಆ ಕ್ಷಣಕ್ಕೆ ಆ ಪ್ರಭಾವಲಯದಲ್ಲಿ ಸಿಲುಕಿ ಓದಿನ ತೀವ್ರತೆಯಿಂದಾಗಿ ಒಂದಷ್ಟು ಉತ್ಪ್ರೇಕ್ಷೆಗಳು ಇಣುಕಬಹುದು ಅನ್ನುವುದು ಒಂದು ಕಾರಣವಾದರೆ, ಆ ಓದು ಎಷ್ಟು ತೀವ್ರವಾಗಿತ್ತು, ಗಹನವಾಗಿತ್ತು ಮತ್ತು ಯಾವ ಥರದ ಪರಿಣಾಮವನ್ನು ಉಂಟುಮಾಡಿದೆ ಅನ್ನುವುದನ್ನು ನನಗೇ ನಾನು ಖಾತ್ರಿ ಮಾಡಿಕೊಳ್ಳುವ ಸಲುವಾಗಿಯೂ ಒಂದೆರಡು ದಿನ ಕಾಯುವುದು ಇದೆ. ಅರೇ, ಅದರಲ್ಲೇನಿದೆ, ಪುಸ್ತಕದ ಕುರಿತಾಗಿ ಬರೆಯುವುದಕ್ಕೆ ಇಷ್ಟೆಲ್ಲಾ ನಾಟಕಗಳ್ಯಾಕೆ, ಸುಮ್ಮನೆ ಪರಿಚಯಾತ್ಮಕವಾಗಿ ಬರೆದರೆ ಆಗುವುದಿಲ್ಲವಾ ಅನ್ನುವ ಪ್ರಶ್ನೆ ನನ್ನಲ್ಲೂ ಹುಟ್ಟಿತ್ತು. ಹೀಗೆ ಪರಿಚಯಾತ್ಮಕವಾಗಿ ಬರೆಯಬಹುದಾದರೂ ಅದು ನನ್ನ ಪದ್ಧತಿಗೆ ಸರಿ ಹೊಂದದ ಕಾರಣ, ಸುಲಭವಾದರೂ ಆ ದಾರಿಯನ್ನು ಆಯ್ದುಕೊಳ್ಳುವುದು ನನ್ನಿಂದಾಗದ ಕೆಲಸ. ಇಷ್ಟೆಲ್ಲಾ ಪೀಠಿಕೆ ಯಾಕೆ ಅನ್ನುವುದಕ್ಕೂ ಕಾರಣವಿದೆ‌. ನಮ್ಮ ಕನ್ನಡ ಓದುಗ ವರ್ಗದಲ್ಲಿ "ಚೆನ್ನಾಗಿದೆ", "ಇಷ್ಟ ಆಯ್ತು" ಹಾಗೂ ಇನ್ನಿತರ ಸಾಲುಗಳನ್ನು ಬಿಟ್ಟು ಅದೆಷ್ಟರ ಮಟ್ಟಿಗೆ ಒಂದು ಕೃತಿಯ ಕುರಿತಾಗಿ ಬರೆಯುತ್ತೇವೆ ಇತ್ತೀಚಿನ ದಿನಗಳಲ್ಲಿ? ನನಗೆ ವಿಮರ್ಶೆ ಎಲ್ಲಾ ಬರೋದಿಲ್ಲ, ಹಾಗಾಗಿ ನಾನು ಬರೆಯೋದಿಲ್ಲ ಅನ್ನುವುದು ಹಲವರ ಅಭಿಪ್ರಾಯವಾದರೂ, ಒಂದು ಪುಸ್ತಕದ ಕುರಿತಾಗಿ ನನಗೇನು ಇಷ್ಟವಾಯಿತು, ಯಾಕಾಗಿ ಇಷ್ಟವಾಯಿತು, ಇದು ಏನನ್ನು ನೆನಪಿಸಿತು, ಇದು ನನ್ನಲ್ಲಿ ಏನೇನು ಯೋಚನೆಗಳನ್ನು ಹುಟ್ಟುಹಾಕಿತು ಅನ್ನುವುದರ ಕುರಿತಾಗಿ ಪ್ರತಿಯೊಬ್ಬರಲ್ಲೂ ಒಂದಷ್ಟು ಅಭಿಪ್ರಾಯವಂತೂ ಖಂಡಿತಾ ಇದ್ದೇ ಇರುತ್ತದಲ್ಲಾ; ಅಂಥ ಅಭಿಪ್ರಾಯಗಳನ್ನು ದಾಖಲಿಸುವುದನ್ನೇ ಬರೆಹವಾಗಿಸಬಹುದಲ್ಲ! ಒಂದು ಪುಸ್ತಕದ ಕುರಿತಾಗಿ ಒಂದಷ್ಟು ಚರ್ಚೆಗಳಾಗಬೇಕು, ಚರ್ಚೆಗಳಲ್ಲದಿದ್ದರೂ ಹೊಸ ಹೊಸ ಹೊಳಹುಗಳು, ದೃಷ್ಟಿಕೋನಗಳು ಮುನ್ನೆಲೆಗೆ ಬರಬೇಕು. ಕೇವಲ ಕೆಲವೇ ಕೆಲವು ಹಳೆಯ ಹಾಗೂ ಪ್ರಸಿದ್ಧ ಬರೆಹಗಾರರ ಕುರಿತಾಗಿ ಮತ್ತು ಅವರ ಕೃತಿಗಳ ಕುರಿತಾಗಿ ಮಾತ್ರ ಬರೆಯದೇ, ಒಂದಷ್ಟು ಹೊಸ ನೀರಿನ ರುಚಿಯನ್ನೂ ನೋಡಬೇಕು. ಆದರೆ, ನಮ್ಮಲ್ಲಿ ಬಹುದೊಡ್ಡ ಸಮಸ್ಯೆಯೆಂದರೆ, ನಾವು ಇನ್ನೂ ಬೇರೆ ಬೇರೆ ವಿಷಯಗಳತ್ತ ಗಮನಹರಿಸದೇ ಒಂದಷ್ಟು ನಿರ್ದಿಷ್ಟ ವಿಷಯಗಳ ಕುರಿತಾಗಿನ ಬರೆಹಗಳನ್ನಷ್ಟೇ ಓದುತ್ತಿದ್ದೇವೆ. ಅದು ತಪ್ಪಲ್ಲದಿದ್ದರೂ ಅದೆಷ್ಟೋ ಹೊಸ ಪುಸ್ತಕಗಳು ಮುಖ್ಯ ವೇದಿಕೆಯನ್ನು ಅಷ್ಟಾಗಿ ಪ್ರವೇಶಿಸದೇ ಇರುವುದಕ್ಕೆ ಇಂಬು ಕೊಟ್ಟಂತಾಗುತ್ತದೆ ಅಂತ ಬಹುಶಃ ಒಪ್ಪಿಕೊಳ್ಳಬಹುದೇನೋ. ಹೀಗೆ ಯಾವುದರ ಕುರಿತು ಮಾತಾಡಬೇಕೋ ಅಂಥ ಪುಸ್ತಕಗಳ ಸಾಲಿಗೆ ಸೇರಬಹುದಾದ ಹಲವು ಪುಸ್ತಕಗಳಲ್ಲಿ ಒಂದು ಶ್ರೀ ನಾಗರಾಜ್ ವಸ್ತಾರೆ ಅವರ 'ಪ್ರಿಯೇ ಚಾರುಶೀಲೆ'..

