ಶ್ರೀ ಟಿ ಕೆ ರಾಮರಾವ್ ಕನ್ನಡ ಪತ್ತೇದಾರಿ ಸಾಹಿತ್ಯ ಪ್ರಕಾರದ ಅತಿ ದೊಡ್ಡ ಹೆಸರು. ಬರೆಯುತ್ತಿದ್ದಾಗ ಅತಿ ಬೇಡಿಕೆಯಲ್ಲಿದ್ದ, ಬೇಡಿಕೆ ಪೂರೈಸಲು ಸಾಧ್ಯವಾಗದಿದ್ದ, ಅತಿದೊಡ್ಡ ಓದುಗರ ಬಳಗವನ್ನು ಗಳಿಸಿಕೊಂಡಿದ್ದ ಅಪರೂಪದ ಸಾಧನಾಶೀಲರು ಶ್ರೀಯುತ ಟಿ.ಕೆ ರಾಮರಾವ್. ಕನ್ನಡ ಪುಸ್ತಕಗಳನ್ನು ಪ್ರಕಟಿಸಲು ಪುಸ್ತಕ ಪ್ರಕಾಶಕರು ಹಿಂದೇಟು ಹಾಕುತ್ತಿದ್ದ ಕಾಲದಲ್ಲಿ ಕನ್ನಡ ಪುಸ್ತಕ ಪ್ರಕಾಶಕರು ಇವರ ಮನೆಗೆ ಎಡತಾಕುತ್ತಿದ್ದರು. ಅಡ್ವಾನ್ಸ್ ನೀಡಿ ಸದ್ಯ ಬರೆಯುತ್ತಿರುವ ಹಸ್ತಪ್ರತಿಯನ್ನು ನಮಗೇ ಕೊಡಿ ಎಂದು ದುಂಬಾಲು ಬೀಳುತ್ತಿದ್ದರು ಹಾಗೂ ಅವರು ಕೇಳಿದಷ್ಟು ಗೌರವಧನ ನೀಡುತ್ತಿದ್ದರು. ಇದು ಹೇಗೆ ಸಾಧ್ಯವಾಯಿತು ಎಂದು ಆಲೋಚಿಸಿದರೆ ಎರಡು ಮೂರು ಅಂಶಗಳು ಮುಂದೆ ಕಾಣಿಸುತ್ತದೆ. ಸೊಗಸಾದ ಶೈಲಿಯ ಬರವಣಿಗೆ ,ಆತ್ಮೀಯ ಸರಳ ಚೌಕಟ್ಟು ,ಮೊದಲಿಂದ ಕೊನೆಯವರೆಗೂ ಕುತೂಹಲವನ್ನು ಉಳಿಸಿಕೊಂಡು ಹೋಗುವುದು , ಪರಿಪೂರ್ಣವಾಗಿ ಸ್ಥಳೀಯ ಮೆರುಗು, ಸ್ಥಳೀಯ ಭಾಷೆ ,ಸುಪರಿಚಿತ ಸ್ಥಳನಾಮಗಳ ಬಳಕೆ ,ಮತ್ತೆ ಖಚಿತವಾದ ತಾಂತ್ರಿಕ ಮತ್ತು ಕಾನೂನು ವಿವರಗಳು. ಇವರ ‘ಬಂಗಾರದ ಮನುಷ್ಯ’, ‘ಮಣ್ಣಿನ ದೋಣಿ’, ‘ಹಿಮಪಾತ’ , ‘ಸೀಳು ನಕ್ಷತ್ರ’ ಸೇರಿದಂತೆ ಇನ್ನೂ ಕೆಲವು ಕಾದಂಬರಿಗಳು ಸಿನಿಮಾ ರೂಪದಲ್ಲಿ ಮನೆ ಮನೆಯನ್ನು ಮುಟ್ಟಿದೆ. ಇವರ ‘ಬೆದರು ಬೊಂಬೆ’ ಮತ್ತು ‘ಡೊಂಕು ಮರ’ ಎಂಬ ಕಾದಂಬರಿಯ ಪರಿಚಯ ಇಲ್ಲಿ ಮಾಡಿದ್ದೇನೆ.
ಬೆದರು ಬೊಂಬೆ
ಬೆಳ್ಳಂಬೆಳಗ್ಗೆ ನಡೆಯುವ ಕೊಲೆಯ ಬೆನ್ನು ಹತ್ತಿ, ಸಿಕ್ಕ ಸುಳಿವುಗಳನ್ನು ವಿವಿಧ ಆಯಾಮಗಳಿಂದ ಪರಾಮರ್ಶಿಸಿ ಕೊಲೆಗಾರನನ್ನು ಪತ್ತೆ ಹಚ್ಚುವ ಈ ಕಥೆ ಒಂದೊಳ್ಳೆ ಸಿನೆಮಾ ನೋಡಿದ ಅನುಭವ ನೀಡುತ್ತದೆ. ಕೊಲೆಯಾದ ತೇಜಪ್ಪನ ವ್ಯವಹಾರಗಳು, ಆತನ ತೋಟದಲ್ಲಿ ನಿಲ್ಲಿಸಲಾದ 'ಬೆದರು ಬೊಂಬೆ', ಅದರ ಬಟ್ಟೆಯಲ್ಲಿ ಅಂಟಿದ ರಕ್ತ, ತೋಟದಲ್ಲಿ ಸಿಕ್ಕಿದ ಒಂಟಿ ಕಾಲಿನ ಹೆಜ್ಜೆ ಗುರುತು, ಸೊಪ್ಪು ಕಡಿಯುವ ಕತ್ತಿಯ ಮೇಲಿನ ಫಿಂಗರ್ ಪ್ರಿಂಟ್ಸ್, ಕೆಂಪಮ್ಮನ ರೂಮಿನಲ್ಲಿ ಸಿಕ್ಕಿದ ನಿದ್ದೆ ಮಾತ್ರೆಗಳು... ಹೀಗೆ ಹಲವು ಸುಳಿವುಗಳು ಕ್ಲೈಮ್ಯಾಕ್ಸ್ ತನಕ ಕೊಲೆಗಾರನ ಜಾಡನ್ನು ಬಿಟ್ಟು ಕೊಡದೆ ಕಾಡುತ್ತದೆ. ಕಥೆಯನ್ನು dual path ನಲ್ಲಿ ಹೆಣೆಯುವಲ್ಲಿ ಲೇಖಕರ ಚತುರತೆ ಅಮೋಘವಾಗಿದೆ.
ಡೊಂಕು ಮರ
ಹಳೆಯ ದೀಪಕ್ ಮಹಲ್ ಎಂಬ ಹೋಟೆಲು, ಅಲ್ಲಿ ಕೊಲೆಯಾದ ಘಟ ವಾದಕ,ಅದೇ ಕೋಣೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಮಲ್ಲಿಕಾ, ಸ್ವಿಚ್ ಬೋರ್ಡ್ ನಲ್ಲಿ ಹೆಪ್ಪು ಗಟ್ಟಿದ್ದ ರಕ್ತದ ಕಲೆ, ಮಲ್ಲಿಕಾಳ ಕುತ್ತಿಗೆಯಲ್ಲಿದ್ದ ಗಾಯ,ರೂಮಿನಲ್ಲಿ ಸಿಕ್ಕಿದ ತರಕಾರಿ ಹೆಚ್ಚುವ ಕತ್ತಿ,ನಗರದಲ್ಲಿ ಬೆಳೆದಿದ್ದ ಅಫೀಮು ದಂಧೆಕೋರರ ಜಾಲ, ರಿಯಲ್ ಎಸ್ಟೇಟ್ ಉದ್ಯಮ, ಕುಪ್ಪು ಸ್ವಾಮಿ ಎಂಬ ಚಾಲಾಕಿ ಅಡ್ವೊಕೇಟ್, ದೀಪಕ್ ಮಹಲ್ ಗೆ ಅಂಟಿಕೊಂಡು ಬೆಳೆದಿರುವ ಡೊಂಕು ತೆಂಗಿನ ಮರ.. ಹೀಗೆ ಕಥೆಯಲ್ಲಿ ಥ್ರಿಲ್ಲಿಂಗ್ ಅನುಭವ ನೀಡುವ ಹಲವು ಅಂಶಗಳಿವೆ. ಕುಪ್ಪುಸ್ವಾಮಿಯ ಪತ್ತೆದಾರಿಕೆ ಭೇಷ್ ಎನಿಸಿಕೊಳ್ಳುತ್ತದೆ.
ನೀವು ಓದಿ, ರಾಮರಾಯರ ಪತ್ತೇದಾರಿ ಲೋಕದಲ್ಲಿ ಕಳೆದು ಹೋಗಿ :)