ಇಂಟ್ರೋ ಇಲ್ದೆ ರಿವ್ಯೂ ಮಾಡೋದಾದ್ರೆ, ನಿಮ್ಮದೊಂದು ಪರ್ಸನಲ್ ಲೈಬ್ರರಿ ಇದ್ದು ಅಲ್ಲಿ ಈ ಪುಸ್ತಕ ಇಲ್ಲ ಅಂದ್ರೆ ನೀವು ಸೂರಿ ಅವ್ರಿಗೆ ಹಾಗು ಕನ್ನಡ ಸಾಹಿತ್ಯಕ್ಕೆ ಅನ್ಯಾಯ ಮಾಡಿದಾಗೆ. ಜಾಸ್ತಿ ಆಯ್ತು ಅನ್ಸುತ್ತೆ, ಆದ್ರು ಪರವಾಗಿಲ್ಲ. ಕೆಲವೊಂದು ಕಾದಂಬರಿ ಅಂಥಾ ಪ್ರಭಾವ ಬೀರುತ್ತವೆ.
ಇವರ ಬಂಡಲ್ ಕತೆಗಳು ಓದಿದಾಗಲೇ ನಿಶ್ಚಯಿಸಿದ್ದೆ ಎಲ್ಲಾ ಪುಸ್ತಕಗಳು ಕೊಂಡು ಓದಬೇಕೆಂದು. ಎನ್ನ ಭವದ ಕೇಡು ಓದಿದಮೇಲೆ ಅನ್ಸಿದ್ದು ಆ ಕೆಲ್ಸನ ಇದೆ ವರ್ಷ ಮುಗಿಸ್ಬೇಕು ಅಂತ.
ಒಂದೊಂದು ಪಾತ್ರಕ್ಕೂ ಎಂಥಾ ತೂಕ ಇದೆ ಅನ್ನೋದೇ ಆಶ್ಚರ್ಯ. ಆ ಪಾತ್ರಗಳು ಕಣ್ಮುಂದೆ ಇನ್ನೂ ಇವೆ. ಅವ್ರು ಇವ್ರು ಸಾಯ್ತಾರೆ ಆದ್ರೆ ಮನಸಲ್ಲಿ ಉಳಿತಾರೆ. ನಿರ್ದಿಷ್ಟವಾಗಿ ಹೇಳೋದಾದ್ರೆ ಫೀಮೇಲ್ ಪಾತ್ರಗಳು ಸಕತ್ ಸ್ಟ್ರಾಂಗ್ ಇವೆ, ತುಂಬಾ ಬೋಲ್ಡ್ ಕೂಡ. ಕತೆಯಲ್ಲಿ ಅನೇಕ dark elements ಇವೆ, strong display of emotions ಕೂಡ ಇದೆ. ಸರಸ್ವತಿ ಮತ್ತು ಮಾಮಿಯ ಪಾತ್ರಗಳು ಆ emotions ನ ನಿರಂತರವಾಗಿ ತೋರಿಸುತ್ತಾರೆ.
ಬಣ್ಣದ ಮುಖಾಂತರ ಹೇಳೋದಾದ್ರೆ ಈ ಕಾದಂಬರಿ ಅನ್ನೋ ಕ್ಯಾನ್ವಾಸ್ ನಲ್ಲಿ ಕಪ್ಪು ಮತ್ತದರ shades ತುಂಬಿಕೊಂಡಿವೆ.
ಇದನ್ನ ನೀವೂ ಗಮನಿಸಿರಬಹುದು. ಅವರು ನಿಜವಾಗಿಯೂ ಚಂದ ಇರ್ತಾರೆ ಆದರೆ ಮೇಕಪ್ ಹೇಗೆ ಮಾಡಿಕೊಳ್ಳುತ್ತಾರೆ ಅಂದರೆ ಸುಣ್ಣ ಬಳ್ಕೊಂಡ ಹಾಗೆ ಅವರ ಚಂದವೆಲ್ಲ ಹಾಳಾಗಿ ಅವರು ಪ್ರೇತ ಭಟ್ಟರ ಹಾಗೆ ಕಾಣತೊಡಗುತ್ತಾರೆ.. ಮದುವೆ ಇನ್ನಿತರ ಸಮಾರಂಭಗಳಲ್ಲಿ ಹಿತಮಿತವಲ್ಲದ ಅಲಂಕಾರ, ಜರ್ಬು ತೂಕದ ಬಟ್ಟೆಗಳ ಹಾಕಿ ವಿಚಿತ್ರವಾಗಿ ಕಾಣುತ್ತಾರೆ.
