ಅನುಪಮ ಆಖ್ಯಾನವನ್ನು ಹಸ್ತಪ್ರತಿಯಲ್ಲಿ ಓದಿದ್ದೆ. ಆದರೆ ಮುದ್ರಿತ ಪ್ರತಿಯ ಓದುವ ಅನುಭವ ಬೇರೆ.
ಈ ಸಂಕಲನದಲ್ಲಿ ಅನುಪಮ ಆಖ್ಯಾನ ಎಂಬ ನೀಳ್ಗತೆ ಹಾಗೂ ಇತರ ಕಥೆಗಳಿವೆ. ಅವೆರಡನ್ನೂ ಬೇರೆ ಬೇರೆಯಾಗಿಯೇ ನೋಡಬಹುದು. ಮುಖ್ಯವಾಗಿ ಅನುಪಮ ಆಖ್ಯಾನ. ಇದು ಕೌಟುಂಬಿಕ ಸಂಬಂಧಗಳ ಹೆಣಿಗೆಯನ್ನು ಸೂಕ್ಷ್ಮವಾಗಿ ಬಿಡಿಸಿಡುತ್ತದೆ. ಕಥೆಯ ಆರಂಭ ಮತ್ತು ಅಂತ್ಯದ ನಿರೂಪಕನ ಒಕ್ಕಣಿಕೆ ಇಲ್ಲವಾದರೂ ನಡೆಯುತ್ತಿತ್ತು. ಪಾತ್ರಗಳ ತುಮುಲ ಹೇಳುವ ಬಗೆ ಮತ್ತು ಬಳಸಿದ ಭಾಷೆ ನಿಜಕ್ಕೂ ಮೇಲ್ಮಟ್ಟದ್ದು. ಬಹುಶಃ ಉಮೇಶ್ ದೇಸಾಯರಿಗೆ ತಙ ಕಥನದ ಶಕ್ತಿಯ ಪೂರ್ತಿ ಅರಿವಿಲ್ಲ ಹಾಗಾಗಿಯೇ ಅವರು ತಮ್ಮ ಬರಹಗಳಲ್ಲಿ ನಿರೂಪಕ ಮೊರೆ ಹೋಗುತ್ತಾರೆ ಎಂದೆನಿಸುತ್ತಾರೆ. ಆದರೆ ಒಬ್ಬ ಪುರುಷ ಬರಹಗಾರನಾಗಿ ಈ ಮಹಿಳಾ ಜಗತ್ತಿನ ಸೂಕ್ಷ್ಮಗಳ ತೆರೆದಿಟ್ಟವರು ಕಡಿಮೆ. ನಾನು ಇದೇ ಮಾತುಗಳ ಅವರ ಕಥೆಗಳಿಗೂ ಹೇಳಬೇಕು. ಭಾಷೆಯ ವಿಚಾರದಲ್ಲಿ ರಾಜಿಯಾಗದಿರುವುದು ಅಥವಾ ತನ್ನ ಆಡುಭಾಷೆಯ ಬಳಕೆಯಲ್ಲಿ ಹಿಂಜರಿಯದೆ ಬಳಸುವುದು ಬರಹಗಾರನಿಗೆ ಯಾವತ್ತಿಗೂ ಒಳ್ಳೆಯದು. ಅವನಿಗೆ ಸ್ಪಷ್ಟವಾಗಿ ತನ್ನ ಭಾವಗಳ ದಾಟಿಸಲು ಸುಲಭ. ಲೆಸ್ಬಿಯನ್ ಆಗಲು ಅವರು ಕೊಡುವ ಕಾರಣ ಅಷ್ಟೇನೂ ಸಮಂಜಸ ಅಲ್ಲ ಅನಿಸಿದರೂ ಆ ಕತೆಯ ಉದ್ದೇಶ ಅದಲ್ಲವಾದ ಕಾರಣ ಅದನ್ನು ನಿರ್ಲಕ್ಷಿಸಬಹುದು. ಒಟ್ಟಾರೆಯಾಗಿ ಈ ಕತೆಗಳ ನಾನಂತೂ ಓದಿ ಖುಷಿಪಟ್ಟೆ. ಚೌಕಟ್ಟಿನಿಂದಾಚೆಗೆ ಹೋಲಿಸಿದರೆ ಬರಹಗಾರರಾಗಿ ಇದೊಂದು ಜಿಗಿತ..