#ಪರಿಚಯ_೧_೨೦೨೬
ಕೃತಿ: ಗಾಂಧಿ ಕಥನ
ಲೇಖಕರು: ಡಿ.ಎಸ್.ನಾಗಭೂಷಣ
ಪ್ರಕಾಶಕರು: ಎಂ. ಮೂನಿಸ್ವಾಮಿ ಅಂಡ್ ಸನ್ಸ್, ಬಸವನಗುಡಿ, ಬೆಂಗಳೂರು
ಇತ್ತೀಚಿನ ದಿನಮಾನಗಳಲ್ಲಿ ವಿಪರೀತವಾಗಿ ಸ್ತುತಿಸಲ್ಪಡುವ ಮತ್ತು ಅಷ್ಟೇ ಕಟುವಾಗಿ ವಿಮರ್ಶೆ ಅಥವಾ ನಿಂದನೆಗೆ ಒಳಗಾಗುತ್ತಿರುವ ನಾಯಕರಲ್ಲಿ ಗಾಂಧೀಜಿ ಕೂಡ ಒಬ್ಬರು. ಈ ಎರಡು ಬಗೆಯ ಗುಂಪುಗಳು ಅಥವಾ ವ್ಯಕ್ತಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಒಂದು ಘಟನೆಯನ್ನು, ಒಂದು ಮಾತನ್ನು ತೆಗೆದುಕೊಂಡು ಇಡೀ ಜೀವನವನ್ನು ನಿಷ್ಕರ್ಷೆಗೆ ಒಳಪಡಿಸುವುದು ಅಷ್ಟು ಸಮಂಜಸವಲ್ಲ ಎಂದು ನನ್ನ ಅಭಿಪ್ರಾಯ. ಹಾಗಾಗಿ ಕೇವಲ ಒಂದು ವಿಚಾರವನ್ನು ಸೀಮಿತಗೊಳಿಸದೆ ಇಡೀ ಜೀವನವನ್ನು ಸಮಗ್ರವಾಗಿ ಅವಲೋಕಿಸಿದಾಗ ಮಾತ್ರ ಒಂದು ಸ್ಪಷ್ಟ ಚಿತ್ರಣ ಸಿಗಬಹುದು ಎಂದು ನನ್ನ ಭಾವನೆ. ಇಷ್ಟಾದರೂ ಸಹ ಇತಿಹಾಸದ ಘಟನೆಗಳನ್ನು ‘ಇದಮಿತ್ಥಂ’ ಎಂದು ವರ್ಣಿಸುವುದು ಸಹ ಅಸಾಧ್ಯ,ಕಾರಣ ಐತಿಹಾಸಿಕ ವಿವರಗಳನ್ನು ಬರೆಯುವಾಗಿನ ಮನಸ್ಥಿತಿ, ಪರಿಶೀಲಿಸಿದ ಐತಿಹಾಸಿಕ ಪರಿಕರಗಳು,ಮಾಹಿತಿಗಳು ಮತ್ತು ಓದುಗರ ಮನಸ್ಥಿತಿ ಸಹ ರೂಪುಗೊಳ್ಳುವ ಅಭಿಪ್ರಾಯದ ಮೇಲೆ ಪರಿಣಾಮ ಬೀರುತ್ತವೆ. ಈ ಪುಸ್ತಕದ ರಕ್ಷಾ ಪುಟದಲ್ಲಿ “ಈ ಪುಸ್ತಕವು ಗಾಂಧೀಜಿಯವರ ಜೀವನ ಚರಿತ್ರೆ ಅಥವಾ ಮಹಾತ್ಮರಾಗಿ ವೈಭವೀಕರಿಸದೆ ಅವರ ಬದುಕಿನ ಮುಖ್ಯ ಸಂಗತಿಗಳನ್ನು ಓದುಗರ ಮುಂದಿಟ್ಟು ಅವರೇ ಅವರನ್ನು ಅರ್ಥಮಾಡಿಕೊಳ್ಳಲು ಆಹ್ವಾನಿಸುವ ಒಂದು ಪ್ರಯತ್ನ” ಎಂಬ ಒಕ್ಕಣಿಕೆಯ ಮಾತುಗಳಿಗೆ ತಕ್ಕಂತೆ ಎಲ್ಲಿಯೂ ತನ್ನ ಅಭಿಪ್ರಾಯಗಳನ್ನು ಹೇರದ ಪ್ರಾಮಾಣಿಕ ಕೃತಿ ಎಂದು ಓದುತ್ತಾ ಸಾಗಿದಂತೆ ಮನವರಿಕೆಯಾದ ಅಂಶ.
