Jump to ratings and reviews
Rate this book

ನಿಷೇಧಕೊಳಪಟ್ಟ ಒಂದು ನೋಟು

Rate this book

86 pages, Paperback

About the author

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
2 (100%)
4 stars
0 (0%)
3 stars
0 (0%)
2 stars
0 (0%)
1 star
0 (0%)
Displaying 1 - 2 of 2 reviews
Profile Image for Spoorthi  Chandrashekhar.
58 reviews16 followers
April 29, 2023
ಕಳೆದ ೫-೬ ತಿಂಗಳು, ಬದುಕಿನ ಬಹು ದೊಡ್ಡದಾದ ಹಾಗೂ ಅಸಹಾಯಕ ಸ್ಥಿತಿಯಲ್ಲಿ ಇದ್ದಿದ್ದರಿಂದ ಎಲ್ಲಾ ಚಟುವಟಿಕೆಗಳಿಂದ ಒಂದು ದೊಡ್ಡ ವಿರಾಮವನ್ನು ತೆಗೆದುಕೊಳ್ಳುವ ಪರಿಸ್ಥಿತಿ ಎದುರಾಯಿತು.
ಮತ್ತೆ ಓದಲೇ ಬಾರದು, ಒದಲ್ಲಾ, ಬರೆಯಲ್ಲಾ ಎಂಬ ಹಟಕ್ಕೆ ಬಿದ್ದು ಬೇಸರದಿಂದ ಕೂತಿರುವಾಗ ಸಹೋದ್ಯೋಗಿ ಗೆಳೆಯ ನನಗೆ ಒಂದು ರೀತಿಯ ಸಕಾರಾತ್ಮಕ ಹುರುಪನ್ನು ಕೊಟ್ಟ, ಆಗ ನಾನು ಆತನಿಗೆ ಈ ಪುಸ್ತಕವನ್ನು ಕೊಡಿಸು ಎಂದು ಹಠ ಹಿಡಿದು ಕೂತೆ.

