ನಿಜ ಹೇಳಬೇಕಾದರೆ ನಾನು ಇದನ್ನು ಓದಲು ಶುರುಮಾಡುವಾಗ ಹಿಂಜರಿಕೆಯಿಂದಲೇ ಶುರುಮಾಡಿದೆ. ಇವರ ಹಿಂದಿನ ಕಾದಂಬರಿ ' ಪ್ರತಿವ್ಯೂಹ' ಯಂಡಮೂರಿ ಕಾದಂಬರಿಗಳ ಪಡಿಯಚ್ಚಿನ ಹಾಗೆ ನನಗೆ ಭಾಸವಾಗಿತ್ತು. ಈ ಕಾದಂಬರಿಯೂ ರವಿ ಬೆಳಗೆರೆಯವರ ' ಮಾಟಗಾತಿ' ' ಸರ್ಪ ಸಂಬಂಧ' ಧಾಟಿಯಲ್ಲಿ ಶುರುವಾದಾಗ ಓದಬೇಕಾ ಎಂದುಕೊಂಡೆ. ಆದರೆ ಅದಾದ ಮೇಲೆ ಕಥೆಯೇ ಓದಿಸಿಕೊಂಡು ಹೋಯಿತು. ಅಘೋರಿಗಳು, ಎಐ, ಮಾಂತ್ರಿಕರು ಹೀಗೆ ಅಧ್ಯಾಯಗಳ ಮೇಲೆ ಅಧ್ಯಾಯ ನಿಮ್ಮನ್ನು ಪಟ್ಟು ಹಿಡಿದು ಕೂರಿಸಿಕೊಂಡು ಓದಿಸಿಕೊಂಡು ಹೋಗುತ್ತದೆ. ಯಂಡಮೂರಿ ,ರವಿ ಬೆಳಗೆರೆ ಛಾಯೆ ಕಂಡುಬಂದರೂ ಅವರ ಮಟ್ಟದ ರೋಚಕತೆ ಹಿಡಿದಿಡುವಲ್ಲಿ ಕಾದಂಬರಿ ಯಶಸ್ವಿಯಾಗಿದೆ. ಇಷ್ಟು ಒಳ್ಳೆಯ ಕಥೆಯನ್ನು ನಾನು ಖಂಡಿತಾ ನಿರೀಕ್ಷೆ ಮಾಡಿರಲಿಲ್ಲ. ಓದಿದ ಮೇಲೆ ಅವರಿಗೆ ಮೆಸೇಜ್ ಮಾಡಿ ನೀವು ಸ್ವತಂತ್ರ ಶೈಲಿಯಲ್ಲಿ ಬರೆದರೆ ತುಂಬಾ ಒಳ್ಳೆಯ ಲೇಖಕರಾಗುವ ಶಕ್ತಿ ಇದೆ ಎಂದು ಹಾರೈಸಿದೆ. ಈ ಕಾದಂಬರಿ 'ಮಂಗಳ'ದಲ್ಲಿ ಧಾರಾವಾಹಿಯಾಗಿ ಕೂಡ ಬಂದಿತ್ತು. ಒಳ್ಳೆ ಮಜಾ ಕೊಟ್ಟ ಓದು ಇದು.
ನನಗೆ ಈ ಪುಸ್ತಕ ಓದುವಾಗ ನೆನಪಾಗಿದ್ದು ಯಂಡಮೂರಿ ಅವರ ತುಳಸಿ, ತುಲಸಿದಳ ಹಾಗೂ ರವಿಬೆಳಗೆರೆ ಅವರ ಮಾಟಗಾತಿ. ಅದರಲ್ಲಿ ಈ ಕಾಸ್ಮೊರ, ಕುಟ್ಟಿ ಶೈತಾನ್ ಇವುಗಳನ್ನು ಇಲ್ಲಿ ಸಹ ಕಾಣಬಹುದು. ಆದರೆ ಓದುತ್ತಾ ನಮ್ಮನ್ನು ಇನ್ನೊಂದು ಕಡೆಗೆ ಎಳೆದುಕೊಂಡು ಹೋಗುತ್ತದೆ ಈ ಪುಸ್ತಕ. ಮೊದಮೊದಲು ಮಳೆ ನಕ್ಷತ್ರ ದೆವ್ವ ಭೂತ ಮಾಟ ಮಂತ್ರದ ಬಗ್ಗೆ ಶುರುವಾಗುವ ಕಥೆ ಬಂದು ನಿಲ್ಲುವುದು ವಿಜ್ಞಾನದ ಕಡೆಗೆ. ಓದುಗ ಎಲ್ಲಿಯೂ ಸಹ ಪುಸ್ತಕವನ್ನು ತೆಗೆದು ಇಡದಂತೆ ಮಾಡುವ ಈ ಪುಸ್ತಕ ಓದಿ ಮುಗಿಸಿದ ಮೇಲೂ ಸಹ ಈ ಉತ್ತರಫಲ್ಗುಣಿ, ಮೃಗಶಿರಾ, ತರಂಗಿಣಿ, ಧನಿಷ್ಟ ಶತಬಿಷರ ಸುತ್ತಲೇ ಸುತ್ತುತ್ತ ಇರುತ್ತದೆ. ಅದರಲ್ಲೂ ಸಹ ಲೇಖಕರ ಶಂಬಾಲ ಒಮ್ಮೆ ಭೂಲೋಕ ಬಿಟ್ಟು ಹೊರಬರುವಂತೆ ಮಾಡುತ್ತದೆ. ಇನ್ನು ಸಾಮಾನ್ಯ ಪಾತ್ರದಂತೆ ಬರುವ ಬಚ್ಚಮ್ಮ ಕೊನೆಯಲ್ಲಿ ಮನಸಲ್ಲಿ ಉಳಿಯುತ್ತಾಳೆ.
