Jump to ratings and reviews
Rate this book

ಸ್ಥಿತ್ಯಂತರ

Rate this book

Unknown Binding

Loading...
Loading...

About the author

ಸಾಹಿತಿ ಡಾ. ಬಿ.ಜನಾರ್ದನ ಭಟ್ ಅವರದು ಬಹುಮುಖ ಪ್ರತಿಭೆ. ಅವರು ಕಾದಂಬರಿಕಾರರಾಗಿ, ಕಥೆಗಾರರಾಗಿ, ವಿಮರ್ಶಕರಾಗಿ, ಅಂಕಣಕಾರರಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರ ಸಾಹಿತ್ಯಾನುಸಂಧಾನ ಬಹುಸೂಕ್ಷ್ಮವಾದುದು. ಬಹುಭಾಷಿಕ, ಬಹುಶ್ರುತ ವಿದ್ವಾಂಸರೂ ಸೃಜನಶೀಲ ಲೇಖಕರೂ ಆಗಿರುವ ಭಟ್ ಅವರದು ಸ್ಪೋಪಜ್ಞತೆಯ ಹಾದಿ. ತಮ್ಮ ಕೃತಿಗಳಲ್ಲಿ ಹೆಚ್ಚಿನ ಸ್ವಂತಿಕೆಯ ಛಾಪನ್ನು ಒತ್ತುತ್ತಾ ಬಂದಿರುವ ಡಾ. ಜನಾರ್ದನ ಭಟ್ ಅವರು ಸಮಕಾಲೀನ ಕನ್ನಡದ ಹೆಸರಾಂತ ಲೇಖಕರಲ್ಲಿ ಒಬ್ಬರು. ಭಟ್ ಅವರ ಹೆಚ್ಚಿನ ಕೃತಿಗಳು ಆಳ ಮತ್ತು ಸಂಕೀರ್ಣತೆಯನ್ನು ಹೊಂದಿರುವುದು ವಿಶೇಷ.

ವಿದ್ವತ್ತು ಮತ್ತು ಸೃಜನಶೀಲತೆ ಎರಡನ್ನೂ ಮೈಗೂಡಿಸಿಕೊಂಡಿರುವ ಬೆಳ್ಮಣ ನ ಡಾ. ಬಿ.ಜನಾರ್ದನ ಭಟ್ ಅವರು ಲೇಖಕರು ಮತ್ತು ಅಧ್ಯಯನಶೀಲ ವಿದ್ವಾಂಸರು. ಕನ್ನಡ ಮತ್ತು ಇಂಗ್ಲೀಷಿನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಮೇಲೆ ಡಾಕ್ಟರೇಟ್ ಪದವಿಯನ್ನೂ ಪಡೆದಿರುವ ಅವರು ಪ್ರಕೃತ ಬೆಳ್ಮಣ ನ ಸ.ಪ.ಪೂ ಕಾಲೇಜಿನಲ್ಲಿ ಪ್ರಾಚಾರ್ಯರಾಗಿದ್ದಾರೆ.

“ಕಲ್ಲುಕಂಬವೇರಿದ ಹುಂಬ' ಸಾಮಾಜಿಕ ಕಾದಂಬರಿಯಾಗಿದ್ದು, ನಾಡಿನ ಜನಪ್ರಿಯ ವಾರಪತ್ರಿಕೆ 'ತರಂಗ' ಏರ್ಪಡಿಸಿದ್ದ ಮಿನಿ ಕಾದಂಬರಿ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಕೃತಿ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ತುಳುನಾಡಿನ ಜನರ ನಂಬಿಕೆ, ಆರಾಧನಾ ಪರಂಪರೆ, ಪುರಾಣ, ಐತಿಹ್ಯ, ಇತಿಹಾಸಗಳನ್ನೆಲ್ಲ ವಿವರವಾಗಿ ಕಲಾತ್ಮಕವಾಗಿ ತಮ್ಮ ಕೃತಿಗಳಲ್ಲಿ ದಾಖಲಿಸುತ್ತಾರೆ.

