*ಅನಾರ್ಕಲಿಯ ಸೇಫ್ಟಿಪಿನ್*
*ಜಯಂತ ಕಾಯ್ಕಿಣಿ ಕತೆಗಳು*
ಇದು ನಾನು ಓದಿದ ಕಾಯ್ಕಿಣಿರವರ ಮೊದಲ ಕೃತಿ, ಒಟ್ಟಾಗಿ ೯ ಕತೆಗಳನ್ನು ಒಳಗೊಂಡಿದೆ, ಒಂದೊಂದು ಕಥೆಯೂ ಅದ್ಭುತವಾಗಿದೆ ಹಾಗು ಕಥೆಯಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು ನಮ್ಮ ಸುತ್ತ ಮುತ್ತಲಿನಲ್ಲಿ ನಡೆಯುವಂತಹುದೆ ಆಗಿವೆ. ಅದರಲ್ಲೂ ಸಹ *ಭಾಮೆ ಕೇಳೊಂದು ದಿನ, ಬೆಳಕಿನ ಬಿಡಾರ, ವಾಯಾ ಚಿನ್ನದ ಕೇರಿ, ಅನಾರ್ಕಲಿಯ ಸೇಫ್ಟಿಪಿನ್* ೨ಬಾರಿ ಓದಿ ಖುಷಿಪಟ್ಟೆ, ಅಷ್ಟು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ ಹಾಗು ಅವರ ಬರೆಯುವ ಶೈಲಿ ತುಂಬಾನೆ ಇಷ್ಟವಾಯಿತು.
ನಾವು ಸದಾ ಕಾಣುವ ನಮ್ಮ ಸುತ್ತಮುತ್ತಲಿನವರ ಮನುಷ್ಯರ ಮನಸನ್ನು ಗ್ರಹಿಸಿ ಅವರ ಕಥೆಯನ್ನು ಕಾಯ್ಕಿಣಿರವರು ಸೊಗಸಾಗಿ ಹೇಳುವ ರೀತಿ ಬೆರಗುಗೊಳಿಸುತ್ತದೆ. ಚಿಕ್ಕಂದಿನಿಂದ ಒಂದೇ ಊರಲ್ಲಿ ಬೆಳೆದು ತಂದೆಗೆ ಕೆಲಸದ ಮೇರೆ ಮುಂಬಯಿಗೆ ವರ್ಗವಾದಾಗ ಆ ಹಳ್ಳಿಯನ್ನು ಹಾಗು ಮಿತ್ರರನ್ನು ಬಿಟ್ಟು ಹೋಗುವಾಗ ಆಗುವ ಸಂಕಟ ಹಾಗು ಆತನು ಓದಿ ಒಳ್ಳೆ ಹುದ್ದೆಯಲ್ಲಿದ್ದು ಕೆಲಸದ ಮೇರೆಗೆ ತನ್ನ ಊರಿಗೇ ಬಂದು ತಾನು ವಾಸಿಸುತ್ತಿದ್ದ ಮನೆಯನ್ನು, ಊರಿನ ಗೆಳೆಯರನ್ನು ಪುನಃ ಕಂಡಾಗ ಆಗುವ ಖುಷಿ.
ದಿನ ಬೆಳಿಗ್ಗೆ ಮನೆ ಮನೆಗೂ ಸುದ್ಧಿ ತಲುಪಿಸುವ ಅಂದರೆ ಪೇಪರ್ ಹಾಕುವ ಹುಡಗನಿಗೆ ತಾನು ಹಾಕುವ ಪೇಪರ್ ರಿಂದ ಸುದ್ಧಿ ತಿಳಿಯುವ ಜನರನ್ನು ಕಂಡು ಆ ಪೇಪರ್ ನಲ್ಲಿ ಏನಿರುವುದೆಂಬ ಕುತೂಹಲದಿಂದ ತಾನೂ ಓದಿದಾಗ ಆಗುವ ಖುಷಿ, ಹಾಗೆ ಯಾರೋ ಒರ್ವ ಮನೆಯವರು ಹೊಸದಾಗಿ ಖರಿದಿಸಿದ ಶೂಷ್ ತಮ್ಮ ಕಾಲಿಗೆ ಆಗದೇ ಇದ್ದಾಗ ಪೇಪರ್ ಹಾಕುವ ಹುಡುಗನಿಗಾದರೂ ಉಪಯೋಗವಾಗಲೆಂದು ಕೊಟ್ಟಾಗ ಆ ಶೂಷ್ ಧರಿಸಿ ಊರೂರು ಅಲೆದು ತನ್ನ ಮಿತ್ರರಿಗೆ, ಮನೆಯವರಿಗೆ ತೋರಿಸುತ್ತಾ ಖುಷಿ ಪಡುವ ಪ್ರಸಂಗಗಳು ಅತ್ಯದ್ಭುತವಾಗಿದೆ.