ಸುಮಾರು ಒಂದು ವರ್ಷದಿಂದ ಓದಲೇ ಬೇಕು ಅಂತ ಯೋಚಿಸುತ್ತಿದ್ದ ಪುಸ್ತಕವನ್ನು ಇಂದು ಓದಿ ಮುಗಿಸಿ, ಮತ್ತೆ ನನ್ನ ಹವ್ಯಾಸಕ್ಕೆ ಮರಳಿದಾಗ ಅದೇನೋ ಹುರುಪು, ಹೊಸ ಉತ್ಸಾಹ ಹಾಗೂ ಸಂತಸ.‌
ಕವನ ಹುಟ್ಟೋದು ಬಡತನದಲ್ಲಿ, ಕವಿತೆಯಾಗೋದು ನೋವುಗಳಲ್ಲಿ, ಅಕ್ಷರಗಳು ಕೂಡುವುದು ಕತ್ತಲೆಯಲ್ಲಿ, ಅದು ಕ್ರಾಂತಿಯಾಗುವುದು ಹಸಿವಿನಲ್ಲಿ, ಹಾಗೆ ಯಾರಿಗೆ ಓದುವ ಹಸಿವು ಇರುತ್ತೋ ಅವರಿಗೆ ಮಾತ್ರ ಮೃಷ್ಟಾನ್ನ ಭೋಜನದಂತೆ ಹೊಟ್ಟೆ ತುಂಬಿಸುವ ಕವನ ಸಂಕಲನವೇ ಈ ಪುಸ್ತಕ.
ಒಂದೊಂದು ಕವನವು ಎಷ್ಟೊಂದು ವಿಭಿನ್ನವಾಗಿದೆ ಎಂದರೆ ಈ ಕಾಲಮಾನಕ್ಕೆ ಇದೊಂದು ಅತ್ಯುತ್ತಮ ಕವನ ಸಂಕಲನ ಎಂದರೆ ಬಹುಶಃ ತಪ್ಪಾಗಲಿಕ್ಕಿಲ್ಲ. ಪ್ರತಿಯೊಂದು ಕವನ ಓದಿದ ಕೂಡಲೇ ಐದು ನಿಮಿಷ ವಿರಾಮ ತೆಗೆದುಕೊಂಡು ಓದಿದ್ದು ಉಂಟು ಏಕೆಂದರೆ ಅಷ್ಟು ಗಾಢವಾಗಿ ಕಟೀಲ್ ಅವರು ಪ್ರತಿ ಕವನವನ್ನು ಪೋಣಿಸಿ ಹೆಣೆದು ಸಿಂಗಾರ ಮಾಡಿದ್ದಾರೆ. ವಿಭಿನ್ನವಾದ ವಿಷಯಗಳ ಕುರಿತು ಕವನಗಳನ್ನು ಬರೆದಿದ್ದಾರೆ ಆದರೆ ಎಲ್ಲಾ ಕವನಗಳು ಒಬ್ಬ ಓದುಗನನ್ನು ಸಾರ್ಥಕ ಪಡಿಸಿ, ಸಂತಸವನ್ನು ನೀಡುತ್ತದೆ.
ಅಬ್ಬಾ! ಈ ರೀತಿಯಾಗಿವೂ ಯೋಚಿಸಿ ಕವನವನ್ನು ಬರೆಯ ಬಹುದಾ ಎಂಬ ವಿಸ್ಮಯ ಪ್ರತಿ ಕವನದ ಪ್ರೇಮಿಯನ್ನು ಕಾಡುವುದಂತೂ ಸತ್ಯ.
ಕವನ ಆಳವಾಗಿ ಅರ್ಥವಾಗುವುದು ಬಹಳ ಕಷ್ಟ ಒಂದು ವೇಳೆ ಅದು ಅರ್ಥವಾದರೆ ಜೀವನದುದ್ದಕ್ಕೂ ಅದರ ಅಮಲು ಹೆಚ್ಚುತ್ತಾ ಹೋಗುತ್ತದೆ.
ಧನ್ಯವಾದಗಳು ಗೆಳೆಯ ನಿನಗೆ ಕನ್ನಡ ಬರಲ್ಲ ಅಂದ್ರು ನನಗಾಗಿ ಇಷ್ಟ ಪಟ್ಟು ಕಲಿತು ಈ ಪುಸ್ತಕದಲ್ಲಿ ನಿನ್ನ ನೆನಪಿನಲ್ಲಿ ಕೆಲವು ಅಕ್ಷರಗಳನ್ನು ಬರೆದು ನನಗೊಂದು ಮರೆಯಲಾಗದ ಉಡುಗೊರೆಯನ್ನು ಕೊಟ್ಟೀದ್ದೀಯಾ, ಯಾವಾಗಲೂ ನನ್ನ ಪ್ರೀತಿ ನಿನ್ಗೆನೇ.❤️

ಕವನ ಓದುವ ಬರೆಯುವ ಆಸಕ್ತಿ ಇದ್ದರೆ ದಯಮಾಡಿ ತಪ್ಪದೇ ಕೊಂಡು ಓದಿ. ನಿರಾಸೆ ಅಂತೂ ಖಂಡಿತ ಆಗುವುದಿಲ್ಲ.

This is one of the best Kannada poetry books in recent times.
The hunger for thoughts, the darkness of life, and pain for the words are only felt through the poetries.

ನನ್ನನ್ನು ಸದಾ ಕಾಡಿದ ಕವನ:

*ಫುಟ್ ಪಾತ್*

ಈ ಫುಟ್ ಪಾತನ್ನು
ಪಾದಗಳಿಗಿಂತಲೂ ಹೆಚ್ಚು
ಬೆನ್ನುಗಳು ಸ್ಪರ್ಶಿಸಿವೆ

ಈ ಫುಟ್ ಪಾತಿಗೆ
ಕಸಕ್ಕಿಂತಲೂ ಹೆಚ್ಚು
ಕನಸುಗಳನ್ನು ಎಸೆಯಲಾಗಿದೆ!

