ಆವರ್ತ - Asha Raghu ಈ ಕಾದಂಬರಿ ಬಿಡುಗಡೆಯಾದಾಗ ಏನೂ ಅಂತ ಗೊತ್ತಿಲ್ಲದ ಒಂದು ಹಿಂಜರಿಕೆ ಇದನ್ನು ಓದದ ಹಾಗೆ ಮಾಡಿತ್ತು.ಆಗ ಯಾರೋ ಒಬ್ಬರು ಭೈರಪ್ಪರ ಕಾಪಿ ಅಂತೆ ಅದೂ ಅಷ್ಟೇನೋ ಚೆನ್ನಾಗಿಲ್ಲ ಅಂತೆ ಅಂದೇನೋ ಮಾತುಕತೆಯಲ್ಲಿ ಹೇಳಿದ್ದು ಕಿವಿಗೆ ಬಿದ್ದು ಇಷ್ಟು ವರ್ಷ ಓದ ಹೋಗಿರಲಿಲ್ಲ. ಮೊನ್ನೆ ಯಾವತ್ತೋ ಲೇಖಕಿಯವರು ತಮ್ಮ ಅಘೋರಿಗಳ ಕುರಿತಾದ ಅನುಭವಗಳ ಕುರಿತು ಒಂದು ಬರಹ ಬರೆದಿದ್ದರು. ಅವರ 'ಗತ' ಕಾದಂಬರಿ ಬಿಡುಗಡೆಯಾಗುವುದರಲ್ಲಿತ್ತು. Krishna Prakasha Ulithaya ಅವರು ಬರೆದ ಅಭಿಪ್ರಾಯ ಓದಲು ಸಿಕ್ಕಿತು. ಹಾಗಾಗಿ ಓದಲು ಹೊರಟದ್ದು. ಮೊದಲು ಇದ್ಯಾಕೋ ಭೈರಪ್ಪ ಸಾರ್ಥದ ಹಾಗೆ ಇದೆಯಲ್ಲ ಎಂದೆನಿಸಿತು.ಆದರೆ ಕೆಲಪುಟಗಳಲ್ಲೇ ಅದರಿಂದ ಬಿಡಿಸಿಕೊಂಡು ಕತೆ ತನ್ನ ಹಾದಿ ಹಿಡಿದು ನಡೆಯಲಾರಂಭಿಸಿತು. ಇದು ಸಂಪೂರ್ಣ ಕಾಲ್ಪನಿಕ ಕಾದಂಬರಿ. ಒಬ್ಬ ಕ್ಷತ್ರಿಯನ ಏಳು ಬೀಳು ರಾಗ ದ್ವೇಷಗಳ ಕಥೆ. ಆದರೆ ಆ ಕಥಾ ವಿಸ್ತಾರ ಅದರ ಹೆಣಿಗೆ ವರ್ಣನೆ ಮನೋವ್ಯಾಪಾರಗಳ ವಿವರಣೆ ಇದೆಯಲ್ಲ ಅಬ್ಬಬ್ಬ. ನಿಜಕ್ಕೂ ಶಾಭಾಷ್ ಅನ್ನಲೇಬೇಕು. ಲೇಖಕಿ ಐದು ವರ್ಷ ತೆಗೆದುಕೊಂಡು ಬರೆದ ಈ ಕೃತಿ ಅಷ್ಟು ಸಮಯ ಬೇಡುತ್ತದೆ ಎನಿಸಿತು. ಚಂದ್ರಕಾಂತ ಸಂತತಿ, ಸಾರ್ಥ ಹೀಗೆ ಮಹತ್ತಾದ ಕೃತಿಗಳ ಸಮಕ್ಕೆ ನಿಲ್ಲುವ ಕೃತಿ ಇದು.
