ಕರ್ಕಿ ಕೃಷ್ಣಮೂರ್ತಿ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿಯವರು. ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್. ಕೆಲಸದ ನಿಮಿತ್ತ ಮಸ್ಕತ್ ಹಾಗೂ ದುಬೈನಲ್ಲಿ ಕೆಲ ವರ್ಷ ನೆಲೆಸಿದ್ದು, ಪ್ರಸ್ತುತ ಬೆಂಗಳೂರಿನ ಕೊಲಿಯರ್ರ್ಸ್ ಇಂಟರ್ ನ್ಯಾಷನಲ್ ಸಂಸ್ಥೆಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿದ್ದಾರೆ. ಓದು, ಸಿನೆಮಾ, ನಾಟಕ, ಪರ್ಯಟನೆ ಇವರ ಆಸಕ್ತಿಯ ಕ್ಷೇತ್ರಗಳು.
'ಮಳೆ ಮಾರುವ ಹುಡುಗ' 'ಗಾಳಿಗೆ ಮೆತ್ತಿದ ಬಣ್ಣ' ಅವರ ಕಥಾಸಂಕಲನಗಳು. 'ಚುಕ್ಕಿ ಬೆಳಕಿನ ಜಾಡು' ಕಾದಂಬರಿ ಪ್ರಕಟಿತ. 'ಸುಗಂಧಿ' ವಿಶೇಷಾಂಕದ ಸಂಪಾದಕರಾಗಿದ್ದರು. ‘ಮಾಸ್ತಿ ಕಥಾ ಪುರಸ್ಕಾರ, ಬೇಂದ್ರೆ ಗ್ರಂಥ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಆರ್.ಎನ್ ಹಬ್ಬು ದತ್ತಿ ಪ್ರಶಸ್ತಿ, ಸ್ವಸ್ತಿ ಪ್ರಕಾಶನದ ಬಹುಮಾನ’ ಮುಂತಾದ ಪ್ರಶಸ್ತಿಗಳು ಲಭಿಸಿವೆ. ಹಲವು ಕಥೆಗಳು ಹಿಂದಿಗೆ ಅನುವಾದವಾಗಿವೆ. 'ಕಾಣದ ಗೆರೆಗಳು' ಕಥೆ ಪ್ರಜಾವಾಣಿ 2018ರ ದೀಪಾವಳಿ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದಿದೆ.
ಕತೆ ಹೇಳುವುದರಲ್ಲಿ ಅನೇಕ ವಿಧಗಳಿರುವ ಹಾಗೆ , ಓದುಗರ ತಲುಪಲೂ ಅನೇಕ ತಂತ್ರಗಳ ಬಳಕೆಯಾಗುತ್ತದೆ. ಈಗಾಗಲೇ ಬಂದು ಹೋಗಿರುವ ಕಥಾವಸ್ತುಗಳ ಓದುಗನಿಗೆ ಓದಿಸುವ ಹಾಗೆ ಮಾಡಲು ಕಥೆಗಾರ ಹೊಸ ಹೊಸ ತಂತ್ರಗಳ ಬಳಕೆ ಮಾಡಬೇಕಾಗುತ್ತದೆ. ಕನ್ನಡದ ಮಟ್ಟಿಗೆ ಅನುಭವದ ಕೊರತೆ, ಅಧ್ಯಯನದ ಕೊರತೆ ಮತ್ತು ಜಾತಿವಾದ ತೊಂಬತ್ತಕ್ಕಿಂತ ಜಾಸ್ತಿ ಶೇಕಡಾವಾರು ಕತೆಗಾರರ ನಿಂತ ನೀರಲ್ಲೇ ಮೊಟ್ಟೆಯಿಡುವ ಸೊಳ್ಳೆಗಳಾಗಿ ಮಾಡಿದೆ ಎಂದರೆ ತಪ್ಪಾಗಲಾರದು.