ಈ ಪುಸ್ತಕದ ಕುರಿತಾಗಿ ಯಾರ್‍ಯಾರು ಏನೇನು ಬರೆದಿರಬಹುದು ಅನ್ನುವ ಕುತೂಹಲದೊಂದಿಗೆ ಒಂದಷ್ಟು ಹುಡುಕಾಡಿದೆ. ನನಗೆ ಸಿಕ್ಕಿದ್ದು ಮೂರ್ನಾಲ್ಕು ಬರೆಹಗಳು ಮಾತ್ರ. ಅದರಲ್ಲೂ ಒಂದು ಬರೆಹದಲ್ಲಿ ಇಡೀ ಕಾದಂಬರಿಯ ಸಾರಾಂಶವನ್ನು ನೇರವಾಗಿ, ಯಾವ ಕುತೂಹಲವನ್ನೂ ಇಟ್ಟುಕೊಳ್ಳದ ಹಾಗೆ ಬರೆದು ಮುಗಿಸಿದ್ದಾರೆ. ಓದುವಿಕೆಯ ಅನುಭವವನ್ನು ಹಾಳುಗೆಡವುವ ಇಂಥ ಬರೆಹಗಳಾದರೂ ಯಾಕೆ ಅನ್ನುವ ಸಿಟ್ಟೂ ನಾನೀಗ ಇಲ್ಲಿ ಬರೆಯುತ್ತಿರುವುದಕ್ಕೆ ಒಂದು ಕಾರಣ ಅಂತಂದರೆ ಅತಿಶಯೋಕ್ತಿ ಅಲ್ಲ ಅಂತಲೇ ಭಾವಿಸುತ್ತೇನೆ. ಕತೆ, ಕಾದಂಬರಿ, ಸಿನೆಮಾದ ಕುತೂಹಲವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡದೇ, ಓದುಗನಲ್ಲಿ, ನೋಡುಗನಲ್ಲಿ ಕುತೂಹಲವನ್ನು ಹುಟ್ಟುಹಾಕುವುದಕ್ಕೆ ಬೇಕಾದಷ್ಟು ಕತೆಯನ್ನು (ತೀರಾ ಅಗತ್ಯವಿದ��ದರೆ) ಮಾತ್ರವೇ ತೆರೆದಿಡುವುದಕ್ಕೆ ಪ್ರಯತ್ನ‌ ಇರಲಿ ಅಂತ ಒಂದು ವಿನಮ್ರ ವಿನಂತಿ. ಇನ್ನು, ಕೇವಲ ಅಂತರ್ಜಾಲದಲ್ಲಿ ಹುಡುಕಾಡಿದ್ದು ನನ್ನ ಮಿತಿಯೂ ಇರಬಹುದು!

ಪ್ರೇ���ದ ಕುರಿತಾಗಿ ಅದೆಷ್ಟೇ ಬರೆದರೂ, ಮತ್ತೆ‌ ಮತ್ತೆ ಬೇರೆ ಬೇರೆ ಪೀಳಿಗೆ ಬೇರೆ ಬೇರೆಯದೇ ಅಭಿವ್ಯಕ್ತಿಯೊಂದಿಗೆ ಪ್ರೇಮದ ಕುರಿತಾಗಿ ಬರೆಯುತ್ತಲೇ ಬಂದಿದೆ. ಮನುಷ್ಯ ಸಂಘಜೀವಿ ಅಂತಲೇ ನಾವೆಲ್ಲಾ ಕಲಿತಿರುವುದು; ಆದರೆ, ಬಹುಶಃ ಮನುಷ್ಯ ‌ನಿಜವಾಗಲೂ ಒಂಟಿ, ಆ ಒಂಟಿತನವನ್ನು ಕಳೆದುಕೊಳ್ಳುವುದಕ್ಕೋಸ್ಕರ ಸಂಘಜೀವಿಯ ಸೋಗು ಹಾಕಿ ಕಾಲ‌ ಕಳೆಯುತ್ತಾನೆ. ಇಲ್ಲಿ ಸೋಗು ಎನ್ನುವುದಕ್ಕೆ ಕಪಟ ಅಂತ ಭಾವಿಸಬೇಕಾಗಿಲ್ಲ; ಅದೊಂದು ವೇಷ, ಆರೋಪಿಸಿಕೊಳ್ಳುವಂಥದ್ದು ಅನ್ನುವ ಧ್ವನಿಯಷ್ಟೇ ಮುಖ್ಯ. ಹೀಗೆ ಒಂಟಿತನದಲ್ಲಿರುವ ಮನುಷ್ಯ ಸಂಘಜೀವಿಯ ವೇಷವನ್ನು ನಡೆಸಿಕೊಂಡು ಹೋಗುವುದಕ್ಕೆ ಒಂದಷ್ಟು ಮೂಲದ್ರವ್ಯಗಳ ಮೊರೆಹೋಗುತ್ತಾನೆ; ಅದರಲ್ಲಿ ಪ್ರೇಮವೂ ಒಂದು. ಪ್ರೀತಿ, ಮಮತೆ, ವಾತ್ಸಲ್ಯ, ಕರುಣೆ, ನಂಬಿಕೆ, ತ್ಯಾಗ ಇತ್ಯಾದಿಗಳ ಮೂಲಕವೂ, ದ್ವೇಷ, ಅಸೂಯೆ, ಅಹಂಕಾರ, ಸಿಟ್ಟು, ಲೋಭಗಳಿಂದಲೂ ತನ್ನ ಸುತ್ತಮುತ್ತ ಒಂದಷ್ಟು ಸಂಬಂಧಗಳನ್ನು ಹುಟ್ಟುಹಾಕಿಕೊಳ್ಳುತ್ತಾನೆ. ಆ ಸಂಬಂಧಗಳೊಂದಿಗಿನ ನಿತ್ಯ ಸಂವಾದ, ಸಂಘರ್ಷಗಳಿಂದಾಗಿ ತನ್ನ ಒಂಟಿತನದ ತೀವ್ರತೆಯನ್ನು ಮರೆಯುವ, ಬದುಕಿನ ಬೇರೆ ಬೇರೆ ಮಗ್ಗುಲುಗಳಿಗೆ ಹೊರಳಿಕೊಳ್ಳುವ ಪ್ರಕ್ರಿಯೆಯನ್ನು ಜೀವಂತವಾಗಿಡುತ್ತಾನೆ.