ಈ ಫುಟ್ ಪಾತು
ಮಳೆಗಿಂತಲೂ ಹೆಚ್ಚು
ಕಣ್ಣೀರಲ್ಲಿ ತೊಯ್ದಿದೆ!

ಈ ಫುಟ್ ಪಾತನ್ನು
ನಗರಪಾಲಿಕೆಗಿಂತಲೂ ಹೆಚ್ಚು
ಅನಾಥರು ಪ್ರೀತಿಸಿದ್ದಾರೆ!


* ಬಟ್ಟೆಯಂಗಡಿಯಲ್ಲಿ *

ಬಟ್ಟೆಯಂಗಡಿಯಲ್ಲಿ
ಪುಟ್ಟ ಮಗು
ಇಷ್ಟಪಟ್ಟು
ಎದೆಗಪ್ಪಿಕೊಂಡ
ಹೊಸ ಅಂಗಿ
ಭಯದಿಂದ ತತ್ತರಿಸಿತು!

ಅಂಗಿಗೂ ಅರಿವಾಗಿದೆ
ಅತ್ಯಾಚಾರಿಗಳಿಂದ ಮೊತ್ತ ಮೊದಲು
ಹಲ್ಲೆಗೊಳಗಾಗುವುದು
ಬಟ್ಟೆಗಳು!
Profile Image for Jayaramachari .
5 reviews5 followers
March 22, 2022
ನಾನು ಮೊದಲ ಬಾರಿ ಪೂರ್ತಿ ಕವನ ಸಂಕಲನ ಓದಿದ್ದು ಕೆ ಸ್ ನ ಅವರ ಹಾಡು ಹಸೆ, ಅದರ ಹಿಂದೆ ಬೇಂದ್ರೆಯವರ ಕವಿತಾ ಸಂಕಲನ ( ಹೆಸರು ಸದ್ಯ ನೆನಪಿಗೆ ಬರ್ತಿಲ್ಲ ) ಹಾಗೆ ಕುವೆಂಪು ಅವರ ಚಿತ್ರಾಂಗದಾ, ಅವೆರಡು ನಾನು ಓದುವ ಕಾಲಕ್ಕೆ ಸ್ವಲ್ಪವೂ ಅರ್ಥವಾಗದೆ ಬೇಗ ಪಕ್ಕಕ್ಕಿಟ್ಟು ಕೈ ತೊಳೆದುಕೊಂಡಿದ್ದೆ, ಅದಾದ ಮೇಲೆ ಕವಿತೆ ಕಾವ್ಯ ದ ಸಹವಾಸ ಬಿಟ್ಟಿದ್ದೆ, ಕತೆ, ಕಾದಂಬರಿ ಬೆಸ್ಟ್ ಅನಿಸಿತ್ತು, ಅದರಲ್ಲೂ ಸಣ್ಣ ಕತೆ ಪ್ರಕಾರ ಈಗಲೂ ನನ್ನ ಮೋಸ್ಟ್ ಫೆವರೆಟ್ಟು, ಫೇಸ್ ಬುಕ್ ಗೆ ಕಾಲಿಟ್ಟ ಮೇಲೆ ಕನ್ನಡದಲ್ಲಿ ಕವಿತೆ ಬರೆಯುತ್ತಿದ್ದ ಒಂದಷ್ಟು ಜನ ಸಿಕ್ಕು ಅದಾದ ಮೇಲೆ ಅದು ಇದು ಗ್ರೂಪಿನ ಮೂಲಕ ಈ ತಾರಾ ಕವಿತೆ ಬರೆಯೋರ ಸಂಖ್ಯೆ ಹೆಚ್ಚೇ ಇದೆ ಎಂದು ಗೊತ್ತಾಯ್ತು , ಅವರದೆಲ್ಲ ಕವಿತೆಗಳ ಓದಲು ಯತ್ನಿಸಿದ್ದುಂಟು ಕೆಲವು ದಕ್ಕುತ್ತಿದ್ದವು ಕೆಲವು ಇಲ್ಲ , ನನಗೆ ಈಗಲೂ ಕೆಲವೇ ಮಂದಿಗೆ ಅರ್ಥವಾಗುವ ತುಂಬಾ ಮಂದಿಗೆ ಅರ್ಥವೇ ಆಗದ ಕವಿತೆಗಳನ್ನು ಹೇಗೆ ಬರೆಯುತ್ತಾರೆ ಎಂಬ ಕುತೂಹಲ ಜೊತೆಗೆ ಏಕೆ ಬರೆಯುತ್ತಾರೆ ಎಂಬ ಪ್ರಶ್ನೆ ಕೂಡ ಉಳಿದಿದೆ, ಹಾಗೆ ಅರ್ಥವಾಗದೆ ಉಳಿದ ಕವನಗಳಿಗೆ ದೊಡ್ಡ ದೊಡ್ಡ ಮಾತು ಬಂದಾಗ ಈ ಕವಿತೆಯ ವಿಷಯಕ್ಕೆ ಬಂದರೆ ನಾನು ಎಂತ ಚೈಲ್ಡ್ ಅಂತ ಕೂಡ ಬೇಜಾರಾಗುತ್ತೆ .