ಯಾವುದಾದರೂ ದೃಶ್ಯ ನಮ್ಮ ಮುಂದೆ ನಡೆದಲ್ಲಿ ಅದನ್ನು ನಮ್ಮಲ್ಲಿ ಎರಡು ರೀತಿ ನೋಡುವ ಮಂದಿ ಇದ್ದೇವೆ. ಒಂದು ಪ್ರತ್ಯಕ್ಷವಾಗಿ ನೋಡುವವರು, ಇನ್ನೊಂದು ಪ್ರಮಾಣಿಸಿ ನೋಡುವವರು. ಎರಡು ವರ್ಗಕ್ಕೂ ತನ್ನದೇ ಆದ ತೂಕ ಇದೆ ಮತ್ತು ನಂಬುಗೆಯ ವ್ಯಾಪ್ತಿಯಿದೆ. ಬಿಲ್ವಪತ್ರೆಯ ಕಥೆಯು ಹಾಗೇ, ನಿಮ್ಮನ್ನು ತಕ್ಕಡಿಯ ಎರಡೂ ತಟ್ಟೆಗಳಲ್ಲಿ ಕೂರಿಸುತ್ತದೆ, ಒಮ್ಮೆ ಒಂದು ವರ್ಗದೆಡೆ ವಾಲಿದರೆ ಇನ್ನೊಮ್ಮೆ ಇನ್ನೊಂದು ವರ್ಗದೆಡೆಗೆ ವಾಲುತ್ತದೆ. ಕೊನೆಗೊಂದು ತಹಬಂಧಿಗೆ ತಂದು ನಿಲ್ಲಿಸಿ ಹೀಗೂ ಇರಬಹುದಾ ಎಂಬೊಂದು ಯೋಚನಾಲಹರಿಗೆ ನಯವಾಗಿ ದೂಡುತ್ತದೆ. ಮೊದಲು ಹತ್ತು ಹದಿನೈದು ಪುಟಗಳಲ್ಲಿ ಮತ್ತೆ "ವಾಮಾಚಾರದ ಕಥೆಯಾ" ಎಂದು ಮೂಗು ಮುರಿದೆ, ನಂತರ ಓದಿದಾಗ ನನ್ನ ಅಲ್ಪಮಟ್ಟಿನ ಓದಿಗೆ ಈ ಹಿಂದೆ ಎಂದೂ ಸಿಗದ ಲೋಕವೊಂದಕ್ಕೆ ಈ ಪುಸ್ತಕ ಕರೆದೊಯ್ಯಿತು!!!
ಫ್ಯಾಂಟಸಿ ಕಾದಂಬರಿಗಳಲ್ಲಿ ಅತಿಮಾನುಷ ಪಾತ್ರಗಳನ್ನು ರೂಪಿಸುವುದು ಸಾಮಾನ್ಯ. ಫ್ಯಾಂಟಸಿ ಆದ್ದರಿಂದ ಓದುಗರಾಗಿ ನಾವು ಆ ಉತ್ಪ್ರೇಕ್ಷೆಗಳನ್ನು ಒಪ್ಪಿಕೊಳ್ಳುತ್ತೇವೆ ಸಹ. ಆದರೆ, ಈ ಪ್ರಕಾರದಲ್ಲಿ ಒಂದು ಪಾತ್ರದ ಸೃಷ್ಟಿಗೆ ಲೇಖಕರು ನಡೆಸುವ ಅಧ್ಯಯನ ಬಹಳಷ್ಟು ಮತ್ತು ಪಾತ್ರ ಆಭಾಸವಾಗದಂತೆ ಪಾತ್ರದ ಸುತ್ತಲೂ ಕಥೆ ಹೆಣೆಯುವುದು ಚಾಲೆಂಜಿಂಗ್. ಆ ಎರಡೂ ವಿಷಯಗಳಿಗೆ ನ್ಯಾಯ ಒದಗಿಸುವಲ್ಲಿ ಲೇಖಕರಾದ ಗೌತಮ್ ಬೆಂಗಳೆರವರು ಯಶಸ್ವಿಯಾಗಿದ್ದಾರೆ.