ಹೆಸರೊಂದನ್ನು ಬಿಟ್ಟು ಇನ್ನೇನೂ ಗೊತ್ತಿರದೇ, ಯಾವ ಪೂರ್ವಗ್ರಹಗಳೂ ಇಲ್ಲದೇ ಓದಲು ಶುರುಮಾಡಿದ ಕಾದಂಬರಿ 'ಪ್ರಿಯೇ ಚಾರುಶೀಲೆ'. ನಾಗರಾಜ ವಸ್ತಾರೆ ಅವರ ಯಾವ ಪುಸ್ತಕವನ್ನು ಓದಿರದೇ ಇದ್ದುದರಿಂದ ಯಾವುದೇ ನಿರೀಕ್ಷೆಯ ಚೌಕಟ್ಟಿರಲಿಲ್ಲ. ಹಳೆ ತಲೆಮಾರಿನ ಭಾಷೆಯೊಂದಿಗೆ, ಹೊಸ ತಲೆಮಾರಿನ‌ ಭಾಷೆಯನ್ನು ಬೆಸೆಯುವುದಕ್ಕೆ ಶ್ರೀಯುತರು ಪ್ರಯತ್ನಿಸಿದಂತೆ ಕಾಣುತ್ತದೆ. ಒಮ್ಮೊಮ್ಮೆ ಹೊಸ ತಲೆಮಾರಿನ ಪ್ರೇಮಕತೆಯಂತೆಯೂ, ಇನ್ನು ಕೆಲವೊಮ್ಮೆ ಅದೆಷ್ಟೇ ತಲೆಮಾರುಗಳು ಕಳೆದರೂ ಬದಲಾಗದ ಪ್ರೇಮದ ಮೂಲವನ್ನು ಹುಡುಕುವ ಕತೆಯಂತೆಯೂ ಕಂಡರೆ ಆಶ್ಚರ್ಯವೇನಿಲ್ಲ. ಬರೀ ಪ್ರೇಮವಷ್ಟೇ ಕಂಡರೆ ತಪ್ಪೂ ಅಲ್ಲ; ಪೂರ್ತಿ ಸರಿಯೂ ಅಲ್ಲ! ಹೊರಗಿನ ಪ್ರಪಂಚವನ್ನು ನೋಡುವ ಮನುಷ್ಯನಿಗೆ ತಾನು ಮಾತ್ರ ದುಃಖದಲ್ಲಿರುವುದಾಗಿಯೂ, ತನ್ನೊಬ್ಬನನ್ನು ಬಿಟ್ಟು ಇಡೀ ಜಗತ್ತು ಸುಖದ ಸಂಭ್ರಮದ ಅಮಲಲ್ಲಿ ತೇಲುತ್ತಿರುವುದಾಗಿಯೂ ಕಾಣುವುದು ಸಹಜ. ತನ್ನ ಸದ್ಯದ‌ ಬದುಕಿಂದ ಕೆಲ ಕಾಲ ಹೊರ ಬಂದು ಹೊಸ ಅನುಭವಗಳನ್ನು ಪಡೆದುಕೊಳ್ಳಬೇಕು ಎಂದು ಹಂಬಲಿಸುವವರು ಹಲವರಾದರೂ, ಕಾರ್ಯಪ್ರವೃತ್ತರಾಗುವವರು ಬೆರಳೆಣಿಕೆಯಷ್ಟು. ಬೀದಿಯಲ್ಲಿ ನಡೆಯುವಾಗ ಪರಿಚಯದ ಯಾವ ಮುಖಗಳೂ ಕಾಣದೇ, ಹೆಸರಿಡಿದು ಕರೆಯುವ ಯಾವ ಧ್ವನಿಗಳೂ ಇದಿರಾಗದೇ, ತಮ್ಮನ್ನೇ ತಾವು ಹೊಸದಾಗಿ ಹುಡುಕಿಕೊಳ್ಳಬಹುದಾದ ಒಂದು ಅವಕಾಶಕ್ಕಾಗಿ ದಿನಂಪ್ರತಿ ಪ್ರಾರ್ಥಿಸುವ ಮನುಷ್ಯರೇನು ಕಡಿಮೆ ಇಲ್ಲವಲ್ಲ ! ಅದೆಷ್ಟೇ ಅಪರಿಚಿತ ಪ್ರದೇಶಕ್ಕೆ ಹೋದರೂ ಪರಿಚಯ ಆಗಲೇ ಬೇಕಲ್ಲ , ಹೊಸ ಹೊಸ ಸಂಬಂಧಗಳು ಹುಟ್ಟಲೇಬೇಕಲ್ಲ! ಹಾಗೆ ಹುಟ್ಟುವ ಸಂಬಂಧ ಮತ್ತದರ ಕಥಾನಕವನ್ನು ತೆರೆದಿಡುವುದೇ 'ಪ್ರಿಯೇ ಚಾರುಶೀಲೆ'.