ಬರಹದಲ್ಲೂ ಅಷ್ಟೇ. ಚಿತ್ರ ವಿಚಿತ್ರ ಹೆಸರುಗಳ ಬಳಕೆ, ವಿಪರೀತ ಉಪಮಾಲಂಕಾರ, ಎಲ್ಲದಕ್ಕೂ ಪುರಾಣಗಳ ಉಪಮೆಯ ಬಳಕೆ ಬರಹದ ಸರಳತೆಯ ಸತ್ಯಾನಾಶ್ ಮಾಡಿಬಿಡುತ್ತದೆ.
ಇನ್ನು ಬರಹಗಾರನಿಗೆ ತನ್ನ ತಾಕತ್ತಿನ ಬಗ್ಗೆ ಹೆಮ್ಮೆ ಇದ್ದರಂತೂ ಮುಗಿದೇ ಹೋಯ್ತು. ಕುಂ.ವೀ , ಸುರೇಂದ್ರನಾಥ್ ಇದಕ್ಕೆ ಅತ್ಯುತ್ತಮ ಉದಾಹರಣೆ. ತನ್ನ ಕಾಮಿಕಲ್ ಸ್ಟೈಲ್‌ಗೆ ತಾನೇ ಮರುಳಾಗಿ ಕುಂ.ವೀ ಕೆಲವು ಪುಸ್ತಕಗಳಲ್ಲಿ ಅದನ್ನು ರೇಜಿಗೆಯಾಗುವಷ್ಟು ಬಳಸುತ್ತಾರೆ (ಉದಾಹರಣೆಗೆ ನಾಯಿಯೊಂದು ಮಾಲಕೌಂಸ್ ರಾಗದಲ್ಲಿ ಕುಂಯಿಗುಟ್ಟುವುದು ಇತ್ಯಾದಿ) ,ಸುರೇಂದ್ರನಾಥ್ ಕೂಡ ವಾಸ್ತವವನ್ನು ಅತಿಗೆ ಒಯ್ಯುವ ಶಕ್ತಿಯ ತೋರ್ಪಡಿಕೆಯಲ್ಲಿ ಒಂದೆರಡು ಸಾಲಲ್ಲಿ ಮುಗಿಯುವ ಹೂಸಿನ ವರ್ಣನೆಯನ್ನು ಓದುಗನ ತಲೆಯೊಳಗೆ ಭೈರಿಗೆಯಲ್ಲಿ ಕೊರೆದು ಬಿಡುತ್ತಾರೆ. ಮ್ಯಾಜಿಕಲ್ ರಿಯಲಿಸಂನ ಅವರ ಈ ಯತ್ನ ಮಾರ್ಕೆಸ್ ಸರಳವಾಗಿ ಬರೆಯುವ ರೀತಿಗೂ ಇವರು ಪ್ರಯತ್ನಪೂರ್ವಕವಾಗಿ ಹೆಚ್ಚಿಗೆ ಬರೆದದ್ದು ಅಸಹಜವಾಗಿ ತನಗೆ ಅಳ್ಳಕವಾದ ಬಟ್ಟೆ ತೊಟ್ಟುಕೊಂಡ ವ್ಯಕ್ತಿಯ ಹಾಗೆ ಕಾಣುತ್ತದೆ.