ನಾಲ್ಕು ಪ್ರಸ್ತಾವನೆಗಳು - ಕರಾವಳಿ ಸಾಹಿತ್ಯ ಕಥನ ಪುಸ್ತಕಕ್ಕೆ 2018ರ ಇನಾಂದಾರ್ ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ಪುಸ್ತಕವು ಅವರು ತಮ್ಮ ಮಹತ್ತ್ವದ ಕೃತಿಗಳಿಗೆ ಆಳವಾದ ಅಧ್ಯಯನ ಮತ್ತು ವಿಶಿಷ್ಟ ದೃಷ್ಟಿಕೋನದಿಂದ ಬರೆದ ದೀರ್ಘ ಪ್ರಸ್ತಾವನೆಗಳ ಸಂಗ್ರಹವಾಗಿದೆ. ಈ ಎಲ್ಲ ಬರಹಗಳಲ್ಲಿ ಕರಾವಳಿಯ ಶತಮಾನದ ಸಾಹಿತ್ಯ ಕೇಂದ್ರದಲ್ಲಿರುವುದು ಮಹತ್ವದ ವಿಷಯ. ಅವರ ಗ್ರಂಥಗಳಲ್ಲಿ ದಕ್ಷಿಣ ಕನ್ನಡದ ಶತಮಾನದ ಕಾವ್ಯ, ದಕ್ಷಿಣ ಕನ್ನಡದ ಶತಮಾನದ ಕತೆಗಳು, ಉಡುಪಿ ಜಿಲ್ಲೆಯ ಶತಮಾನದ ಕತೆಗಳು ಮುಖ್ಯವಾದವು. ಅಲ್ಲದೆ ಅವರು ಉತ್ತರಾಧಿಕಾರ ಹಸ್ತಾಂತರ ಮೂರು ಹೆಜ್ಜೆ ಭೂಮಿ, ಕಲ್ಲುಕಂಬವೇರಿದ ಹುಂಬ, ಅನಿಕೇತನ ಮುಂತಾದ ಕಾದಂಬರಿಗಳನ್ನು ಬರೆದು ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರು ಸಂಪಾದಿಸಿದ ಬದುಕು ಭಾವದ ಕತೆಗಳು ಮಂಗಳೂರು ವಿಶ್ವವಿದ್ಯಾಲಯದ ದ್ವಿತೀಯ ಪದವಿ ತರಗತಿಗೆ ಪಠ್ಯಪುಸ್ತಕವಾಗಿತ್ತು.

ಕತೆ ಕಾದಂಬರಿ, ವಿಮರ್ಶೆ, ಸಂಸ್ಕೃತಿಚಿಂತನೆ, ಅನುವಾದ, ಸಂಪಾದನೆ, ಮೊದಲಾದ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಆಸಕ್ತಿ ಮತ್ತು ಪರಿಶ್ರಮವುಳ್ಳ ಅವರು ರಾಜ್ಯ ಅಂತಾರಾಜ್ಯಮಟ್ಟದ ವಿಚಾರಗೋಷ್ಠಿಗಳಲ್ಲಿ ಪ್ರಬಂಧಮಂಡನೆ, ಅಧ್ಯಕ್ಷತೆ ವಹಿಸಿದ್ದಾರೆ. 5 ಕಾದಂಬರಿಗಳು, 4 ಕಥಾಸಂಕಲನಗಳು, 3 ವೈಚಾರಿಕ ಕೃತಿಗಳನ್ನು 25 ವಿಮರ್ಶೆಯ ಕೃತಿಗಳು, 8 ಅನುವಾದ ಕೃತಿಗಳು, 7 ಕೃತಿಗಳನ್ನು ಸಂಪಾದಿಸಿದ್ದು ಸೇರಿ, ಒಟ್ಟು 70 ಕೃತಿಗಳನ್ನು ಪ್ರಕಟಿಸಿದ್ದಾರೆ.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
3 (75%)
4 stars
1 (25%)
3 stars
0 (0%)
2 stars
0 (0%)
1 star
0 (0%)
Displaying 1 - 4 of 4 reviews
Profile Image for Sanjay Manjunath.
214 reviews10 followers
December 11, 2024
ಬೃಹತ್ ಕಾದಂಬರಿಗಳ ಓದಿನ ಖುಷಿಯೇ ಬೇರೆ. ಅವುಗಳನ್ನು ಓದುವುದಕ್ಕೆಂದು ತೆಗೆದುಕೊಂಡಾಗ ನನಗೆ ಒಂದು ಸಣ್ಣ ಭಯ ಕಾಡುತ್ತೆ. ಮಧ್ಯದಲ್ಲೇನಾದರೂ ಹದ ತಪ್ಪಿದರೆ ಮುಂದೆ ಓದುವುದಕ್ಕೆ ತುಂಬಾ ಕಷ್ಟಪಡಬೇಕಾಗುತ್ತೆಂದು. ಹಾಗಂತ ಪೂರ್ತಿ ಓದದೇ ಇದ್ದರೂ ಸಮಾಧಾನವಾಗುವುದಿಲ್ಲ. ಆದರೆ 'ಸ್ಥಿತ್ಯಂತರ'ದ ಓದು ನಿರಾಶೆ ಮೂಡಿಸಲಿಲ್ಲ. ಕೆಲವೊಂದು ಕಡೆ ಗೋಜಲೆನಿಸಿದರೂ ಓದಿಸಿಕೊಂಡು ಹೋಯಿತು.

