ಜೀವಂತಿಕೆ ಕಳೆದುಕೊಂಡ ಅಥವಾ ಕಳೆದುಕೊಳ್ಳುತ್ತಿರುವ ನಗರಗಳಲ್ಲಿ, ಜೀವನವನ್ನು ಕಂಡುಕೊಳ್ಳಲು ಬಂದಿರುವ ಉತ್ತರ ಕರ್ನಾಟಕದ ಕುಟುಂಬದ ಕಥೆಯ ಚಿತ್ರಣ ಈ ಕಾಲಯಾತ್ರೆ.
ಲಾರಿ ಡ್ರೈವರ್ ಮಾರುತಿ, ಹೆಣ ಹುಳೋ ಕೆಲಸ ಮಾಡುವ ಅವನ ಹೆಂಡತಿ ಲಕ್ಕವ್ವ, 3ನೇ ತರಗತಿ ಓದುತ್ತಿರುವ ಮಗಳು ಸರಸು, ಮಾರುತಿಯ ಗೆಳಯ ಮತ್ತು ಲಕ್ಕವ್ಟನ ಸಹಾಯಕನಾದ ಮಂದ ಬುದ್ಧಿಯ ಲಗಾಟಿ, ಇವರೆಲ್ಲರಿಗಿಂತ ಆಪ್ತವಾಗುವ ಲಗಾಟಿಯ ಸಂಗಾತಿ ನಾಯಿ ಸಿಂಗ. ಇವರುಗಳು ಮಧ್ಯೆ ನಡೆಯುವ ಕಥೆಯಿದು.
ಹೆಣವೊಂದರ ಕಳ್ಳತನದ ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ಳುವ ಕುಟುಂಬವು ಪಡುವ ಕಷ್ಟಗಳು, ಪ್ರಕರಣದ ಹಿನ್ನೆಲೆಯಲ್ಲಿ ನಡೆಯುವ ರಾಜಕೀಯ ಕುತಂತ್ರ, ಪೋಲೀಸ್ ದೌರ್ಜನ್ಯ, ಇನ್ನಿತರ ಸಂಗತಿಗಳು ಕಥೆಗೆ ಪೂರಕವಾಗಿವೆ.
ನಾಯಿ ಸಿಂಗನ ಸ್ವಗತ, ಮಾರುತಿ ತನ್ನ ಮಗಳಿಗೆ ಹೇಳುವ ಕಥೆಗಳು, ಕಥೆಯ ಅಂತ್ಯ ಇಷ್ಟವಾಯಿತು.
ಹನೂರರು ಮತ್ತು ಯೋಗಪ್ಪನವರ್ ಇಬ್ಬರೇ ಸದ್ಯಕ್ಕೆ ಗದ್ಯವನ್ನು ಚಿತ್ರವತ್ತಾಗಿ ಬರೆಯುವವರು ಎಂದು ನನ್ನ ಅನಿಸಿಕೆ. ಇದನ್ನು ಕಾದಂಬರಿ ಎನ್ನುವುದಕ್ಕಿಂತ ಕೊಲಾಜ್ ಎನ್ನಬಹುದು. ಕ್ಯಾನ್‌ವಾಸ್ ಮೇಲೆ ಎರಚಿದ ಬಣ್ಣಗಳು ಒಂದೊಂದಾಗಿ ಇಳಿದ ಹಾಗೆ ಕಥೆ ಮುಖ್ಯ ದಾರಿ ಬಿಟ್ಟು ಅಡ್ಡದಾರಿ ಹಿಡಿದು ಅದೇ ಬೆಳೆದು ಸೂತ್ರವಿಲ್ಲದ ಗಾಳಿಪಟದ ಹಾಗೆ ಹಾರಿ ಮಾಯವಾಗುತ್ತದೆ. ಲಾರಿ ಓಡಿಸುವ ಮಾರುತಿ ತಳವಾರ, ಅವನ ಹೆಂಡತಿ ಹೊಟ್ಟೆಪಾಡಿಗೆ ಸ್ಮಶಾನದಲ್ಲಿ ಹೆಣ ಹೂಳೋ ಕೆಲಸ ,ಅವರ ಮಗಳು ಸರಸುಅವರಿಗೆ ಒತ್ತಾಸೆಗೆ ಒದಗಿಬರುವ ಚಿತ್ತಸ್ವಾಸ್ಥ್ಯವಿಲ್ಲದ ಲಗಾಟಿ, ಅವನ ನಾಯಿ ಅದರ ದಿನಚರಿಯ ಪುಟಗಳ ಬರೆಯುವಾಗ ಯಾಕಿವರು ಕುಂವೀ ದಾರಿ ಹಿಡಿದರು ಅನಿಸಿತು.. ಮುಖ್ಯ ವ್ಯಕ್ತಿಯೊಬ್ಬನ ಹೂತಿಟ್ಟ ಹೆಣ ಯಾರೋ ಎತ್ತಿಕೊಂಡು ಅದಕ್ಕೆ ಇವರ ಸ್ಟೇಷನ್‌ಗೆ ಹಾಕುವುದರಿಂದ ಕತೆ ಒಂದು ಸಣ್ಣ ತಿರುವು ತೆಗೆದುಕೊಳ್ಳುತ್ತದೆ .ಆದರೆ ಅದು ಪ್ರಭಾವಿ ಕಾರಣದಿಂದ ಕೇಸು ಮುಚ್ಚಿ ಹೋಗುವ ನಿರೀಕ್ಷಿತ ಹಾದಿ ಹಿಡಿಯುತ್ತದೆ. ಇಡೀ ಕಾದಂಬರಿಯಲ್ಲಿ ಮಾರುತಿ ತನ್ನ ಮಗಳಿಗೆ ಕತೆ ಹೇಳುವ ಭಾಗ ನನಗೆ ಇಷ್ಟವಾಯಿತು.ಅದರಲ್ಲೂ ಆ ಗೋವಿನ ಹಾಡಿನ ತರಹದ ಕಥೆ... ಕಥೆಯಿಲ್ಲದೆ ಮನಸಿನ ಸಂಚಾರಕ್ಕೆ ಬಿಟ್ಟ ಹಾಗಿನ ಹಲವಾರು ಘಟನೆಗಳ ಸಂಗಮವಷ್ಟೆ ಈ ಕಾದಂಬರಿ.. ಒಂಥರಾ ಕೊಳಕ್ಕೆಸೆದ ಕಲ್ಲಿನ ಹಾಗೆ.. ಅಲೆಗಳ ಮೂಡಿಸುತ್ತಾ ಕಲ್ಲು ಮಾಯ ಕ್ಷಣ ಕಳೆದರೆ ಅಲೆಗಳ ಉಂಗುರವೂ ಮಾಯ! ಇದನ್ನು ಓದುತ್ತಾ ಅಭಯ್ ಡಿಯೋಲ್ ಅಭಿನಯದ 'ರೋಡ್, ಮೂವಿ' ಮತ್ತದರ ಕುರಿತು ಜಯಂತ್ ಕಾಯ್ಕಿಣಿ ಬರೆದ ಬರಹ ನೆನಪಾಗುವುದು ಕಾಕತಾಳೀಯ.
