#ಅಕ್ಷರವಿಹಾರ_೨೦೨೩ ಕೃತಿ: ಚ್ಯುತಿ ಲೇಖಕರು: ಶಶಾಂಕ ಪರಾಶರ ಪ್ರಕಾಶಕರು: ಸಮನ್ವಿತ ಪ್ರಕಾಶನ, ಬೆಂಗಳೂರು
ಸರಸ್ವತಿ ಸಿಂಧೂ ನಾಗರಿಕತೆಯ ಅವಸಾನದ ಕಾಲಘಟ್ಟವನ್ನು ಹಿನ್ನೆಲೆಯಲ್ಲಿ ಇಟ್ಟುಕೊಂಡು ಹೆಣೆದ ಕಾದಂಬರಿ "ಚ್ಯುತಿ". ಮುನ್ನುಡಿಯ ಪ್ರಕಾರ ಈ ಕಥೆ ನಡೆಯುವ ಕಾಲ ಕ್ರಿ.ಪೂ. 2100-2000. ಪ್ರಧಾನವಾಗಿ ಇಷ್ಟು ಪ್ರಾಚೀನ ನಾಗರಿಕತೆಯ ಅವಸಾನದ ಕಾಲದ ರಾಜಕೀಯ ಚಿತ್ರಣವನ್ನು ಕಟ್ಟಿಕೊಡುವುದರ ಜೊತೆಯಲ್ಲಿ ಮನುಷ್ಯನ ಮೂಲಭೂತ ಸ್ವಭಾವಗಳನ್ನು, ಗುಣಾವಗುಣಗಳನ್ನು ಶೋಧಿಸುವುದು ಕೃತಿಯ ವಿಶೇಷ.
ಇಂದಿನ ಪ್ರಜಾಪ್ರಭುತ್ವ ಮಾದರಿಯ ಆಡಳಿತವಿರುವ ಬ್ರಹ್ಮಪುರ ಮತ್ತು ರಾಜ ಪ್ರಭುತ್ವದ ಹೇಮಪ್ರಸ್ಥ ಎಂಬ ಎರಡು ದೇಶಗಳು ಮತ್ತು ಅಕ್ಕಾಡಿಯ ಎಂಬ ದೇಶದ ಜನರ ಜೀವನ ಶೈಲಿ,ಆಚಾರ ವಿಚಾರಗಳು,ಅವರುಗಳ ನಡುವೆ ನಡೆಯುತ್ತಿದ್ದ ವ್ಯಾಪಾರ ವಹಿವಾಟು,ಆಹಾರ ಪದ್ಧತಿಯ ವಿವರಗಳೊಂದಿಗೆ ಅಂದಿನ ಸಂಸ್ಕೃತಿಯೊಂದು ಓದುಗರ ಮುಂದೆ ಅನಾವರಣಗೊಳ್ಳುತ್ತದೆ. ಇಲ್ಲಿ ಪ್ರಮುಖವಾಗಿ ರಾಜನಿಂದ ಶುರುವಾಗಿ ಸಾಮಾನ್ಯ ಪ್ರಜೆಗಳವರೆಗಿನ ಮನಸ್ಸಿನ ತುಮುಲ ತಲ್ಲಣಗಳನ್ನು ಸಹಜವಾಗಿ ಅಷ್ಟೇ ಶಕ್ತವಾಗಿ ಬಿಂಬಿಸಿರುವುದು ಕೃತಿಯ ಧನಾತ್ಮಕ ಅಂಶ. ಗಂಡು ಹೆಣ್ಣುಗಳ ನಡುವಿನ ಪ್ರೀತಿ, ವಲಸೆಯಿಂದ ಉಂಟಾಗುವ ಸಮಸ್ಯೆಗಳು ಮತ್ತು ವಲಸೆಯಿಂದಾಗಿ ಮಿಶ್ರ ಸಂಸ್ಕೃತಿಯ ಅಥವಾ ಹೊಸ ಸಂಸ್ಕೃತಿಯ ಪ್ರಾರಂಭ,ರಾಜಕೀಯ ಲಾಭಕ್ಕಾಗಿ ಪ್ರಯೋಗಿಸುವ ತಂತ್ರ ಪ್ರತಿತಂತ್ರಗಳನ್ನು ಓದುವಾಗ ಪ್ರಾಚೀನ ಕಾಲದ ಮನುಜನ ಸ್ವಭಾವ ಮತ್ತು ಇಂದಿನ ಕಾಲದ ಸ್ವಭಾವಗಳು ಏನೇನು ಬದಲಾಗಿಲ್ಲ,ಅದು ಹೊರಮುಖವಾಗಿ ಹರಿಯುವ ರೀತಿಯಲ್ಲಿ ಏನಾದರೂ ಅಲ್ಪಸ್ವಲ್ಪ ವ್ಯತ್ಯಾಸಗಳಿದ್ದರೆ ಇರಬಹುದು ಅನಿಸಿತು. ಅದರಲ್ಲಿ ಸಹ ಬ್ರಹ್ಮಪುರದ ಅಸ್ಥಿರತೆಯನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳಲು ಶಂಬರ ಉಪಯೋಗಿಸಿಕೊಳ್ಳುವ ಮಾಧ್ಯಮ ಸಾಹಿತ್ಯ ಮತ್ತು ನಾಟ್ಯ ತಂಡ. ಇದನ್ನು ಲೇಖಕರು ಪ್ರಜ್ಞಾಪೂರ್ವಕವಾಗಿ ತಂದಿದ್ದಾರೆ ಎನ್ನುವುದು ನನ್ನ ಅನುಮಾನ. ಒಂದು ಸಮಾಜವನ್ನು ಈ ಮಾಧ್ಯಮಗಳ ಮೂಲಕ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಪ್ರಕ್ರಿಯೆ ಬಲು ಸುಲಭ.
