ನನ್ನ ವೃತ್ತಿ ಜೀವನದಲ್ಲಿ ನಾನು ನೂರಾರು ನಟರನ್ನು ನೋಡಿದ್ದೇನೆ, ಮಾತನಾಡಿದ್ದೇನೆ. ಅವರಲ್ಲಿ ಅರ್ಧದಷ್ಟು ಮಂದಿಯ ಜೊತೆ ಗೆಳೆತನವೂ ನನಗಿದೆ. ಆದರೆ ಎಷ್ಟೋ ಮಂದಿಯ ಜತೆ ಎಷ್ಟು ಹೊತ್ತು ಮಾತನಾಡಿದರೂ ಅಮೂಲ್ಯವಾದದ್ದೇನೂ ನಮಗೆ ಸಿಕ್ಕಿರುವುದಿಲ್ಲ. ನಮ್ಮ ಅನುಭವ ಪ್ರಪಂಚ ಕಿಂಚಿತ್ತೂ ಶ್ರೀಮಂತಗೊಂಡಿರುವುದಿಲ್ಲ. ಆಡಿದ ಮಾತು ಕೆಲಹೊತ್ತಿಗೇ ಮರೆತೂ ಹೋಗಿರುತ್ತದೆ. ರಮೇಶ್ ಅರವಿಂದ್ ಜತೆಗಿನ ಒಂದೊಂದು ಭೇಟಿಯೂ ಅವಿಸ್ಮರಣೀಯ. ತನ್ನ ಜತೆ ಮಾತಾಡುವ ಎಲ್ಲರಿಗೂ ಅವರ ಪೂರ್ತಿ ವ್ಯಕ್ತಿತ್ವವನ್ನು ಅವರು ಕೊಟ್ಟುಬಿಡುತ್ತಾರೆ. ಅವರ ಅಂತರಂಗದ ಸುದ್ದಿಯನ್ನು ನಮಗೆ ದಾಟಿಸುತ್ತಾರೆ. ಅವರ ಪಾಸಿಟಿವ್ ಎನರ್ಜಿಯನ್ನು ನಮ್ಮ ಜೀವಕ್ಕೂ ಹಾಯಿಸುತ್ತಾರೆ. ಕಡುಸಂಕಟದ, ನಿರಾಸಕ್ತಿಯ, ಪರನಿಂದೆಯ, ಪೊಳ್ಳು ಮಾತುಗಳನ್ನು ಅವರು ಆಡಿದ್ದನ್ನು ನಾನು ಕೇಳಿಯೇ ಇಲ್ಲ. ನಗುವಿಲ್ಲದ ರಮೇಶ್ ಅರವಿಂದ್ ಮುಖವನ್ನು ಕಂಡದ್ದೂ ಇಲ್ಲ. ನಟನೆಯ ಜತೆಗೇ ಕತೆ ಹೇಳುವ, ಪ್ರತಿ ಕತೆಯೂ ಕೇಳುಗನಿಗೆ ಕನೆಕ್ಟ್ ಆಗುವಂತೆ ಮಾಡುವ, ಆ ಕನೆಕ್ಷನ್ ನಮ್ಮಲ್ಲಿ ಉಳಿದು ಬೆಳೆದು ನಮ್ಮ ಅನುಭವವೇ ಆಗಿಬಿಡುವಂತೆ ಮಾತಾಡುವ, ಬರೆಯುವ ರಮೇಶ್ ಅರವಿಂದ್ ಪ್ರೀತಿಯಿಂದ ಆಡಿದ ಮಾತುಗಳ ಸಂಗ್ರಹ ಇಲ್ಲಿದೆ. ಇದಕ್ಕೆ ಸೂರ್ತಿಯಿಂದ ರಮೇಶ್, ಖುಷಿಯಿಂದ ರಮೇಶ್, ಉಲ್ಲಾಸದಿಂದ ರಮೇಶ್- ಅಂತಲೂ ಹೆಸರಿಡಬಹುದು. ಇಲ್ಲಿನ ಪ್ರತಿಯೊಂದು ಬರಹವೂ ಸೂರ್ತಿಯ ಕಿಡಿ. ಒಂದು ಹಿಡಿ ಹುರುಪು. ಒಂದೊಳ್ಳೇ ಮುಂಜಾನೆ ವಾಕಿಂಗ್ ಹೊರಟಾಗ ನಮಗೇ ಆಗುವ ಜ್ಞಾನೋದಯ. -ಜೋಗಿ