ನಾಗರಾಜ ವಸ್ತಾರೆಯವರು ಭಾಷೆಯನ್ನು ಬಳಸಿಕೊಂಡ ಹಾಗೂ ದುಡಿಸಿಕೊಂಡ ಬಗೆಯೇ ಇಡೀ ಕಾದಂಬರಿಯ ಜೀವಾಳ; ಕೆಲವೊಮ್ಮೆ ಒತ್ತಾಯಪೂರ್ವಕವಾಗಿಯೂ! ಇಲ್ಲಿ ಸಾಹಿತ್ಯದ ಶಾಸ್ತ್ರೀಯ ವಾಕ್ಯಗಳೂ ಇವೆ; ಇತ್ತೀಚಿನ ದಿನಗಳಲ್ಲಿ ನಿತ್ಯ ಮಾತಾಡುವ ಕನ್ನಡವೂ ಇದೆ, 'ಐ ಮೀನ್' ಕಂಗ್ಲೀಷೂ ಇದೆ; ಹಾಗೆ ಹೇಳಬಹುದಾದಲ್ಲಿ.. ಅವರು ಹೇಳಬೇಕಾಗಿರುವುದನ್ನು ಹೇಗಾದರೂ ಹೇಳಲೇಬೇಕಾಗಿತ್ತು, ಹಾಗಾಗಿ ಅಲ್ಲಿಯೂ ಅವರು ಜಾಣ್ಮೆಯನ್ನು ತೋರಿದ್ದಾರೆ. ಒಮ್ಮೊಮ್ಮೆ ದಾರಿ ತಪ್ಪುವ ನಿರೂಪಣೆಯನ್ನು ಅಲ್ಲಿನ ಪಾತ್ರದ ಮೂಲಕವೇ ದಾರಿ ತಪ್ಪಿಸುತ್ತಾರೆ ಹಾಗೂ ಆ ದಾರಿ ತಪ್ಪುವ ಎಚ್ಚರವೂ ಅವರಿಗಿದೆ; ಆ ಪಾತ್ರಕ್ಕೂ ! ಹಾಗಾಗಿ ಇದನ್ನು ಒಂದು ಪ್ರಯೋಗ ಅಂತಲೇ ಭಾವಿಸಬೇಕೇ ಹೊರತೂ, ಅರಿವಿಲ್ಲದೇ ಆದ ನಿರೂಪಣೆಯಲ್ಲ. ಆದರೆ, ಓದಿನ ಓಘಕ್ಕೆ ಒಮ್ಮೊಮ್ಮೆ ಅದೇ ತೊಡಕಾಗುವ ಸಾಧ್ಯತೆಗಳು ದಟ್ಟವಾಗಿ ಕಾಣಿಸಿದ್ದಂತೂ ಹೌದು. ವಿವರಗಳೇ ತುಂಬಿಕೊಂಡಾಗ ಆಸಕ್ತಿಯಿದ್ದರೂ ಕತೆಯ ದಿಕ್ಕು ತಡಕಾಡಿಸುತ್ತದೆ ಆದರೂ, ಅದೂ ಒಂಥರಾ ಮಜವಾಗಿದೆ.

ಮನುಷ್ಯ ತನ್ನ ವಾಸ್ತವದಿಂದ ಓಡುವುದಕ್ಕೆ ಯಾವತ್ತೂ ಪ್ರಯತ್ನಿಸುತ್ತಲೇ ಇರುತ್ತಾನೇನೋ ಅಂತನ್ನಿಸದೇ ಹೋಗುವುದಿಲ್ಲ. ಕೆಲವು ಸಂಬಂಧಗಳು ಹುಟ್ಟಿಕೊಳ್ಳುವುದಕ್ಕೆ ವರ್ಷ ವರ್ಷಗಳ ಕಾಲ ಕೂತು ತೂಗಿ ಅಳೆದು ಅವುಗಳನ್ನು ನಿರ್ವಹಿಸಬೇಕಾದ ಅಗತ್ಯತೆ‌ ಇರುವುದಿಲ್ಲ. ಸರಿಯಾದ ಸಂದರ್ಭ ಮತ್ತು ಮನೋಭೂಮಿಕೆ ಸರಿಯಾದ ಸಮಯದಲ್ಲಿ ಒಂದಕ್ಕೊಂದು ಇದಿರಾದಾಗ ಬೇಡ ಬೇಡವೆಂದರೂ ಸಂಬಂಧಗಳು 'ಗಂಟು' ಬೀಳುತ್ತವೆ. ಹಾಗಾಗಿ ಮನುಷ್ಯನ ಬದುಕಿನಷ್ಟು ಸಂಕೀರ್ಣವಾದ ಇನ್ನೊಂದು ಬದುಕು ಬಹುಶಃ ಇರಲಿಕ್ಕಿಲ್ಲ. ಕಾರಣ, ಒಂದೊಂದು ಭಾವವೂ ಒಂದೊಂದು ದಿಕ್ಕಿಗೆ ಎಳೆದೊಯ್ಯಬಲ್ಲ ಸಾಮರ್ಥ್ಯ ಹೊಂದಿರುವಂಥವುಗಳು. ಮತ್ತೆ ಮತ್ತೆ ಎಳೆ ತಂದು ಒಂದೇ ತಂತಿಗೆ ಜೋಡಿಸಬೇಕಾಗಿರುವುದು ನಮ್ಮ ಹಾಡಿನ ಪಾಡು.