ಬರವಣಿಗೆ ಮಾತ್ರವಲ್ಲ ನಟನೆಯಲ್ಲಿ ಕೂಡ ನಟಿಸಲು ಗೊತ್ತಿದೆ ಎಂದು ಗೊತ್ತಿರುವ ನಟನೊಬ್ಬ ಅದನ್ನು ಒತ್ತಿ ಒತ್ತಿ ಮಾಡುವ ರೀತಿ ಕೂಡ ಎಷ್ಟು ಓವರ್ ಆಗಿದೆ ಎಂದೆನಿಸುತ್ತದೆ. ಕಮಲ್‌ಹಾಸನ್‌ನಂತಹ ಮೆಥಡ್ ಆಕ್ಟಿಂಗ್ ಮಾಡುವ ಮೇರು ನಟ ಕೂಡ ಕೆಲವೊಮ್ಮೆ ಈ ರೀತಿ ಮಾಡಿದ ಉದಾಹರಣೆ ಕಾಣ ಸಿಗುತ್ತದೆ. ಕನ್ನಡದಲ್ಲೂ ಒಂದಿಬ್ಬರು ಸಿಗುತ್ತಾರೆ.
ಇದು ಸರಿಯಲ್ಲ ಅಂತಲ್ಲ ಬರಹದ ರುಚಿ ಹಾಳಾಗುತ್ತದೆ ಎಂದಷ್ಟೇ. ಏನೋ ಓದ್ತಾ ಇದ್ದೆ. ನೆನಪಾಯಿತು. 😊
ನಾನು ಇತ್ತೀಚಿಗೆ ಓದಿದ ಉತ್ತಮ ಪುಸ್ತಕಗಳಲ್ಲಿ ಒಂದು... ಭಾಷೆ ಹರಿತ ಮತ್ತು ಮನಮೋಹಕ. ಕಾದಂಬರಿಯ ಮುಖ್ಯ ಪಾತ್ರವೊಂದು ಅಳುವುದನ್ನು ಲೇಖಕರು ವಿವರಿಸುವ ಪರಿ ನೋಡಿ.
"ಸರಸ್ವತಿ ಅತ್ತಳು, ದಾರಾಕಾರವಾಗಿ ಅತ್ತಳು. ಒಂದು ನಿಮಿಷ, ಐದು ನಿಮಿಷ, ಹತ್ತು ನಿಮಿಷ, ಇಪ್ಪತ್ತು ನಿಮಿಷ, ಒಂದು ತಾಸು, ಇಡೀ ರಾತ್ರಿ, ಒಂದು ವಾರ, ಒಂದು ತಿಂಗಳು, ಒಂದು ಜೀವಮಾನ. ಕಣ್ಣೀರು ಸರಸ್ವತಿಯ ಕಪಾಳ ಇಳಿದು, ಗೌರಕ್ಕನ ತೊಡೆಯಿಳಿದು, ಅಡುಗೆಮನೆಯ ನೆಲದ ಮೇಲೆ ಜಾರುತ್ತ, ಮೋರಿ ಹೊಕ್ಕು, ಹಿಂದೆ ಹಿತ್ತಲಲ್ಲಿ ಹರಿದು, ಹಿತ್ತಲಲ್ಲಿ ಸೊಂಪಾಗಿ ಹರಡಿದ್ದ ಕರಿಬೇವಿನ ಮರದ ಬುಡವ ಸೇರಿತು. ಅವತ್ತು ಸರಸ್ವತಿಯ ಕಣ್ಣೀರು ಕುಡಿದು ಬೆಳೆದ ಕರಿಬೇವಿನ ಮರಕ್ಕೆ ಮತ್ತೆಂದೂ ಬಾಯಾರಿಕೆ ಅನಿಸಲೇಯಿಲ್ಲ, ನೀರು ಬೇಡಲೇ ಇಲ್ಲ. ಬೇರುಗಳನ್ನು ನೆಲಕ್ಕಿಳಿಸಿ, ಕೊಂಬೆಗಳನ್ನು ಸುತ್ತ ಚಾಚಿ ಬೆಳೆಯಿತು.ಬೆಳೆಯುತ್ತ ಹೋಯಿತು. ದಿನಕ್ಕೊಮ್ಮೆಯಾದರೂ ಸರಸ್ವತಿ ಕಣ್ಣೀರನ್ನು ಮರಕ್ಕೆ ಉಣಿಸುತ್ತಲೇ ಹೋದಳು. ಕಹಿಯನ್ನು ಕಳಚಿ ನಿಂತ ಮರ ಉಪ್ಪುಪ್ಪಾಯಿತು".
