ಪುಸ್ತಕದ ಹೆಸರು, ಹಿಂಬದಿಯ ರಕ್ಷಾಪುಟದಲ್ಲಿನ blurb ಎಲ್ಲ ನೋಡಿ ಇದೊಂದು ಹದಿವಯಸ್ಸಿನ ಪ್ರೇಮಕಥೆಯ ಕಾದಂಬರಿಯೋ ನೀಳ್ಗತೆಯೋ ಇರಬಹುದು ಅಂದುಕೊಂಡೇ ಓದಲು ಕುಳಿತದ್ದು. Its not just a love-breakup thing but a ಕಥಾಸಂಕಲನ ಅಂತ ಗೊತ್ತಾದಾಗ ಆಶ್ಚರ್ಯದ ಜೊತೆಗೇ ಖುಷಿಯೂ ಆಯ್ತು. ನನ್ನೆಲ್ಲ presumptions ಮೀರಿ ಈ ಪುಸ್ತಕ ನನಗಿಷ್ಟವಾಯ್ತು. ಏನನ್ನೂ ಡ್ರಾಗ್ ಮಾಡದ, ಹೇಳಬಹುದಾದ್ದನ್ನು ಸರಳವಾಗೇ ಹೇಳುವ ಬರಹ ಶೈಲಿ, ತಾನು ಕಥೆಗಾರ- ಆದ ಕಾರಣ ಜಗತ್ತಿಗೆ ಉಪದೇಶಗಳನ್ನೂ ಸಂದೇಶಗಳನ್ನೂ ರವಾನಿಸುವುದು ನನ್ನ ಹಕ್ಕು ಎಂಬ ಯಾವ ಚೊರೆಗಳನ್ನೂ ಮಾಡದೇ ತನ್ನ ಅನುಭವಕ್ಕೆ ಸಿಕ್ಕ ತನಗೆ ಆಸಕ್ತಿಕರ ಅನಿಸಿದ ದೈನಂದಿನ ದೃಷ್ಯಾವಳಿಗಳನ್ನೇ ಇನ್ನಷ್ಟು ಚೆಂದಗಾಣಿಸಿ ಅಲ್ಲಲ್ಲಿ ನಾವು ಪೆನ್ಸಿಲ್ಲಿನಿಂದ ಅಡಿಗೆರೆ ಎಳೆದಿಡಬಲ್ಲಂತ ಸಾಲುಗಳನ್ನೂ ಅಡುಗೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸುವಂತೆ ಸೇರಿಸಿ ಕಥೆಯಾಗಿಸಿದ ರೀತಿ ನನಗೆ ಬಹಳವೇ ಇಷ್ಟವಾಯ್ತು.
ಪ್ರತೀ ಕಥಾಸಂಕಲನದಲ್ಲೂ ಅಷ್ಟೂ ಕಥೆಗಳ ನಡುವೆ ಒಂದು ದಿ ಬೆಸ್ಟ್ ಅನ್ನಬಹುದಾದ ಕಥೆ ಇರುತ್ತದಲ್ಲಾ, ಈ ಸಂಕಲನದ ಪ್ರತೀ ಕಥೆ ಓದುವಾಗಲೂ ನನಗೆ ಆ ದಿ ಬೆಸ್ಟ್ ಕಥೆ ಇದೇ ಇರಬಹುದಾ ಅನಿಸುತ್ತಿತ್ತು, ಅಷ್ಟರ ಮಟ್ಟಿಗೆ ಎಲ್ಲ ಕಥೆಗಳೂ ಇಂಪ್ರೆಸಿವ್ವಾಗಿವೆ. ಸಂಕಲನದಲ್ಲಿರುವ ಹನ್ನೆರಡೂ ಕಥೆಗಳೂ ಚೆನ್ನಾಗೇ ಇವೆಯಾದರೂ ಅದರಲ್ಲೇ ಬೂದುಬಣ್ಣದ ಮಾನವ, ಪತ್ತೆ, ಕಣ್ಮರೆ, ಸರಳು, ಪದಬಂಧ ಕಥೆಗಳು ಒಂದು ತೂಕ ಹೆಚ್ಚೇ ಇಷ್ಟವಾದವು. _______________ ಜಗತ್ತು ಒಂದು ಅತೀ ಕಡಿಮೆ ವ್ಯಾಸದ ವೃತ್ತ. ಇನ್ನೊಬ್ಬರ ಬಾಲ ನಮ್ಮ ಕೈಯಲ್ಲಿದೆ ಎಂದು ನಾವು ಹಿಗ್ಗಿದರೆ ಅವರು ನಮ್ಮ ಜುಟ್ಟು ಹಿಡಿದು ಹಿಗ್ಗುತ್ತಿರುತ್ತಾರೆ. - 'ರಂಪ' ಕಥೆಯಿಂದ
ಬುಕ್ ಟೈಟಲ್ ನೋಡಿ ಇಂದಿನ ಹೆಚ್ಚಿನ ಲೇಖಕರಂತೆ ಸಂಪನ್ನ ಬಾಲ್ಯ, ನಗರದ ಬದುಕಿನ ಜಾಳುತನ, ಮೊದಲ ಪ್ರೀತಿ -ಹಳೆ ಸ್ನೇಹ ಇಂತಹ ಕತೆಗಳು ಎಂದೆಣಿಸಿ ಎತ್ತಿಕೊಂಡ ಪುಸ್ತಕ ನನ್ನ ನಿರೀಕ್ಷೆ ಸುಳ್ಳು ಮಾಡಿ ಗೆದ್ದಿದೆ. ಬೆಂಗಳೂರಿನ ಒಡಂಬಡಿಕೆಗೆ ಸಾಕ್ಷಿಯಾಗಿ ಇಂಗ್ಲೀಷ್ ಬರಿತ ಕನ್ನಡದ ಸಾಲುಗಳಿರುತ್ತವೇನೋ ಅನ್ನುವ ಬೇಸರಕ್ಕೆ ಅವಕಾಶವಿರದೆ ಶುದ್ಧ ಭಾಷೆಯ ಬಳಕೆ ಕತೆಗಳ ಪ್ಲಸ್ ಪಾಯಿಂಟ್. ವಿಭಿನ್ನ ಕಥಾವಸ್ತುಗಳು, ಸಂಬಂಧದ ಕೊಂಡಿಗಳು, ಸಹಜ ಪಾತ್ರಗಳು ಹಾಗೂ ಅಚ್ಚುಕಟ್ಟಾದ ನಿರಾಯಸ ನಿರೂಪಣೆ ಕತೆಗಳನ್ನು ಇನ್ನಷ್ಟು ಚೆಂದವಾಗಿಸಿದೆ. ಚಾಕಲೇಟ್ ನಡುವೆ ಸಿಗವ ಡ್ರೈ ಫ್ರೂಟ್ಸಂತೆ ನಡುನಡುವೆ ಹಟ್ಟಾತ್ತಾಗಿ ಬರುವ ಗಂಭೀರ ಸಾಲುಗಳು ಓದನ್ನು ಇನ್ನಷ್ಟು ಮುದಗೊಳಿಸುತ್ತವೆ. ಉದಾ: “ ಈಗ ಸಿಕ್ಕಿರುವುದೇ ನಮ್ಮ ಯೋಗ್ಯತೆಗಿಂತ ತೀರ ಜಾಸ್ತಿಯಾಗಿದ್ದು ಎಂದು ಒಮ್ಮೆ ಅನ್ನಿಸಿಬಿಟ್ಟರೆ ಸಾಕು, ಮನಸ್ಸು ನಂತರದಲ್ಲಿ ಆಸೆಗಳನ್ನೇ ಪಡಲು ಹೋಗುವುದಿಲ್ಲ”. “ ಹುಟ್ಟು ಮತ್ತು ಸಾವುಗಳ ಮಧ್ಯೆ ಮನುಷ್ಯ ಹೆಚ್ಚಿನ ಸಮಯ ವ್ಯರ್ಥ ಮಾಡುವುದು ಆಲೋಚನೆಗಳಲ್ಲಿಯೇ ಅಲ್ಲವೇ?!” ಹೀಗೆ ಸಾಕಷ್ಟಿವೆ. ಪದಬಂಧ ಹಾಗೂ ಸರಳು ಇಷ್ಟವಾದ ಕತೆಗಳು. ಕಣ್ಮರೆ ಕಾಡಿದ ಕತೆ. ಒಂದು ಒಳ್ಳೆಯ ಕತೆಗಳ ಸಂಕಲನ.