ತಾಳೆಮದ್ದಲೆಯೇ ಜೀವನವೆಂದು ಗೋಕರ್ಣದಲ್ಲಿ ವಾಸಿಸುವ ತಂದೆ ತನ್ನ ಮಗನ ಬಗ್ಗೆ ಮಿತ್ರರ ಬಳಿ ತನ್ನ ಮಗನು ಬೆಂಗಳೂರಿನಲ್ಲಿ ಸ್ವಂತ ಮನೆ ಮಾಡಿಕೊಂಡು, ಒಳ್ಳೆ ಉದ್ಯೋಗ ಮಾಡುತ್ತಿರುವನೆಂದು ಹೆಮ್ಮೆಯಿಂದ ಹೇಳಿಕೊಂಡಾಗ ತನ್ನ ಮಗನ ಕೀರ್ತಿಯನ್ನು ಸಾರುತ್ತಾ ಖುಷಿ ಪಡುವುದನ್ನು ಹಾಗು ಒಮ್ಮೆ ತಾಳೆಮದ್ದಲೆ ನಡೆಸಿಕೊಡುವುದಕ್ಕಾಗಿ ಬೆಂಗಳೂರಿಗೇ ಬಂದಾಗ ಬೆಂಗಳೂರಿನಂತ ಮಹಾನಗರವನ್ನು, ಮಗನ ಮನೆಯನ್ನು ಕಂಡು ಬೆರಗಾಗುವ ತಂದೆ ತಾಯಿಯರ ಕಥೆ ಓದಿದಾಗ ನಮ್ಮ ಕುರಿತು ಸದಾ ಪ್ರೀತಿ ತೋರಿಸುವ ನಮ್ಮ ತಂದೆ ತಾಯಿಯರು, ಅವರು ಎಲ್ಲೇ ಇರಲಿ ನಮಗೆ ಖಂಡಿತ ನೆನಪಾಗುತ್ತಾರೆ ಅಷ್ಟು ಆಳವಾಗಿ ಈ ಭಾಮೆ ಕೇಳೊಂದು ದಿನ ಕಥೆಯನ್ನು ಓದುವಾಗ ಮಗ್ನರಾಗಿ ಬಿಡುತ್ತೇವೆ.
ಬಟ್ಟೆ ಒಗೆಯುವುದು, ಅದನ್ನು ಇಸ್ತ್ರೀ ಮಾಡಿ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹೊರಡುವವರಿಗೆ ತಲುಪಿಸುತ್ತಾ ಜೀವನ ನಡೆಸುವ ತಂದೆಗೆ ತನ್ನ ಮಗನಾದರೂ ಓದಿ ಮುಂದೆ ಬರಬೇಕೆಂಬ ಆಸೆ ಆಕಾಂಕ್ಷೆ, ಮಗ ಕೆಲಸಕ್ಕೆ ಅಂತ ಮುಂಬಯಿಗೆ ಹೋದಾಗ ಸುಮಾರು ವರ್ಷಗಳಾದರೂ ಊರಿಗೆ ಮರಳದಿದ್ದಾಗ ಆತನನ್ನು ಕಾಣಲು ಹೋದ ತಂದೆ ತನ್ನ ಮಗ ಸಿನಿಮಾ ಸ್ಟೂಡಿಯೋದಲ್ಲಿ ಕೆಲಸ ಮಾಡುತ್ತಿರುವುದನ್ನು ಕಂಡು ಸಮಾಧಾನ ಪಟ್ಟುಕೊಳ್ಳುತ್ತಾನೆ, ಹೀಗೆ ತಾನು, ತನ್ನ ಮಗ ಹಾಗ ಆತನ ಮಿತ್ರರೆಲ್ಲಾ ಸೇರಿ ಮುಂಬಯಿಯಲ್ಲಿ ಹಲವಾರು ಟೂರಿಷ್ಟ್ ಸ್ಥಳಗಳನ್ನು ವೀಕ್ಷಿಸಿದಾಗ, ಬಟ್ಟೆ ಓಗೆಯುವುದೇ ತನ್ನ ವೃತ್ತಿಯಾದ್ದರಿಂದ ದೋಬೀಘಾಟ್ ನೋಡಿದಾಗ ಖುಷಿಯಾಗುತ್ತದೆ,ಆತನಿಗೆ ದೋಬೀಘಾಟ್ ಅಸಂಖ್ಯ ಬಟ್ಚೆಗಳನ್ನು ಒಗೆಯುವ ಕಾಶಿಯಂತೆ ಕಾಣುತ್ತದೆ.
