||• ಅಘೋರಿಗಳ ನಡುವೆ •||
ಮಾನವ ಸಂಕುಲದಲ್ಲಿ ಪ್ರಾಯಶಃ ಉತ್ತರ ಸಿಗಲಾರದ ಪ್ರಶ್ನೆ ಆತ್ಮ ಮತ್ತು ಅತಿ ಮಾನುಷ ಶಕ್ತಿಗಳೆಡೆಯದ್ದು. ನಮ್ಮ ಕನ್ನಡದವರೇ ಆದ ಹುಲಿಕಲ್ ನಟರಾಜ್ ಅವರು ಅತಿಮಾನುಷ ಶಕ್ತಿಯೆಂದೇ ವರ್ಗೀಕೃತಗೊಂಡ ಎಷ್ಟೋ ಕಣ್ಕಟ್ಟು ವಿದ್ಯೆಗಳನ್ನು ಬಯಲಿಗೆಳೆಯುತ್ತಾ ಹೋದಂತೆ ಆಸಕ್ತಿ ಹೆಚ್ಚಾಗುತ್ತಾ ಹೋಗಿತ್ತು. ಅದೇ ಸಮಯದಲ್ಲಿ ಸಿಕ್ಕ ಪುಸ್ತಕ ಮಾಟಗಾತಿ. ಮಾಟಗಾತಿ ಕಾದಂಬರಿಯಲ್ಲಿ ಅಘೋರ ಜೀವನ ಮೊದಲ ಪರಿಚಯವಾಗಿತ್ತು. ಹೃದಯವೆಲ್ಲಾ ಭಯದಿಂದ ದ್ರವಿಸುವಂತಹ ಘೋರ ಸಿದ್ಧಿಗಳು, ಸಾಧನೆಗಳ ಕುರಿತು ಆ ಪುಸ್ತಕದಲ್ಲಿ ಪರಿಚಯಿಸಲಾಗಿತ್ತು. ಅದೆಲ್ಲವೂ ನಿಜವೇ ಎಂಬ ವಿಲಕ್ಷಣ ಸೆಳೆತವಿದ್ದಾಗ ಕೈಗೆ ಸಿಕ್ಕಿದ್ದು - ಅಘೋರಿಗಳ ನಡುವೆ.
ಸುಮಾರು ೪೩ ವರ್ಷಗಳ ಹಿಂದೆ ಗುಜರಾತಿ ಭಾಷೆಯಲ್ಲಿ ಪ್ರಕಟವಾದ "ಅಘೋರಿಯೋ ಸಾಥೆ ಪಾಂಚ್ ದಿವಸ್" ಎಂಬ ಪುಸ್ತಕದ ಕನ್ನಡದ ಅನುವಾದ "ಅಘೋರಿಗಳ ನಡುವೆ" ಪುಸ್ತಕ. ಅನುವಾದಿತವಾದರೂ ಸ್ವಂತ ಕೃತಿಯೇ ಎನ್ನುವಷ್ಟು ಪರಿಣಾಮಕಾರಿಯಾಗಿದೆ.
ಪುಸ್ತಕದ ವೃತ್ತಾಂತ:
ಗೆಳೆಯನೊಬ್ಬನಿಗಾಗಿ ಅಘೋರಿಗಳ ಮೂಲವನ್ನು ಹುಡುಕುತ್ತಾ ಹೋಗುವ ಲೇಖಕರಿಗೆ ಅವರ ಸಾಧನಾ ಶಿಬಿರ ನಡೆಯುವುದು ತಿಳಿಯುತ್ತದೆ. ತಮ್ಮ ಕಾಂಟ್ಯಾಕ್‌ಗಳನ್ನು ಬಳಸಿಕೊಂಡು ಅವರ ಚಲನ ವಲನಗಳನ್ನು ಗಮನಿಸಿ ಅದರ ಅನುಭವಗಳನ್ನು ಪ್ರಾಮಾಣಿಕವಾಗಿ ಬರೆಯಲಾಗಿದೆ.
