ಗತ - ಆಶಾರಘು ನಿಜ ಹೇಳಬೇಕೆಂದರೆ ನಿರಾಸೆಯಾಯಿತು. ನಾಯಿ ನೆರಳು ಕಾದಂಬರಿಯ ಹಾಗೆ ಶುರುವಾಗುವ ಕಥೆ ಆಮೇಲೆ ಸಾಮಾನ್ಯ ಸಾಮಾಜಿಕ ಕಾದಂಬರಿಗಳ ಧಾಟಿಯಲ್ಲಿ ಸಾಗುತ್ತದೆ. ಕೊನೆಗೆ ಶುಭಂ ಎಂದಾಗುವುದು. ಭೈರಪ್ಪನವರ ಶೈಲಿಯ ಹಿಡಿತದಿಂದ ಬಿಡಿಸಿಕೊಂಡಿರುವುದು ಧನಾತ್ಮಕ ಅಂಶ. ಚಂದ್ರನಾಥ ಆಚಾರ್ಯರ ಮುಖಪುಟದಲ್ಲಿ, ಅಂದವಾದ ಮುದ್ರಣ. ಪುನರ್ಜನ್ಮದ ಕಥೆಗಳಲ್ಲಿ ಆಸಕ್ತಿ ಉಳ್ಳವರು ಒಮ್ಮೆ ಓದಬಹುದು.
ಪುನರ್ಜನ್ಮವೆಂಬುದು ಇದೆಯೇ? ಆತ್ಮ ಅವಿನಾಶಿಯೇ? ಕರ್ಮ ಮೋಕ್ಷಗಳು? ಆತ್ಮಕ್ಕೆ ವೈಜ್ಞಾನಿಕ ಉತ್ತರಗಳು? ಪುರುಷ ಮತ್ತು ಸ್ತ್ರೀ ಎಂಬುದಷ್ಟೇ ನಿಜವಾ?
ಹೀಗೆ ಹಲವಾರು ಪ್ರಶ್ನೆಗಳ ಎಳೆಯು ನಮ್ಮೊಳಗೆ ಬದುಕಿನ ಒಂದಲ್ಲ ಒಂದು ಹಂತದಲ್ಲಿ ಸುಳಿಯುತ್ತದೆ. ಯಾರೋ ತಿಳಿದವರು ಅವರಿಗೆ ತಿಳಿದಷ್ಟರ ಮಟ್ಟಿಗೆ ಉತ್ತರಿಸುತ್ತಾರೆ. ನಾವು ನಮ್ಮ ನಿಲುಕಿಗೆ ಸಿಕ್ಕಷ್ಟು ಅರ್ಥೈಸಿಕೊಂಡು ತಲೆಯಾಡಿಸುತ್ತೇವೆ. ಪುನರ್ಜನ್ಮವಿರುವುದೇ ಆದಲ್ಲಿ ಅದು ಯಾವುದೇ ರೂಪದಲ್ಲಾದರೂ ಆಗಬಹುದು ಎನ್ನುತ್ತದೆ ಸಿದ್ದಾಂತ. ಇರದಿದ್ದಲ್ಲಿ ನಮ್ಮೊಳಗಿರುವ ಆತ್ಮ ಇನ್ನೊಂದು ಜೀವಿಗೆ ಸೇರುತ್ತದೆಯಂತೆ. ಆತ್ಮ ಎಂಬ ಪದದ ಧಾತು ಪದ ಆನ್, ಅಂದರೆ ಪ್ರಾಣ ಅರ್ಥಾತ್ ಉಸಿರು. ಪದಶಃ ಅರ್ಥವನ್ನೇ ತೆಗೆದುಕೊಳ್ಳುತ್ತೇವೆ ಎಂದರೆ ಒಂದು ಹೆಣವನ್ನು ಸುಟ್ಟ ಮೇಲೆ ಅಸ್ಥಿಯ ಪೋಷಕಾಂಶಗಳನ್ನು ಬಳಸಿಕೊಂಡು ಬೆಳೆದ ಗಿಡವೂ ಇನ್ನೊಂದು ಆತ್ಮವಾ/ಜನ್ಮವಾ ಎಂಬ ಪ್ರಶ್ನೆಗಳು ಕಾಡಿವೆ. ಕಾಡುತ್ತಲಿವೆ. ಹೀಗೊಂದಷ್ಟು ಪ್ರಶ್ನಾವಳಿ ನನ್ನೊಳಗೆ ಧಾರಾಕಾರವಾದಾಗ ಸಿಕ್ಕ ಪುಸ್ತಕ - ಗತ.