ಸಿನಿಮಾದಲ್ಲೇ ನಟಿಸಿಬೇಕು ಎಂಬ ಹಟವಿಟ್ಟುಕೊಳ್ಳದೆ ಸೀರಿಯಲ್ ಆದರೂ ಸರಿ ತಮ್ಮ ಜೀವನವನ್ನು ನಡೆಸಬೇಕಾದಲ್ಲಿ ಅನಿವಾರ್ಯವೆಂದು ತಮ್ಮ ಜೀವನದಲ್ಲಿ ಎಷ್ಟೇ ಏರು ತಗ್ಗುಗಳಿದ್ದರೂ ನಿಜಜೀವನದಲ್ಲಿ ಅದನ್ನು ತೋರಿಸಿಕೊಳ್ಳಲಾಗದೆ ಸೀರಿಯಲ್ ನಲ್ಲಿ ನಟಿಸುವ ಇಬ್ಬರ ಗೆಳತಿಯರ ಮನಕುಲುಕುವ ಕಥೆಯನ್ನು ಕಾಣಬಹುದು. ಹಾಗು ಇವರುಗಳ ಮಧ್ಯ ಇದ್ದು ಸದಾ ಪಿಕಪ್ ಮಾಡಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ತಲುಪಿಸುವ ಟ್ಯಾಕ್ಸಿ ಡ್ರೈವರ್ ಕಥೆಗಳು ಕಾಣಿಸಿಕೊಳ್ಳುತ್ತವೆ. ಅನಿ ಚಮೇಲಿ ಇಬ್ಬರು ಗೆಳೆತಿಯರು ದೇವಗಡ ದ್ವೀಪವನ್ನು ಕಾಣಲು ಸಮುದ್ರದಲ್ಲಿ ಲಾಂಚಿನಲ್ಲಿ ಹೋಗುವಾಗ ಅಲ್ಲಿ ಗೆಳೆಯರು ನೀರಿನಲ್ಲಿ ಖುಷಿಯಾಗಿ ಆಟವಾಡುವುದನ್ನು ಕಂಡು ತನ್ನ ಹಾಗು ಚಮೇಲಿಯ ಮನೆಯಲ್ಲಿ ಎಷ್ಟೇ ಕಷ್ಟಗಳಿದ್ದರೂ ಸಮುದ್ರವನ್ನು ನೋಡುತ್ತಾ ಮನಸ್ಸಿಗೆ ಆಗುವ ಸಮಾಧಾನ ಹಾಗು ಲಾಂಚ್ ನಡೆಸುವ ಹುಡುಗನ ಬಾಯಲ್ಲಿ ಅನಿ ಹೆಸರು ಅನಾರ್ಕಲಿ ಆದಾಗ ಪಟ್ಟ ಖುಷಿ ಅಷ್ಟಿಷ್ಟಲ್ಲ. ಹೀಗೆ ಒಂದೊಂದು ಕಥೆಯೂ ಅತ್ಯದ್ಭುತವಾಗಿದೆ. ಹಾಗು ನಮಗರಿವಿಲ್ಲದೇನೆ ಧಿಡೀರನೆ ಕಥೆಗಳು ಮುಕ್ತಯವಾಗುವ ರೀತಿಯೂ ಸಹ ಸೊಗಸಾಗಿದೆ. ಮುಕ್ತಯವಾದರೂ ಮತ್ತೊಂದು ಕಥೆಯಲ್ಲಿ ಪಾತ್ರಗಳು ಬೇರೆ ಆಗಬಹುದು ಆದರೆ ಅವೆಲ್ಲವೂ ನಮ್ಮ ಸುತ್ತಮುತ್ತಲಿನಲ್ಲಿ ತುಂಬ ಹತ್ತಿರದಲ್ಲಿ ನಡೆಯಯವಂತೆ ಭಾಸವಾಗುತ್ತದೆ.
ಸಣ್ಣ ಕಥೆಗಳನ್ನು ಓದಲು ಇಷ್ಟ ಪಡುವವರು ಓದಲೇಬೇಕಾದ ಪುಸ್ತಕ.
*ಕಾರ್ತಿಕೇಯ*