ಈ ಕಾದಂಬರಿಯನ್ನು ಓದುತ್ತಿದ್ದಾಗ ತುಂಬಾ ಕಡೆ ಇದು ಸಿನೆಮಾವಾದರೆ ಎಷ್ಟು ಚೆಂದ ಅಂತ ಅನಿಸಿದ್ದಿದೆ. ಕೆಲವು ಸನ್ನಿವೇಶಗಳನ್ನು ಅಷ್ಟು ವೈಭವೋಪೇತವಾಗಿ ಅಕ್ಷರಗಳಲ್ಲೇ ಲೇಖಕರು ಕಟ್ಟಿಕೊಟ್ಟಿದ್ದಾರೆ. ಅದು ಅವರ ಭಾಷೆಗಿರುವ ಗಟ್ಟಿತನ. ಕೆಲವು ಮೈನವಿರೇಳಿಸುವ ಸಂಗತಿಗಳೂ ಇವೆ ನಮ್ಮ ನಮ್ಮ ಕಲ್ಪನಾಶಕ್ತಿಯನ್ನು ಆಧರಿಸಿ! ಕೆಲವು ಕಡೆ ಸ್ವಲ್ಪ ನಾಟಕೀಯತೆಯೂ ಇರುವುದು ಕತೆಯ ಬೆಳವಣಿಗೆಗೆ ಅಂತಲೇ ಆದರೂ, ವಾಸ್ತವದ ನೆಲೆಗಟ್ಟಿನಲ್ಲಿ ಸರಿಯಾಗಿ ಕೂರದೇ ಒದ್ದಾಡುತ್ತವೆ. ಉದಾಹರಣೆಗೆ, ಜಗತ್ತಿನ ಅನೇಕ ಸಂಗತಿಗಳ ಕುರಿತು ಗೊತ್ತಿರುವ ವ್ಯಕ್ತಿಗೆ ಸರಿ ಸುಮಾರು ಒಂದೇ ಎನ್ನಬಹುದಾದ ತನ್ನದೇ ರಂಗದ ಪ್ರಸಿದ್ಧ ಹೆಸರೊಂದು ತಿಳಿಯದೇ ಇರುವುದು. ಎಲ್ಲರಿಗೂ ಎಲ್ಲವೂ ತಿಳಿದಿರಲೇಬೇಕು ಅಂತೇನಿಲ್ಲ , ಸಚಿನ್ ತೆಂಡೂಲ್ಕರ್ ಯಾರೆಂದು ತನಗೆ ಗೊತ್ತೇ ಇಲ್ಲ ಅಂತ ಮರಿಯಾ ಶರಪೋವಾ ಹಿಂದೊಮ್ಮೆ ಹೇಳಿದಾಗ ಬಹಳಷ್ಟು ಜನ ಸಿಟ್ಟಿಗೆದ್ದಿದ್ದು ನಮ್ಮ ಕಣ್ಣ ಮುಂದಿದೆ. ಆದರೆ, ಯಾವಾಗ ಪಾತ್ರವೊಂದರ ಕಟ್ಟುವಿಕೆ 'ಬಹಳಷ್ಟು ತಿಳಿದಿದೆ' ಅನ್ನುವುದನ್ನೇ ಮೂಲವಾಗಿಸಿಕೊಂಡಿರುತ್ತದೋ, ಆಗ 'ಗೊತ್ತಿಲ್ಲ' ಅನ್ನುವುದು ದುರ್ಬಲವೂ, ಬಾಲಿಶವೂ ಅಂತನ್ನಿಸಿದರೆ ಓದುಗನ ತಪ್ಪಲ್ಲವೆಂದು ಮನ್ನಿಸಬೇಕಾಗಿ ಕೋರಿಕೆ!

ಇನ್ನೂ ಬಹಳಷ್ಟನ್ನು ಈ ಕೃತಿಯ ಕುರಿತಾಗಿ ಹೇಳಬೇಕಿತ್ತು; ಆದರೆ, ಕತೆಯ ಅಂಶಗಳನ್ನು ಇಷ್ಟೇ ಇಷ್ಟು ಕೂಡಾ ಬಿಟ್ಟುಕೊಡುವುದಕ್ಕೆ ಮನಸ್ಸಿಲ್ಲದ ಕಾರಣ ಜಾಸ್ತಿ ಹೇಳದೇ‌ ನಿಲ್ಲಿಸುವೆ. ಒಂದು ಕೃತಿ ಒಳ್ಳೆಯದೋ ಕೆಟ್ಟದ್ದೋ, ಸಾಮಾನ್ಯದ್ದೋ ಅಸಾಮಾನ್ಯದ್ದೋ ಅನ್ನುವುದನ್ನು ತೀರ್ಮಾನಿಸುವುದಕ್ಕೂ ಮೊದಲು ಆ ಕೃತಿಯ ಕುರಿತಾಗಿ ಚರ್ಚಿಸೋಣ, ಆ ಕೃತಿಯನ್ನು ಪರಿಚಯಿಸೋಣ, ಆ ಕೃತಿಯನ್ನು ನಮ್ಮದಾಗಿಸಿಕೊಳ್ಳುವ ಪ್ರಯತ್ನ ಮಾಡೋಣ. ಎಲ್ಲವೂ ಎಲ್ಲರಿಗೂ ಇಷ್ಟವಾಗಲೇಬೇಕು ಅಂತೇನಿಲ್ಲ. ಸಾಹಿತ್ಯವೇ ಆಗಿರಲಿ, ವ್ಯಕ್ತಿತ್ವವೇ ಆಗಿರಲಿ ಗಹನವಾದಷ್ಟೂ ದ್ವಂದ್ವಗಳು ಹೆಚ್ಚುತ್ತವೆ ಮತ್ತು ಅಂಥ ದ್ವಂದ್ವಗಳಲ್ಲೇ ಯೋಚನೆಗಳು ಕಡೆಯಲ್ಪಡುತ್ತವೆ. ಕಡೆದಷ್ಟೂ ಸಂಕೀರ್ಣವಾಗುತ್ತವೆ. ಸಂಕೀರ್ಣತೆಗೂ ಒಂದು ಸೌಂದರ್ಯವಿದೆ; ಮಾನವ ಜನಾಂಗದಂತೆಯೇ!

- 'ಶ್ರೀ'
ತಲಗೇರಿ
Profile Image for Kanarese.
133 reviews19 followers
March 27, 2025
Book Review: Priye Chaarusheele by Nagaraj Vastare

Priye Chaarusheele is a captivating and unconventional novel that challenges traditional storytelling. The book opens with a hypothetical analysis of a poem and unfolds into a fascinating encounter set against the backdrop of Puri’s seashore during the grand Jagannath Yatra.

Nagaraj Vastare skillfully builds his narrative upon Gita Govindam, weaving a story that transcends conventional boundaries. The novel revolves around two enigmatic characters, Matangi and Ila, whose backgrounds remain deliberately obscure. Their actions are spontaneous, their motives unclear, yet their presence is utterly compelling.