ಕೆಲ ಪುಸ್ತಕಗಳು ಎಷ್ಟು ಇಷ್ಟ ಆಗ್ತವೆ ಅಂದ್ರೆ, ಅವನ್ನು ಬೇರೆಯವರ ಜೊತೆ ಓದಿಸಿ ಹಂಚಿಕೊಳ್ಳದೇ, ಆ ಸುಖವನ್ನು ನನ್ನ ಬಳಿ ಮಾತ್ರ ಇರಿಸಿಕೊಳ್ಳುವಷ್ಟು ಸ್ವಾರ್ಥ ಮನಸಲ್ಲಿ ಮೂಡಿಸುತ್ತದೆ. ಅಂತಹ ಒಂದು ಪುಸ್ತಕ ನನಗಿದು.
ಒಂದು ಒಳ್ಳೆ ಪುಟ್ಟಣ್ಣ ಕಣಗಾಲ್ ರವರ ಚಿತ್ರ ನೋಡಿದ ಅನುಭವ. ಓದಿ ಮುಗಿದಾಗ ಅನಿಸಿದ್ದು ಪುಟ್ಟಣ್ಣರವರು ಇದ್ದಿದ್ರೆ ಇಂದು ಖಂಡಿತ ಇದನ್ನ ಸಿನಿಮಾ ಮಾಡ್ತಿದ್ರು ಅಂತ. ಕತೆಯಲ್ಲಿ ಬರುವ ಪ್ರತಿಯೊಂದು ಪಾತ್ರಗಳು ಮನಸಿನಲ್ಲಿ ಉಳಿಯುತ್ತೆ. ಮಾಮಿ , ಸರಸ್ವತಿ, ಗಂಗೆ, ಯಮುನೆ, ಗೋದಾವರಿ, ಅಂಬಕ್ಕ, ಗೌರಕ್ಕ ಅಬ್ಬ ಎಷ್ಟೊಂದು ಹೆಣ್ಣು ಪಾತ್ರಗಳು. .ಮಹಿಳೆಯೆರ ದಿನಾಚರಣೆಯ ಮಾಸದಲ್ಲಿ ನಾನು ಕೈಗೆತ್ತಿಕೊಂಡ ಒಂದು ಅದ್ಬುತ ಕಾದಂಬರಿ. ಸರಸ್ವತಿ ಯಮುನೆಯ ಹೆರಿಗೆ ಮಾಡಿಸುವಾಗ ಕಣ್ಣಲ್ಲಿ ಎರಡು ನೀರ ಹನಿ ಜಾರಿತ್ತು. ಸರಸ್ವತಿ ಅಜಿತನ ಮದುವೆಯಾಗಿ ಸುಖವಾಗಿರಬೇಕಿತ್ತು ಅಂತ ಮನಸಿಗೆ ಬಹಳ ಅನ್ನಿಸ್ತು :). ಗೆಳೆಯ ನಯಾಜ್ ರ ರಿವ್ಯೂ ಓದಿದಾಗಲೇ ಇದನ್ನ ಕೊಂಡು ಓದುವ ಮನಸ್ಸು ಮಾಡಿದೆ. ನಯಾಜ್ ನಿಮಗೆ ಅನಂತ ಅನಂತ ವಂದನೆಗಳು....