ಈ ಕೃತಿಯಲ್ಲಿನ ಪಾತ್ರಗಳು, ಹಾಗೂ ಸನ್ನಿವೇಶಗಳಿಗಿಂತ ಹನೂರರ ಭಾಷೆ, ಬಯಲಾಟದ ಪದಗಳು ಇಷ್ಟವಾಯಿತು. ಲಾರಿ ಡ್ರೈವರ್ ಹಾಗೂ ಅವನ ಪರಿವಾರದ ಸುತ್ತ ಕತೆ ಗಿರಿಕಿ ಹೊಡೆಯುತ್ತದೆ ಬೆಂಗಳೂರಿನ ಪ್ರಸ್ತುತ ಪಕ್ಷಿ ನೋಟಗಳನ್ನು ಬಿಚ್ಚಿಡುತ್ತಾ ಸಾಗುವ ಕೃತಿ, ಅಲ್ಲಲ್ಲಿ ದುತ್ತೆಂದು ಬರುವ ಹೊಸ ಹೊಸ ಪಾತ್ರಗಳೊಂದಿಗೆ ಸ್ವಲ್ಪ ಗೊಂದಲಮಯವೆನಿಸಿತು. ಇದಕ್ಕೆ ಇನ್ನೊಂದು ಕಾರಣ ಯಾವ ಪಾತ್ರ ಹಾಗೂ ಸನ್ನಿವೇಶಗಳು ಓದುಗನ ನಿರೀಕ್ಷೆಯಂತೆ ಸಾಗುವುದಿಲ್ಲ. ನನಗೆ ಇದರಲ್ಲಿ ಬರುವ ಸಿಂಗನ ಪಾತ್ರ ಇಷ್ಟ ಆಯ್ತು. ಕತೆ ಸಾಗಿದ ದಾರಿಗಿಂತ ತಲುಪಿದ ಕೊನೆ ನಿಲ್ದಾಣ ಸೊಗಸಾಗಿದೆ. ಕೊನೆ ೨ ಪುಟಗಳು ಈ ಕೃತಿಯ ಬಗೆಗಿನ ನನ್ನ ಅಭಿಪ್ರಾಯ ಬದಲಾಯಿಸಿತು. ಹೆಚ್ಚಿನ ಕತೆಗಳು ಮುಕ್ತವಾಗಿ ಕೊನೆಗೊಳ್ಳುತ್ತವೆ, ಇಲ್ಲ ಹಠಾತ್ತಾಗಿ ಮುಗಿದೇ ಬಿಡುತ್ತವೆ. ಆದರೆ ಈ ಕತೆ ರಂಗದ ಮೇಲಿನ ನಾಟಕದಂತೆ ಬಣ್ಣದ ತೆರೆಯೊಂದಿಗೆ ಕೊನೆಗೊಂಡತೆ ಅನಿಸಿತು.
ಹನೂರರ ಕಾದಂಬರಿಗಳು ಒಂದಕ್ಕಿಂತ ಒಂದು ವಿಭಿನ್ನ; ಕಥಾವಸ್ತು ಮಾತ್ರವಲ್ಲ, ಕಥೆ ಹೇಳುವ ಶೈಲಿಯೂ ಹೊಸತೇ. 'ಅಜ್ಞಾತನೊಬ್ಬನ ಆತ್ಮಚರಿತ್ರೆ', 'ಸಿದ್ಧಿಯ ಕೈ ಚಂದ್ರನತ್ತ' ಹಾಗು 'ಕಾಲಯಾತ್ರೆ'; ಈ ಮೂರೂ ಕಾದಂಬರಿಗಳಲ್ಲಿಯೂ ಎನೋ ಹೊಸ ಪ್ರಯೋಗ ಇದ್ದೇ ಇದೆ. 'ಕಾಲಯಾತ್ರೆ' ಹೆಸರಿಗೆ ತಕ್ಕಂತೆ ನಮ್ಮನ್ನು ಯಾವುದೋ ಬೇರೊಂದು ಕಾಲಕ್ಕೆ ಕರೆದೊಯ್ದು ಮತ್ತೆ ವಾಸ್ತವಕ್ಕೆ ತಂದಿಳಿಸಿದ ಅನುಭವ. ನಮ್ಮ ಬಳಿ ಏನಿದ್ದರೂ, ಇಲ್ಲದಿದ್ದರೂ ಸಂತೋಷವಾಗಿರಬಹುದು ಎನ್ನುವುದನ್ನು ಮಾರುತಿಯ ಪಾತ್ರದ ಮೂಲಕ ಸೊಗಸಾಗಿ ತೋರಿಸಿದ್ದಾರೆ. ಕೆಲವೆಡೆ ನಾಯಿಯೊಂದರ ಸ್ವಗತದಲ್ಲಿ ಕಥೆ ಚಲಿಸುವುದು ನಮಗೆ ಹೀಗೊಂದು ದೃಷ್ಟಿಕೋನದಲ್ಲೂ ನೋಡಬಹುದು ಎಂದು ತೋರಿಸಿಕೊಡುತ್ತದೆ. ಒಟ್ಟಿನಲ್ಲಿ ೧೧೦ ಪುಟಗಳ ಈ ಸಣ್ಣ ಕಾದಂಬರಿ ಕೆಲಕಾಲ ನೆನಪಿನಲ್ಲಿ ಉಳಿಯುವುದಂತೂ ನಿಜ.