What sets this book apart is its ability to test the reader’s patience while keeping them engrossed. The writing style defies norms, pushing limits and immersing readers in an unpredictable journey. Despite its challenging nature, I found myself racing through the pages, eager to uncover what lay ahead.

For those who enjoy literature that breaks molds and demands full engagement, Priye Chaarusheele is a refreshing and rewarding read. It’s a novel that lingers in the mind long after the last page is turned.
Profile Image for Soumya.
217 reviews49 followers
March 21, 2021
ಪುಸ್ತಕದ ಮೊದಲ ಮುಕ್ಕಾಲು ಭಾಗ - ಮುಗಿದರೆ ಸಾಕು ಅನ್ಕೊಂಡ್ ಓದಿದ್ದು.

ಕಡೆಯ ಕಾಲು ಭಾಗ - ಕಷ್ಟ ಪಟ್ಟು ಓದಿದ ಮೊದಲಿನ ಮುಕ್ಕಾಲು ಭಾಗ ಸಾರ್ಥಕ ಅನ್ನೋ ಅಭಿಪ್ರಾಯ ಹುಟ್ಟಿ ಹಾಕಿತು.

ಪುರಿ, ಪುರಿಯ ಜಗನ್ನಾಥ ಜಾತ್ರೆ ಬಗ್ಗೆ ಯಥೇಚ್ಛವಾಗಿ ಕೊಟ್ಟ ಮಾಹಿತಿ ಇಷ್ಟ ಆಯ್ತು.

ನಾ ಓದಿದ ನಾಗರಾಜ ವಸ್ತಾರೆ ಅವರ ಮೊದಲ ಪುಸ್ತಕ. ಅವರ ಬರವಣಿಗೆ ಶೈಲಿ ಇಷ್ಟ ಆಯ್ತು.
Profile Image for Prashanth Bhat.
2,154 reviews137 followers
May 15, 2022
ನಿನ್ನೆಯ ಹಗಲಿಡೀ ರೂಮು ಹೊಂಚಿಕೊಂಡು ಇಡೀ ಶಹರವನ್ನು ಸುತ್ತಿ, ಸಂಜೆಯ ಮೇಲೆ ಈ ಹೋಟೆಲಿನಲ್ಲಿ ಸಂದು,ಶವರಿನಡಿ ಮಿಂದು ಬಂದ ಮೇಲೆ... ನನ್ನ ಹಾಡನ್ನು ಇಡೀ ಜಗತ್ತಿನ ಹಾಡಾಗಿಸಬೇಕೆನ್ನುವ ಉ��ೇದು ಹುಟ್ಟಿಬಂತು! ಅಂತಿಂತಹ ಉಮೇದಲ್ಲ. ಹತ್ತಿಕ್ಕಲಾಗದ ಆದಮ್ಯ ಆಸ್ಥೆ!

ನನ್ನ ಮಟ್ಟಿಗೆ ಈ ಪರಿಯ ಉಮೇದುಗಳ ಬಗ್ಗೆಯೇ ಒಂದು ಥಿಯೊರಿಯಿದೆ. ಈ ಎಲ್ಲ ಉಮೇದುಗಳುಂಟಾಗುವುದೇ ಬಾಹ್ಯಾಕಾಶದಲ್ಲಿ... ಅಲ್ಲಿ ದೂರದಲ್ಲೆಲ್ಲೋ ಇರುವ ಯಾರೋ,ನೆಲದಲ್ಲಿರುವ ನಮ್ಮತ್ತ,ಒಂದೇ ಸಮ‌ ಹೊಳಹುಗಳನ್ನು ತೂರಿಬಿಡುತ್ತಾರೆ. ರೇಡಿಯೋ ಸಂಕೇತಗಳ ಹಾಗೆ ತೇಲಿ ಬಿಡುತ್ತಾರೆ. ಈ ಭೂಮಿಯ ಮೇಲಿರುವ ಕಲಾವಂತ ಮಂದಿ,ಇವುಗಳನ್ನು ಹೆಕ್ಕಿ,ಈ ಹೊಳಹಿಗೊಂದು ಉಲುಹು ಕೊಟ್ಟು ಹಾಡಾಗಿಸುತ್ತಾರೆ. ಇನ್ನು ಕಲಾವಂತಿಕೆಯೆಂದರೆ ಕೆಲವೇ ಮನುಷ್ಯರ ತಲೆಯೊಳಗೋ,ಎದೆಯೊಳಗೋ,ಮಿದುಳೊಳಗೋ...ಹೃದಯದೊಳಗೋ...ಇರುವ ಟ್ರಾನಿಸ್ಟರಿನಂತಹ ಸರಕು. ಇಂತಹ ಮಂದಿ ತಂತಮ್ಮ ಟ್ರಾನಿಸ್ಟರುಗಳನ್ನು ಟ್ಯೂನ್ ಮಾಡುವಾಗ,ದಕ್ಕಿಬರುವ ಹೊಳಹು ತಂತಾನೇ ಉಲುಹಾಗಿ ಮಾರ್ಪಟ್ಟು ಹಾಡು ಹುಟ್ಟುತ್ತದೆ!
ಆಕಾಶವೆಂಬ ಆಕಾಶದಲ್ಲಿ ಹುಟ್ಟಿ,ಮನಸ್ಸೆಂಬ ಇನ್ನೊಂದು ಆಕಾಶಲದಲ್ಲಿ ಮೈಪಡೆಯುವ ಉಲುಹುಗಳನ್ನು ಎಲ್ಲೆಲ್ಲೂ ಹಬ್ಬಿಸುವುದು ಪದ್ಯಕಾರನ ಮತ್ತು ಹಾಡುಗಾರನ ಕರ್ತವ್ಯ ಕೂಡ.‌ಕರ್ತವ್ಯಕ್ಕೂ ಹೆಚ್ಚಿನ ಕರ್ಮ ಅಂದೆನ್ನಬಹುದೇನೋ.. ಯಾಕೆಂದರೆ ಅವನು ಅವ್ಯಕ್ತ ರೇಡಿಯೋ ಸಂಗತಿಗಳನ್ನು ಮಾತಾಗಿ ಹಾಡಾಗಿ ಬಿತ್ತರಿಸುವ ಟ್ರಾನ್ಸಿಸ್ಟರು ಮಾತ್ರ!