ಗಾಂಧೀಜಿಯವರ ಹುಟ್ಟು ಬಾಲ್ಯದ ದಿನಗಳಿಂದ ಪ್ರಾರಂಭವಾಗಿ,ಅವರ ವಿದ್ಯಾಭ್ಯಾಸ, ವಕೀಲಿ ವೃತ್ತಿ, ದಕ್ಷಿಣ ಆಫ್ರಿಕಾದಲ್ಲಿ ನಡೆದ ವರ್ಣಬೇಧದ ವಿರುದ್ಧದ ಹೋರಾಟ, ಭಾರತದಲ್ಲಿ ಸ್ವಾತಂತ್ರ್ಯ ಚಳುವಳಿಯ ನೇತೃತ್ವ ಮತ್ತು ಅವರಿಗೆ ಸಾರ್ವತ್ರಿಕವಾಗಿ ದೊರೆತ ಜನಮನ್ನಣೆ, ಸ್ವಾತಂತ್ರ್ಯ ಹತ್ತಿರವಾಗುತ್ತಿದ್ದಂತೆ ಇತರ ಕಾಂಗ್ರೆಸ್ ನಾಯಕರುಗಳ ಜೊತೆಗಿನ ಭಿನ್ನಾಭಿಪ್ರಾಯಗಳು, ದೇಶ ವಿಭಜನೆಯ ಸಮಯದಲ್ಲಿ ಅವರು ಅನುಭವಿಸಿದ ತಳಮಳಗಳು ಮತ್ತು ಕೊನೆಯದಾಗಿ ಅವರ ಹತ್ಯೆಯವರೆಗಿನ ವಿವರಗಳು ಈ ಬೃಹತ್ ಕೃತಿಯಲ್ಲಿ ಅಡಕವಾಗಿವೆ. ಪುಸ್ತಕದ ಓದು ಸಾಗುತ್ತಿರುವಾಗ ನನ್ನಲ್ಲಿದ್ದ ಕೆಲವು ಸಂಶಯಗಳಿಗೆ ಸರಿಯಾದ ಉತ್ತರ ದೊರಕಿದರೆ ಇನ್ನು ಕೆಲವು ಮತ್ತಷ್ಟು ಕಗ್ಗಂಟಾಗಿ ಕುಳಿತಿವೆ. ಈ ಸಂಶಯಗಳನ್ನು ಪರಿಹರಿಸಿಕೊಳ್ಳಲು ಅವರ ಕುರಿತಾದ ಮತ್ತಷ್ಟು ಪುಸ್ತಕಗಳನ್ನು ಓದುವುದು ಸರಿಯಾದ ಮಾರ್ಗವೆನಿಸಿದೆ. ಆದರೆ ಎಷ್ಟೋ ತಪ್ಪು ಕಲ್ಪನೆಗಳು ಕಳೆದು ಒಂದು ಬಗೆಯ ಸ್ಪಷ್ಟತೆ ಸಿಕ್ಕಿದೆ.
ಈ ಪುಸ್ತಕವನ್ನು ಎರಡು ಭಾಗವಾಗಿ ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡಿದ್ದೇನೆ. ಒಂದು ಅವರು ಜನಾಂಗೀಯ ವೈಷಮ್ಯ ವಿರುದ್ಧ ದಕ್ಷಿಣ ಆಫ್ರಿಕಾದಲ್ಲಿ ನಡೆಸಿದ ಹೋರಾಟ ಹಾಗೂ ಭಾರತದಲ್ಲಿ ಕಾಣಬಯಸಿದ ಸಾಮಾಜಿಕ ಸುಧಾರಣೆಗಳು ಮತ್ತು ಎರಡನೆಯದ್ದು ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಅವರು ಸಮಸ್ಯೆಗಳನ್ನು ವಿಶ್ಲೇಷಿಸಿದ ರೀತಿ ಹಾಗೂ ಅವುಗಳ ಪರಿಹಾರೋಪಾಯಕ್ಕೆ ಮಾಡಿದ ಪ್ರಯತ್ನಗಳು. ಜನಾಂಗೀಯ ವೈಷಮ್ಯ ಮತ್ತು ಸಾಮಾಜಿಕ ಪಿಡುಗುಗಳಾದ ಅಸ್ಪೃಶ್ಯತೆ ವಿರುದ್ಧವಾಗಿ ಅವರು ಕೈಗೊಳ್ಳುವ ಹೋರಾಟಗಳು ಮೇಲ್ನೋಟಕ್ಕೆ ಮೆದುವಾಗಿ ಕಂಡರೂ ಸಹ ಅವುಗಳ ಬಗೆಗಿನ ವಿಚಾರಲಹರಿಗಳು, ವಿವಿಧ ಧರ್ಮಗ್ರಂಥಗಳಿಂದ ಉಲ್ಲೇಖಿಸುವ ಉದಾಹರಣೆಗಳು ಅವರ ವ್ಯಕ್ತಿತ್ವದ ಗಟ್ಟಿತನದ ಜೊತೆಗೆ ಹೋರಾಟದ ಗಟ್ಟಿತನವನ್ನು ಸಹ ನಿರೂಪಿಸುತ್ತವೆ. ಕೆಲವು ವಿಚಾರಗಳು ತನ್ನ ಪ್ರಸ್ತುತತೆಯಿಂದ ಇಂದಿಗೂ ಅನೇಕ ಸಮಸ್ಯೆಗಳಿಗೆ ತುರ್ತು ಪರಿಹಾರವನ್ನು ಒದಗಿಸಬಲ್ಲ ಶಕ್ತಿಯನ್ನು ಹೊಂದಿವೆ. ಆದರೆ ಬಳಸುವ ಇಚ್ಛಾಶಕ್ತಿಯ ಕೊರತೆಯೇ ಸಮಸ್ಯೆಯಾಗಿರುವುದು ದುರ್ದೈವ. ಇನ್ನು ಕೆಲವು ವಿಚಾರಗಳು ನಿರ್ಧಾರಗಳು ಮನುಷ್ಯ ಸಹಜವೆಂಬಂತೆ ತಪ್ಪಾಗಿ ಮಾಗಲಾರದ ಗಾಯಗಳನ್ನು ಸಹ ಉಂಟು ಮಾಡಿರುವುದು ಸಹ ಸತ್ಯ.