ನನಗೆ ಕವಿತೆಗಳು ದಕ್ಕಿದ್ದು ನಾನು ಕವಿತೆ ಬರೆಯಲು ಶುರು ಮಾಡಿದ ಮೇಲೆ ತೀರಾ ಅಮೆಚರಿಶ್ ಆಗಿಯೇ ಬರೆಯುವುದು ನಾನು ಆದರೂ ನಾನು ಬರೆಯಲು ಶುರು ಮಾಡಿದ ಮೇಲೆ ಕೆಲವು ಮೇಲೆ ಹೇಳಿದ ಅರ್ಥವಾಗದ ಕವಿತೆಗಳು ಒಂದು ಮಟ್ಟಿಗೆ ದಕ್ಕಿವೆ,ಕತೆಗೊಂದು ಕಾದಂಬರಿಗೊಂದು ಚೌಕಟ್ಟಿರುತ್ತದೆ ಅದನ್ನು ಬರೆಯಲು ಘಟನೆ ವ್ಯಕ್ತಿ ಗುಣ ಪರಿಸರ ಹೀಗೆ ಎಲ್ಲವು ಬೇಕಾಗುತ್ತದೆ, ಆದರೆ ಕವಿತೆಗೆ ಹಾಗೇನು ಬೇಕಿಲ್ಲ ಎಷ್ಟೋ ಬಾರಿ . ತುಂಬಾ ವರ್ಷಗಳ ಹಿಂದೆ ರಾಜಶೇಖರ ಬಂಡೆ ಒಂದು ಕವಿತೆ ಬರೆದಿದ್ದರು , ರೋಡಿನಲ್ಲಿ ನಿಂತು ಕರೆವ ವೇಶ್ಯೆಯೊಬ್ಬಳ ಕವಿತೆ, ಅದು ಬರಿ ಅಷ್ಟೇ ಆಗದೆ ಮತ್ತಿನೇನೋ ನನಗೆ ದಾಟಿಸಿ ಬಿಟ್ಟಿತ್ತು ,ಅದಾದ ಮೇಲೆ ರಾಜಶೇಖರ ಬಂಡೆ,ಚಿದಂಬರ,ರಾಜಶೇಖರ್ ಪ್ರಸಾದ್,ಹೃದಯ ಶಿವ ,ಪ್ರವರ ಕೊಟ್ಟೂರು ಹೀಗೆ ಹತ್ತು ಹಲವರ ಕವಿತೆ ಓದುತ್ತಿದ್ದೆ, ಕ್ರಮೇಣ ಅವು ಕೂಡ ಬೋರು ಬರಿಸಿಬಿಟ್ಟವು ಕಾರಣ ಕವಿತೆಗಳಲ್ಲ, ಅವರ ಕವಿತೆಗಳ ಹಿಂದೆ ಇರೋ ಡ್ರೈವ್ , ಏನೇನೋ ವಿಚಾರಗಳಿಂದ ಅವರೆಲ್ಲ ಹಿಂದೆ ಸರಿದ ಮೇಲೆ ಯಾವ ಇಸಂ ಗೂ ಜೋತುಬೀಳದ ಕೆಲವರ ಕವಿತೆಗಳನ್ನು ಓದುತ್ತಿದ್ದೆ, ನಮ್ಮ ಬರಹ ನಮ್ಮ ನಿಲುವಿನಿಂದಲೇ ಹುಟ್ಟುವುದರಿಂದ ಬರಹ ಇಸಂ ಇಂದ ತಪ್ಪಿಸ್ಕೊಳ್ಳೋದು ಅಸಾಧ್ಯ , ಈ ನಡುವೆ ಯಾರೋ ಮೂರು ಬಿಟ್ಟವರು ತಲೆ ಕೆಟ್ಟವರು ತಾವು ತುಂಬಾ ತಿಳಿದುಕೊಂಡವರು ಎಂದುಕೊಂಡವರು ಬೇಂದ್ರೆ ಓದಬೇಡಿ, ಕೆ ಎಸ ನ ಓದಬೇಡಿ ,ಅಡಿಗರನ್ನು ಓದಬೇಡಿ ಅಂತ ಬೊಬ್ಬೆ ಹೊಡೆದಾಗ ನಮ್ಮ ಓದು ಕೂಡ ಯಾವನೋ ಎತ್ಲ್ಯಾಂಡಿ ನಿರ್ಧರಿಸೋ ಕಾಲದಲ್ಲಿ ಬದುಕುತ್ತಿದ್ದೇವೆ ಎಂದು ಅರಿವಾಯ್ತು, ಇಷ್ಟೆಲ್ಲಾ ಮಧ್ಯದಲ್ಲೂ ಒಂದಷ್ಟು ಕಾಡುವ ಕವಿಗಳು ಇದ್ದಾರೆ ಆಕರ್ಷ ಕಮಲಾ, ದಾದಾ ಪೀರ್ ಜೈನ, ಸುಧಾ ಆಡುಕಳ ನೆನ್ನೆ ಸುಶೀಲ್ ಸಂದೀಪ್ ಕೂಡ ಒಳ್ಳೆ ಪದ್ಯ ಬರೆದಿದ್ದರು, ಇನ್ನು ಎಷ್ಟೋ ಜನರ ಹೆಸರು ಸದ್ಯ ನೆನಪಿಗೆ ಬರ್ತಿಲ್ಲ