ಯಾವುದೇ ಇಸಂಗಳ ಹಂಗಿಲ್ಲದೆ ಪ್ರಥಮ ಪುರುಷ ಪ್ರಧಾನವಾದ ಹಲ ಕತೆಗಳ ಹೊಂದಿರುವ ಮಜವಾದ ಸಂಕಲನ ಇದು. ಮಜವಾದ ಎಂದು ಯಾಕೆ ಅಂದೆ ಎಂದರೆ ಇಲ್ಲಿನ ಕತೆಗಳು ಮಾತುಗಳಲ್ಲಿ ಆಡಿದರೂ ಕೇಳಲು ಖುಷಿ ಕೊಡುವಂತಹವು. ' ನಿಮಗೆ ನಾನು ಜೀವನಪೂರ್ತಿ ಅದೇ ಬಸ್‌ಸ್ಟಾಪ್‌ನಲ್ಲಿ ನಿಂತ್ಕೊಂಡಿರಬೇಕಿತ್ತಾ ಸಾರ್? ' ಎಂಬ ಒಂದು ಕತೆಯ ಅಂತ್ಯ ಇದೆಯಲ್ಲ ಅದು ಇಡೀ ಕತೆಯ ಹೊಳೆಯಿಸುವ ಬಗೆ ನನಗೆ ಬಹಳ ಇಷ್ಟವಾಯಿತು. ಇದು ಮಾತ್ರವಲ್ಲ ,ಎರಡನೇ ಬ್ರಹ್ಮಚರ್ಯ, ಸೆಕೆಂಡ್ ಹ್ಯಾಂಡ್ ,ಲೆಟ್ಸ್ ಬ್ರೇಕಪ್ ಕತೆಗಳು ತಮ್ಮ ತಾಜಾ ಎನಿಸುವ ನಿರೂಪಣೆಯಿಂದ ಖುಷಿ ಕೊಟ್ಟವು.
ಇಡೀ ಸಂಕಲನದಲ್ಲಿ ವೈಯಕ್ತಿಕವಾಗಿ ಸೆಕ್ಯುಲರ್ ಆಗಲು ಹೊರಟ ಕತೆ 'ಜಮಾ' ಎಂದು ನನಗದು ಇಷ್ಟ ಆಗಲಿಲ್ಲ. ಕತೆ ಓದಲು ಮಜವಾಗಿದ್ದರೂ ಅದು ಹೊಮ್ಮಿಸಿದ ಅರ್ಥ ತಪ್ಪು ಎನಿಸಿತು.
ಸಂಪತ್ ಬಹಳ ಚಂದ ಬರೀತಾರೆ. ಒಂದು ಕಡೆ ನಿಲ್ಲಬೇಕಾದದ್ದು ಅನಿವಾರ್ಯತೆ ಆಗಬಾರದು ಮತ್ತು ಅದು ಆಯ್ಕೆಯೂ ಆಗಬಾರದು ಎಂಬ ಗಟ್ಟಿತನ ಅವರಲ್ಲಿ ಹೀಗೇ ಉಳಿದರೆ ಕನ್ನಡಕ್ಕೆ ಅದ್ಭುತ ಕತೆಗಳ ಕೊಡುವ ಅದರಲ್ಲೂ ಸ್ವತಂತ್ರ ದನಿಯ ಕತೆಗಳ ಕೊಡುವ ಶಕ್ತಿ ಅವರಲ್ಲಿದೆ.
