ಇಸ್ರೇಲ್ ಅಂದರೆ ನಮಗೆಲ್ಲ ರೋಮಾಂಚನ. ಅವರ ಕಡೆಯವರು ನಡೆಸಿದ ಸಾಹಸ ಕಾರ್ಯಾಚರಣೆಗಳ ಬಗ್ಗೆ ಓದುವುದು ಎಂದರೆ ಒಳ್ಳೆ ಥ್ರಿಲ್ಲರ್ ಕತೆ ಓದಿದ ಹಾಗೆ. ಇದು ಸತ್ಯವೇ ಅಥವಾ ಉತ್ಪ್ರೇಕ್ಷೆ ಎಂದು ಮನಸು ನಿಶ್ಚಯಿಸುವ ಮಟ್ಟಿಗೆ ಅಚ್ಚರಿ ಹುಟ್ಟಿಸುವ ಕಾರ್ಯಾಚರಣೆ ಮಾಡಿದ ದೇಶ ಅದು. ಅದಷ್ಟೇ ಅಲ್ಲದೆ ಪುಟ್ಟ ದೇಶವೊಂದು ಹಸಿದ ತೋಳಗಳ ಹಾಗೆ ಬಾಯಿ ತೆರೆದು ಸುತ್ತಲೂ ಕಾಯುತ್ತಿರುವ ಮತಾಂಧ ದೇಶಗಳ ಗಡಿಯಾಚೆ ಇಟ್ಟು ಸದೆ ಬಡಿದ ಬೇರೆ ಉದಾಹರಣೆ ಇದೆಯೇ? ಇಷ್ಟು ನಿರಂತರವಾಗಿ.
ಗೆಳೆಯ ಶ್ರೀಕಾಂತ್ ಶೆಟ್ಟರ ಲೇಖನಗಳ ಈ ಮೊದಲು ಓದಿದ್ದೆ. ಇಸ್ರೇಲ್ ಬಗ್ಗೆ ಈಗಾಗಲೇ ಮೊಸಾದ್ ಇತ್ಯಾದಿ ಪುಸ್ತಕಗಳಲ್ಲಿ ಅವರ ರಹಸ್ಯ ಕಾರ್ಯಾಚರಣೆಗಳ ಬಗ್ಗೆ ಹಲವಾರು ಮಾಹಿತಿ ಓದಿದ್ದರೂ ಅವರ ಬರವಣಿಗೆ ಬಗ್ಗೆ ನನಗೆ ವಿಶ್ವಾಸವಿತ್ತು.
ಬಹುಶಃ ಕನ್ನಡದಲ್ಲಿ ಇಸ್ರೇಲ್ ಇತಿಹಾಸ, ಅದರ ಕಾರ್ಯಾಚರಣೆಗಳು,ಯಹೂದಿಗಳು,ಅವರ ಮೇಲಿನ ದೌರ್ಜನ್ಯ , ಸುತ್ತಲಿನ ಮತಾಂಧ ದೇಶಗಳ ಕುತಂತ್ರ ರಾಜಕಾರಣದ ಬಗ್ಗೆ ಇಷ್ಟು ಚೆನ್ನಾಗಿ ಯಾರೂ ಬರೆದಿಲ್ಲ.
ಶ್ರೀಕಾಂತ್ ಶೆಟ್ಟರ ಮಾತು ಕೇಳಿದವರಿಗೆ ಆ ಮಾತುಗಳಲ್ಲಿ ಕಂಡು ಬರುವ ಸ್ಪಷ್ಟತೆ ಅರಿವಿರುತ್ತದೆ. ಅದೇ ನೋ ನಾನ್‌ಸೆನ್ಸ್ ಸ್ಪಷ್ಟತೆ ಅವರ ಬರವಣಿಗೆಯದ್ದೂ ಕೂಡ.
ನಿಜಕ್ಕೂ ಹೇಳಬೇಕಾದರೆ ನನಗೆ ಬಹಳ ಇಷ್ಟವಾಯಿತು ಈ ಪುಸ್ತಕ. ಇದನ್ನು ಓದಿ ಇನ್ನೊಮ್ಮೆ Munich ಸಿನಿಮಾ ನೋಡುವ ಮನಸಾಯಿತು.
ಮಾಸ್ ಸಿನಿಮಾಗಳಲ್ಲಿ ಪುಂಡರ ನಾಯಕ ಸಮಾ ಬಡಿಯುವಾಗ ನೋಡುಗನಿಗೆ ಒಂದು ಖುಷಿ ಆಗ್ತದಲ್ಲ ಅದೇ ಖುಷಿ ಇಲ್ಲಿ ಶೆಟ್ಟರ ಬರಹ ಓದುವಾಗ ಅವರು ಬಳಸುವ ವಾಕ್ಯಗಳ ಓದುವಾಗ ಆಯಿತು.
ಪುಸ್ತಕದ ಸಣ್ಣ ಕೊರೆ ಎಂದರೆ ಹಲವಾರು ಅಕ್ಷರ ತಪ್ಪುಗಳು. ಅದೊಂದು ಕೊರತೆ ಬಿಟ್ಟರೆ ಈ ಪುಸ್ತಕ ನೀವು ಓದಲೇಬೇಕಾದದ್ದು ಎಂದು ನಾನು ಖಂಡಿತಾ ಶಿಫಾರಸು ಮಾಡಬಲ್ಲೆ.
