ಈ ಸಾಲಿನ ಛಂದ ಪುಸ್ತಕ ಬಹುಮಾನ ಪ್ರಕಟವಾದಾಗ, ಈ ಕಥೆಗಾರ್ತಿಗಿಂತ ಇನ್ನೂ ಸಮರ್ಥ ಕಥೆಗಾರರು ಅಂತಿಮ ಪಟ್ಟಿಯಲ್ಲಿ ಇದ್ದರು ಎಂಬ ಅಭಿಪ್ರಾಯದಲ್ಲಿ ಕೊಂಚ ಬೇಸರದಲ್ಲೇ ಇದ್ದೆ. ಟಿ ಪಿ ಅಶೋಕರಂತ ವಿಮರ್ಶಕರು ತೀರ್ಪುಗಾರರು ಎಂದಾಗ ಬಹುಷಃ ನಾನೇ ತಪ್ಪಿರಬಹುದು ಎಂದು ಅನಿಸಿದ್ದು ಇದೆ. ಓದುವದಕ್ಕಿಂತ ಮೊದಲೇ ಈ ಅಭಿಪ್ರಾಯ ಬರುವುದು ತಪ್ಪು ಅನಿಸಿದ್ದು ಈ ಕಥಾ ಸಂಕಲನ ಓದಿ ಇಷ್ಟವಾದಾಗ.
ತಾಜತನದಿಂದ ಕೂಡಿದ ಕಥೆಗಳು, ಅತಿ ಭಾವುಕರಾಗದೆ ಸಂಕೀರ್ಣತೆ, ವೈವಿದ್ಯತೆ ತುಂಬಿದ ತುಮುಲಗಳನ್ನು ಕಥೆಗಳ ಚೌಕಟ್ಟಿನಲ್ಲಿ ಹೇಳಿ ಇಷ್ಟವಾಗುತ್ತಾರೆ ಲೇಖಕರು.
ವಿದೇಶ ನಾಗರೀಕತೆಯಲ್ಲಿ ನಮ್ಮತನವನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ಎಲ್ಲ ಕಥೆಗಳು ಸಾಗಿವೆ. ಇಲ್ಲಿ ಸುನೇತ್ರ ಪಬ್ಲಿಷರ್ಸ್ ಕಥೆಯೊಂದು ಬಿಟ್ಟು ಮಿಕ್ಕಿದ ಎಲ್ಲ ಕಥೆಗಳು ವಿದೇಶದಲ್ಲೇ ನಡೆಯುತ್ತದೆ. ಇಲ್ಲಿನ ಪಾತ್ರಗಳು ಏನೋ ಕಳೆದುಕೊಂಡು ಒದ್ದಾಡುತ್ತಿರುತ್ತವೆ. ಅದನ್ನು ಗೆದ್ದು ಹೊರಬಂದಂತೆ ಅನಿಸಿದರೂ, ಮತ್ಯಾವುದೋ ಕೊಂಡಿ ಕಳಚಿ ಕಥೆ ಕೊನೆಗೂಳ್ಳುತ್ತದೆ.
ತಂದೆ ಅನ್ನುವ ಕಥೆ ಕೊನೆಗೆ ಕೊಡುವ ನಿಗೂಢತೆ ತಬ್ಬಿಬ್ಬು ಮಾಡುತ್ತದೆ, ಸುನೇತ್ರ ಪಬ್ಲಿಷರ್ಸ್ ಕಥೆಯಂತೂ ಘಾಚರ್ ಘೋಚರ್ ನೀಳ್ಗತೆ ನೆನಪು ಮಾಡುತ್ತದೆ, ಕೊನೆಯ ಊಟ ಕಥೆ ಅಮೇರಿಕಾ ದೇಶದಂತ ದೇಶದಲ್ಲೂ ಇರುವ ಕಾನೂನು ಅವ್ಯವಸ್ಥೆ ತೆರೆದು ಕೊಡುತ್ತದೆ, ಪದವಿ ಪ್ರಧಾನ ಕಥೆ ಹಾಸ್ಯಪ್ರಧಾನವಾಗಿದ್ದರೂ ಗಹನ ವಿಚಾರವೊಂದು ಹೇಳುವುದು ಗಮನಿಸಬೇಕಾದ ವಿಷಯ, ಮಾಕೋನ ಏಕಾಂತ ಕಥೆ ನವಶೈಲಿಯಲ್ಲೇ ಮೂಡಿ ಬಂದಿದೆ.
ಭಾಷೆಯಂತೂ ಕೆಲವಡೆ ಹರಿತವಾಗಿದ್ದರೆ, ಕೆಲವು ಕಡೆ ಕಾವ್ಯಮಯವಾಗಿದೆ. ಕ್ಲಾರ ಎಂಬ ಗೆಳತಿ ಎಂಬ ಕಥೆಯಲ್ಲಿ ಅತ್ಯಾಚಾರಕ್ಕೆ ಒಳಗಾದ ಹೆಣ್ಣಿನ ಸ್ವಗತವೊಂದು ಇಲ್ಲಿ ಓದಿ, ಭಾಷೆಯ ಸೊಬಗಿನ ಕಿರು ಪರಿಚಯವಾಗುತ್ತದೆ "ಅಪರಿಚಿತ ವ್ಯಕ್ತಿಯೊಂದಿಗಿನ ಮಿಲನದ ಕಾವು ತಲೆಯಲ್ಲಿ ಮೂಡುವಾಗ ಮಾತ್ರ ರಮ್ಯವಾದುದು ಎಂದು ಅರಿವಾಗಲು ನಾನು ಈ ಭೀಕರ ಅನುಭವವನ್ನೇ ಹಾಯ್ದು ಬರಬೇಕಾಗಿತ್ತೇ?" Splendid.
ಸುನಂದಾ ಅವರ "ಪುಟ್ಟ ಪಾದ" ಕನ್ನಡ ಕಥಾ ಲೋಕದಲ್ಲಿ ದೊಡ್ಡ "ಗುರುತು" ಇಡುವ ದಟ್ಟ ಅನುಭವ ನೀಡಿದೆ. ಒಳಿತಾಗಲಿ,
ಓದಿ....❤️