ಕತೆ ಕಾದಂಬರಿ ಮತ್ಯಾವುದೋ ನಾನ್ ಫಿಕ್ಸನ್ ಪುಸ್ತಕಗಳ ರೀತಿ ಕಾವ್ಯ ಕವಿತಾ ಸಂಕಲನ ಓದಲು ಆಗುವುದಿಲ್ಲ , ಪ್ರತಿ ಒಂದು ಒಳ್ಳೆ ಕವಿತೆಗೆ ನಮ್ಮನ್ನು ಕಾಡುವ ,ನಶೆ ಹತ್ತಿಸುವ ,ಗುಂಗು ಹಿಡಿಸುವ ಮತ್ತು ಧುತ್ತನೆ ಉತ್ತರವಿಲ್ಲದ ಪ್ರಶ್ನೆ ಹುಟ್ಟುಹಾಕುವ ಗುಣವಿರುತ್ತದೆ ಆ ಕವಿತೆ ಹತ್ತಿಸಿದ ನಶೆ ಇಳಿದು, ಗುಂಗು ಕಳೆದು ಧುತ್ತನೆ ಎದುರಾದ ಪ್ರಶ್ನೆಗೆ ಒದ್ದಾಡಿ ಉತ್ತರ ಕೊಟ್ಟ ಮೇಲೆಯೇ ಮತ್ತೊಂದು ಕವಿತೆ ಓದಲು ಸಾಧ್ಯ ನನ್ನ ಮಟ್ಟಿಗಂತೂ ಇದು ನಿಜ ಇದು ಕವಿತೆಯ ಶಕ್ತಿ.ಹಾಗಾಗಿ ನಾನು ಎಷ್ಟೋ ಕವಿತಾ ಸಂಕಲನ ಪುಸ್ತಕ ಓದುವ ಧೈರ್ಯ ಮಾಡಿಲ್ಲ