ನಾನು ರಮೇಶ್ ಅರವಿಂದ್ ಅವರ ಅನೇಕ ಮಾತುಗಳನ್ನು, motivational speech ಗಳನ್ನು ಕೇಳಿದ್ದೆ. ಈ ಪುಸ್ತಕ ಅವರ ಇಷ್ಟು ದಿನದ ಅಥ್ವಾ ಇಷ್ಟು ವರ್ಷದ speech ಗಳ ಸಂಗ್ರಹ ಅಂದರೆ ತಪ್ಪಿಲ್ಲ. ಅವರೇ ಮುನ್ನುಡಿಯಲ್ಲಿ ಹೇಳಿದಂತೆ, ಒಂದೇ ಬಾರಿಗೆ ಈ ಪುಸ್ತಕ ಓದುವ ಬದಲು ಆಗೊಮ್ಮೆ ಹೀಗೊಮ್ಮೆ ಓದುತ್ತಾ ಅಲ್ಲಿದ್ದ ಮಾತುಗಳನ್ನು ಮನಸ್ಸಿಗೆ ಇಳಿಸಿಕೊಳ್ಳುವುದು ತುಂಬಾ ಉಪಯುಕ್ತ. ಅಲ್ಲಲ್ಲಿ ಅನೇಕ ಲೈನ್ಸ್, ಹಾಗೂ ಸೇಮ್ speech ರಿಪೀಟ್ ಆಗಿರುವುದು ಸ್ವಲ್ಪ ಬೇಸರ ಮುಡಿಸುತ್ತೆ ಅದು ಬಿಟ್ಟರೆ ಅನೇಕ ಸ್ಥಿತಿಗತಿ ಗಳ ಉದಾಹರಣೆಯೊಂದಿಗೆ ಅನೇಕ ಸಮಸ್ಯೆಗಳಿಗೆ ಪರಿಹಾರ ನಮ್ಮ ಕೈನಲ್ಲಿ ಇರುವ ಬಗೆಯನ್ನು ಅವರದೇ ಧಾಟಿಯಲ್ಲಿ ಚೆನ್ನಾಗಿ ವಿವರಿಸಿದ್ದಾರೆ. ಇನ್ನು ನನಗೆ ವೈಯಕ್ತಿಕವಾಗಿ ಕೃಷ್ಣ ಹಾಗೂ ಕಂಸನ ಕಥೆಯೊಂದಿಗಿನ ಸನ್ನಿವೇಶ ಹಾಗೂ ಅವರ ಮಾತು ತುಂಬಾ ಇಷ್ಟ ಆಯ್ತು. ಒಟ್ಟಾರೆ ಇನ್ನು ಕೆರಿಯರ್ ಸ್ಟಾರ್ಟ್ ಮಾಡ್ಬೇಕು ಅಂತ ಯೋಚ್ನೆ ಮಾಡ್ತಾ ಅದು ಮಾಡ್ಲ ಇದು ಮಾಡಲಾ ಎಂದು ತಲೆಗೆ ಹುಳ ಬಿಟ್ಟುಕೊಂಡು ಯಾವುದನ್ನು ಮಾಡೋಕೆ ಆಗದೇ ಇರೋರು ಒಮ್ಮೆ ಕಣ್ಣು ಹಾಯಿಸಿದರೆ ನಾವೆಷ್ಟು ಟೈಮ್ ವೆಸ್ಟ್ ಮಾಡಿದ್ವಿ ಅನ್ನೋದು ಅರ್ಥ ಮಾಡಿಸುತ್ತೆ. ಧನ್ಯವಾದಗಳು.
ಸ್ಫೂರ್ತಿ, ಧನಾತ್ಮಕ ಚಿಂತನೆಗಳ ಚಿಲುಮೆ ಈ ಪುಸ್ತಕ. ವಾಸ್ತವದ ಬದುಕಿಗೆ ಹತ್ತಿರದ, ಕೆಲವೊಮ್ಮೆ ತನ್ನ ಸ್ವಂತ ಬದುಕಿನ ಘಟನೆ, ಆ ಸಂದಭದಲ್ಲಿ ಬೇಕಾದ ವಿಭಿನ್ನ ದೃಷ್ಟಿಕೋನಗಳನ್ನು ಬಿಚ್ಚಿಟ್ಟು ಸಾಧನೆಗೆ ಅಗತ್ಯವಾದದು ಧೃಢವಾದ ಮನಸ್ಸು, ಧನಾತ್ಮಕ ಚಿಂತನೆ ಮತ್ತು ಆ ನಿಟ್ಟಿನಲ್ಲಿ ತೊಡಗಿಸಿಕೊಂಡು ಮನ್ನೆಡೆಯಲು ಬೇಕಾದ ಶಿಸ್ತು, ಸಂಯಮ ಎಂಬುದನ್ನು ರಮೇಶ್ ಸರಳವಾಗಿ ತೆರೆದಿಟ್ಟಿದ್ದಾರೆ. ಚಿಕ್ಕ ಚಿಕ್ಕ ಘಟನೆಗಳು, ಕತೆಗಳ ಮಾಲೆಯಾಗಿ ಮೂಡಿಬಂದಿರುವ ಈ ಪುಸ್ತಕ ಲಘು ಓದಿನ ಓಘಕ್ಕೆ ಸಾಕ್ಷಿಯಾಗಿ, ನಮ್ಮಲ್ಲೇ, ನಮ್ಮ ದೃಷ್ಟಿಕೋನದಲ್ಲಿ ಚಿಕ್ಕ ಚಿಕ್ಕ ಬದಲಾವಣೆಯ ಮೂಲಕ ಬದುಕಿನಲ್ಲಿ ಮುನ್ನೆಡೆಯಲು ಪ್ರೇರಣೆಯಾಗುವುದಂತೂ ನಿಜ.