ವಿಜಯನಗರ ಸಾಮ್ರಾಜ್ಯದ ಉಗಮದ ಪೂರ್ವಕಥೆಯಿಂದ ಶುರುವಾಗುವ ಈ ಸಂಪುಟ ಕೃಷ್ಣದೇವರಾಯನ ಪಟ್ಟಾಭಿಷೇಕದವರೆಗೂ ಮುಂದುವರೆದಿದೆ,. ಮುಂದಿನ ಸಂಪುಟದಲ್ಲಿ ಕೃಷ್ಣದೇವರಾಯನ ಆಳ್ವಿಕೆ ತದನಂತರ ಸಾಮ್ರಾಜ್ಯದ ಅವಸಾನ ಮತ್ತು ಅದರ ಪರಿಣಾಮಗಳವರೆಗೂ ಸಾಗಿ ಅಂತ್ಯವಾಗುತ್ತದೆ.
ನಾನು ಮೊದಲನೇ ಭಾರಿ ಈ ಕೃತಿಗಳನ್ನು ಓದಿದಾಗ ಬೆಕ್ಕಸ ಬೆರಗಾಗಿದ್ದೆ, ಆಗ ವಿಜಯನಗರ ಸಾಮ್ರಾಜ್ಯದ ಜ್ಞಾನವು ಅಷ್ಟಿರಲಿಲ್ಲ, ಆದರೆ ಈ ಓದಿಗೆ, ಈ ಸಂಪುಟ ಅಷ್ಟು ವೈಭವವಾಗಿ ಕಾಣಿಸುತ್ತಿಲ್ಲ, ಲೇಖಕರ ಭಾಷೆಯಲ್ಲಿನ ಉದ್ವೇಗ ಜೀರ್ಣಿಸಿಕೊಳ್ಳಲಾಗದಷ್ಟು ಹೆಚ್ಚಾಗಿದೆ, ವಿದ್ಯಾರಣ್ಯರ ಹೊಗಳಿಕೆಯೇ 200 ಪುಟಕ್ಕು ಮೀರಿ ಹೋಗಿವೆ. ಕೃತಕ ಸನ್ನಿವೇಶಗಳು ಓದುಗನ ಓದಿನ ಓಟಕ್ಕೆ ಅಡ್ಡಿಯಾಗುತ್ತವೆ, ಉದಾ : ಸಭೆಯಲ್ಲಿದ್ದ ಒಂದು ಹೆಣ್ಣು ಮಗಳು ಭುವನೇಶ್ವರಿಯ ಅವತಾರವಂತೆ ಎದ್ದು ಘರ್ಜಿಸಿ ಇವನು ನನ್ನ ಗಂಡನಲ್ಲ ಕಡುಪಾಪಿ ಎಂದು ಕತ್ತಿಯನ್ನು ಕಸಿದುಕೊಂಡು ಕೊಲ್ಲಲು ಮುಂದಾದಳು, ಭಟರು ತಡೆದರು, ಈ ಸನ್ನಿವೇಶವನ್ನು ನೋಡುತ್ತಿದ್ದ ಪ್ರಭುಗಳ ಕಣ್ಣಿನಲ್ಲೂ ನೀರಾಡಿದವು. ಈ ರೀತಿಯ ಕೃತಕ ಕಥೆಗಳು ಐತಿಹಾಸಿಕ ಕಾದಂಬರಿಗಳಲ್ಲಿ ಕಡಿಮೆ ಬಂದಷ್ಟು ಒಳಿತು, ಆದರೆ ಈ ರೀತಿಯ ಸನ್ನಿವೇಶಗಳಿಂದಲೇ ಈ ಸಂಪುಟ ತುಂಬಿ ಹೋಗಿದೆ. ನೈಜ ಇತಿಹಾಸದಿಂದ ತುಂಬಾ ದೂರ ಉಳಿಯುತ್ತದೆ. ಒಂದಷ್ಟು