ಉತ್ತರಾಧಿಕಾರ, ಹಸ್ತಾಂತರ ಮತ್ತು ಅನಿಕೇತನ ಎಂಬ ತ್ರಿವಳಿ ಕಾದಂಬರಿಗಳನ್ನೊಳಗೊಂಡ ಕೃತಿ ಸ್ಥಿತ್ಯಂತರ.

ಕಾದಂಬರಿಯ ಪ್ರಧಾನ ಬಿಂದು 'ನಡುಕಣಿ' ಗ್ರಾಮ. ಸ್ವಾತಂತ್ರ್ಯಪೂರ್ವದಲ್ಲಿ ಸಾಮಾನ್ಯ ಹಳ್ಳಿಯಾಗಿದ್ದ ನಡುಕಣಿ, ಕಾಲ ಉರುಳಿದಂತೆ ಬದಲಾಗುತ್ತಾ ಹಣದ, ಪ್ರತಿಷ್ಠೆಯ ಸಂಕೇತವಾಗುತ್ತ, ಕೊನೆಗೆ ಮಣ್ಣಲ್ಲಿ ಮಣ್ಣಾಗಿ 'ನೆಹರೂ ನಗರ'ವಾಗಿ ಬದಲಾಗುತ್ತೆ.

ಉತ್ತರಾಧಿಕಾರ ಭಾಗದಲ್ಲಿ, ನಡುಕಣಿ ಗ್ರಾಮವನ್ನು ಮತ್ತು ಅದರಲ್ಲಿರುವ ಪಾತ್ರಗಳ ಪರಿಚಯದ ಜೊತೆಗೆ ಸರಳತೆ, ಮುಗ್ಧತೆಯಿಂದ ಕೂಡಿದ ಗ್ರಾಮದ ಪರಿಸರವು ನಿಧಾನವಾಗಿ ತನ್ನತನವನ್ನು ಕಳೆದುಕೊಂಡು ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ಥಿತ್ಯಂತರಕ್ಕೆ ಒಳಪಡುವುದನ್ನು ಕಾಣಬಹುದು.

ಹಸ್ತಾಂತರದ ಭಾಗದಲ್ಲಿ, ಹಣವೇ ಪ್ರಧಾನವಾಗಿ ನಡುಕಣಿಯ ಪರಿಸರ ಮತ್ತು ಜನರ ಮನಸ್ಥಿತಿಗಳೆರಡೂ ಬದಲಾಗುತ್ತಾ ಕೊನೆಗೆ ನಡುಕಣಿ ಎಂಬ ಗ್ರಾಮವೇ ಆ ಸ್ಥಳದಲ್ಲಿ ಇಲ್ಲವೆಂಬಂತೆ ನಾಮಾವಶೇಷಗೊಳ್ಳುವುದನ್ನ ಕಾಣಬಹುದು.

