'ತಳುಕು ರಾಮಸ್ವಾಮಯ್ಯ ಸುಬ್ಬರಾಯ' ಅವರು ಕನ್ನಡದ ಮೊದಲ ಪ್ರಾಧ್ಯಾಪಕರಾದ ತಳುಕಿನ ವೆಂಕಣ್ಣಯ್ಯನವರ ತಮ್ಮನವರ ಮಗ. ಇವರು ಹುಟ್ಟಿದ್ದು ೧೯೧೯ರಲ್ಲಿ. ಅವರು ಬರೆದ 'ನಾಗರಹಾವು' ಕಾದಂಬರಿಯಲ್ಲಿನ ರಾಮಾಚಾರಿಯ ಪಾತ್ರದಂತೆಯೇ ಅವರು ಛಲದ ಮನುಷ್ಯರಾಗಿದ್ದವರು. ಬಹಳ ಕಷ್ಟದಲ್ಲಿ ಜೀವಿಸಿದವರು. ಇವರ ಕೃತಿಗಳಾದ ಕಂಬನಿಯ ಕುಯಿಲು, ರಕ್ತರಾತ್ರಿ, ಮತ್ತು ತಿರುಗುಬಾಣ, ಚಿತ್ರದುರ್ಗದ ಇತಿಹಾಸವನ್ನು ಬಹಳ ರಸವತ್ತಾಗಿ ಚಿತ್ರಿಸಿವೆ ಎಂದು ವಿಮರ್ಶಕರ ಅಭಿಪ್ರಾಯ. ಏಪ್ರಿಲ್ ೧೦, ೧೯೮೪ರಲ್ಲಿ ಹೃದಯಾಘಾತವಾಗಿ ಬೆಂಗಳೂರಿನ ರಾಜಾಜಿನಗರದಲ್ಲಿರುವ 'ವರಲಕ್ಷ್ಮಿ ನರ್ಸಿಂಗ್ ಹೋಂ'ನಲ್ಲಿ ನಿಧನ ಹೊಂದಿದರು.
ತರಾಸು ಅವರ ಪಂಜರದ ಪಕ್ಷಿ ಕಾದಂಬರಿಯ ಸಾಲಿಗೆ ಹೋಲುವ ಕಾದಂಬರಿಯಿದು. ಮೂರು ಪಾತ್ರಗಳ ಮನದಲ್ಲಿ ಮೂಡುವ ಯೋಚನೆ ಮತ್ತು ಭಾವನೆಗಳ ಮಹಾಪೂರವನ್ನು ತರಾಸು ಅವರು ಈ ಕಾದಂಬರಿಯಲ್ಲಿ ಇಳಿಸಿದ್ದಾರೆ. ಮೂಲದಲ್ಲಿ ಕಥೆಯು ಅಪೂರ್ಣವಾಗಿದೆಯಾದರೂ ಕಾದಂಬರಿಯಲ್ಲಿ ಭಾವನೆಗಳು ಮತ್ತು ಆಲೋಚನಾ ತರಂಗಗಳಿಗೆ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಒಬ್ಬ ದುಡ್ಡಿನ ಅಮಲಿನಲ್ಲಿ ಬೇಕಾಗಿದ್ದನ್ನು ಪಡೆಯುವ ಹುನ್ನಾರದಲ್ಲಿರುವವ, ಇನ್ನೊಬ್ಬ ಅವನ ಕೆಳಗಿದ್ದುಕೊಂಡು ಅವನ ಬಯಕೆಗಳನ್ನು ಕೇವಲ ನೋಡಿಕೊಂಡು ಸುಮ್ಮನಿರುವವ. ಇನ್ನೊಂದು ತಾನು ಸಮಾಜದಲ್ಲಿ ಹೆಣ್ಣಾಗಿ, ಮನೆಯಲ್ಲಿ ಗಂಡಾಗಿ ದುಡಿದು, ಸಂತೋಷವನ್ನು ಕಾಣದ ಕಷ್ಟಜೀವಿ. ಮೊದಲೆರಡು ಪಾತ್ರಗಳು ದುಡ್ಡಿನ ದೃಷ್ಟಿಕೋನದಿಂದ ಸುಖಜೀವಿಗಳು ಆದರೆ ಆಸೆಯೆಂಬ ಪರ್ವತದ ತುದಿಯನ್ನು ಎಂದೂ ಹತ್ತಿ ಮುಗಿಸರು. ಇನ್ನು ಇತ್ತ ಹೆಣ್ಣುಜೀವ ಆಸೆಯನ್ನು ಮುಚ್ಚಿಟ್ಟುಕೊಂಡು ಬಾಳುತ್ತಿದ್ದರೂ ಧನದ ಅಭಾವ. ಹೀಗೆ ಮಾನವ ತನ್ನ ಜೀವನದಲ್ಲಿ ಎಷ್ಟು ಸುಖವಾಗಿ ಇರಲು ಪ್ರಯತ್ನಿಸಿದರೂ ಯಾವುದೊ ಒಂದು ರೂಪದಲ್ಲಿ ದುಃಖದ ಛಾಯೆ ಕೆಲವು ಬಾರಿ ಅವನ ಮೇಲೆ ಮೂಡುತ್ತದೆ. ಅದೇ ಜೀವನವಲ್ಲವೇ? ಈ ಚಿತ್ರಣವನ್ನು ತರಾಸು ಅವರು ಈ ಕಾದಂಬರಿಯ ಮುಖಾಂತರ ತಿಳಿಸಲು ಪ್ರಯತ್ನಿಸಿದ್ದಾರೆ. ಕನಕಲಿಂಗಂ ಒಬ್ಬ ಸಾಧಾರಣ ಮನುಷ್ಯ ಹಾಗೆಯೇ ಒಬ್ಬ ಸ್ವಯಂಘೋಷಿತ ಕವಿಯೂ ಕೂಡ! ಅವನಿಗೆ ಸಿನಿಮಾದ ಗೀಳು, ಅದಕ್ಕೆ ಹಾಡು ಚಿತ್ರಕಥೆ ಬರೆಯುವುದು ಇತ್ಯಾದಿ ಬರೆಯುವ ಹುಚ್ಚು. ಆದರೆ ಎಂದೂ ಅದರಲ್ಲಿ ಅವನು ಸಫಲವಾದವನಲ್ಲ. ಅವರ ಇವರ ಕಾಲುಹಿಡಿದು ಹೇಗೋ ಜೀವನವನ್ನು ನಡೆಸುತ್ತಿದ್ದನು. ನಾಯಿಡು ಆಗರ್ಭ ಶ್ರೀಮಂತ, ಚಲನಚಿತ್ರದ ನಿರ್ಮಾಪಕನಾಗಿ ಬಂದವನು. ಅದಕ್ಕಾಗಿ ಕನಕಲಿಂಗಂ ನಾಯಿಡು ಜೊತೆಗೆ ಇರಲಾರಂಭಿಸಿರುತ್ತಾನೆ. ನಾಯಿಡು ಬಹಳ ಚೈನಿ ಮನುಷ್ಯ. ಸದಾ ವಿಲಾಸಿ ಜೀವನವನ್ನು ನಡೆಸುತ್ತಿದ್ದವ, ಸದಾ ಹೆಣ್ಣಿನ ಸಂಗವನ್ನು ಬಯಸುವ ಕಾಮಾಂಧ. ಅವನ ಹದ್ದಿನ ಕಣ್ಣು ಯಾವುದಾದರ ಹುಡುಗಿಯ ಮೇಲೆ ಬಿದ್ದರೆ ಅವಳನ್ನು ಪಡೆಯಲೇಬೇಕು ಎಂಬ ಹಠಮಾರಿ ಗುಣ ಅವನದು. ಅದಕ್ಕೆ ಸಹಾಯಕ್ಕೆ ಬರುತ್ತಿದ್ದವ ಕನಕಲಿಂಗಂ. ಆ ಹುಡುಗಿಯ ಪತ್ತೆ ಹಚ್ಚಿ, ನಾಯಿಡುಗೆ ಅವಳು ದಕ್ಕುವಂತೆ ಮಾಡುತ್ತಿದ್ದ. ಒಂದು ದಿನ ನಾಯಿದು ಊರಿನಲ್ಲಿರದಾಗ ಕನಕಲಿಂಗಂ ಮನೆಯ ಚಾವಣಿಯ ಮೇಲೆ ಸಿಗರೇಟ್ ಸೇದುತ್ತಾ ಬಿಸಲಿಗೆ ನಿಂತಿರುತ್ತಾನೆ. ಅಲ್ಲಿ ಒಂದು ಹುಡುಗಿ ಬಸ್ಸಿಗಾಗಿ ಕಾಯುತ್ತ ನಿಂತಿರುತ್ತಾಳೆ. ಹಾಗೆಯೇ ಸಂಜೆಯೂ ನಿಂತಿರುವಾಗ ಸರಿಯಾಗಿ ೫ ಗಂಟೆಗೆ ಮತ್ತೆ ಬಸ್ಸಿನಿಂದ ಇಳಿಯುವುದನ್ನು ನೋಡುತ್ತಾನೆ. ಅವಳ ನಾಜೂಕುತನ, ತಲೆ ಕೆಳಗೆ ಹಾಕಿಕೊಂಡು ನಡೆಯುವ ನಾಚಿಕೆಯ ಸ್ವಭಾವ ಯಾಕೋ ಕನಕಲಿಂಗಂನಿಗೆ ತುಂಬಾ ಇಷ್ಟವಾಯಿತು. ಅವಳ ಮೇಲೆ ನಿಧಾನವಾಗಿ ಅನುರಕ್ತನಾದ. ಕೆಲದಿನಗಳ ನಂತರ ನಾಯಿಡುವಿನ ಆಗಮನವಾಯಿತು. ಅವನು ಕನಕಲಿಂಗಂ ಬೆಳಿಗ್ಗೆ-ಸಾಯಂಕಾಲ ಛಾವಣಿಯಲ್ಲಿ ನೋಡುತ್ತಿದ್ದ ಆ ಹುಡುಗಿಯ ಬಗ್ಗೆ ತಿಳಿದುಕೊಂಡ. ಆ ಹುಡುಗಿಯನ್ನು ಪಡೆಯಬೇಕೆಂಬ ದಾಹ ಅವನಲ್ಲಿ ಮೂಡಿತು, ತನ್ನ ಆಸೆಯನ್ನು ಕನಕಲಿಂಗಂ ಮುಂದೆ ವ್ಯಕ್ತಪಡಿಸಿದ. ಕನಕಲಿಂಗಂಗೆ ಸ್ವಲ್ಪ ದುಃಖವಾದರೂ ಹುಡುಗಿಯನ್ನು ದೊರಕಿಸಿಕೊಡುವುದು ತನ್ನ ಕರ್ಮ. ಸುಮ್ಮನೆ ಅವಳ ಮೇಲೆ ಒಲವು ತೋರಿಸಿದೆನೆಂದು ತಾನೇ ಹಳಿದುಕೊಂಡನು. ಸಮೀಪದ ಅಂಗಡಿಯಲ್ಲಿ ಆ ಹುಡುಗಿಯ ಬಗ್ಗೆ ವಿಚಾರಿಸಿದನು. ಆ ಹುಡುಗಿಯ ಹೆಸರು ಕೋಮಲ. ಮನೆಯಲ್ಲಿ ಬಡತನ. ತಂದೆಗೆ ಖಾಯಿಲೆಯಾಗಿ ಕೆಲಸವನ್ನು ಬಿಟ್ಟರು. ಕೋಮಲ ದುಡಿದು ಮನೆಗೆ ಬಂದು ಹಾಕಬೇಕು. ಅವಳದು ಮದುವೆಯ ವಯಸ್ಸು ಆದರೂ ಮನೆಯಲ್ಲಿ ಮದುವೆಯಾಗಲು ಬಿಡದೆ ಅವಳನ್ನು ಹೀಗೆ ದುಡಿಸುತ್ತಿರುವುದು ವಿಪರ್ಯಾಸ. ಅವಳು ಕೆಲಸ ಮಾಡುತ್ತಿದ್ದಲ್ಲಿಯ ಮಾಲೀಕ ವಾರಿಯರ್ ಮದುವೆಯ ಪ್ರಸ್ತಾಪ ಆಕೆಯ ಮುಂದೆ ಇಟ್ಟಿದ್ದ. ಆದರೆ ಅವಳ ತಂದೆಯ ನಿಯಮ ಕೇವಲ ಅವಳನ್ನಷ್ಟೇ ಅಲ್ಲ ಅವಳ ಸಂಸಾರವನ್ನೂ ಸಾಕಬೇಕು ಎಂಬುದು. ಅದಕ್ಕಾಗಿ ಅವಳಿಗೆ ಸೂಕ್ತವಾದ ವರವೇ ಸಿಕ್ಕಿರಲಿಲ್ಲ. ವಾರಿಯರ್ ಕೂಡ ಬೇಸತ್ತು ಅವಳನ್ನು ಕೈಬಿಟ್ಟಿದ್ದ. ಅವಳು ಬೇರೆಯ ಕಡೆ ನೌಕರಿ ಹಿಡಿದಾಗ ಅಲ್ಲಿಯ ಒಬ್ಬ ಸಹುದ್ಯೋಗಿಯ ಅಸಭ್ಯ ವರ್ತನೆ ಅವಳನ್ನು ಇನ್ನೂ ಮಂಕು ಮಾಡಿತ್ತು. ಮನೆಯಲ್ಲಿ ಅದರಿಂದ ತಂದೆಗೆ ಅವಳ ಮೇಲೆ ಬಹಳ ಕೋಪ ಆದರೂ ತನ್ನ ಕುಟುಂಬ ಎಂದು ಅವಳು ಸಲಹುತ್ತಿದ್ದಾದರೂ ಅವಳಿಗೆ ತಲೆ ಕೆಡುತ್ತಿತ್ತು. ಇವಳು ಪ್ರತಿದಿನ ನಾಯಿಡು ಮನೆಯ ಮುಂದೆ ನಡೆದುಕೊಂಡು ಹೋಗುವಾಗ ಅವನ ಕಣ್ಣು ಇವಳ ಮೇಲೆಯೇ ನೆಟ್ಟಿರುತ್ತಿತ್ತು. ಇವಳು ಕಣ್ಣೆತ್ತಿ ಕೂಡ ಅವನತ್ತ ನೋಡುತ್ತಿರಲಿಲ್ಲ. ಆದರೆ ಮನೆಯಲ್ಲಿ ಕಲಹವಾದ ಮರುದಿನ ಅವಳಿಗೆ ಏನೋ ಮನದಲ್ಲಿ ತಾನು ಬೇರೆಯವನೊಬ್ಬನ ಸಖವನ್ನು ಬಯಸಿತು. ಮದುವೆಯಾಗದೇ ತನ್ನ ಹಲವು ಆಸೆಗಳನ್ನು ಕೈಚೆಲ್ಲಿ ಕುಳಿತವಳಿಗೆ ಒಂದು ಸಲವಾದರೂ ತಾನು ಸಂತೋಷದಿಂದ ಇರಬಯಸುತ್ತೇನೆ ಅಂತ ಅನಿಸುವುದು ಸಹಜ. ಹಾಗೆಯೇ ಹಿಂದಿನ ಸಹುದ್ಯೋಗಿ ಚಂದ್ರನ್ ಮಾಡಿದ್ದ ಮೋಸಕ್ಕೆ ಬಲಿಯಾದರೂ ಒಂದು ಸಲ ಅವನಿಂದ ಸುಖಪಡೆಯಬಹುದಾಗಿತ್ತು ಎಂಬ ಕೊರಗು ಅವಳನ್ನು ಕಾಡಿತು. ಆದರೆ ಈಗ ದೂರದಿಂದ ನಾಯಿಡುವನ್ನು ನೋಡಿದಾಗ ಆ ಆಸೆ ಮತ್ತೆ ಚಿಗುರೊಡೆಯಿತು. ಅವನ ಆ ಸಿರಿವಂತನ ಕಳೆಗೆ ಅವಳು ಮಾರಿಹೋಗಿದ್ದಳು. ಒಂದು ದಿನ ನಾಯಿಡು ಹತ್ತಿರ ಬಂದಳು ಕೂಡ. ಅವನಲ್ಲಿ ತನ್ನ ಬಯಕೆಯನ್ನು ಹೇಳಿದಾಗ ಅವನಿಗೆ ಏನು ಹೇಳಬೇಕೆಂದು ತಿಳಿಯಲಾಗುವುದಿಲ್ಲ. ಅದು ಅವನಿಗೆ ಅವನ ಗಂಡಸತನವನ್ನು ಪ್ರಶ್ನಿಸಿದಂತಿತ್ತು. ಈಗಾಗಲೇ ಮೊಮ್ಮಗನಿರುವ ನಾಯಿಡುವಿಗೆ ತಾನು ಮಾಡುತ್ತಿರುವ ಈ ಕೆಲಸ ಅಸಹ್ಯಕರವಾಗಿದೆಯೆಂದು ಒಂದು ಸಲ ಅನಿಸಿತು. ಜೀವನದಾದ್ಯಂತ ಯಾವುದೇ ಹೆಣ್ಣಿಗೆ ತಲೆ ಬಾಗದೆ ಅವರನ್ನು ಅನುಭವಿಸಿದ್ದ ನಾಯಿಡು ಕೋಮಲಳ ಆ ಬಯಕೆ ಕೇಳಿ ಕಂಗಾಲಾಗಿದ್ದ. ಆ ಬಯಕೆ ಏನು ಎಂಬುದನ್ನು ನೀವು ಪುಸ್ತಕ ಓದಿ ತಿಳಿಯಿರಿ.