ಕವಿಗಳಲ್ಲಿ ಎರಡು ವಿಧ, ಒಬ್ಬರು ನಡೆಯುವ ಕ್ರಿಯೆಯನ್ನು ಕಠಿಣ ಶಬ್ದಗಳಲ್ಲಿ ವಿವರಿಸಿ ಅದನ್ನು ತಿಳಿಯಲು ನಿಘಂಟಿನ ಮೊರೆ ಹೋಗಲು ಪ್ರೆರೇಪಿಸುತ್ತಾರೆ ಉದಾ: ಸೂರ್ಯ ಪೂರ್ವ ದಿಕ್ಕಿನಲ್ಲಿ ಹುಟ್ಟುತ್ತಾನೆ ಎಂಬುದನ್ನು ಈ ವರ್ಗ "ಭಾಸ್ಕರ ಮೂಡಣ ದಿಶೆಯಲ್ಲಿ ಉದಯಿಸುತ್ತಾನೆ" ಎಂದು ಹೇಳುತ್ತಾರೆ. ಅದೇ ಇನ್ನೊಂದು ವರ್ಗ ಸುಲಭದಲ್ಲಿ ಹೇಳಿದರೂ, ತಿಳಿಯದ ಹಲವು ಅರ್ಥಗಳನ್ನು ಹೇಳುತ್ತದೆ ಉದಾ: ಸೂರ್ಯ ಹುಟ್ಟುವದನ್ನು ಈ ವರ್ಗ "ಮೂಡಲ ಮನೆಯ ಮುತ್ತಿನ ನೀರಿನ ಎರಕಾವ ಹೊಯ್ದ ನುಣ್ಣನೆ ಎರಕಾವ ಹೊಯ್ದ ಬಾಗಿಲ ತೆರೆದು ಬೆಳಕು ಹರಿದು ಜಗವೆಲ್ಲ ತೊಯ್ದ ದೇವನು ಜಗವೆಲ್ಲ ತೊಯ್ದ" ಎಂದು ಹೇಳುತ್ತದೆ. ಇದನ್ನು ತಿಳಿಯಲು ನಿಘಂಟಿನ ಸಹಾಯ ಬೇಡ, ಇದನ್ನು ತಿಳಿಯಲು ಹೃದ್ಯದ ಕಿವಿ ಕಣ್ಣು ತೆರೆದಿರಬೇಕು ಅಷ್ಟೇ. ಇಂತಹ ವರ್ಗಕ್ಕೆ ಸೇರುವ ಅಗ್ರಮಾನ್ಯ ಕವಿ ದಾರ್ಶನಿಕ "ಖಲೀಲ್ ಗಿಬ್ರಾನ್".
ನನಗೆ ಖಲೀಲ್ ಗಿಬ್ರಾನ್ನನ್ನು ಪರಿಚಯ ಮಾಡಿಕೊಟ್ಟಿದ್ದು ಪ್ರಭುಶಂಕರರ "ಖಲೀಲ್ ಗಿಬ್ರಾನ್" ಪುಸ್ತಕ. ಅಲ್ಲಿ ಅವರು ಗಿಬ್ರಾನ್ ರವರ ಕೃತಿಗಳ ಮತ್ತು ಅವನ ಜೀವನದ ಸಣ್ಣ ಪರಿಚಯ ಮಾಡಿಕೊಟ್ಟಿದ್ದರು. ಅನಂತರ ಗಿಬ್ರಾನ್ ನ The Prophet ಓದಿ, ಆ Hang over ಯಿಂದ ಆಚೆ ಬರಲು ವಾರಗಳೇ ಹಿಡಿದವು. ಅದು ಒಂದು ಕೃತಿಯಲ್ಲ, ಅದೊಂದು ದಿವ್ಯ ತಪಸ್ಸು.
ಅನಂತರ ನನಗೆ ಗಿಬ್ರಾನ್ನಲ್ಲಿ ಆಸಕ್ತಿ ಮೂಡಿತು. ಅವನ ಜೀವನವನ್ನು, ಅವನ ದಿವ್ಯ ಉಕ್ತಿಗಳನ್ನು ಗಮನವಿಟ್ಟು ಓದಲು ಶುರು ಮಾಡಿದೆ. ಕವನಗಳು ಮನಸ್ಸನ್ನು ತಟ್ಟಿದ್ದರೂ ಏನೋ ತಿಳಿಯದೇ ಇರುವ ಭಾವ.