ಎರಡನೆಯ ವಿಚಾರ, ಸ್ವಾತಂತ್ರ್ಯದ ಬಗೆಗಿನ ಅವರ ಗ್ರಹಿಕೆ. ಕೇವಲ ರಾಜಕೀಯ ಸ್ವಾತಂತ್ರ್ಯವನ್ನು ದೊರಕಿಸಿಕೊಳ್ಳದೆ, ಭಾರತೀಯರಲ್ಲಿ ಅದಾಗಲೇ ಭದ್ರವಾಗಿ ಬೇರೂರಿದ್ದ ಬ್ರಿಟಿಷ್ ಸಂಸ್ಕೃತಿಯಿಂದ ಬಿಡಿಸಿಕೊಳ್ಳುವುದೇ ನಿಜವಾದ ಸ್ವಾತಂತ್ರ್ಯ ಎಂದು ಅವರ ಅಭಿಮತ. ಇದಕ್ಕಾಗಿ ಭಾರತೀಯರು ತಮ್ಮ ಮಾತೃಭಾಷೆಯಲ್ಲಿ ಕಲಿಯುವ ವ್ಯವಸ್ಥೆ, ಹಿಂದೂ ಸಮಾಜ ಬಲಿಷ್ಠವಾಗಿ ಹೊಮ್ಮಬೇಕಾದರೆ ಅಸ್ಪೃಶ್ಯತೆಯ ನಿವಾರಣೆಯ ಅಗತ್ಯತೆ, ಸ್ವಚ್ಛತೆ ಮತ್ತು ಆರೋಗ್ಯದ ಬಗೆಗಿನ ಅವರ ನಿಲುವುಗಳು, ಸತ್ಯ ಮತ್ತು ಅಹಿಂಸೆಯ ಹಿನ್ನೆಲೆಯಲ್ಲಿ ಅವರು ನಡೆಸಿದ ಪ್ರಯೋಗಗಳು ಅವರನ್ನು ಒಬ್ಬ ದಾರ್ಶನಿಕರಾಗಿ ಕಾಣುವಂತೆ ಮಾಡುತ್ತದೆ. ಇಲ್ಲಿ ಉಲ್ಲೇಖನೀಯವಾದ ಇನ್ನಷ್ಟು ಅಂಶಗಳೆಂದರೆ ಲೈಂಗಿಕತೆಯ ಕುರಿತಾದ ಅವರ ಪ್ರಯೋಗಗಳು, ಹಿಂದೂ ಮುಸ್ಲಿಂ ಐಕ್ಯತೆಯ ಬಗೆಗಿನ ಅವರ ಚಿಂತನೆಗಳು ಮತ್ತು ಇತಿಹಾಸವನ್ನು ವಿವರಿಸುವಾಗ ಶಾಂತಿಯ ಘಟ್ಟಗಳನ್ನು ವಿವರಿಸಿ ವೈಷಮ್ಯದ ಘಟ್ಟಗಳನ್ನು ಸೇರಿಸದಿರುವುದು ಒಪ್ಪಿತವಾಗದ ವಿಷಯಗಳು.
ಒಂದು ಒಳ್ಳೆಯ ಪುಸ್ತಕದ ಆರಂಭದೊಂದಿಗೆ ಈ ವರ್ಷದ ಓದನ್ನು ಆರಂಭಿಸಿದ ಖುಷಿ ಮತ್ತು ಅತ್ಯಂತ ತೃಪ್ತಿಕರವಾದ ಓದು.
ನಮಸ್ಕಾರ,
ಅಮಿತ್ ಕಾಮತ್