ಇವೆಲ್ಲ ನಡುವೆ ಮತ್ತೆ ಕಾವ್ಯ ಕವಿತೆ ಓದಲು ಪ್ರಯತ್ನಿಸುತ್ತಿದ್ದೀನಿ ಅದಕ್ಕೆ ಮುಖ್ಯ ಕಾರಣ ಓದು ಜನಮೇಜಯ ಕಾರ್ಯಕ್ರಮ , ಅಲ್ಲಿ ಒಳ್ಳೆ ಒಳ್ಳೆ ಕವಿತೆಗಳನ್ನು ಕೇಳಿಸಿಕೊಂಡಿದ್ದೀನಿ, ಇಷ್ಟವಾಗಿ ತರಿಸಿ ಕೂಡ ಓದುತ್ತಿದ್ದೇನೆ , ಎ ಕೆ ರಾಮಾನುಜ್ ರ ಆಯ್ದ ಕವಿತೆಗಳು , ಪೂರ್ಣ ಪ್ರಜ್ಞಾನ ಗರಿಗಳು, ಗೊರವರ ಅವರ ಮಲ್ಲಿಗೆ ಹೂವಿನ ಸಖ, ರಾಮಸ್ವಾಮಿ ಅವರ ಮೀನು ಬೇಟೆಯ ಸಾಲು ಇವಿಷ್ಟು.

ಇವೆಲ್ಲದರ ಮಧ್ಯೆ ಕಾದಿದ್ದು ವಿಲ್ಸನ್ ಕಟೀಲ ರ ನಿಷೇಧಕೊಳಪಟ್ಟ ಒಂದು ನೋಟು, ಇಲ್ಲಿನ ಕೆಲವು ಕವಿತೆಗಳನ್ನು ನಮ್ಮ ಓದು ಜನಮೇಜಯದಲ್ಲಿ ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆಯವರು ಓದಿದ್ದರು ಪ್ರತಿ ಸಲ ಅವರು ಓದಿದಾಗ ಅದನ್ನು ಕೊಲ್ಲಬೇಕೆನಿಸಿತ್ತು, ನಾದ ಅವರು ವಿಲ್ಸನ್ ಕಟೀಲ್ ಅವರನ್ನು ಕಾರ್ಯಕ್ರಮವೊಂದಕ್ಕೆ ಕರಿಸಿದ ಮೇಲೆ ಅದು ದುಪ್ಪಟ್ಟಾಗಿತ್ತು, ಮೂಲತಃ ಕೊಂಕಣಿ ಕವಿಗಳಾದ ಇವರು ಕನ್ನಡದಲ್ಲಿ ಬರೆಯಲು ಶುರು ಮಾಡಿದ್ದು ,ಸಂಗಾತಕ್ಕಾಗಿ.