ಅನಿಕೇತನದ ಭಾಗದಲ್ಲಿ, ಉತ್ತರಾಧಿಕಾರ ಮತ್ತು ಹಸ್ತಾಂತರದಲ್ಲಿ ಬಿಟ್ಟು ಹೋದ ಕೆಲವು ಸಂಗತಿಗಳು ಮತ್ತು ಪಾತ್ರಗಳನ್ನು ವಿಸ್ತಾರವಾಗಿ ವಿವರಿಸುತ್ತಾ ಕೃತಿಯು ಮುಗಿಯುತ್ತದೆ.

ಪಟೇಲ್ ವೆಂಕಟರಮಣಯ್ಯ, ರಾಮಾಚಾರ್ಯರು, ಗೂರಲ ಗೋಪಾಲದಾಸರು, ಪೌಂಡ್ರಕ ವಾಸುದೇವ, ಗೋದಕ್ಕ-ವಾಗ್ದೇವಿ, ಸುಬ್ರಾಯ , ವಾಸುದೇವ, ಚೀಂಕ್ರ, ಗುರುವ, ಗೋವಿಂದಚಾರ್ಯ, ಕೃಷ್ಣರಾಜ ವಿಡಂಗ, ಕಾಡ್ಯ, ಮುದುರ, ರಾಘವ ಸೇನ, ಮರ್ಮಾರ್ ಧಣಿ, ದೊಡ್ಡು ನಾಯಕರು, ಮಧುಸೂದನ, ಶಂಕರರಾಯ, ಮಹಾಲಿಂಗೇಶ್ವರ ದೇವಸ್ಥಾನ, ಸೈತಾನ ಜಾತ್ರೆ, ಗೇಣಿ ಪದ್ಧತಿ, ಭೂ ಸುಧಾರಣಾ ಕಾಯ್ದೆ ಹೀಗೆ ಎಷ್ಟೊಂದು ಪಾತ್ರಗಳು, ವಿವರಗಳು ಮನದಲ್ಲಿ ಅಚ್ಚಳಿಯದೆ ಉಳಿದಿವೆ.
ಕಾದಂಬರಿಯಲ್ಲಿ ಇನ್ನೂ ಅನೇಕ ಪಾತ್ರಗಳಿವೆ. ಎಲ್ಲವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ ಹಾಗೆ ಕೆಲವೊಂದು ಪಾತ್ರಗಳು ಸೊರಗಿವೆ ಕೂಡ.

ಪಾತ್ರಗಳ ಪರಿಚಯ ಮಾಡಿಸುತ್ತ, ಅವುಗಳ ಮೂಲಕ ಕಥೆಯನ್ನು ವಿಸ್ತರಿಸುತ್ತಾ ಹೋಗುವ ಲೇಖಕರು, ದಕ್ಷಿಣ ಕನ್ನಡ ಜಿಲ್ಲೆಯ ಸಂಸ್ಕೃತಿ ,ಜನ ಜೀವನ ಕ್ರಮವನ್ನು ಸಾದರಪಡಿಸಿದ್ದಾರೆ.

ಒಟ್ಟಿನಲ್ಲಿ ಮೂರು ತಲೆಮಾರುಗಳ, ನಾಲ್ಕೈದು ದಶಕಗಳಲ್ಲಿ ನಡೆಯುವ ಮತ್ತು ಸಾಮಾಜಿಕ, ಸಾಂಸ್ಕ್ರತಿಕವಾಗಿ ಸ್ಥಿತ್ಯಂತರಗೊಂಡ ನಡುಕಣಿ ಗ್ರಾಮದ ಕಥೆಯಿದು.