ಈಗಾಗಲೇ ವಾಮಾಚಾರ ಮತ್ತು ಅಘೋರಿಗಳ ಕುರಿತು ಕೆಲವು ಪುಸ್ತಕಗಳನ್ನು ಓದಿಕೊಂಡಿದ್ದೇನೆ. ಸುರೇಶ್ ಸೋಮಪುರರವರ ಅಘೋರಿಗಳ ನಡುವೆ ಪುಸ್ತಕವು ಅವರೆಡೆಗೆ ಸೆಕೆಂಡ್ ಥಾಟ್‌ಗಳನ್ನು ಹುಟ್ಟಿಸಿದ್ದು ಸುಳ್ಳಲ್ಲ. ಹಾಗಾಗಿ ಬಿಲ್ವಪತ್ರೆ ಪುಸ್ತಕದಲ್ಲಿ ಮೊದಲು ಅಘೋರಿಗಳ ಉಲ್ಲೇಖವಾದಾಗ ಎರಡು ಮನಸ್ಸು ಶುರುವಾಯಿತು. ಮತ್ತೆ ಅವರ ಪೂಜೆ, ಪುನಸ್ಕಾರ, ವಾಮವಿದ್ಯೆಗಳನ್ನೇ ಬರೆದಿದ್ದಾರೆನೋ ಎಂದುಕೊಂಡೆ. ಆದರೆ ಪುಸ್ತಕದ ಒಡಲಿನಲ್ಲಿ ಬೇರೆಯದೇ ಕಥೆಯಿದೆ. ಎರಡು ಧ್ರುವಗಳ ಮಿಲನವಾಗುತ್ತದೆ. ಮತ್ತೊಂದು ಧ್ರುವ ಯಾವುದು? ಉತ್ತರ ಪುಸ್ತಕದಲ್ಲಿದೆ.
ಈ ಮೇಲೆ ಹೇಳಿದಂತೆ ಲೇಖಕರು ಈ ಪುಸ್ತಕದ ಪಾತ್ರಗಳನ್ನು ಮನಬಂದಂತೆ ಚಿತ್ರಿಸಿಲ್ಲ. ಅಧ್ಯಯಿಸಿ ಪಾತ್ರ ಸೃಷ್ಟಿ ಮಾಡಿದ್ದಲ್ಲದೇ ಪುಸ್ತಕದಲ್ಲಿ ಒಂದಷ್ಟು ಹುಬ್ಬೇರಿಸುವಂತಹ ವಿಷಯಗಳನ್ನು ಹೇಳಿದ್ದಾರೆ. ಹಿಪ್ನೊಟಿಸಂನಂತಹ ಅತಿ ಗಹನ ವಸ್ತುವನ್ನು ತಮ್ಮ ಕಥೆಯೊಳಗೆ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಮೆದುಳು ಎಂಬುದು ಎಂತಹ ಬಲಿಷ್ಠ ಯಂತ್ರವೆಂಬುದನ್ನು ಹೇಳಲು ಬಳಸಿಕೊಂಡಿರುವ ಅಮೆರಿಕಾದ ಉದಾಹರಣೆಯಂತೂ ಸ್ಪೈನ್ ಚಿಲ್ಲಿಂಗ್!!!
ಇದೆಲ್ಲವೂ ಕಥೆಯ ಮುಖ್ಯ ಭಾಗದೊಳಗೆ ಸೇರಿದ್ದರೆ, ಕಥಾಹಂದರದಲ್ಲಿ ಹುಟ್ಟಿಕೊಳ್ಳುವ ರೊಮ್ಯಾನ್ಸ್ ಓದುಗರಿಗೆ ತಾಜಾಭಾವವನ್ನು ಕೊಡುತ್ತದೆ. ಈ ಕಾದಂಬರಿಯಲ್ಲಿ ಬರುವ ಪಾತ್ರವೊಂದು ಹೇಳುವ ಕಥೆ ಮತ್ತು ಬರೆದ ಪತ್ರವೊಂದು ಈಗಲೂ ನನ್ನೊಳಗೆ ಹಸಿರು ಹಸಿರು. ಉಳಿದಂತೆ ಎಲ್ಲಾ ಪುಸ್ತಕಗಳಲ್ಲಿರುವಂತೆ ಗೆಳೆಯ ಗೆಳತಿ ತಂದೆ ತಾಯಿ ಸಂಬಂಧಗಳು ಕಥೆಯ ಓಘಕ್ಕೆ ಪುಷ್ಟಿ ನೀಡಿವೆ. ಒಟ್ಟಿನಲ್ಲಿ ಪುಸ್ತಕ ಹಿಡಿದು ಕೂತರೆ ತನ್ನಂತೆ ತಾನೇ ಓದಿಸಿಕೊಳ್ಳುವ ಶಕ್ತಿಯಿರುವ ಪುಸ್ತಕವೆನ್ನುವುದು ಸತ್ಯ!!!
ಬಿಡುವು ಮಾಡಿಕೊಂಡು ಓದಿ. "ದಿಸ್ ಬುಕ್ ಇಸ್ ಸಮ್‌ಥಿಂಗ್ ಹಾಂಟಿಗ್ಲಿ ಬ್ಯೂಟಿಫುಲ್"