ಕರ್ಕಿ ಕೃಷ್ಣಮೂರ್ತಿಯವರ ಕತೆಗಳು ಅಂದರೆ ಅದು ಕನ್ನಡ ಸಾಹಿತ್ಯಕ್ಕೆ ಅಷ್ಟಾಗಿ ತೆರೆದುಕೊಳ್ಳದ ಅರಬ್ ದೇಶಗಳ ದುನಿಯಾ. ವಲಸೆ ಹೋದವರ ಹಾಡು ಪಾಡು ಎಂತಲೂ ಹೇಳಬಹುದು. ಇಲ್ಲಿನ ಕತೆಗಳ ಕಥನ ತಂತ್ರಕ್ಕಿಂತ ಹೆಚ್ಚಾಗಿ ಅದು ಸೃಷ್ಟಿಸುವ ಜಗತ್ತಿಗಾಗಿ ಓದಬೇಕು. ಅವರ ಈ ಹಿಂದಿನ ಎರಡು ಸಂಕಲನಗಳ ಓದಿದವರಿಗೆ ಇದು ಅಪರಿಚಿತವೇನಲ್ಲ. ಹಾಗಾಗಿ ಮೊದಲ ಓದಿಗೆ ಕುತೂಹಲ ಹುಟ್ಟಿಸಿದ ಕತೆಗಳು ಎರಡನೇ ಓದಿಗೆ ಅದರಲ್ಲಿನ ಮನುಷ್ಯನ ಭಾವಗಳಿಗೆ ತೆರೆದುಕೊಳ್ಳುತ್ತದೆ. ಮನುಷ್ಯ ಎಲ್ಲಿ ಹೋದರೂ ಮನುಷ್ಯನೇ ಎಂಬ ಸತ್ಯದರ್ಶನ ಮಾಡಿಸುತ್ತದೆ. ಅದು ಹಾಗೆಯೇ, ಕಾಣದ ಗೆರೆಗಳು ವಿಭಿನ್ನ ವಸ್ತುಗಳಿಂದ ಇಷ್ಟವಾದರೆ, ಸಮಾಧಿ ಶಿವು ಹಾಗೂ ಕಾಯುವ ಕಾಯಕ ,ವಸುಧೇಂದ್ರರ ಕತೆಗಳ ನೆನಪಿಸಿತು. ಬಂದರ್ ಎ ಅಬ್ಬಾಸ್ ವಲಸಿಗರ ಕತೆಯಾಗಷ್ಟೇ ಅಲ್ಲದೆ ವಲಸೆ ಹೋದ ಜಾಗದ ಕುರಿತಾದ ಒಳನೋಟಗಳಿಂದ ಇಷ್ಟವಾದ ಕತೆ.
ಕನ್ನಡದಲ್ಲಿ ಅದೇ ಚರ್ವಿತ ಚರ್ವಣ ದಾರಿಯಲ್ಲಿ ಬರೆಯುವವರ ಓದುವುದಕ್ಕೆ ಒಂದು ವಿರಾಮ ಕೊಟ್ಟು ಇಂತಹ ಕೃತಿಗಳ ಓದಿ ಅನ್ನುವುದು ಒಂದು ವಿನಂತಿ.
8 ಕಥೆಗಳ ಕಥಾ ಸಂಕಲನ. ಎಲ್ಲ ಕಥೆಗಳು ಅನಿವಾಸಿ ಭಾರತೀಯರ ಬಗ್ಗೆ. ಕೆಲವೊಂದು ಕಥೆಗಳು open ended ಆಗಿವೆ. ಕಥೆ ಹೇಳಿರುವ ರೀತಿ ಹಿಡಿಸಿತು. ಚೆನ್ನಾಗಿದೆ ಅನ್ನುವಾಗಲೇ ಕಥೆ ಮುಗಿದು ಹೋಗಿರತ್ತೆ .
ಸಣ್ಣ ಪುಸ್ತಕ, ಎಲ್ಲ ಕಥೆಗಳು ಚೆನ್ನಾಗಿ ಇದ್ದು ಒಂದು ರೀತಿ ಮನಸಲ್ಲಿ ಉಳಿಯುವುದರಿಂದ ಬೇಗ ಓದಿಸಿಕೊಂಡು ಹೋಗುತ್ತದೆ.
