ವಿಜಯವಾಣಿ ಪತ್ರಿಕೆಯಲ್ಲಿ ‘ಹೋರಾಟದ ಹಾದಿ’ ಶೀರ್ಷಿಕೆಯಡಿ ಪ್ರಕಟವಾದ ಬಾಬು ಕೃಷ್ಣಮೂರ್ತಿ ಅವರ ಅಂಕಣ ಬರಹಗಳ ಸಂಗ್ರಹ ರೂಪವೇ ‘ಸ್ವಾತಂತ್ಯ್ರ ಹೋರಾಟದ ಹೀರೋಗಳು-4’.
ತಮ್ಮ ಬದುಕನ್ನು ಹೋರಾಟದ ಹಾದಿಯಲ್ಲಿ ಸವೆಸಿದವರ, ಸಾರ್ವಜನಿಕರ ಹಿತಾಸಕ್ತಿಗೆ ವ್ಯಯಿಸಿದವರ, ಜನರಿಗಾಗಿ ಪ್ರಾಣದ ಹಂಗು ತೊರೆದು ಹೋರಾಡಿದ ವೀರ ಯೋಧರ ಕತೆಗಳನ್ನು ಕೃತಿ ಹೇಳುತ್ತದೆ. ಅವರ ಬದುಕು-ಸಿದ್ದಾಂತ-ತುಳಿದ ಹಾದಿಯ ಬಗೆಯನ್ನು ಓದುಗರಿಗೆ ಮುಟ್ಟಿಸುವಲ್ಲಿ ಸಫಲವಾಗಿದೆ.
‘ಸ್ಟಾಲಿನ್ ನ ಗುಂಡಿಗೆ ಬಲಿಯಾದ “ಚಟ್ಟೋ , ಪಂಡಿತ ಗೇಂದಾಲಾಲ್ ದೀಕ್ಷಿತ್, ಶ್ರೇಷ್ಠ ವಿದ್ವಾಂಸ, ಚಿಂತಕ ಕ್ರಾಂತಿಕಾರಿ ತಾರಕನಾಥ್ ದಾಸ್, ಪತಿಯ ಅನುರೂಪ “ಸತಿ” ರಾಮರಖಿ, ವೈಸರಾಯ್ ಮೇಲೆ ಬಾಂಬ್ ಎಸೆದು ಗಲ್ಲಿಗೇರಿದ ಧೀರ ಕಿಶೋರ ಬಸಂತ ಕುಮಾರ, ಸ್ವಂತ ಸಾಕುಮಗನೇ ದ್ರೋಹ ಬಗೆದರೆ...., ದೆಹಲಿ ಷಡ್ಯಂತ್ರ ಮೊಕದ್ದಮೆಯ ಇಬ್ಬರು ವೀರ ಯೋಧರು, ಕ್ರಾಂತಿ ಆಂದೋಲನದ ಪ್ರಬುದ್ಧ ಚೇತನ ಶಚೀಂದ್ರನಾಥ ಸನ್ಯಾಲ್, ಛಲ ಬಿಡದ ಕದನ ಕಲಿ ಜೋಗೇಶ್ಚಂದ್ರ ಚಟರ್ಜಿ, ಕ್ರಾಂತಿ ಕಾರ್ಯಕ್ಕೆ ಭದ್ರ ಬುನಾದಿ ಹಾಕಿದ ಸಂನ್ಯಾಸಿ, ಠಾಕೂರ್ ಮನೆತನ ಮತ್ತು ಸ್ವಾತಂತ್ರ್ಯ ಚಳವಳಿ’ ಮುಂತಾದ ಚಿಂತನೆಗಳ ಬರೆಹಗಳಿವೆ.
ಸಾಹಿತ್ಯ, ಪತ್ರಿಕೋದ್ಯಮ ಎರಡು ಕ್ಷೇತ್ರಗಳಲ್ಲೂ ಚಿರಪರಿಚಿತರಾದ ಬಾಬು ಕೃಷ್ಣಮೂರ್ತಿ ಹುಟ್ಟಿದ್ದು ಬೆಂಗಳೂರು. ಸಾಹಿತ್ಯ ಹಾಗೂ ಪತ್ರಿಕೋದ್ಯಮದಲ್ಲಿ ಅತೀವ ಆಸಕ್ತಿ. ಅವರ ಸಂಪಾದಕತ್ವದಲ್ಲಿ ಬಾಲಮಂಗಳ (ಪಾಕ್ಷಿಕ), ಬಾಲಮಂಗಳ ಚಿತ್ರಕಥಾ (ಮಕ್ಕಳ ವ್ಯಂಗ್ಯ ಚಿತ್ರ ಪಾಕ್ಷಿಕ), ಗಿಳಿವಿಂಡು (ಶಿಶು ಪಾಕ್ಷಿಕ ಪತ್ರಿಕೆ) ಪ್ರಕಟವಾಗಿವೆ. ಇವರು ರಚಿಸಿದ ಸ್ವಾತಂತ್ರ್ಯವೀರ ಚಂದ್ರಶೇಖರ ಆಜಾದ್ ಕುರಿತು ಆರು ವರ್ಷ ಕಾಲ ಸಂಶೋಧನೆ, ಸ್ಥಳವೀಕ್ಷಣೆ ನಡೆಸಿ ರಚಿಸಿದ ಕೃತಿ ‘ಅಜೇಯ’. ಅವರ ಪ್ರಮುಖ ಕೃತಿಗಳು - ಅಜೇಯ (1974), ಸಿಡಿಮದ್ದು ನೆತ್ತರು ನೇಣುಗಂಬ (1984), ಅದಮ್ಯ (1984), ರುಧಿರಾಭಿಷೇಕ (2005), ಡಾ. ಸಿ.ಜಿ. ಶಾಸ್ತಿಒಂದು ಯಶೋಗಾಥೆ (2007), 1857-ಭಾರತದ ಸ್ವಾತಂತ್ರ್ಯ ಸಂಗ್ರಾಮ (2007), ಕ್ರೈಮ್ ಫೈಲ್ (2007), ಯಾವುದು ಚರಿತ್ರೆ? (2008), ಯುಗದೃಷ್ಟ ಭಗತ್ಸಿಂಗ್ (2012), ಕ್ರಾಂತಿಪರ್ವ (2015), ಮಹಾಸಾಧಕ (2016), ಸ್ವಾತಂತ್ರ್ಯ ಹೋರಾಟದ ಹೀರೋಗಳು (2016), ಭಾಗ-2 (2017).
‘ಮಿಲ್ಟ್ರಿ ತಾತ ಕಥೆ ಹೇಳ್ತಾರೆ’ ಕೃತಿಗೆ ರಾಜ್ಯ ಸರಕಾರದ ಪ್ರಶಸ್ತಿ, ‘ಅಜೇಯ’ ಮತ್ತು ‘ಅದಮ್ಯ’ ಕೃತಿಗಳಿಗೆ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ವಿಶ್ವೇಶ್ವರಯ್ಯ ಎಂಜನಿಯರಿಂಗ್ ಪ್ರತಿಷ್ಠಾನ ಪ್ರಶಸ್ತಿ, ಪತ್ರಿಕೋದ್ಯಮದ ಸೇವೆಗಾಗಿ ಕರ್ನಾಟಕ ಜ್ಯೋತಿ ಪ್ರಶಸ್ತಿ, ಶಿವಮೊಗ್ಗದ ‘ನಾವಿಕ’ ದಿನಪತ್ರಿಕೆಯ ರಜತ ಮಹೋತ್ಸವ ಪ್ರಶಸ್ತಿ, ರಂಗಭೂಮಿ ಕೊಡುಗೆಗಾಗಿ ಉದಯ ಕಲಾನಿಕೇತನದಿಂದ ಸನ್ಮಾನ ದೊರೆತಿದೆ.