ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ತಮ್ಮ ಬರವಣಿಗೆಯಲ್ಲಿ ಜಾನಪದ ಸೊಗಡನ್ನು ಮೈದಾಳಿಸಿಕೊಂಡು ಬಂದಿರುವ ಚಂದ್ರಶೇಖರ ಕಂಬಾರರು ಹಲವು ಪ್ರತಿಭೆಗಳ ಸಂಗಮ. ಕವಿ, ನಾಟಕಕಾರ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಹಾಡುಗಾರ, ಅಧ್ಯಾಪಕ, ಜಾನಪದ ತಜ್ಞ ಹೀಗೆ ವಿವಿಧ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಸಮಗ್ರ ಸಾಹಿತ್ಯಕ್ಕೆ ೨೦೧೦ ರಲ್ಲಿ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಲಭಿಸಿತು.
ಚಕೋರಿ-೧೯೯೬ ರಲ್ಲಿ ಪ್ರಕಟವಾದ ಕೃತಿ. ಡಾ. ಚಂದ್ರಶೇಖರ ಕಂಬಾರ ಅವರು ಕನ್ನಡ ಸಾಹಿತ್ಯದಲ್ಲಿ ಜನಪದ, ಪೌರಾಣಿಕತೆ, ಆಧುನಿಕತೆಯ ಸಂಯೋಜನೆ ಎಂಬ ವಿಶಿಷ್ಟ ರೀತಿಯನ್ನು ರೂಪಿಸಿಕೊಂಡಿದ್ದಾರೆ. ಇವರ ಮೊದಲ ಕಾದಂಬರಿ ಕರಿಮಾಯಿಯ ಬರವಣಿಗೆ ಶೈಲಿ ಹಿಡಿಸಿತ್ತು. ನಂತರ ಇವರ ಹಲವು ಕೃತಿಗಳಲ್ಲಿ ದಪ್ಪನಾದ ಕಾದಂಬರಿ “ಶಿಖರ ಸೂರ್ಯ” ಓದುವುದಕ್ಕಿಂತ ಮೊದಲು ಈ ಕೃತಿ ಓದಿ ಮುಗಿಸಿದಾಗ ಇದರ ಪೌರಾಣಿಕ ಸಮನ್ವಯ, ಆರ್ಟಿಸ್ಟಿಕ್/ಕಲಾತ್ಮಕ ಶೈಲಿಯ ಬರವಣಿಗೆ ವಿಭಿನ್ನ ಓದಿನ ಅನುಭವ ಕೊಟ್ಟಿತು. ಸರಳ ಕತೆಯನ್ನು ಕಾವ್ಯಪರಂಪರೆಯಿಂದ ಕಲಾತ್ಮಕವಾಗಿ ರಚಿಸಿ ಓದುಗನಿಗೆ ಉಣಬಡಿಸುವ ಪ್ರತಿಭೆ ಕಂಬಾರರ ಅಮೋಘಶಕ್ತಿ ಮತ್ತು ದೊಡ್ಡ ಹೊಣೆಗಾರಿಕೆಯೂ ಹೌದು. ಈ ದೃಷ್ಟಿಯಿಂದ ಚಕೋರಿ ಕೂಡ ಅವರ ಸಾಹಿತ್ಯ ಲೋಕದಲ್ಲಿ ಅದ್ಭುತ ಒಂದು ಉದಾಹರಣೆ ಎಂದು ಪರಿಗಣಿಸಬಹುದು.
ಚಕೋರಿ ಕಾದಂಬರಿಯು ಮುಖ್ಯ ಪಾತ್ರ ಸಂಗೀತಪ್ರಿಯ ಯುವಕ ಚಂದಮುತ್ತ, ಪ್ರಾಣಕ್ಕಿಂತ ಪ್ರೀತಿಸುವ ತಾಯಿ ಮತ್ತು ಯಕ್ಷಿಯ ಪ್ರೇಮದ ಸುತ್ತ ನಡೆಯುತ್ತದೆ. ನಾದಪ್ರಿಯತೆಯ ಮನ್ನಣೆಯಿಂದ ದೊರಕುವ ವೈರುಧ್ಯ ಮತ್ತು ಸಂಘರ್ಷಗಳು, ಸೂರ್ಯ-ಚಂದ್ರ, ಪುರುಷ -ಸ್ತ್ರೀ, ವಿದ್ಯೆ-ಕಲೆ ಮುಂತಾದ ಸರಳ ಧ್ರುವೀಕರಣಗಳಿಗೆ ಸೀಮಿತವಾಗಿರದೆ ಲೇಖಕರು ಜನಪದ ಕಾವ್ಯ ಶೈಲಿಯಲ್ಲಿ ಸಾಂಸ್ಕೃತಿಕ ಮೌಲ್ಯವನ್ನು ಎತ್ತರದಲ್ಲಿ ವಿವರಿಸಿದ್ದಾರೆ.
ಕೃತಿಯಲ್ಲಿ ಕೀರ್ತಿಸುವುದು ಕಳೆದುಹೋದ ಜಗತ್ತಿನ ಹಳಸು ಮೌಲ್ಯಗಳನ್ನಲ್ಲ, ನಮ್ಮ ಮನೋವಿಜ್ಞಾನದ ಸಾಮೂಹಿಕ ಸುಪ್ತಚೇತನಕ್ಕೆ ಸಂವಾದಿಯಾಗುವ ಆಗಮ ಪರಂಪರೆಯಲ್ಲಿ ಅಡಗಿರುವ, ಇಂದು ನಮ್ಮ ಉಳಿವಿಗಾಗಿ ನಾವು ಮರುಸಾಕ್ಷಾತ್ಕರಿಸಿ ಕೊಳ್ಳಲೇಬೇಕಾಗಿರುವ ಇಹಲೋಕಪರವಾದ ಶುದ್ಧ ಹಾಗೂ ಮುಗ್ಧ ಆರಾಧನಾಭಾವವನ್ನು. ಆಧುನೀಕರಣಗೊಂಡಂತೆ ಮನುಷ್ಯನ ಅಂತರಂಗವು ಚಿತ್ರಪಟವಾಗಿ ಮಾನವೀಯ ಮೌಲ್ಯಗಳ ಕುಸಿತ ಹೆಚ್ಚೇ ಆಗುತ್ತದೆ, ನಿಷ್ಕಲ್ಮಶ ಹೃದಯವಂತಿಕೆಗೆ ಸಾಂಸ್ಕೃತಿಕ ಮೌಲ್ಯಗಳು ಅವಶ್ಯಕವೆನಿಸುತ್ತದೆ.
ಕೃತಿಯು ಪದ್ಯ-ಗದ್ಯ ರೂಪದಲ್ಲಿದೆ, ಎಲ್ಲರಿಗೂ ರುಚಿಸುವ ಕೃತಿಯೆನಿಸುವುದಿಲ್ಲ.