ಇದೇ ತರಹ ಅವರು ನಮ್ಮ ಸೈನಿಕರ ಸಾಹಸಗಾಥೆಗಳ ಕುರಿತಾಗಿ ಬರೆದರೆ ಹೇಗಿರಬಹುದು ಅಂತ ನೆನೆಸಿಕೊಂಡರೆ...
ಇಸ್ರೇಲ್ ದೇಶ ಹೋರಾಟ ಮಾಡಿದೆ ಎಂದಷ್ಟೇ ಕೇಳಿದ್ದೆ. ಆ ದೇಶದ ಹುಟ್ಟು, ಬದುಕು, ಹೋರಾಟ ಎಲ್ಲವೂ ರಕ್ತರಂಜಿತ, ರಣರೋಚಕ. ಅಬ್ಬಾ! ಅರಿ ಭಯಂಕರರು ಎಂಬುದಕ್ಕೆ ಅನ್ವರ್ಥಕರು ಯಾರಾದರೂ ಇದ್ದರೆ ಅದು ಇಸ್ರೇಲಿನ ಮೊಸಾದ್ (Mossad)! ಓದಿ ನೋಡಿ...
ಈ ಪುಸ್ತಕ ಯಹೂದಿಗಳ ಹುಟ್ಟಿನಿಂದ ಹಿಡಿದು ಇಸ್ರೇಲ್ ಎಂಬ ದೇಶದ ಹುಟ್ಟಿನ ಇತಿಹಾಸದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿ, ನಂತರದ ಅಧ್ಯಾಯಗಳೆಲ್ಲಾ ಮೊಸಾದ್ ನಡೆಸಿದ ರಣ ಕಾರ್ಯಾಚರಣೆಗಳಿಗೆ ಮೀಸಲಿಟ್ಟಿದೆ. ವಿದೇಶಾಂಗ ನೀತಿ, ಆಂತರಿಕ ಭದ್ರತೆ, ಗುಪ್ತಚರ ವ್ಯವಹಾರದ ಬಗ್ಗೆ ಯಾರಿಗಾದರೂ ಆಸಕ್ತಿ ಹುಟ್ಟಿಸುವಂತಹ ಪುಸ್ತಕ ಇದು. ಖಂಡಿತವಾಗಿಯೂ ಒಂದೇ ಸಲಕ್ಕೆ ಪುಸ್ತಕ ಓದಿಸಿಕೊಂಡು ಹೋಗುತ್ತದೆ.
ಇಸ್ರೇಲಿನ ಹಾಗೂ ಭಾರತದ ನಡುವಿನ ಸಾಮ್ಯತೆ ಹಾಗೂ ಆಯಾ ದೇಶಗಳು ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಅಲ್ಲಲ್ಲಿ ನಮಗೆ ಪರಿಚಯವಾಗುತ್ತದೆ. ಮೊದಲನೆಯ ಅಧ್ಯಾಯದಲ್ಲಿನ ವಿಚಾರ ಕಡೆಯ ಅಧ್ಯಾಯದಲ್ಲೂ ಪುನರಾವರ್ತನೆ ಆಗಿದೆ ಅಂತ ಅನ್ನಿಸಿದರೂ ಪುಸ್ತಕದ ಆಶಯ ಓದುಗರಿಗೆ ಮನದಟ್ಟಾಗಲು ಇದು ಅವಶ್ಯ. ಮೊದಲ ಮುದ್ರಣದಲ್ಲಿ ಹಲವು ಅಕ್ಷರ ದೋಷಗಳಿವೆ. ಮುಂದಿನ ಪ್ರಕಟಣೆಗಳಲ್ಲಿ ತಿದ್ದಬಹುದು ಎಂದು ಕೊಂಡಿದ್ದೇನೆ.
ಇಸ್ರೇಲ್ ಕುರಿತು ನನಲ್ಲಿ ಆಸಕ್ತಿ ಹುಟ್ಟಿಸಿದ್ದು ಅಜಿತ್ ಹನುಮಕ್ಕನವರ್ ಅವರ ಮಾತುಗಳು. ಆ ಆಸಕ್ತಿ ಹೆಚ್ಚು ಮಾಡಿದ್ದು ಲೇಖಕ ಶ್ರೀಕಾಂತ ಶೆಟ್ಟಿ. ಈರ್ವರಿಗೂ ಧನ್ಯವಾದಗಳು.
ಇಸ್ರೇಲ್ ಮಾಡಿರುವುದು ಎಷ್ಟು ಸರಿ ಎಷ್ಟು ತಪ್ಪು ಅವುಗಳು ಬೇರೆಯ ಚರ್ಚೆ ಆದರೆ ಆ ಒಂದು ಪುಟ್ಟ ಜನಾಂಗ ತನ್ನ ಉಳಿವಿಗಾಗಿ ಎಷ್ಟರ ಮಟ್ಟಿಗೆ ಹೋಗಬಹುದು ಎಂಬುದು ಈ ಪುಸ್ತಕದ ಪ್ರತಿ ಹಾಳೆಯಲ್ಲಿ ಕೂಡ ಇದೆ. ಓದಿ ಮುಗಿಸಿದಾಗ ಅಬ್ಬಾ ಎಂಥಾ ಜನ ಇವರು ಎಂದಷ್ಟೇ ಹೇಳಬಹುದು