ಗಕ್ಕನೆ ಷಾಕ್‌ನ ಮುಗಿತಾಯ ಕೊಡುವ ಹಪಸ ಕತೆಗಾರರ ಸಂಚಾರಿ ಭಾವದಿಂದ ಅವರು ಹೊರಬಂದಿದ್ದಾರೆ ಎಂಬುದಕ್ಕೆ ಈ ಸಂಕಲನದಲ್ಲಿ ಅನೇಕ ಸಾಕ್ಷಿಗಳು ಸಿಗುತ್ತವೆ
ಕತೆ ಎಂದರೆ ಹರಿಯುವ ನದಿಯ ದಡದಲ್ಲಿ ನಿಂತು ನೋಡಿದ ಹಾಗೆ..ಅದು ಆದಿಯೂ ಅಲ್ಲ ಅಂತ್ಯವೂ ಅಲ್ಲ. ಅದು ನಮಗೆ ದಕ್ಕಿದಷ್ಟು ಎಂಬ ಭಾವನೆ ಇದನ್ನು ಓದಿದಾಗ ನನ್ನಲ್ಲಿ ಮೂಡಿತು.
ಒಬ್ಬ ಬೆಂಗಳೂರಿಗ. ಕಾರ್ಪೊರೇಟ್ ಕಂಪೆನಿಯೊಂದರಲ್ಲಿ ಮ್ಯಾನೇಜರ್. ಇವನಿಗೊಂದು ಗೀಳು – ಎಲ್ಲವೂ ಇದ್ದಂತೆಯೇ ಇರಬೇಕು; ಏನೂ ಬದಲಾಗಬಾರದು. ಇಂಥವನು ತಾನು ಆಫೀಸ್ ಕ್ಯಾಬ್ ಹತ್ತುವ ಸ್ಥಳದಲ್ಲಿ ಒಬ್ಬ ದಿನಗೂಲಿ ನೌಕರನನ್ನು ಕಳೆದ ಐದು ವರ್ಷದಿಂದಲೂ ನೋಡುತ್ತಾ ಬಂದಿದ್ದಾನೆ. ಇವರು ಪರಸ್ಪರ ಮುಗುಳ್ನಗೆ ಕೊಟ್ಟುಕೊಂಡಿದ್ದಾರೆ. ಪ್ರಪಂಚ ಏನೂ ಬದಲಾಗಬಾರದೆನ್ನುವ ನಮ್ಮ ಮ್ಯಾನೇಜರನಿಗೆ ಆ ದಿನಗೂಲಿ ನೌಕರನನ್ನು ಕಂಡರೆ ಸಮಾಧಾನ; ಎಲ್ಲವೂ ಇದ್ದ ಹಾಗೆಯೇ ಇದೆ ಎನ್ನುವುದಕ್ಕೆ ದಿನಾ ಬೆಳಗ್ಗೆ ಅಲ್ಲಿ ಹಾಜರಿರುವ ಅವನೇ ಸಾಕ್ಷಿ. ಆದರೆ ಇದ್ದಕ್ಕಿದ್ದಂತೆ ಒಂದು ದಿನ ಅವನು ಮಾಯ, ಆ ಸ್ಥಳದಲ್ಲಿ ಅವನು ಇಲ್ಲ! ಅವನು ಕಣ್ಮರೆಯಾಗಿದ್ದಾನೆ. ಮ್ಯಾನೇಜರ್ ಗೆ ನಿದ್ದೆ ಬರುವುದಿಲ್ಲ. ಅವನು ಈಗ ತನ್ನ comfort zone ಗಳನ್ನು ತೊರೆದು ಬೀದಿಗಿಳಿದು ಹುಡುಕಾಟ ನಡೆಸುತ್ತಾನೆ.