ಪುಸ್ತಕದ ಮುಖಪುಟವೇ ಹೇಳುವಂತೆ ಇದು ಪುನರ್ಜನ್ಮದ ರೋಚಕ ಕಾದಂಬರಿ. ಕಥಾಹಂದರ ಶುರುವಾಗುವುದು ಪುನರ್ಜನ್ಮದ ಬೇರುಗಳಲ್ಲಿ. ಆದರೆ ಕಾದಂಬರಿಯೂ ಅದರ ಸುತ್ತಲೂ ಗಿರಕಿ ಹೊಡೆಯದೇ ಮತ್ತಷ್ಟು ವಿಷಯಗಳಿಗೆ ತನ್ನನ್ನು ತಾನು ತೆರೆದುಕೊಳ್ಳುತ್ತದೆ. ಆ ತಿರುವುಗಳು ಮತ್ತು ವಿಷಯಗಳು ಓದಿಸಿಕೊಳ್ಳುತ್ತವೆ. ಪೂರ್ತಿ ಇನ್ನೂರಾ ಇಪ್ಪತ್ತೊಂಭತ್ತು ಪುಟಗಳಿಗೂ ಓದುಗನನ್ನು ಹಿಡಿದಿಟ್ಟುಕೊಂಡು ಒಂದೇ ಓದಿಗೆ ಓದಿಸಿಕೊಳ್ಳಬಲ್ಲ ಅಪರೂಪದ ಪುಸ್ತಕವಿದು.
ಕಥೆಯ ಮುಖ್ಯಪಾತ್ರಕ್ಕೆ ತನ್ನ ಹಿಂದಿನ ಜನ್ಮದ ನೆನಪುಗಳು, ಉಳಿದುಹೋದ ಜವಾಬ್ದಾರಿಗಳಿಂದ ಕಾದಂಬರಿ ಶುರುವಾಗುತ್ತದೆ. ನಂತರ ಹೇಳಲಾಗದ ಒಂದು ವಿಚಿತ್ರ ಓಘ ಸೃಷ್ಟಿಯಾಗಿ ಕಾದಂಬರಿ ಮುಗಿಸುವ ತನಕವೂ ಕುತೂಹಲ ಉಳಿಯುತ್ತದೆ. ಕಾದಂಬರಿ ಮುಗಿದ ಮೇಲೂ ಅದೇ ಕುತೂಹಲ ಉಳಿಯುತ್ತದೆ.
ಹಿಂದಿನ ಜನ್ಮದ ಹುಡುಕಾಟ ಮಾತ್ರವಲ್ಲದೇ, ಪುಸ್ತಕದಲ್ಲಿ ಪುನರ್ಜನ್ಮ ಮತ್ತು ಆತ್ಮಗಳ ಬಗ್ಗೆ ಬರೆದಿರುವ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ವಿವರಣೆಗಳು ಎರಡು ಬಣಗಳ ಓದುಗರನ್ನು ಆಕರ್ಷಿಸುತ್ತವೆ. ಪುನರ್ಜನ್ಮದ ಉದಾಹರಣೆಗಳು ನಮ್ಮ ನಡುವೆ ಕಂಡುಬರುವುದು ವಿರಳಾತಿ ವಿರಳವಾದರೂ ಓದಿದಂತೆ, ನೋಡಿದಂತೆ ಕೆಲವು ಘಟನೆಗಳು ನಮ್ಮ ಅರಿವಿನಲ್ಲಿವೆ. ಆ ರೀತಿಯ ಮನೋ ಆವೇಗಕ್ಕೆ ಒಳಗಾದ ಮನೋ ತಲ್ಲಣಕ್ಕೆ ಒಳಗಾದ ಕುಟುಂಬಗಳ ಮನೋಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ ಬರೆದಿರುವುದರಲ್ಲಿ ಲೇಖಕಿ ಆಶಾ ರಘುರವರು ಖಂಡಿತವಾಗಿಯೂ ಓದುಗನಿಗೆ ಇಷ್ಟವಾಗುತ್ತಾರೆ.
ಇತ್ತ ತೀರಾ ಆಧ್ಯಾತ್ಮಿಕವಾಗಿಯೂ ಅನಿಸದ ಅತ್ತ ತೀರಾ ವೈಜ್ಞಾನಿಕವೂ ಅನಿಸದ ಎರಡೂ ಪ್ರಪಂಚಗಳ ಒಳಹೊರಗುಗಳಿವೆ. ಕರ್ಮ ಮತ್ತು ಮೋಕ್ಷಗಳ ಅವಿನಾಭಾವ ಬಂಧ ಕಾಡುತ್ತದೆ. ಕಥೆಯ ಮುಖ್ಯ ಪಾತ್ರ ಅನುಭವಿಸುವ ಯಾತನೆ(?!) ಕಾದಂಬರಿಯ ಓಟಕ್ಕೆ ಪುಷ್ಟಿ ನೀಡಿವೆ.
ಎಂದಾದರೂ ನಾಲ್ಕು ಗಂಟೆಗಳಷ್ಟು ಸಮಯ ಸಿಕ್ಕರೇ ಗತ ಪುಸ್ತಕವನ್ನು ಹಿಡಿದುಕೊಳ್ಳಿ. ಮುಗಿಯುವ ತನಕ ಬಿಡಲಾರಿರಿ..!!!