ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ತಮ್ಮ ಬರವಣಿಗೆಯಲ್ಲಿ ಜಾನಪದ ಸೊಗಡನ್ನು ಮೈದಾಳಿಸಿಕೊಂಡು ಬಂದಿರುವ ಚಂದ್ರಶೇಖರ ಕಂಬಾರರು ಹಲವು ಪ್ರತಿಭೆಗಳ ಸಂಗಮ. ಕವಿ, ನಾಟಕಕಾರ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಹಾಡುಗಾರ, ಅಧ್ಯಾಪಕ, ಜಾನಪದ ತಜ್ಞ ಹೀಗೆ ವಿವಿಧ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಸಮಗ್ರ ಸಾಹಿತ್ಯಕ್ಕೆ ೨೦೧೦ ರಲ್ಲಿ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಲಭಿಸಿತು.
ಹಳ್ಳಿಯ ಬಡವರ ಹೊಲಗಳನ್ನ ಸಾಲದ ನೆಪವೊಡ್ಡಿ ತನ್ನ ಹೆಸರಿಗೆ ಮಾಡಿಕೊಳ್ಳುವ ಮತ್ತು ಕಂಡ ಕಂಡ ಹೆಣ್ಣುಗಳ ಮೇಲೆ ಕೈ ಹಾಕುವ ಚಪಲ ಗೌಡ. ಮದುವೆಯಾಗಿ ಹತ್ತು ವರ್ಷವಾದರೂ ಮಕ್ಕಳಿಲ್ಲದೆ ಕೊರಗುವ ಗೌಡತಿ. ವರ್ಷಗಳಿಂದ ಊಳುತ್ತ ಬಂದಿದ್ದ ಹೊಲಕ್ಕಾಗಿ ಗೌಡನಿಂದ ಕೊಲೆಯಾದ ತಂದೆಯ ಸೇಡನ್ನು ತೀರಿಸಿಕೊಳ್ಳಬೇಕೆಂಬ ಬಸಣ್ಣ್ಯಾ. ಇದೆಲ್ಲದರ ನಡುವೆ ಬರುವ ಫಲ ಕೊಡುವ ದೇವರು ಜೋಕುಮಾರಸ್ವಾಮಿ. ಹೊಲೆಯರ ಹೆಂಗಸು ಹೇಳುವ ದೇವರ ಕತೆ ಕೇಳಿ ತಾನೂ ಸ್ವಾಮಿಗೆ ಪಲ್ಲೆ ಮಾಡಿ ಗಂಡನಿಗೆ ತಿನಿಸಿದರೆ ಮಕ್ಕಳಾಗುವೆಂದು ಗೌಡತಿ ಹುಣ್ಣಿಮೆಯ ದಿನ ಜೋಕುಮಾರಸ್ವಾಮಿಯನ್ನು ಮನೆಗೆ ತರುತ್ತಾಳೆ. ಆದರೆ ಹೊಲದಲ್ಲಿ ಮಲಗಿದವನು ಗೌಡನೆಂದು ತಿಳಿದು ಬಸಣ್ಣ್ಯಾಗೆ ಪಲ್ಲೆ ತಿನಿಸಿ ಅವನ ಬಲೆಗೆ ಬೀಳುತ್ತಾಳೆ. ಇದನ್ನು ತಿಳಿದು ಕೋಪದಿಂದ ತನ್ನ ಆಳುಗಳನ್ನ ಕಳುಹಿಸಿ ಗೌಡ ಬಸಣ್ಣ್ಯಾನನ್ನು ಕೊಲ್ಲಿಸುತ್ತಾನೆ. ಊಳುವವನೇ ಹೊಲದೊಡೆಯ ಎಂಬಂತೆ ನಿಜವಾಗಿ 'ಪ್ರೀತಿ'ಸುವವನೇ ಗಂಡನ್ಯಾಕಾಗಬಾರದು ಎಂಬರ್ಥದಲ್ಲಿ ನಾಟಕ ಸಾಗುತ್ತದೆ. ಕಂಬಾರರ ದೇಸಿ ಶೈಲಿಯ ಸಂಭಾಷಣೆಗಳು, ಹಿನ್ನೆಲೆಯಲ್ಲಿ ಬರುವ ಮೇಳದವರ ಗೀತೆಗಳು ನಾಟಕದ ಶ್ರೀಮಂತಿಕೆಗೆ ಹಿಡಿದ ಕನ್ನಡಿ.