ಈ ಪುಸ್ತಕದಲ್ಲಿರುವ ‘ಕಣ್ಮರೆ’ ಎಂಬ ಕಥೆ ಹೀಗೆ ಶುರುವಾಗುತ್ತದೆ. ಬದಲಾವಣೆಯನ್ನು ದ್ವೇಷಿಸುವ ಇವನ ಹುಡುಕಾಟದಲ್ಲಿ ಬೆಂಗಳೂರಿನಲ್ಲಾಗುತ್ತಿರುವ ಬದಲಾವಣೆಗಳು ಗೊತ್ತೇ ಆಗದ ಹಾಗೆ ದಾಖಲಾಗುತ್ತಾ ಹೋಗುತ್ತದೆ. ಬೆಂಗಳೂರು ಕೂಡ ಕಥೆಯಲ್ಲಿ ಒಂದು ಪಾತ್ರವಾಗುತ್ತದೆ. ಹೀಗೆಲ್ಲ ಹೇಳಿದರೆ ಇದು ಬಹಳ ಗಂಭೀರ ಕಥೆ ಅನ್ನಿಸಬಹುದು. ಆದರೆ ಕಥೆ ಹಾಗಿಲ್ಲ; ಅದು ಕಪಟ ಗಾಂಭೀರ್ಯಕ್ಕೆ ಎಲ್ಲೂ ಎಡೆ ಕೊಡದೆ ಸೀದಾ ಮುಂದಕ್ಕೆ ಸಾಗುತ್ತಿರುತ್ತದೆ. ‘ಕಣ್ಮರೆ’ ಓದಿ ಎಷ್ಟೋ ದಿನಗಳಾದ ಮೇಲೂ ಮನಸಿಂದ ಮರೆಯಾಗದೆ ಉಳಿಯುವ ಕಥೆ.
ಹೀಗೆ ಒಂದು complex ಕಥೆ ಎನ್ನಿಸುವ ‘ಕಣ್ಮರೆ’ಯ ಒಂದು ಪಕ್ಕದಲ್ಲಿ ‘ರಂಪ’ ಎನ್ನುವ ಅಪ್ಪಟ stand-up comedy material ಅನ್ನಿಸುವ ಕಥೆ ಇದ್ದರೆ ಇನ್ನೊಂದು ಪಕ್ಕದಲ್ಲಿ ಮದುವೆಮನೆಯಲ್ಲಿ ಹುಡುಗನೊಬ್ಬ ಪತ್ತೇದಾರಿ ನಡೆಸುವ ಕಥೆ! ಇನ್ನೆಲ್ಲೋ ಬಿಯರ್ ಫ್ಯಾಕ್ಟರಿಯೊಂದರಲ್ಲಿ ಬಿಯರ್ ತಯಾರಿಸುವವನು ಮತ್ತು ಬಿಯರ್ ಕ್ವಾಲಿಟಿ ಪರಿಶೀಲಿಸುವವನ ನಡುವೆ ನಡೆಯುವ ಜಟಾಪಟಿಯ ಬಗ್ಗೆ ಒಂದು ಕಥೆಯಿದೆ. ಪ್ರತಿ ಕಥೆಯ ಲೋಕವೂ ಬೇರೆಯೇ, ಒಂದರಲ್ಲಿ ಕಂಡದ್ದು ಮತ್ತೊಂದರಲ್ಲಿ ಕಾಣಲು ಸಿಗುವುದಿಲ್ಲ.