ಒಳಹೋಗಲಾಗದ ಚಕ್ರವ್ಯೂಹದಂತಹ ಕತೆಗೆ ಪ್ರವೇಶ ದೊರೆತದ್ದು ಇಲ್ಲಿ. ಎಲ್ಲರ ತೊತ್ತಲ್ಲ ಈ ಕಾದಂಬರಿ.
Profile Image for Aadharsha Kundapura.
59 reviews
August 1, 2025
ಮೊದಲೆಂಬ ಮೊದಲಿಗೂ ಮೊದಲಾದುದೇನು?
ತೊದಲೆಂಬ ತೊದಲಿನ ತೊದಲಾದರೂ ಏನು?

ಅಹಾ! ಪುರಿ ಜಗನ್ನಾಥ ರಥೋತ್ಸವದ ಅಪೂರ್ವ ಆ ಒಂದು ರಾತ್ರಿಯ ಅದ್ಭುತ ಕ್ಷಣಗಳನ್ನು ಕಾವ್ಯಾತ್ಮಕವಾಗಿ ಬರೆದ ಈ ಕಾದಂಬರಿಯು ಒಂದು ನವಿರಾದ ಅನುಭವ ಕೊಡುವುದರಲ್ಲಿ ಇನ್ನೊಂದು ಮಾತಿಲ್ಲ.

‌ ಪುರಿ ಜಗನ್ನಾಥ ರಥೋತ್ಸವಕ್ಕೆ ಅಜ್ಞಾತವಾಗಿ ಬಂದಿರುವ ಐಳನ್ ಧೀಮನ್ನ್ ಮರುನ್ನದಿಗೆ ಸಿಕ್ಕಳು ಅವನಂತೆ ಅಲ್ಲಿಗೆ ಅಜ್ಞಾತೆಯಾಗಿ ಬಂದಿರುವ ಮಾತಂಗಿ. ಈ ಪುಸ್ತಕದಲ್ಲಿ ಇಲ್ಲಿಂದ ರಥೋತ್ಸವ ಇನ್ನಷ್ಟು ಮೆರುಗುಗೊಳ್ಳುತ್ತದೆ.
ಈ ರಾತ್ರಿ ಮಾತ್ರ ಇಬ್ಬರು ಸಂಗಾತಿಗಳು. ನಾಳೆಯಿಂದ ನೀನ್ಯಾರೋ.. ನಾನ್ಯಾರೋ.. ಎಂಬ ಒಡಂಬಡಿಕೆಯನ್ನು ಪರಸ್ಪರ ಹಾಕಿ ಕೊಂಡು ಈ ರಾತ್ರಿ ಹೀಗೆ ಇರಲಿ, ಬೆಳಕು ಬರದಿರಲಿ ಎಂದು ಕ್ಷಣ ಕ್ಷಣಕ್ಕೂ ಕಂಗಲಾಗೋ ಮನಸ್ಸುಗಳು ಅಗಮ್ಯ ಜನಸಂದಣಿಯ ಮಧ್ಯೆ ಬೆರೆಯುವ ಕತೆ‌ ನಾವು ಕೂಡ ಆ ರಥೋತ್ಸವದ ರಾತ್ರಿಯಲ್ಲಿ ಬೆರೆತಂತೆ, ಐಳನ್ / ಮಾತಂಗಿ ಪಾತ್ರದೊಳಗೆ ಪ್ರವೇಶಿಸಿದಂತನಿಸುವ ಅನುಭವ ಕೊಡುತ್ತದೆ.
ಅಪರಿಚಿತರಾಗಿ ಬೇಟಿಯಾಗಿ, ಆ ಘಂಟೆಗಳ ಸಂಭಂದ ಸ್ನೇಹಾನ..! ಪ್ರೀತಿನಾ..! ಅಥವಾ ವಾಂಛೆನಾ...! ಎನ್ನುವ ದ್ವಂದ್ವಕ್ಕೆ ಸಿಕ್ಕಿ ಇಡೀ ರಾತ್ರಿ ಆ ಪ್ರಶ್ನೆಗೆ ಉತ್ತರ ಹುಡುಕುವ ಅಲೆದಾಟದಲ್ಲಿ, ಬೇಕಾದಷ್ಟು ಇತಿಹಾಸಗಳು, ಅಹಾರ ಸಂಪ್ರದಾಯಗಳು, ಪುರಿ ಜಗನ್ನಾಥ ದೇವಸ್ಥಾನದ ಬಗ್ಗೆ ಹತ್ತು ಹಲವು ವಿಷಯಗಳನ್ನು ತುಂಬಾ ಚೆನ್ನಾಗಿ ತಿಳಿಸಿದ್ದಾರೆ..
ಇಲ್ಲಿ ಬಳಸಿರುವ ಅದೆಷ್ಟೋ ಕನ್ನಡ ಶಬ್ದಗಳ ಅರ್ಥ ತಿಳಿಯುದಕ್ಕೆ ಒಂದು ನಿಘಂಟೇ ಬೇಕು. ಭಾಷೆಯನ್ನು ಹೇಗಲ್ಲ ಬಳಸಬಹುದು ಪರಿಪೂರ್ಣವಾಗಿ ಬಳಸಿಕೊಂಡಿರುವ ಲೇಖಕರ ಬರವಣಿಗೆಯ ವೈಖರಿ ಇಷ್ಟವಾಯಿತು..

ಕೊನೆಯದಾಗಿ‌ ಸ್ವಲ್ಪ ಕಡೆ ಅಗತ್ಯಕ್ಕಿಂತ ಹೆಚ್ಚಿನ ಬರವಣಿಗೆ ಅಲ್ಲಲ್ಲಿ ಬೋರು ಹೊಡೆಸಿತು. ಅಂತ್ಯ ಚೆನ್ನಾಗಿತ್ತಾದರೆ ಆ ಅಂತ್ಯವನ್ನು ಕೇಂದ್ರ ಬಿಂದುವಾಗಿಟ್ಟುಕೊಂಡು ಕಟ್ಟಿದ ಕತೆ ಸರಿಯನ್ನಿಸಲಿಲ್ಲ ಎಂಬುದನ್ನು ಬಿಟ್ಟರೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ 'ಪ್ರಿಯೇ ಚಾರುಶೀಲೆ' ಒಂದೊಳ್ಳೆ ಪ್ರಯೋಗ..