#ಅಕ್ಷರವಿಹಾರ_೨೦೨೩ ಕೃತಿ: ಆವರ್ತ ಲೇಖಕರು: ಆಶಾ ರಘು ಪ್ರಕಾಶಕರು: ಸಾಹಿತ್ಯ ಭಂಡಾರ, ಬಳೇಪೇಟೆ ಬೆಂಗಳೂರು(ಮೊದಲನೇ ಮುದ್ರಣ)
ಪುಸ್ತಕದ ಕೊನೆಯ ಪುಟವನ್ನು ಓದಿ ಮುಗಿಸುತ್ತಿದ್ದಂತೆ "ಆಹಾ…." ಎಂಬ ಉದ್ಗಾರವೊಂದು ನನಗರಿವಿಲ್ಲದಂತೆಯೇ ಹೊರ ಬಂತು. ಎಷ್ಟು ಚಂದದ ಕಾದಂಬರಿ ಇದು. ಖರೀದಿಸಿ ಒಂದು ವರ್ಷವಾಗುತ್ತ ಬಂದಿತ್ತು, ಸುಖಾಸುಮ್ಮನೆ ಓದಲು ವಿಳಂಬ ಮಾಡಿದೆ ಎನಿಸಿತು. 456 ಪುಟಗಳ ಈ ಕಾದಂಬರಿಯನ್ನು ಕೇವಲ ಮೂರೇ ದಿನದಲ್ಲಿ ಓದಿ ಮುಗಿಸಿದ್ದೇನೆ. ಎಲ್ಲಿಯೂ ಪುಸ್ತಕದ ಗಾತ್ರದ ಬಗ್ಗೆ ತಲೆಕೆಡಿಸಿಕೊಂಡಿಲ್ಲ,ಸರಾಗವಾಗಿ ಓದಿಸಿಕೊಂಡು ಹೋಯಿತು ಎಂಬುದು ಇದರ ಹೆಗ್ಗಳಿಕೆ.
ಕಾಮ,ಕ್ರೋಧ,ಲೋಭ,ಮದ,ಮೋಹ ಮತ್ತು ಮತ್ಸರಗಳೆಂಬ ಆವರ್ತದೊಳಗೆ ಸಿಲುಕಿದ ಪ್ರತೀಪನೆಂಬ ಯುವಕನ ಕಥೆ ಕಾದಂಬರಿಯ ಕಥಾವಸ್ತು. ಈ ಗುಣಗಳು ಅವನನ್ನು ಮುಗಿಲೆತ್ತರಕ್ಕೆ ಒಯ್ಯುತ್ತವೆ ಹಾಗೆಯೇ ಪಾತಾಳಕ್ಕೂ ತಳ್ಳುತ್ತದೆ. ಅಧಿಕಾರ, ಹಣಬಲ ಮತ್ತು ತೋಳ್ಬಲಗಳ ಮೂಲಕ ಎಲ್ಲರ ಬಾಯಿ ಮುಚ್ಚಿಸಿಬಹುದು,ಆದರೆ ಮನಃಸಾಕ್ಷಿಗೆ ಎಲ್ಲರೂ ತಲೆಬಾಗಲೇಬೇಕು. ಮನಃಸಾಕ್ಷಿಯು ಒಡ್ಡುವ ಪ್ರಶ್ನೆಗಳಿಂದ ತಿಣುಕಾಡಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಬಹಳ ಮಾರ್ಮಿಕವಾಗಿ ಪ್ರತೀಪನ ಮನೋವ್ಯಾಪಾರಗಳ ಮೂಲಕ ಹೇಳಲಾಗಿದೆ. ಅಧ್ಯಾತ್ಮದ ಪಯಣವು ಲೌಕಿಕ ಸುಖಗಳನ್ನು ತ್ಯಜಿಸಿಯೇ ಕೈಗೊಳ್ಳಬೇಕಾಗಿಲ್ಲ. ಅದು ಒಂದು ಮಾರ್ಗ ಅಷ್ಟೇ. ಸಂಸಾರ ಸಾಗರದಲ್ಲಿ ಈಜಿಕೊಂಡು ಅದಕ್ಕೆ ಅಂಟಿಕೊಳ್ಳದೆ ತಮ್ಮ ಪಾಡಿಗೆ ತಾವು ತಣ್ಣಗೆ ಅಧ್ಯಾತ್ಮಿಕ ಜೀವನವನ್ನು ಸಾಗಿಸಬಹುದು ಎಂಬ ಉದಾಹರಣೆಯನ್ನು ಸುಮೇರು ಎಂಬ ಪ್ರತೀಪನ ಸೇವಕನ ಮೂಲಕ ತಿಳಿಸುತ್ತಾ ಹೋಗುತ್ತಾರೆ ಲೇಖಕರು. ಇದನ್ನು ಓದುತ್ತಾ ಹೋದಂತೆ ನಮ್ಮ ಸುತ್ತಮುತ್ತ ಇರುವ ಈ ತರಹ ಬದುಕುತ್ತಿರುವ ಅನೇಕ ವ್ಯಕ್ತಿಗಳು ಕಣ್ಣಮುಂದೆ ಹಾದು ಹೋದರು.