ಅವನ ಬಗ್ಗೆ ಸಂಧ್ಯಾ ಮೇಡಂ ಅವರು ಒಂದು ಪುಸ್ತಕ ಅನುವಾದ ಮಾಡಲಿದ್ದಾರೆ ಎಂದಾಗ ಕುತೂಹಲದಿಂದ ಕಾಯುತ್ತಿದ್ದೆ. ಮೂಲ ಪುಸ್ತಕದ ಬಗ್ಗೆ ಹುಡುಕುತ್ತ ಹೋದಾಗ ಮೂಲ ಪುಸ್ತಕದ pdf ಕಾಪಿಯೇ ಸಿಕ್ಕಿಬಿಡೋದೇ. ಓದಿದೆ, ಮನಸ್ಸಿಗೆ ತೃಪ್ತಿ ಇಲ್ಲ, ಅನುವಾದ ಪ್ರಕಟಗೊಂಡಾಗ ಒಂದೇ ಗುಕ್ಕಿನಲ್ಲೇ ಓದಿದೆ. ಮೂಲದಲ್ಲಿ ಕೊಡದಿದ್ದ ತೃಪ್ತಿ ನನಗೆ ಈ ಪುಸ್ತಕ ದೊರಕಿಸಿ ಕೊಟ್ಟಿತು.
ಬಾರ್ಬರಾ ಯಂಗ್ ಗಿಬ್ರಾನ್ ಜೊತೆ ಕಳೆದ ಆ ಏಳು ವರ್ಷಗಳ ಒಡನಾಟದ ಪ್ರತಿಫಲ ಈ ಪುಸ್ತಕ. ಇಲ್ಲಿ ಗಿಬ್ರಾನ್ನ ಜೀವನಚರಿತ್ರೆ ಹೇಳಿ ಆತನನ್ನು ದೈವ ಪುರುಷನನ್ನಾಗಿ ಮಾಡುವ ಪ್ರಯತ್ನವಿಲ್ಲ. ಆತನ ತುಮುಲಗಳು, ಆತನ ಹುಚ್ಚು ನಡವಳಿಕೆಗಳು, ಆತನಲ್ಲಿ ಕಾವ್ಯ ಸ್ಫೂರಿಸುತ್ತಿದ್ದ ಗಳಿಗೆ, ಆತನ ಕಾವ್ಯದ ಮೇಲೆ ಇದ್ದ ಆತನ ತಾಯಿಯ ಪರಿಣಾಮ, ಆತನ ಚಿತ್ರಕಲೆ, ಆತನ ಪರಿಸರ ಪ್ರೇಮ, ವೃಕ್ಷ ಪ್ರೇಮ ಎಲ್ಲವೂ ಮನಸಿನಲ್ಲಿ ಅಲೆ ಅಲೆಯಾಗಿ ಮೂಡಿಸಿ ಆತನ ಮನುಜ ತತ್ವದ ಸಂದೇಶವನ್ನು ಸಾರುತ್ತದೆ.
ಗಿಬ್ರಾನ್ನ ಸಾಹಿತ್ಯ ದುಡಿಮೆ ಹಿರಿದದ್ದು, ಆತನ ಜೀವನ ದರ್ಶನ ನಮ್ಮಂತ ಕಿರಿಯರಿಗೆ ಸ್ಫೂರ್ತಿ. ಸುಖ ದುಃಖಗಳ ಅರಿವನ್ನು, ಸತ್ಯ ಅಸತ್ಯಗಳ ಹೂರಣವನ್ನು ಆತ ನಮಗೆ ತನ್ನ ಗದ್ಯಕಾವ್ಯಗಳಲ್ಲಿ ಕಟ್ಟಿ ಕೊಟ್ಟಿದ್ದಾನೆ. ಅದರ ಕೆಲ ಭಾಗಗಳ ಅನುವಾದಗಳು ಈ ಕೃತಿಯಲ್ಲಿದೆ. ಗಿಬ್ರಾನ್ ಸಾಹಿತ್ಯ ಸಾಗರದ ಒಂದು ಹನಿಯ ಪರಿಚಯಷ್ಟಾದರೂ ನಿಮಗೆ ಸಿಗದೇ ಇರದು.
ಅನುವಾದ ನಿಜಕ್ಕೂ ಚೆನ್ನಾಗಿದೆ. ಬಳಸಿರುವ ಭಾಷೆ ಚಂದವಾಗಿದೆ, ಆರಂಭಿಕ ಓದುಗರಿಗೆ ಸ್ವಲ್ಪ ಕಠಿಣ ಏನಿಸಬಹುದು. ಗಿಬ್ರಾನ್ ಬಗ್ಗೆ ತಿಳುವಳಿಕೆ ಇಲ್ಲದೇ ಇರುವವರಿಗೆ ಈ ಪುಸ್ತಕ ರುಚಿಸುವುದಿಲ್ಲ. ಲೇಖಕರು ಇಲ್ಲಿಗೆ ನಿಲ್ಲದೇ ಗಿಬ್ರಾನ್ನ ಸಾಹಿತ್ಯವನ್ನು ಕನ್ನಡೀಕರಿಸಬೇಕು, "ಪ್ರವಾದಿ"ಯಿಂದಲೇ ಶುರುವಾಗಲಿ ಎಂದು ಬೇಡಿಕೊಳ್ಳುತ್ತೇನೆ ಮತ್ತು ಹಾರೈಸುತ್ತೇನೆ.