ಪ್ರಿಯೇ ಚಾರುಶೀಲೆ
🖊ನಾಗರಾಜ ವಸ್ತಾರೆ
⭐⭐⭐⭐
Profile Image for Guruprasad.
119 reviews12 followers
May 28, 2025
36 ಗಂಟೆಗಳಲ್ಲಿ ಇಬ್ಬರು ಅಪರಚಿತ ವ್ಯಕ್ತಿಗಳ ಜೀವನದಲ್ಲಿ ನಡೆಯುವ ಘಟನೆಗಳು , ಕಾವ್ಯಮಯವಾದ ಸಂಭಾಷಣೆ , ಸಂಗೀತ , ನೃತ್ಯದೊಂದಿಗೆ ನಡೆಯುವ ಕಥನ ಓದುಗರ ಮನಸಲ್ಲಿ ನಾಯಕ ನಾಯಕಿಯ ಪಾತ್ರಗಳ ಬಹುಕಾಲ ಉಳಿಯುವಂತೆ ಮಾಡುತ್ತದೆ. ರಸವತ್ತಾದ ಓದು .
23 reviews9 followers
July 16, 2021
ನನ್ನ ಓದಿನ ಮಟ್ಟಿಗೆ ಕನ್ನಡಲ್ಲಿ ಇದೊಂದು ಹೊಸ ತರಹದ ಬರವಣಿಗೆ. ನಮ್ಮ ಇಂದಿನ ದಿನದ ಆಧುನಿಕ ಜೀವನದ ಹುರುಳಿರುವ ಕಥಾ ವಸ್ತು ಹಾಗೂ ಕಂಗ್ಲೀಷ್ ಭಾಷೆಯಲ್ಲಿ ಬರೆದ ಕಾದಂಬರಿ.

ಇದೊಂದು ಫ್ಯಾಂಟಸಿ ಕಾದಂಬರಿ. ಐಳ ಮತ್ತೆ ಮಾತಂಗಿ ಇಬ್ಬರೂ ಪುರಿ ಗೆ ಬಂದಿರುತ್ತಾರೆ. ಅಚಾನಕ್ ಆಗಿ ಪರಿಚಯ ಆಗೋ ಇವರು, ಒಂದು ಸಂಜೆ ಅಷ್ಟೆ ನಮ್ಮ ಪರಿಚಯ ಅನ್ನೋ ಮಾತಂಗಿಯ ಕರಾರಿನ ಮೇಲೆ ಕಥೆ ಸಾಗುತ್ತೆ.

ಇದರಲ್ಲಿ ಐಳನ ಅನುಭವ ಅವನ ಜ್ಞಾನ (ಲೇಖಕರ ಜ್ಞಾನ ) ಓದೊದಕ್ಕೆ ಖುಷಿ ಕೊಡತ್ತೆ. ಲೇಖಕರು ಪುರಿ ಜಗನ್ನಾಥನ ಮಂದಿರ ಅದರ ಚರಿತ್ರೆ, ಇತಿಹಾಸ ಹಾಗೂ ರಥಯಾತ್ರೆ ಬಗ್ಗೆ ಹಾಗೂ ತುಂಬಾ ಚೆನ್ನಾಗಿ ವಿವರಿಸಿದ್ದಾರೆ.
ಮಧ್ಯ ಮಧ್ಯ ಸಿಗುವ ಕವಿ ಜಯದೇವನ ಪದ್ಯ ಮತ್ತು ಲೇಖಕರು ಅದನ್ನು ವಿವರಿಸಿರುವ ರೀತಿ ಮನೋಹರವಾಗಿದೆ.

ಹಾಗೂ ಈ ಕಾದಂಬರಿ ಮೊದಲ ಅರ್ಧ ಮುಕ್ಕಾಲು ಭಾಗ ಓದೋಕೆ ತುಂಬಾ ಸಮಯ ತಗೊಳುತೆ. ಕೆಲವೊಂದು ಕಡೆ ಬೋರ್ ಆಗತ್ತೆ. ಕೆಲವೊಂದು ಅನಾವಶ್ಯಕ ಅನ್ಸತ್ತೆ. ಕಥೆ ಒಂದು ವೇಗದಲ್ಲಿ ಓಡುತ್ತಾ ಇದೆ ಅಂದಾಗ ಅಲ್ಲಲ್ಲಿ ಲೇಖಕರು ಅಲ್ಲಲ್ಲಿ ಸೇರಿರೋ ವಿವರಣೆಗಳು ಓದಿಗೆ ಅಡ್ಡಿಯಾಗುತ್ತದೆ.
ಕಥೆಯ ಕೊನೆ ಯಾಕೋ ಸುಖಾಂತ್ಯ ಕೊಡಬೇಕು ಅಂತ ಸೇರಿಸೊ ಒಂದಷ್ಟು ಘಟನೆಗಳು ಯಾಕೋ ಅಷ್ಟೊಂದು ಇಷ್ಟ ಆಗಿಲ್ಲ.

ಕೊನೆಯದಾಗಿ ನಾಗರಾಜ ವಸ್ತಾರೆ ಅವರು ಒಬ್ಬರು ಉತ್ತಮ ಬರಹಗಾರರು. ತಿಳಿದವರು. ಒಳ್ಳೆಯ ಬರಹಗಾರರು. ಒಂದು ಬಾರಿ ಓದಬಹುದಾದ ಕಥೆ ಇದು.
Profile Image for Ashwini.
35 reviews2 followers
November 5, 2024
ಕನ್ನಡ ಪುಸ್ತಕ ಓದುಗರು ಒಮ್ಮೆಯಾದರೂ ಓದಲೇ ಬೇಕು ಅನ್ನುವಂತಹ ಪುಸ್ತಕ. ಕಾದಂಬರಿ ಓದುತ್ತಾ ಇದ್ದೇನೋ? ಕಾವ್ಯ ಓದುತ್ತಾ ಇದ್ದೇನೊ ಅಂತ ಅನ್ನಿಸುತ್ತಾ ಇತ್ತು. ಲೇಖಕರ ಬರವಣಿಗೆಯೇ ಪುಸ್ತಕದ ಜೀವಾಳ.
Displaying 1 - 10 of 10 reviews

Can't find what you're looking for?

Get help and learn more about the design.