ಹುಲಿ ಪತ್ರಿಕೆ 2 ಈಗಲೇ ಶುರು ಮಾಡ್ತಿನಿ. ಆಮೇಲೆ ನನ್ನ ಅಭಿಪ್ರಾಯ:
_____
ನಾನು ಹುಲಿ ಪತ್ರಿಕೆ 1 ಮತ್ತು 2 ರನ್ನು ಓದಿದ್ದು ನನ್ನ, ವಾರದಲ್ಲಿ ಮೂರು ದಿನದ, ಬೆಂಗಳೂರಿನ ಮೆಟ್ರೋ ಪ್ರಯಾಣದಲ್ಲಿ. ಕೆಲಸಕ್ಕೆ ಹೋಗಿ ಬರುವ ದಾರಿಯಲ್ಲಿ. ಈ ಹಿಂದೆ ಅನುಷ್ ರವರ ಎರಡು ಪುಸ್ತಕ ಓದಿ ಮೆಚ್ಚಿ, ಅವರು ಕನ್ನಡದಲ್ಲಿ ಬರೆಯುವ ಮಾಡರ್ನ್ ಕಥೆಗಳು ಹಿಡಿಸಿ, ನನಗೆ ಮಜಾ ಕೊಡುವ ಪುಸ್ತಕ ಓದಬೇಕು ಎಂದೆನಿಸಿದಾಗ ಆನುಷ್ ರವರ ಪುಸ್ತಕ ಕೈಗೆತ್ತಿಕೊಳ್ಳುತ್ತೇನೆ.
ಮಾಡರ್ನ್ ಎಂದ ಮಾತ್ರಕ್ಕೆ ಇವರ ಬರವಣಿಗೆ ಏನೂ ಗ್ರಹಿಸಲಾಗದ modernism ತರ ಅಲ್ಲ.
ನಾನು ಜೀವನದಲ್ಲಿ ಪುಸ್ತಕ ಓದೋಕ್ಕೆ ಶುರು ಮಾಡಿದ್ದು ಸ್ವಲ್ಪ ಲೇಟಾಗಿ, ಅದರಲ್ಲೂ ಕನ್ನಡ ಶುರು ಮಾಡಿದ್ದು ಇನ್ನೂ ಲೇಟು. ಹಾಗೇ ಇಂಗ್ಲಿಷ್ ಸಾಹಿತ್ಯ ಹಾಗೂ ಸಿನೆಮಾಗಳ ಪರಿಣಾಮ ನನ್ನ ಅಚ್ಚುಮೆಚ್ಚಿನ ಮೇಲೆ ಕೊಂಚ ಹೆಚ್ಚೇ ಇದ್ದಾಗ, ಅನುಷ್ ರವರ ನೀನು ನಿನ್ನೊಳಗೆ ಖೈದಿ ಓದಿದಾಗ ನನಗೆ ನನ್ನ ಭಾಷೆಯಲ್ಲೂ ಈ ಅಚ್ಚುಮೆಚ್ಚಿಗೆ ಸೇರೋ ಕೃತಿಗಳು ಇದೆಯಲ್ಲಾ ಎಂದು ಸಂತಸವಾಯಿತು. ಇದನ್ನ ನಾನು ಮಾಡರ್ನ್ ಅಂದಿದೀನಿ. ಅದು ತಪ್ಪಾದರೆ ತಪ್ಪು, ಇರ್ಲಿ ಬಿಡಿ.
ನನಗೇಕೆ ಅನುಷ್ ರವರ ಬರವಣಿಗೆ ಅಷ್ಟು ಇಷ್ಟ ಎಂದರೆ ಅವರ ಬರವಣಿಗೆಯ ಶೈಲಿ ತುಂಬ visual. ಇವರ ಪುಸ್ತಕ ಓದಬೇಕಾದರೆ ನಡೆಯುತ್ತಿರುವ ದೃಶ್ಯಗಳು, ಪಾತ್ರಗಳು, ಅವರ ಸಂದರ್ಶನ ಎಲ್ಲ vividಆಗಿ ಕಣ್ಣಮುಂದೆ ಬರುತ್ತವೆ. ಒಂದು ಸಿನಿಮಾ ಸ್ಕ್ರಿಪ್ಟ್ ಓದೋತರನೇ ಭಾಸವಾಗುತ್ತದೆ.
ಹುಲಿ ಪತ್ರಿಕೆ ಬಗ್ಗೆ ಹೇಳೋದಾದ್ರೆ, ಎರಡೂ ಭಾಗಗಳೂ ಅತಿ ವೇಗವಾಗಿ ಚಲಿಸುತ್ತವೆ. ಸಿಂಪಲ್ ಆಗಿರುವ ಭಾಷೆ ಆದರೆ ಭಾಷೆಯ ಸೊಗಸಿಗೆ, ಅನುಷ್ ರವರು ಬಳಿಸುವ ಮೆಟಫಾರ್ಸ್ ಗೆ, ಕಥೆ ಕಟ್ಟುವ ರೀತಿಗೆ, ಕಥೆಯ structure ಗೆ ಏನು ಕಮ್ಮಿಯೆನಿಸುವುದಿಲ್ಲ.