ಉತ್ತಮ ಕೃತಿ ❤️
Profile Image for Raghavendra T R.
70 reviews17 followers
May 7, 2021
"ಮನಸ್ಸು ಬೆಳೆದಂತೆಲ್ಲ ಹಸಿವು ಬೆಳೆವುದಯ್ಯ", ಅನ್ನುತ್ತಾರೆ ಡಿ.ವಿ.ಜಿ. ನಾಗರೀಕತೆ ಬೆಳೆದಂತೆಲ್ಲ ಅದುವರೆಗೆ ಬೇರೂರಿದ್ದ ಸಂಸ್ಕೃತಿಯ ಸ್ಥಿತ್ಯಂತರ ಅನಿವಾರ್ಯ. ಸುಮಾರು ನಾಲ್ಕು ದಶಕಗಳ, ಮೂರು ತಲೆಮಾರುಗಳಲ್ಲಿ ನೆಡೆಯುವ ಸಾಂಸ್ಕೃತಿಕ ರೂಪಾಂತರ ಕಾದಂಬರಿಯ ಜೀವಾಳ.

‌‌‌ದಕ್ಷಿಣ ಕನ್ನಡದ ಕಾಲ್ಪನಿಕ ಹಳ್ಳಿಯೊಂದು ಆರಂಭದಲ್ಲಿ ಸಿಂಧುವಾಗಿ ಬಿಂಬಿತಗೊಂಡು ಕಡೆಯಲ್ಲಿ ಬಿಂದುವಾಗಿ ಮರೆಯಾಗುವ ಆ ಸಾಮಾಜಿಕ, ಸಾಂಸ್ಕೃತಿಕ ಸ್ಥಿತ್ಯಂತರದ ಚಿತ್ರಣ ಅಮೋಘ.
193 reviews23 followers
March 6, 2026
#ಪರಿಚಯ_೯_೨೦೨೬
ಕೃತಿ: ಸ್ಥಿತ್ಯಂತರ

ಲೇಖಕರು: ಬಿ. ಜನಾರ್ದನ ಭಟ್

ಪ್ರಕಾಶಕರು: ಶ್ರೀರಾಮ ಪ್ರಕಾಶನ, ಮಂಡ್ಯ

‘ಉತ್ತರಾಧಿಕಾರ’,‘ಹಸ್ತಾಂತರ’ ಮತ್ತು ‘ಅನಿಕೇತನ‌’ ಎಂಬ‌ ತ್ರಿವಳಿ ಕಾದಂಬರಿಗಳ ಸಂಪುಟ. ಇದರ ಮೊದಲ ಭಾಗವಾದ ಉತ್ತರಾಧಿಕಾರದ ಪ್ರತಿಯನ್ನು ಲೇಖಕರು ಕಳುಹಿಸಿಕೊಟ್ಟಿದ್ದರು, ಅದನ್ನು ನಾಲ್ಕೈದು ವರ್ಷಗಳ ಕೆಳಗೆ ಓದಿದ್ದೆ. ಮತ್ತೆ ಗ್ರಂಥಾಲಯದಲ್ಲಿ ಸಮಗ್ರ ಸಂಪುಟವನ್ನು ನೋಡಿ ನಿಧಾನಕ್ಕೆ ಓದೋಣ ಎಂದು ಕೆಲವು ಸಲ ಹಾಗೆಯೇ ಬಿಟ್ಟು ಬಂದಿದ್ದೆ. ಈ ಬಾರಿ ಗ್ರಂಥಾಲಯದಲ್ಲಿ ಈ ತ್ರಿವಳಿ ಸಂಪುಟಗಳನ್ನು ನೋಡಿದಾಗ ಓದುವ ಮನಸ್ಸಾಗಿ ತೆಗೆದುಕೊಂಡೆ. ಇದರ ಜೊತೆಗೆ ಗೆಳೆಯರಾದ ಸುಜೀತ್ ಕಾಮತ್ ಅವರು ಸಮಗ್ರ ಸಂಪುಟವನ್ನು ಓದಿ, ಓದಿ ಎಂದು ಭೇಟಿಯಾದಾಗ ಹೇಳುತ್ತಿದ್ದರು. ಹಾಗಾಗಿ ಓದಿಯೇ ಬಿಡೋಣವೆಂದು ನಿರ್ಧರಿಸಿದೆ. ಈ ಪುಸ್ತಕವನ್ನು ಓದಿ ಮುಗಿಸಿದಾಗ ಮನದಲ್ಲಿಯೇ ಅವರಿಗೆ ಧನ್ಯವಾದಗಳನ್ನು ಸಹ ಸಲ್ಲಿಸಿದೆ. ಒಂದು ವೇಳೆ ಓದದಿದ್ದರೆ ಒಂದು ಅದ್ಭುತವಾದ ಓದಿನ ಅವಕಾಶವನ್ನು ಕಳೆದುಕೊಳ್ಳುತ್ತಿದ್ದೆ.