ಈ ಪುಸ್ತಕದಲ್ಲಿರುವ ಎಲ್ಲ ಕಥೆಗಳೂ ಓದುಗನಿಗೆ ಕಷ್ಟ ಕೊಡದೆ ಮಜವಾಗಿ ಓದಿಸಿಕೊಂಡು ಹೋಗಬೇಕೆಂಬ ನಿಯಮಕ್ಕೆ ಬದ್ಧವಾಗಿರುವಂತಿವೆ. ಈ ಮಜದ ನಡುವೆಯೇ ಇನ್ನೂ ಆಳವಾದದ್ದೇನನ್ನೋ ಹೇಳಲು ತುಡಿಯುತ್ತಿವೆ. ಕಥೆಗಾರ ಏನೇನೋ ಲೆಕ್ಕಾಚಾರ ಹಾಕಿ ಬರೆದಾಗಲೂ ಕೆಲವು ಕಥೆಗಳು ಕಥೆಗಾರನ ಅಂಕೆಯನ್ನು ಮೀರಿ ಬೇರೇನೋ ಹೇಳಲು ಹೊರಡುತ್ತವೆ. ಹಾಗೆ ನೋಡಿದರೆ ‘Let’s Breakup’ ಎಂಬ ಹೆಸರು ಇಟ್ಟಿದ್ದಕ್ಕೆ ಸಮಜಾಯಿಷಿಯ ರೀತಿಯಲ್ಲಿ ಮುನ್ನುಡಿಯಲ್ಲಿ ವಿವರಣೆ ಕೊಟ್ಟಿದ್ದಾರೆ ಸಂಪತ್. ಆದರೆ ಈ ಕಥೆಗಳು ನಿಜಕ್ಕೂ ಹೇಳ ಹೊರಟಿದ್ದು ‘Let’s Break Away’ ಎಂದು ಇರಬಹುದೇನೋ ಅನ್ನಿಸುತ್ತದೆ!
'ಲೆಟ್ಸ್ ಬ್ರೇಕಪ್' - ಸಂಪತ್ ಸಿರಿಮನೆ ಅವರಿಂದ ರಚಿತವಾದ ಕಥಾಸಂಕಲನ. ಮುಖಪುಟವನ್ನು ನೋಡಿದಾಗ ಹೆಚ್ಚಿನ ಕಥೆಗಳು ಪ್ರೀತಿಗೆ ಸಂಬಂಧಿಸಿದ್ದೇನೋ ಎಂದು ಊಹಿಸಿದ್ದರೆ ಅದು ತಪ್ಪಾಗುತ್ತೆ. ಲೇಖಕರೇ ಹೇಳುವಂತೆ ಬ್ರೇಕಪ್ ಎನ್ನುವುದು ಇಬ್ಬರು ವ್ಯಕ್ತಿಗಳ ಮಧ್ಯೆಯೇ ಸಂಭವಿಸಬೇಕೆಂದೇನಿಲ್ಲ. ನಾವು ಮತ್ತು ನಮ್ಮ ನಂಬಿಕೆಯ ಮಧ್ಯೆಯೂ ಸಂಭವಿಸಬಹುದು. ಸತತವಾಗಿ ನಮ್ಮ ಸುತ್ತ ನಾವೇ ಹಾಕಿಕೊಂಡಿರುವ ಬೇಲಿಗಳ ಜೊತೆ ಬ್ರೇಕಪ್ ಮಾಡಿಕೊಳ್ಳುತ್ತಾ ಸಾಗುವುದೇ ಜೀವನ ಎನ್ನುವುದು ಶೀರ್ಷಿಕೆಯ ಒಳಾರ್ಥ. ಈ ವಾಕ್ಯಕ್ಕೆ ಪುಷ್ಠಿ ಕೊಡುವಂತೆ ಕ���ೆಗಳು ಸಾಗುತ್ತವೆ. ಒಟ್ಟು ೧೨ ಕಥೆಗಳಿರುವ ಪುಟ್ಟ ಕಥಾಸಂಕಲನ ಇದಾಗಿದ್ದು ಒಂದೊಂದು ಕಥೆಗಳನ್ನು ರಸವತ್ತಾಗಿ, ಸರಳವಾಗಿ ಹೇಳಿದ್ದಾರೆ. ಅವರ ೧೨ ಕಥೆಗಳಲ್ಲಿ ನನಗೆ ತುಂಬಾ ಮನಸ್ಸಿಗೆ ಖುಷಿ ಕೊಟ್ಟ ಕಥೆಗಳೆಂದರೆ 'ಪದಬಂಧ', 'ಸರಳು', 'ಜಮಾ' , 'ಛೇದನ' ,'ಕಣ್ಮರೆ' ಹಾಗೂ 'ಚುಚ್ಚುಮದ್ದು'.