ಎರಡನೇಯ ಭಾಗದ ಮುಂಚೆ ಅನುಶ್ ರವರು "ಪುಸ್ತಕ ಓದುವಾಗ ನಿಮ್ಮ ಕಿಟಕಿಯಾಚೆ ಮಳೆಯಾಗುತ್ತಿರಲೆಂದು ಆಶಿಸುತ್ತೇನೆ" ಎನ್ನುತ್ತಾರೆ. ನಾನು ಇದನ್ನು ಓದಿದ್ದು ಫೆಬ್ರುವರಿಯಲ್ಲಿ. ಬೆಂಗಳೂರು ಚಳಿಗಾಲ ಬಿಟ್ಟು ಧಗೆ ಧಗಿಸುವ ಬೇಸಿಗೆಗೆ ಕಾಲಿಡುವ ಸಮಯ. ಮಳೆ ಬಿಡಿ, ಆಗಸದಲ್ಲಿ ಮೋಡ ಕಂಡರೂ ಅದು ನಮ್ಮ ಪುಣ್ಯ. ಇಂಥ ಸಮಯದಲ್ಲಿ ಮೆಟ್ರೋನಲ್ಲಿ ಪ್ರಯಾಣಿಸಿ ಓದುತ್ತಿರುವ ನನಗೆ, ದಿವಸ 1 ರಿಂದ 1.5 ಘಂಟೆ ಬೆಂಗಳೂರಿನಲ್ಲಿ ಫೆಬ್ರುವರಿಯಲ್ಲಿ ಮಳೆ ಧರೆಗಿಳಿದಿದೆ ಎಂಬಂತೆಯೇ ಇತ್ತು.
ಕೇವಲ ಪತ್ತೇದಾರಿ ಕೃತಿ ಹಾಗು ಗೆಳೆತನದ ಕೃತಿಯಾಗದೆ, ಹುಲಿ ಪತ್ರಿಕೆ ನಮ್ಮ ಈ ಜಗತ್ತಿನ ಈಗಿನ ಪರಿಸ್ಥಿತಿ, ಅದನ್ನು ಕಂಡು ತೆಪ್ಪಗಿರೋ ಸುದ್ದಿ ಮಾಧ್ಯಮಗಳು, ದ್ವೇಷ ಸಾರಿಸೋ ಟಿವಿ ನ್ಯೂಸ್ ಚಾನೆಲ್ಗಳು, ಸುಳ್ಳು ಸುದ್ದಿ ಹಬ್ಬಿಸೋ ಸೋ ಕಾಲ್ಡ್ ಪತ್ರಕರ್ತರು ಹಾಗು ಪತ್ರಿಕೋದ್ಯಮದ ಇಂಪಾರ್ಟೆನ್ಸ್ ಬಗ್ಗೆ ಬರೆದಿರುವ ಸಂಗತಿಗಳು, ಈ ಪುಸ್ತಕವನ್ನು ಒಂದು ಲೆವೆಲ್ ಮೇಲಕ್ಕೆ ಏರಿಸುತ್ತದೆ.
ಕೊನೆಯಲ್ಲಿ ನಮ್ಮ ನಾಯಕ ಸಾರಂಗ ಸ್ವಲ್ಪ monologueಗಿಗೆ ಹೋದರು, ಅದುವರಿಗೂ ಒಳ್ಳೆ ಪತ್ರಕರ್ತರು ಯಾರು, ಹೇಗಿರಬೇಕು. ಪತ್ರಿಕೆ, ಸುದ್ಧಿಗಳ ಪರಿಣಾಮ ಸಮಾಜದಲ್ಲಿ ಎಷ್ಟು ಮುಖ್ಯ, ಇವೆಲ್ಲವನ್ನು ತುಂಬ ಅಂದವಾಗಿ ಚಿತ್ರಿಸಿದ್ದಾರೆ.
ಆದರೆ ಒಂದು ನನಗೆ ಕಿರಿಕಿರಿ ಅನ್ನಿಸಿದ್ದು ಪುಸ್ತಕದ ಪ್ರಮುಖ ೫ ಪಾತ್ರಗಳಲ್ಲಿ ಮೂರು ಪಾತ್ರಗಳ ಹೆಸರು ಸ ಇಂದ ಶುರುವಾಗುತ್ತದೆ. ಸಾರಂಗ ನಮ್ಮ ನಾಯಕ, ಸಂತು ಅವನ ಗೆಳೆಯ, ಸುಮಂತ ಕಾಡಿಗೆ ಓಡಿಹೋಗಿರುವ ಹುಡುಗ. ಪುಸ್ತಕದ ಮೊದಮೊದಲು ಈ ಮೂವರು ಪತ್ರಗಳನ್ನು ಬೇರೆಬೇರೆಯಾಗಿ ನೋಡಲು ಸ್ವಲ್ಪ ಕಷ್ಟಯೆನಿಸಿತು. ಆದರೆ ಮುಂದೆ ಹೋಗ್ತಾಹೋಗ್ತಾ ಏನು ತೊಂದರೆಯಾಗಲಿಲ್ಲ. ಇದು ನನ್ನ ಸ್ಕಿಲ್ ಇಶ್ಯೂ ಕೂಡ ಇರಬಹುದು.