ಸುಮಾರು ಐದು ಸಾವಿರ ವರ್ಷಗಳ ಕೆಳಗಿನ ನಾಗರಿಕತೆಯ ಕಥೆಯನ್ನು ಇದೀಗ ನಮ್ಮ ಕಣ್ಣಮುಂದೆ ನಡೆದಂತೆ ಚಿತ್ರಿಸುವುದು ಸುಲಭದ ಮಾತಲ್ಲ. ಸರಸ್ವತಿ ಸಿಂಧೂ ನಾಗರಿಕತೆಯ ಉತ್ಖನನದ ಕಥೆಯನ್ನು ನಿರೀಕ್ಷಿಸಿದ್ದ ನನಗೆ ದೊರಕಿದ್ದು ಅಂದಿನ ಮನಸ್ಸುಗಳ ಉತ್ಖನನ. ಇದು ಕೊಂಚ ನಿರಾಸೆಯ ಜೊತೆಗೆ ಅಚ್ಚರಿಯನ್ನುಂಟು ಮಾಡಿತು. ಲೇಖಕರ ಕ್ಷೇತ್ರಾಧ್ಯಯನ,ಸರಳ ಸ್ಪಷ್ಟ ಬರವಣಿಗೆಯ ಶೈಲಿ ಕೃತಿಯನ್ನು ಸರಾಗವಾಗಿ ಓದಿಸಿಕೊಳ್ಳುತ್ತದೆ. (ಕೊಸರು: ಅಲ್ಲಲ್ಲಿ ಹೆಸರುಗಳು ಅದಲುಬದಲಾಗಿ ಕಿರಿಕಿರಿಯಾಗುತ್ತದೆ ಮತ್ತು ಆಕರ ಗ್ರಂಥಗಳ ಪಟ್ಟಿಯನ್ನು ನೀಡಿದ್ದರೆ ಆಸಕ್ತರಿಗೆ ಅನುಕೂಲವಾಗುತ್ತಿತ್ತು)
ಸರಸ್ವತಿ ಮತ್ತು ಸಿಂಧು ನದಿಯ ಹರಪ್ಪ ನಾಗರಿಕತೆಯ ಹಿನ್ನಲೆಯ ಕಥೆ ಅಂತ ಕುತೂಹಲ ದಿಂದ ಓದು ಆರಂಭಿಸಿದೆ. ಕೆಲವು ಊರ ಮತ್ತು ಪಾತ್ರಗಳ ಹೆಸರುಗಳು ಆ ಕಾಲದ್ದು ಅಂತ ಬಿಟ್ಟರೆ ಕಥೆಯಲ್ಲಿ ಯಾವುದೇ ರೀತಿಯ ಹೊಸತನ ಕಾಣ್ ಲಿಲ್ಲ.
ಇತಿಹಾಸದ ಪ್ರತಿ ಘಟ ದಲ್ಲೂ ಕಾಣುವ ರಾಜಕೀಯ ಇಲ್ಲು ಇದೆ. ಅದರ ಮಧ್ಯ ದಲ್ಲಿ ಪ್ರೀತಿ ಕಥನಗಳು. ಆಗಿನ ಕಾಲದ ಯಾವುದೇ ಉತ್ಖನದ ವಿಷಯವನ್ನು ಬಳಸಿದ್ದು ಕಾಣಲಿಲ್ಲ. ಅದು ಈ ಕಥೆಯನ್ನು ಹಿಂದೆ ಬಂದ ನೂರೊಂದು ಕಾದಂಬರಿಗಳ ಚಾಯೆಯಂತೆ ತೋರುತ್ತೆ.
ಇದು ಬರಹಗಾರ ಪ್ರಥಮ ಪ್ರಯತ್ನ. ಅದಕ್ಕೆ ಅಭಿನಂದನೆಗಳು. ಮುಂದಿನ ಕಥೆಗಳಲ್ಲಿ ಹೊಸತನ ಕೊಡಲಿ ಅಂತ ಆಶಿಸುತ್ತೇನೆ.