ಇಷ್ಟು ದಿನ ಓದಿದ ಕವಿತೆಗಳಿಗೂ ಇವರ ಕವಿತೆಗಳಿಗೂ ವ್ಯತ್ಯಾಸವಿದೆ, ಇವರ ಕವಿತೆಗಳಲ್ಲಿ ಸಡನ್ನಾಗಿ ನಮ್ಮನ್ನು ಏಕಾಏಕಿ ನಿಲ್ಲಿಸಿ ಪ್ರಶ್ನೆ ಕೇಳುವ ಪ್ರಶೆ ಹುಟ್ಟುವ ಹಾಕುವ ಸಂಗತಿಗಳು ಸಾಲುಗಳು ಇವೆ, ಅವರ ಕವಿತೆಯ ವಿಷಯದ ಆಯ್ಕೆ ಅದಕ್ಕೆ ಬಳಸುವ ಪದಗಳು ಅದನ್ನು ಪ್ರಸ್ತುತ ಪಡಿಸುವ ರೀತಿ ಜೊತೆಗೆ ಒಂದು ಕ್ಷಣ ಜರ್ಕ್ ಹೊಡೆಸುವ ರೀತಿ ಎಲ್ಲವು ಅದ್ಭುತ, ಸಾಮಾನ್ಯವಾಗಿ ಪುಸ್ತಕ ಓದುವಾಗ ಇಂತಿಪ್ಪ ಲೈನುಗಳು ಇಷ್ಟವಾಗಿ ಅದನ್ನು ಗುರ್ತು ಹಾಕಿಕೊಳ್ಳುವುದಿದೆ, ಈ ಪುಸ್ತಕದಲ್ಲಿ ಇಡೀ ಪುಸ್ತಕವನ್ನೇ ಗುರ್ತು ಹಾಕಬೇಕಾದೀತು ,ಅಷ್ಟು ಕಾಡುವ ಸಾಲುಗಳು , ಚಂದ್ರ ಪ್ರಿಯೆ ಚೆಲುವೆ ಅವ್ವ ಅಮ್ಮ ಆಕಾಶ ಸಮುದ್ರ ಈ ತರದ ಸವಕಲು ಪದ್ಯಗಳಿಲ್ಲದ��� ಪದಗಳಿಲ್ಲದೆ ತೀರಾ ಹೊಸದಾಗಿ ಕಾಣುವ ಗಾಢವಾಗಿ ತಟ್ಟುವ ಚೆಂದದ ಚೆಂದ ಅಂದರೆ ತಪ್ಪಾದೀತು ಚೆಂದವಲ್ಲದ ನಿದ್ದೆ ಗೆಡಿಸುವ ಮತ್ತೆಲ್ಲೋ ನೆನಪಾಗುವ ನಮ್ಮನ್ನು ನಾವು ಪ್���ಶ್ನಿಸಿಕೊಳ್ಳುವಂತ ಕವಿತೆಗಳಿವೆ . ಪುಸ್ತಕದ ಮುನ್ನುಡಿಯಲ್ಲಿ ಅದರ ಬಗ್ಗೆ ಡೀಟೈಲ್ ಆಗಿ ಬರೆದಿರುವುದರಿಂದ ನಾನು ಮತ್ತೆ ಹೇಳಿದರೆ ಅದರ ಮುಂದುವರಿದ ಭಾಗವಾಗುತ್ತೆ ಅಷ್ಟೇ , ಕಾವ್ಯ ಪ್ರಿಯರು, ಕವಿತೆ ಬರೆಯುವರು ಓದಲೇಬೇಕಾದ ಪುಸ್ತಕ ಇದು .
ಈ ಪುಸ್ತಕದ ಕೆಲವು ಝಲಕ್ ಅಷ್ಟೇ ಇಲ್ಲಿ ಹೇಳಬಲ್ಲೆ .

ಛೆ !
ರಸ್ತೆಯ ಬದಿಯಲ್ಲಿ ಬಲೂನು ಮಾರಬೇಡಿ
ಮಾರಿದರೂ, ಅವಕ್ಕೆ
ಉಸಿರನ್ನು ಊದಬೇಡಿ
(ಬಲೂನು, ಮಕ್ಕಳು ,ರಸ್ತೆ )

ನಿಷೇಧಕೊಳಪಟ್ಟ ಒಂದು ನೋಟು
ನನ್ನಲ್ಲಿನ್ನು ಭದ್ರವಾಗಿದೆ
ಅದರ ಮೇಲೊಂದು
ಕವಿತೆ ಗೀಚಿ
ಅಮಾನ್ಯವಾಗುವುದನ್ನು ತಡೆ ಹಿಡಿದಿದ್ದೇನೆ
(ನಿಷೇಧಕೊಳಪಟ್ಟ ಒಂದು ನೋಟು)

