ನೂರಾರು ವರ್ಷ ಬದುಕಿ, ಧರ್ಮದ ನಡೆಯಲ್ಲಿ ಬದುಕಿದ ಭೀಷ್ಮನ ಮಾತುಗಳು ನಮ್ಮ ಬದುಕಿಗೂ ಅನ್ವಯ ಎಂದು ತೋರಿಸುವ ಯಶಸ್ವಿ ಪ್ರಯತ್ನ 'ಭೀಷ್ಮ ಹೇಳಿದ ಮ್ಯಾನೇಜ್ಮೆಂಟ್ ಕಥೆಗಳು'. ನಮ್ಮ ಹಿರಿಯರ ಮಹತ್ತು ಅದು - ಕಥೆಗಳ ಮೂಲಕ ಪಾಠವನ್ನು ಕಲಿಯುತ್ತಿದ್ದರು ಹಾಗೂ ಕಲಿಸುತ್ತಿದ್ದರು. ಅವರ ಗ್ರಹಿಕೆ ಅಂತದ್ದು. ಯೋಗವಿದ್ಯೆಯನ್ನು ತಾನು ಎಂದೋ ಕೊಟ್ಟಿದ್ದೆ ಆದರೆ ಕಾಲಕ್ರಮೇಣ ಅದು ನಷ್ಟವಾಯಿತು ಎಂದು ಭಗವದ್ಗೀತೆಯಲ್ಲಿ ಕೃಷ್ಣ ಹೇಳುವ ಹಾಗೆ ಈ ಗ್ರಹಿಕೆ ಎಂಬ ಸಾಮರ್ಥ್ಯವು ನಮ್ಮಲ್ಲಿ ಈಗ ಕುಂದಿದೆ. ಇಂತಹ ಪುಸ್ತಕಗಳ ಮೂಲಕ ಅದರ ಜಾಗೃತಿ ಸಾಧ್ಯ. ಒಂದು ಕಥೆಯನ್ನು ಕೇವಲ ಕಥೆಯಾಗಿ ನೋಡದೆ ಅದನ್ನು ಬದುಕಿಗೆ ಅನ್ವಯ ಮಾಡಿಕೊಳ್ಳಲು ಪ್ರತಿ ಕಥೆಯ ನಂತರ ಬರುವ ಬರಹ ದಿಕ್ಸೂಚಿ. ಆ ಕಥೆಯ ಸಾರವನ್ನು ಈ ಬರಹಗಳು ನಮ್ಮ ಜೀವನಕ್ಕೆ ಲೇಪಿಸುತ್ತವೆ.
ಆಧ್ಯಾತ್ಮ ತತ್ವಗಳ ಅಡಿಪಾಯದ ಮೇಲೆ ಲೌಕಿಕ ಜಗತ್ತನ್ನು ತೆರೆದಿಟ್ಟ ಪುಸ್ತಕವಿದು. ಒಂದು ಸಂಸ್ಥೆ, ಒಬ್ಬ ಉದ್ಯೋಗಿ, ಒಬ್ಬ ಮೇಲಧಿಕಾರಿ, ಒಬ್ಬ ಸಮರ್ಥ, ಒಂದು ಸಮಾಜ ಹೇಗಿರಬೇಕು ಎಂಬ ಕುರಿತು ಒಂದು ಅಧ್ಯಯನವೇ ಇದರಲ್ಲಿದೆ. ಯಶಸ್ಸನ್ನು ಸಾಧಿಸಲು ಒಂದೊಂದೇ ಮೆಟ್ಟಿಲನ್ನು ಹತ್ತಬೇಕು, ಅದಕ್ಕೆ ಬೇಕಾದ ಮನೋಭೂಮಿಕೆಯನ್ನು ರಚಿಸಿ, ಕೈ ಹಿಡಿದು ನಡೆಸಲು ಇಲ್ಲಿನ ಕಥೆಗಳು ಸಜ್ಜಾಗಿವೆ.
ಭೀಷ್ಮನ 108 ಮಾತುಗಳು ಪ್ರತಿದಿನ ಓದಿ ಮನನ ಮಾಡಿಕೊಳ್ಳುವ ಸರಕು. ನನಗೆ ಬಹಳ ಇಷ್ಟವಾಗಿದ್ದು ಕೊನೆಯಲ್ಲಿ ಬರುವ ನಾರದನ ಕುರಿತಾಗಿ ಕೃಷ್ಣ ಹೇಳುವ ಮಾತು. ನಾರದನ ಮೂಲಕ ಒಬ್ಬ ಮನುಷ್ಯನ ಜೀವನ ಹೇಗೆ ರೂಪುಗೊಳ್ಳಬೇಕು, ಹೇಗಿರಬೇಕು ಎಂದು ದಿಟ್ಟವಾಗಿ ಇಲ್ಲಿ ತೋರಿಸಲಾಗಿದೆ.
ಇದ್ದದ್ದು ಇಲ್ಲವಾಗುತ್ತದೆ, ಇಲ್ಲದಿರುವುದು ಸಿಗುತ್ತದೆ, ಪದವಿ ಬರುತ್ತದೆ, ಬಂದಷ್ಟೇ ಅನಾಯಾಸವಾಗಿ ಕಳೆದುಹೋಗುತ್ತದೆ, ಎಲ್ಲವೂ ಕಾಲದ ಇಚ್ಛೆ ಎಂದು ಮತ್ತೆ ಮತ್ತೆ ಬೇರೆ ಬೇರೆ ರೂಪದಲ್ಲಿ ಹೇಳುವ ಮೂಲಕ ಇಲ್ಲಿ ಆಧ್ಯಾತ್ಮವನ್ನು ಸ್ಥಾಪಿಸಲಾಗಿದೆ. ಕಥೆಯ ಮೂಲಕ ಕಿವಿಮಾತನ್ನು ಹೇಳಿ, ಮಾತಿನ ಮೂಲಕ ಜೀವನದ ಕತೆಯನ್ನು ಉತ್ತಮಗೊಳಿಸಿ, ಕೊನೆಗೆ ಮಾತುಕತೆ ಭಾಗದಲ್ಲಿ ಅಧ್ಯಾತ್ಮದ ಕಡೆ ತಿರುಗಿ ಈ ಎಲ್ಲ ಲೌಕಿಕಗಳ ಅಂತ್ಯ ಆಧ್ಯಾತ್ಮ ಎಂದು ತೋರಿಸಿದೆ. ಕರ್ಮಯೋಗದ ಮೂಲಕ ಯೋಗಸಾಧನೆ ಎಂಬ ನಿಲುವನ್ನು ಸೂಚ್ಯವಾಗಿ ಹೇಳುವ ಮೂಲಕ ಪುಸ್ತಕ ಮೂಲದಿಕ್ಕಿನೆಡೆ ನಮ್ಮನ್ನು ಕೀಲಿಸುತ್ತದೆ.
ಬೇರೆ ಬೇರೆ ಕಾಲದಲ್ಲಿ ಬರುವ ಹಲವು ಸನ್ನಿವೇಶಗಳಿಗೆ, ಪ್ರಶ್ನೆಗಳಿಗೆ ಇಲ್ಲಿ ಉತ್ತರ ಹುಡುಕಬಹುದು. ಅಂದಿನ ಭೀಷ್ಮನ ಕಿವಿಮಾತು ಇಂದಿಗೂ ಪ್ರಸ್ತುತ ಎಂದು ಎತ್ತಿ ತೋರಿಸಿದೆ ಈ ಪುಸ್ತಕ.