ಈ ಕಾದಂಬರಿಯಲ್ಲಿ ಆಗಿನ ದಕ್ಷಿಣ ಕನ್ನಡ ಜಿಲ್ಲೆಯ “ನಡುಕಣಿ” ಎಂಬ ಕಾಲ್ಪನಿಕ ಊರಿನ ಕತೆಯ ಮೂಲಕ 1930-1975ರ ವರೆಗಿನ ಧಾರ್ಮಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಿತ್ಯಂತರಗಳು ಹಲವು ಅಂಶಗಳು ಕತೆಯ ರೂಪದಲ್ಲಿ ಓದುಗರೆದುರು ತೆರೆದುಕೊಳ್ಳುತ್ತಾ ಹೋಗುತ್ತದೆ. ಕತೆಯು ಪ್ರಾರಂಭವಾಗುವುದೇ ಪಾಳುಬಿದ್ದ ಶಿವಾಲಯವೊಂದು ಮತ್ತೆ ಊರಿನ ಜನರ ಕಣ್ಣಿಗೆ ಬೀಳುವ ಮೂಲಕ. ಈ ದೇವಸ್ಥಾನದ ಜೀರ್ಣೋದ್ಧಾರದ ಮೂಲಕ ಆ ಒಂದು ತಲೆಮಾರಿನ ಬದುಕಿನ ವಿವರಗಳು ಅನಾವರಣಗೊಳ್ಳುತ್ತವೆ. ಆ ಕಾಲದ ಜಮೀನ್ದಾರರು, ಗೇಣಿಯವರ ಸಂಬಂಧಗಳು, ಊರಿನ ಆಗುಹೋಗುಗಳಲ್ಲಿ ನಡೆಯುತ್ತಿದ್ದ ಒಳಸುಳಿಗಳು, ಒಂದು ಕಡೆಯಲ್ಲಿ ಎಂದೆಂದೂ ಬತ್ತದ ವಾತ್ಸಲ್ಯವನ್ನು ಮೆರೆಯುವ ಜನರು, ಮತ್ತೊಂದು ಕಡೆ ಎಲ್ಲವೂ ತನಗೆ ಸೇರಬೇಕೆಂಬ ಮನೋಭಿಲಾಷೆಯ ಕೃಪಣರು, ಇವುಗಳ ನಡುವೆ ಇದ್ದೂ ಇಲ್ಲದಂತಿರುವ ಕೆಲವು ಪಾತ್ರಗಳು ಒಂದು ಊರಿನ, ಸಮಾಜದ ಆಗುಹೋಗುಗಳ ಸಮಗ್ರ ಚಿತ್ರಣವನ್ನು ತೆರೆದಿಡುತ್ತದೆ.