ಲೇಖಕರು ಇಲ್ಲಿ ಕಥೆಯನ್ನು ಹೇಳಿದ ಶೈಲಿ ಮತ್ತು ಅದಕ್ಕೆ ಬಳಸಿದ ತಂತ್ರ ನನಗೆ ಬಹಳ ಖುಷಿ ಕೊಟ್ಟಿತು. ವರ್ತಮಾನದ ಕತೆಯನ್ನು ಹೇಳುತ್ತಾ ಭೂತಕಾಲವನ್ನು ಕಣ್ಣಮುಂದೆ ನಿಲ್ಲಿಸುವ ಪರಿಯು ಬಹಳ ಮುದ ನೀಡಿತು. ಜೀವನವು ಸಹ ಹಾಗೆಯೇ ತಾನೇ… ಯಾರೊಬ್ಬರಿಗೂ ಒಂದು ದಿನ ಕುಳಿತು ಇಡೀ ಜೀವಮಾನದ ಘಟನೆಗಳನ್ನು ಪೂರ್ತಿಯಾಗಿ ಅವಲೋಕಿಸಲು ಸಾಧ್ಯವಿಲ್ಲ. ವರ್ತಮಾನದಲ್ಲಿ ಜೀವಿಸುತ್ತಾ ಸಮಯ ಸಂದರ್ಭ ಸನ್ನಿವೇಶಗಳಿಗನುಗುಣವಾಗಿ ನಮ್ಮ ಭೂತಕಾಲವನ್ನು ಮತ್ತೊಮ್ಮೆ ಪರಾಂಬರಿಸಲು ಸಿಗುವ ಅವಕಾಶಗಳು,ಅಂದಿನ ದಿನದ ನಿರ್ಧಾರಗಳ ಒಳಿತು ಕೆಡುಕುಗಳ ಚಿತ್ರಣವನ್ನು ನಮ್ಮ ಮುಂದೆ ಇಡುತ್ತದೆ. ವಿವೇಚನಾ ಶಕ್ತಿಯನ್ನು ಯಾವ ತರಹ ಬಳಸಿಕೊಂಡಿದ್ದೇವೆ ಎಂಬುದನ್ನು ಪರಾಮರ್ಶಿಸಲು ಸಹ ಇದೊಂದು ಅವಕಾಶ ನಮ್ಮೆದುರಿಗೆ. ಹಾಗೆಯೇ ಕಾದಂಬರಿಯ ಅಂತ್ಯದಲ್ಲಿ ಬರುವ ತಿರುವುಗಳು ಓದುಗರನ್ನು ಮಂತ್ರಮುಗ್ಧರನ್ನಾಗಿಸುತ್ತವೆ.
ಯಾವುದೇ ವ್ಯಕ್ತಿಯೊಬ್ಬನ ಮನೋವ್ಯಾಪಾರಗಳನ್ನು ಅಕ್ಷರ ರೂಪಕ್ಕೆ ಇಳಿಸುವುದು ಸುಲಭದ ಮಾತಲ್ಲ. ಆ ಮನೋವ್ಯಾಪಾರಗಳು ಓದುಗನ ಎದೆಯಾಳಕ್ಕಿಳಿದು ತನ್ನ ಜೀವನದ ಘಟನೆಗಳನ್ನು ಮೆಲುಕು ಹಾಕುವಂತೆ ಮಾಡುವುದು ಬಹಳ ಕಠಿಣ. ಪ್ರಸ್ತುತ ಕಾದಂಬರಿಯು ಈ ಎರಡು ದಿಶೆಯಲ್ಲಿ ಓದುಗನನ್ನು ಹಿಡಿದಿಡುವಲ್ಲಿ ಸಶಕ್ತವಾಗಿದೆ. ಪ್ರಕೃತಿ ಸಹಜ ಸನ್ನಿವೇಶಗಳಿಗೆ ಮನಸ್ಸಿನ ತುಮುಲ ತಲ್ಲಣಗಳನ್ನು ತಾಳೆಹಾಕಿದಂತಹ ಅನೇಕ ಸಂದರ್ಭಗಳು ಕಾದಂಬರಿಯ ಘನತೆಯನ್ನು ಹೆಚ್ಚಿಸಿವೆ. ಇಂತಹ ಕೃತಿಗಳು ಓದಿನ ಸುಖವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ವರ್ಷದಲ್ಲಿ ಅತ್ಯಂತ ಮುದ ನೀಡಿದ ಓದು.