ಲೇಖಕರು ಕಲ್ಪನಾಯೋಗಿಗಳಾಗಿರುವುದರಿಂದ ಆತ್ಮ ಮತ್ತು ಅತಿಮಾನುಷ ಶಕ್ತಿಗಳೆಡೆಗಿನ ಅವರ ನಿಲುವುಗಳು ಓದುಗರನ್ನು ತರ್ಕಶೀಲವಾಗಿಸುತ್ತವೆ. ಅಷ್ಟೇ ಅಲ್ಲದೇ ಪ್ರತಿಯೊಂದಕ್ಕೂ ವೈಜ್ಞಾನಿಕ ವಿವರಣೆ ಕೊಡುತ್ತಾ ನಾವು ಕೇಳಿದ್ದ ಅಥವಾ ನೋಡಿದ್ದ ಆತ್ಮ ಪರಮಾತ್ಮದ ನಂಬಿಕೆಗಳನ್ನು ಈ ಪುಸ್ತಕ ಬುಡಮೇಲು ಮಾಡುತ್ತದೆ. ಒಂದು ಹಂತದಲ್ಲಿ ಲೇಖಕರು ವಾದವೂ ಕೂಡ ಸರಿ ಎನಿಸುತ್ತದೆ. ಆತ್ಮವೆಂಬುದು ಇದೆಯಾ? ಗೊತ್ತಿಲ್ಲ!!! ಚೈತನ್ಯವಂತೂ ಇದೆ. ಅದುವೇ ಸತ್ಯ, ಸತ್ಯವೇ ಸನಾತನ ಎಂಬ ಸಿದ್ಧಾಂತಗಳನ್ನು ಮಂಡಿಸುತ್ತಾ ಮೈ ಮುಳ್ಳಾಗುವ ಅನುಭವವನ್ನು ಪುಸ್ತಕ ನೀಡಿತು.
ಅಷ್ಟಲ್ಲದೇ, ಅಘೋರಿಗಳ ಹಠ ಸಾಧನೆ, ಖೇಚರಿ ವಿದ್ಯೆ, ಪೂತಲಿಕಾ ಪ್ರಯೋಗ, ಆತ್ಮ ಆವಾಹನೆಗಳ ಕುರಿತಾದ ವಿಷಯಗಳು ಕೂಡ ಮೈ ನವಿರೇಳಿಸುತ್ತವೆ. ಆತ್ಮ ಪರಮಾತ್ಮ ಚಂದ್ರಲೋಕ ಎಂಬ ಎಷ್ಟೋ ವಾದಗಳಲ್ಲಿ ಹುರುಳಿಲ್ಲವೇನೋ ಎನಿಸಿ ಕಲ್ಪನಾ ಯೋಗದ "ಕಣ್ಣಿಗೆ ಕಾಣಿಸುವುದಷ್ಟೆ ಸತ್ಯ" ಎಂಬುದನ್ನು ಪ್ರತಿಪಾದಿಸಬೇಕು ಎಂದನಿಸಿಬಿಟ್ಟದ್ದು ಸುಳ್ಳಲ್ಲ!!!
ಆತ್ಮ, ಪರಮಾತ್ಮ, ಜಡ, ಜೀವ, ಚೇತನ ಎಂಬ ಹಲವಾರು ಪ್ರಶ್ನೆಗಳನ್ನು ಭುಗಿಲೇಳುವಂತೆ ಮಾಡಿದ ಪುಸ್ತಕವನ್ನು ಕನ್ನಡೀಕರಿಸಿದ್ದಕ್ಕೆ ನಾಗರಾಜರಾಯರಿಗೂ ಧನ್ಯವಾದಗಳು!!
ನೂರಾ ಎಂಭತ್ನಾಲ್ಕು ಪುಟಗಳ ರೋಮಾಂಚಕಾರಿ ಅನುಭವಕ್ಕಾಗಿ ಈ ಪುಸ್ತಕ ಓದಿ. ಸುರೇಶ್ ಸೋಮಪುರ ಅವರು ಗೆಳೆಯನಿಗಾಗಿ ಅಘೋರಿಗಳ ಸಂಘ ಮಾಡಿದ್ದಾದರೂ ಏಕೆ ಎಂಬ ಕುತೂಹಲವೇನಾದರೂ ಮೂಡಿದರೆ ಉತ್ತರ ಪುಸ್ತಕದಲ್ಲಿದೆ.
ಶುಭವಾಗಲಿ...
ಅಭಿ...