ಹೀಗೆ ಮುಂದುವರೆಯುತ್ತಾ ಊರು ಆಧುನಿಕತೆಗೆ ತೆರೆದುಕೊಳ್ಳುತ್ತಾ, ಮಗ್ಗುಲು ಬದಲಾಯಿಸುತ್ತಿರುವಾಗ ನಡೆಯುವ ಅನೇಕ ಪ್ರಕ್ರಿಯೆಗಳ ವಿವರಗಳು ಬಹಳ ಸ್ಪಷ್ಟವಾಗಿ ಮಾತನಾಡುತ್ತವೆ. ಪ್ರಪಂಚಕ್ಕೆ ತೆರೆದುಕೊಳ್ಳುತ್ತಾ ಹೋದಂತೆ ಮುಗ್ಧತೆಯ ಜಾಗವನ್ನು ಆಸೆ ಮಹತ್ವಾಕಾಂಕ್ಷೆಗಳು ಆಕ್ರಮಿಸಿಕೊಳ್ಳುತ್ತವೆ. ಶತಾಯಗತಾಯ ತನ್ನ ಸ್ವಾರ್ಥವನ್ನು ಸಾಧಿಸುವ ಭರದಲ್ಲಿ ಕೇವಲ ತಾನು ಎಂಬುದು ಪ್ರಮುಖವಾಗಿ ಊರು, ಬೆಳೆದು ಬಂದ ಸಮಾಜ, ಸುತ್ತಲಿನ ಪ್ರಕೃತಿ, ಕೈ ಹಿಡಿದು ನಡೆಸಿದ ಹಿರಿಯರ ಸಂಸ್ಕೃತಿ ಎಲ್ಲವೂ ನೇಪಥ್ಯಕ್ಕೆ ಸರಿದುಕೊಳ್ಳುತ್ತವೆ. ಜನರಲ್ಲಿನ ಶ್ರದ್ಧೆ ಕಡಿಮೆಯಾಗಿ ಎಲ್ಲ ಆಯಕಟ್ಟಿನ ಜಾಗದಲ್ಲಿ ಧೂರ್ತರು ಸೇರಿಕೊಳ್ಳುತ್ತಾರೆ. ಸಮಾಜವು ಸಹ ಈ ಬದಲಾವಣೆಗಳನ್ನು ಹೆಚ್ಚಿನ ಪ್ರತಿರೋಧವಿಲ್ಲದೆ ಒಪ್ಪಿಕೊಳ್ಳುತ್ತದೆ. ಈ ಎಲ್ಲದರ ಚಿತ್ರಣ “ಹಸ್ತಾಂತರ” ಭಾಗದಲ್ಲಿ ಇದೆ.

ಕೊನೆಯದಾದ “ಅನಿಕೇತನ”ದಲ್ಲಿ ಮತ್ತೊಂದು ತರಹದ ಹುಡುಕಾಟ ಶುರುವಾಗುತ್ತದೆ. ಇಷ್ಟೊಂದು ತರಹದ ಬದಲಾವಣೆಗಳು, ಸ್ಥಿತ್ಯಂತರಗಳು ವ್ಯಕ್ತಿಯ ಮಟ್ಟದಲ್ಲಿ, ಉಂಟು ಮಾಡಿದ ತಲ್ಲಣಗಳು ಒಂದು ಕಡೆಯಾದರೆ, ಇಡೀ ಸಾಮಾಜಿಕ ಮಟ್ಟದಲ್ಲಿ ಈ ಬದಲಾವಣೆಗಳಿಗೆ ಹೇಗೆ ತೆರೆದುಕೊಳ್ಳುತ್ತಾ ಸಾಗಿತು ನಮ್ಮ ಸಮಾಜ, ಇದಕ್ಕೆ ಪೂರಕವಾಗಿ ಬಂದ ಅಂಶಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಈ ಬಗೆಯ ಸಮಗ್ರ ಪಲ್ಲಟಗಳಲ್ಲಿ ಬರೀ ಕೆಡುಕನ್ನು ಮಾತ್ರ ವೈಭವೀಕರಿಸದೇ ಇಂತಹಾ ಬದಲಾವಣೆಗಳಿಂದಾದಂತಹ ಅನುಕೂಲಗಳನ್ನು ಸಹ ಹೆಸರಿಸುತ್ತಾರೆ. ಉದಾಹರಣೆಗೆ ಭೂ ಸುಧಾರಣೆ ಕಾಯಿದೆಯ ಹೆಸರಿನಲ್ಲಿ ನಡೆದ ಅನ್ಯಾಯ ಅಕ್ರಮಗಳ ಜೊತೆಗೆ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಂಡವರ ಉಲ್ಲೇಖಗಳು ಸಹ ಬರುತ್ತವೆ.

ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ತುಳು ಭಾಷಿಕರ ಅನೇಕ ಹಬ್ಬಗಳ ಆಚರಣೆಗಳ ವಿಶೇಷತೆ, ತಿಂಡಿ ತಿನಿಸುಗಳ ವಿವರಗಳು, ಪ್ರಾಕೃತಿಕ ಸೌಂದರ್ಯ, ನಿಸರ್ಗದ ಸೊಬಗುಗಳ ವಿವರಗಳು, ಕೋಳಿ ಅಂಕ ಮಟ್ಕಾ ಮುಂತಾದ ಜೂಜಾಟಗಳ ವಿವರಗಳು, ಭೂತಾರಾಧನೆ ನಾಗಾರಾಧನೆಯ ವಿವರಗಳು, ಸಾಮಾಜಿಕ ಬದುಕಿನಲ್ಲಿ ಹಾಸುಹೊಕ್ಕಾಗಿ ಹೋದ ಅನೇಕ ಘಟನೆಗಳ ಜೊತೆಗೆ ಈಗಿನ ತಲೆಮಾರಿಗೆ ಪರಿಚಯವೇ ಇಲ್ಲದಿರುವ ಹಲವಾರು ಮಹನೀಯರ ಕತೆಗಳು ಬಂದು ಹೋಗುತ್ತವೆ. ಅವರ ವಿವರಗಳನ್ನು ಕೊನೆಯ ಅನುಬಂಧದಲ್ಲಿ ಕೊಡುವ ಮೂಲಕ ಲೇಖಕರು ಒಂದು ಸ್ತುತ್ಯಾರ್ಹ ಕೆಲಸವನ್ನು ಮಾಡಿದ್ದಾರೆ.

ಮೂಲತಃ ಕರಾವಳಿಯವನಾದ ನನಗೆ ಕೆಲವು ಭಾಗಗಳನ್ನು ಓದುವಾಗ ಎಷ್ಟು ಕನೆಕ್ಟ್ ಆಗುತ್ತಿತ್ತು ಎಂದರೆ ಅರೇ… ಇದು ನಮ್ಮೂರಿನ ಕತೆಯ ತರಹವೇ ಇದೆಯಲ್ಲ ಎಂದೆನಿಸುತ್ತಿತ್ತು. ಕರಾವಳಿಯ ಒಂದು ಕಾಲಘಟ್ಟದಲ್ಲಿನ ಬದುಕಿನ ಅನುಭವಗಳನ್ನು ಓದಿ ನಮ್ಮದಾಗಿಸಿಕೊಳ್ಳಲು ಇದು ಒಂದು ಒಳ್ಳೆಯ ಕೃತಿ. ಎಲ್ಲಿಯೂ ಸಿನಿಕತನವಿಲ್ಲದ ಬರವಣಿಗೆ ಕೃತಿಯ ಪ್ಲಸ್ ಪಾಯಿಂಟ್.

ನಮಸ್ಕಾರ,
ಅಮಿತ್ ಕಾಮತ್
Profile Image for ಸುಶಾಂತ ಕುರಂದವಾಡ.
477 reviews28 followers
February 14, 2024
ನಡುಕಣಿ ಎಂಬ ಹಳ್ಳಿಯಲ್ಲಿ ನಡೆಯುವ ಜನ-ಸಂಸ್ಕೃತಿಯ ಸ್ಥಿತ್ಯಂತರ ಈ ಕಾದಂಬರಿಯಲ್ಲಿ ಕಾಣಬಹುದು. ಮೂರು ಪುಸ್ತಕಗಳ ಸಂಪುಟ ಇರುವ ಈ ಸಂಪುಟ ಅಲ್ಲಲ್ಲಿ ಸ್ವಲ್ಪ ನಿಧಾನಗತಿಯಲ್ಲಿ ಸಾಗುತ್ತದೆ ಆದರೆ ಇಂದಿನ ಜನಜೀವನದಲ್ಲಿ ಸರ್ವೇಸಾಮಾನ್ಯವಾಗಿರುವ ಪರಿಸ್ಥಿತಿ ಈ ಕಾದಂಬರಿಯಲ್ಲಿದೆ. ಹಳ್ಳಿ ಜೀವನ ಬಿಟ್ಟು ಜನ ಪಟ್ಟಣ ಸೇರಿದರೆ ಆ ಊರಿನ ಗತಿಯೇನು?!
Displaying 1 - 4 of 4 reviews