Most satisfying read ಅಂದ್ರೆ ತಪ್ಪಾಗಲಾರದು. ವಿದೇಶದಲ್ಲಿ ನಡೆಯುವ ಬಹುತೇಕ ಕಥೆಗಳ ಜೀವಾಳ, ಅದರ ಸರಳತೆ. ಸರಾಗವಾದ ಓದು. ಓದುತ್ತಾ ಹೋದಂತೆ ನಾವೂ ಕಥೆಯ ಭಾಗವಾಗುವ feel! ಜೊತೆಗೆ ಆಯಾ ದೇಶದ ರಾಜಕೀಯ ಸ್ಥಿತಿ, ಅರಬ್ ದೇಶದಲ್ಲಿರುವ ಮಕ್ಕಳ ಕಳ್ಳ ಸಾಗಣೆ ಮಾಫಿಯಾ, ಮಲೇಷಿಯಾದ ತಮಿಳರ ಬದುಕು, ಮಾನವ ಸಂಬಂಧ - ಹೀಗೆ ಹಲವು ಜಟಿಲ ವಿಷಯಗಳನ್ನು ತೀರಾ ಸಿಂಪಲ್ ಆಗಿ, ಗಾಢವಾಗಿ ಆವರಿಸುವಂತೆ ಈ ಕಥೆಗಳಲ್ಲಿ ಲೇಖಕರು ಚಿತ್ರಿಸಿದ್ದಾರೆ. To be honest, ಆಗಾಗ ಒಂದೊಂದು ಕಥೆ ಓದುವ ಎಂದು ಕೈಗೆತ್ತಿಕೊಂಡು ಓದಲು ಶುರು ಮಾಡಿದ ಪುಸ್ತಕವಿದು. ಅದ್ಯಾವ ಘಳಿಗೆಯಲ್ಲಿ trap ಅದೇನೋ ಗೊತ್ತಿಲ್ಲ, ಸಮಯ ಸಿಕ್ಕಾಗೆಲ್ಲಾ, ಪುಸ್ತಕಕ್ಕೆ ಅಂಟಿಕೊಂಡು, ಎರಡು ದಿನದಲ್ಲಿ ಓದಿ ಮುಗಿಸಿದೆ. ಹೊಸತನವಿದೆ ಈ ಕಥೆಗಳಲ್ಲಿ. ಅಷ್ಟೇ ವೈರಾಗ್ಯವೂ ಇದೆ! ಓದಿ. -------------------------- [ಲೇಖಕರ ಮಾತು] ತನಗೆ ಬೇಕಿರುವುದೇನೆಂಬ ಸ್ಪಷ್ಟ ಅರಿವಿಲ್ಲದೇ ಅದಕ್ಕಾಗಿ ಅರಸುವುದು ಆಧುನಿಕ ಮನುಷ್ಯನ ಲಕ್ಷಣವಾಗಿದೆ. ಸತ್ಯಶೋಧನೆಯ ಹಾದಿಯಲ್ಲಿ ನಮ್ಮ ಪೂರ್ವಿಕರು ಕಂಡುಕೊಂಡಿದ್ದ 'ನೇತಿ, ನೇತಿ' ಎನ್ನುವ ತತ್ವ ಪ್ರಯೋಗವನ್ನು: ನಾವಿಂದು, 'ಇದಲ್ಲ, ಇದೂ ಅಲ್ಲ' ಅನ್ನುತ್ತ ನಮ್ಮ ಸುಖದ ಅನ್ವೇಷಣೆಗೆ ಅಳವಡಿಸಿಕೊಂಡಿದ್ದೇವೆ. ಇರದಿರು ವುದೇನೆಂದು ಗೊತ್ತಿಲ್ಲದೇ ತುಡಿಯುವ ಈ ಸ್ಥಿತಿ ವಿಭಿನ್ನ ಹಾಗೂ ತೀಕ್ಷ್ಯ, ಸಾಲದೆಂಬಂತೆ ಜಾಗತೀಕರಣ, ನಗರವಾಸ, ಕಾರ್ಪೋರೇಟ್ ವ್ಯವಸ್ಥೆ ಇತ್ಯಾದಿಗಳು ಆ ತುಡಿತದ ಕಾವಿಗೆ ಉರುವಲಾಗಿವೆ ಇಂದು. ಸಪ್ತಸಾಗರದಾಚೆಯ ದೇಶವೂ ನಮ್ಮ ನೆರೆಮನೆಯಷ್ಟೇ ಹತ್ತಿರವೆನಿಸಬಹುದಾದ ಕಾಲಘಟ್ಟದಲ್ಲೂ, ಈ ವಿದೇಶದ ಆಕರ್ಷಣೆ ನಮ್ಮಲ್ಲಿನ್ನೂ ಮಾಸಿಲ್ಲ. ಇದೂ ಆ ಅರಸುವಿಕೆಯ ಒಂದು ಭಾಗವೇ ಆಗಿರಬಹುದು. ಅಂಥಹುದೇ ಹುಡುಕಾಟದ, ವಿದೇಶೀ ನೆಲದ ಕಥೆಗಳೇ ಹೆಚ್ಚಿರುವ ಈ ಸಂಗ್ರಹಕ್ಕೆ 'ದಿಬ್ಬದಿಂದ ಹತ್ತಿರ ಆಗಸಕ್ಕೆ' ಎನ್ನುವ ಹೆಸರು ಸೂಕ್ತ ಎನಿಸಿತು ನನಗೆ. -------------------------- 6 ಕತೆಗಳ ಗುಚ್ಚವಿದು. 148 ಪುಟಗಳ ಓದಿನ ಪಯಣ, ಯಾವುದೇ ಅಡಚಣೆಗಗಳಿಲ್ಲದೆ ಸರಾಗವಾಗಿ ಸಾಗುತ್ತದೆ. ಓದಿನ ಖುಷಿ ನಿಮ್ಮದಾಗಲಿ!