ಕೆಲವು ಪುಸ್ತಕಗಳು ವಿಮರ್ಶೆಯ ವ್ಯಾಖ್ಯಾನಕ್ಕೆ ದೊರಕುವುದಿಲ್ಲ ಮತ್ತು ಓದಿದ ನಂತರ ನಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲು ಹಿಂಜರಿಯುವಂತೆ ಮಾಡುವ ಗುಣವುಳ್ಳವಾಗಿರುತ್ತವೆ. ನನ್ನ ಓದಿನ ಮಿತಿಯಲ್ಲಿ ಅಂತಹ ಕೃತಿಗಳಲ್ಲಿ ಮೊದಲನೆಯದು ಕಾರಂತರ “ಮೂಕಜ್ಜಿಯ ಕನಸುಗಳು”, ನಂತರದ್ದು ಈಗಷ್ಟೇ ಓದಿದ ಸುರೇಂದ್ರನಾಥರ “ಎನ್ನ ಭವದ ಕೇಡು”. ಕೃತಿಕಾರರಾದ ಸುರೇಂದ್ರನಾಥರನ್ನಷ್ಟೇ ಅಲ್ಲ ಓದುಗನಾದ ನನ್ನನ್ನೂ ಸಹ ಈ ಕೃತಿ ಅಚ್ಚರಿಗೊಳಿಸಿದೆ, ಗಾಬರಿಗೊಳಿಸಿದೆ ವಿಶೇಷವಾಗಿ ಗಾಢವಾದದೇನನ್ನೋ ಓದಿದ ಅನುಭವವನ್ನು ಕಟ್ಟಿಕೊಟ್ಟಿದೆ.
ಇದೊಂದು ಅದ್ಭುತ ಮತ್ತು ಕ್ಲಾಸಿಕ್ ಎನ್ನುವಂತಹ ವರ್ಗಕ್ಕೆ ಸೇರುವ ಅತ್ಯುತ್ತಮ ಕೃತಿ. ಅಲ್ಲೊಂದು ಬೃಂದಾವನವೆನ್ನುವ ಬೃಂದಾವನದಂತಹ ಮನೆ. ಆ ಬೃಂದಾವನಕ್ಕೆ ಗೋವಿನಂತಹ ಒಡೆಯ ಗೋವರ್ಧನರಾಯರು. ಮಾಯವಿಯಂತಹ ಮಾಮಿ, ಆಕೆ ರಾಕ್ಷಸ ಸ್ವರೂಪದ ಅತೀಂದ್ರಿಯ ಶಕ್ತಿಯುಳ್ಳ ಮಾಮಿ. ಮಾಮಿಗೆ ಸವತಿ ರಾಧೆ, ರಾಧೆಗೆ ನಾಲ್ಕು ಹೆಣ್ಣು ಮಕ್ಕಳು, ಗಂಗಾ ಯಮುನಾ ಗೋದಾವರಿ ಮತ್ತು ಸರಸ್ವತಿ. ಮಾತೃ ಹೃದಯವುಳ್ಳ ಗೌರಕ್ಕ ಮತ್ತು ಅಂಬಕ್ಕ. ಅಬ್ಬಾ! ಅದೆಷ್ಟು ಸ್ತ್ರೀ ಪಾತ್ರಗಳು. ಇದೊಂದು ಸ್ತ್ರೀಲೋಕವೇ ಸರಿ.
ಮುನ್ನುಡಿಯಲ್ಲಿ ಅನಂತಮೂರ್ತಿಯವರು ಹೀಗೇಳುತ್ತಾರೆ, “ತನ್ನನ್ನೇ ತಾನು ಮೀರಿಸಿಕೊಂಡು ಬರೆದಾಗ (ಬರೆಸಿಕೊಂಡಾಗ) ಗದ್ಯ ಕಾವ್ಯಗಂಧಿಯಾಗುತ್ತದೆ” ಎಂದು. ಈ ಕೃತಿಯಲ್ಲಾಗಿರುವುದೂ ಅದೇ, ಕಾವ್ಯಗಂಧಿ. ನನ್ನ ಜೀವನದಲ್ಲಿ ಓದಿದ ಅತ್ಯುತ್ತಮ ಕೃತಿಗಳ ಪಟ್ಟಿಗೆ “ಎನ್ನ ಭವದ ಕೇಡು” ರಾಜಾರೋಷವಾಗಿ ಸೇರ್ಪಡೆಯಾಗಿದೆ. ಪ್ರತಿಯೊಬ್ಬ ಸಾಹಿತ್ಯಪ್ರೇಮಿಯೂ ಓದಲೇಬೇಕಾದ ಪುಸ್ತಕವಿದು.