ಒಳ್ಳೆಯ ಕಾದಂಬರಿಗಳನ್ನು ಓದುವ ಇಚ್ಛೆ ಇದ್ದರೆ ಈ ಸಂಪುಟಗಳನ್ನು ಓದಬಹುದು, ವಿಜಯನಗರ ಇತಿಹಾಸವನ್ನು ತಿಳಿದುಕೊಳ್ಳುವ ಇಚ್ಛೆ ಇದ್ದಲ್ಲಿ ಇದನ್ನು ಓದದೇ ಇರುವುದು ಒಳ್ಳೆಯದು
ಒಂದು ಕಾಲದಲ್ಲಿ ಇಡೀ ಭಾರತದಲ್ಲಿಯೇ ಅತ್ಯಂತ ಪ್ರಭಾವಶಾಲಿಯಾಗಿದ್ದ ವಿಜಯನಗರ ಸಾಮ್ರಾಜ್ಯದ ಸಮಗ್ರ ಕತೆಯನ್ನು ಒಳಗೊಂಡ ಕಾದಂಬರಿ. ಮೊದಲನೆ ಸಂಪುಟದಲ್ಲಿ ವಿಜಯ ವಿದ್ಯಾರಣ್ಯ, ತಪೋಬಲ, ಪುಣ್ಯ ಪ್ರಭಾವ, ಪ್ರೌಢ ಪ್ರತಾಪಿ, ಮೋಹನ ಮುರಾರಿ ಎಂಬ ಐದು ಕಾದಂಬರಿಗಳನ್ನು ಒಳಗೊಂಡಿದೆ.
ವಿದ್ಯಾರಣ್ಯರ ತಪೋಬಲದಿಂದ, ಹಕ್ಕ-ಬುಕ್ಕರಿಂದ ಸ್ಥಾಪಿತವಾದ ವಿಜಯನಗರ ಸಾಮ್ರಾಜ್ಯದ ಕತೆ ವಿವಿಧ ಹಂತಗಳಲ್ಲಿ ಹೇಗೆ ಬೆಳವಣಿಗೆ ಕಂಡಿತು ಎಂಬುದನ್ನು ಅತ್ಯಂತ ವಿಸ್ತಾರವಾಗಿ ವರ್ಣಿಸಲಾಗಿದೆ. ಒಂದು ಪರಂಪರೆಗೆ ನಾಂದಿ ಹಾಡಲು ಎಷ್ಟೆಲ್ಲಾ ತ್ಯಾಗದ ಅಗತ್ಯ ಹಾಗೂ ಅಂತಃಕಲಹವನ್ನು ಹತ್ತಿಕ್ಕುವ ಅನಿವಾರ್ಯತೆ ಇದೆ ಎಂಬುದು ವಾಸ್ತವದ ಅಡಿಪಾಯದ ಮೇಲೆ ಕಲ್ಪನೆಯ ಮೂಸೆಯಲ್ಲಿ ಮೂಡಿಬಂದಿದೆ. ಸಂಗಮ ವಂಶದ ಹಕ್ಕ- ಬುಕ್ಕರಿಂದ ಆರಂಭವಾಗುವ ಕತೆ, ತುಳುವ ವಂಶದ ವೀರನರಸಿಂಹನ ಆಳ್ವಿಕೆಯ ಕಾಲದವರೆಗೆ, 5 ಕಾದಂಬರಿಗಳಾಗಿ ಈ ಸಂಪುಟದಲ್ಲಿ ದೊರೆಯುತ್ತದೆ.
ಇತಿಹಾಸವನ್ನು ಇಷ್ಟಪಡುವ ಕಾರಣ, ಐತಿಹಾಸಿಕ ಕಥಾಹಂದರ ಹೊಂದಿರುವ ವಿಜಯನಗರ ಸಾಮ್ರಾಜ್ಯ ಸಮಗ್ರ ಸಂಪುಟ ಬಹಳ ಇಷ್ಟವಾಯಿತು.