ಕಣ್ಣೀರೊರೆಸಿದ
ಬೆರಳುಗಳೇ ಸುಡುತ್ತಿವೆ
ಚೈತೇಗಿದಳು
ಬೆಂಕಿಯನ್ನೇಕೆ ಸಾಲ ಕೇಳಲಿ
(ಸ್ವತಂತ್ರ ಸಾಲುಗಳು )

ನಕ್ಷತ್ರದ ಜೀವಿತಾವಧಿ ಎಷ್ಟು ?
ಹತ್ತು ಬಿಲಿಯನ್ ವರ್ಷಗಳು
ಆಸ್ಪತ್ರೆಯ ಕಿಟಕಿಯಲ್ಲಿ ರೋಗ ಉಸುರಿದ
ನಾನು ಕಣ್ಣು ಮುಚ್ಚುವಷ್ಟು
(ಖಗೋಳದ ರಸಪ್ರಶ್ನೆಗಳು )

ಪೂಜೆಗೆಂದು ಕೊಯ್ದಿಟ್ಟ ಹೂವು
ನೆರೆಯಲ್ಲಿ ಕೊಚ್ಚಿ ಹೋಗಿದೆ
ಪರವಾಗಿಲ್ಲ
ಮಂದಿರ ಇಳಿಜಾರಿನಲ್ಲಿದೆ

**

ಹೂಗಳಿಗೂ ಗಾಯವಾದಾಗ
ರಕ್ತ ಹರಿಯುವಂತಿದ್ದರೆ
ಮನುಜರ ಪೂಜೆ ಪುನಸ್ಕಾರಗಳು
ಶವ ಸಂಸ್ಕಾರಗಳು
ಮದುವೆ ಸಮಾರಂಭಗಳು
ಎಷ್ಟು ಬೀಕರವಾಗುತ್ತಿದ್ದವು
(ಮಳೆ ಹೂಗಳು )

ಪ್ರಬುದ್ಧ ಅಲೆಗಳೆಂದಿಗೂ
ದೀಪಸ್ತಂಭದ ಬೆಳಕನ್ನು
ಬೆಳದಿಂಗಳೆಂದು
ಭ್ರಮಿಸುವುದಿಲ್ಲ
(ಮರಳ ಮೇಲೆ ಗೀಚಿದ್ದು )

ಯೋಧರನ್ನು ಪರಸ್ಪರ
ಹೊಡೆದಾಡಿಸಿ ಕೊಲ್ಲಿಸುವ
ನಾಯಕರು
ಎದುರುಬದುರಾದಾಗ
ಕೈಕುಲುಕಿ ಆಲಂಗಿಸುವುದರ ಹಿಂದೆ
ಅದೆಷ್ಟು ಆತ್ಮವಂಚನೆ ಅಡಗಿರಬಹುದು
(ಗಡಿ ನುಸುಳಿದ ಕವಿತೆ )

ಕಟಕಟೆಯಲ್ಲಿ ನಿಲ್ಲಿಸಿ ಕೇಳಿದಳವಳು
ನೀನು ಪ್ರೀತಿಸಿದ್ದಕ್ಕೆ ಏನು ಸಾಕ್ಷಿ ?
ಮಾತುಗಳಿಗಿದ್ದ ಬೆಲೆ
ಮುತ್ತುಗಳಿಗಿದ್ದರೆ
ನಾನು ಗೆಲ್ಲುತ್ತಿದ್ದೆ !
(ಸರಳಾಚೆಯ ಸಾಲುಗಳು )

ಇನ್ನೂ ಹೇಗೆ ಎಷ್ಟೋ ಹಲವು ಸಾಲುಗಳು. ಓದಿ ಸಾಧ್ಯವಾದರೆ

Displaying 1 - 2 of 2 reviews

Can't find what you're looking for?

Get help and learn more about the design.