ಶ್ರೀ ಕೃಷ್ಣ , ಸು.ರುದ್ರಮೂರ್ತಿ ಶಾಸ್ತ್ರಿ ಅವರ ಕೃತಿಯಾಗಿದೆ. ಪುರುಷ ಪರುಷೋತ್ತಮನಾದ ಕಥೆ ಭಾರತ ಭಾಗವತಗಳನ್ನು, ಕವಿಯಾಗಿ ಅಧ್ಯಯನ ಮಾಡಿ, ಅರ್ಥೈಸಿಕೊಂಡ ಸು.ರುದ್ರಮೂರ್ತಿ ಶಾಸ್ತ್ರಿಗಳು, ಶ್ರೀಕೃಷ್ಣನನ್ನು ಈ ದೃಷ್ಟಿಯಿಂದ ಜಗದ್ಗುರುವಾಗಿ ನೋಡಿದರೋ ಏನೋ ಶ್ರೀಕೃಷ್ಯನ ಅಂತರಂಗವನ್ನು ಪ್ರವೇಶಿಸಿ ಶ್ರೀ ಕೃಷ್ಣ ಪುರುಷೋತ್ತಮನಾದುದನ್ನು ಈ ಕಾದಂಬರಿಯ ಮೂಲಕ, ಸಹಜವಾಗಿ ನಿರೂಪಿಸುತ್ತಾ ಹೋಗಿದ್ದಾರೆ. ಶ್ರೀಕೃಷ್ಣ ನಮ್ಮ ನಿಮ್ಮಂತ ಸಾಮಾನ್ಯ ಮನುಷ್ಯನಾಗಿ ಹುಟ್ಟಿದವನೆ. ಆತನು ಸಾಮಾನ್ಯ ಮಾನವ ಧರ್ಮವನ್ನು ಅನುಸರಿಸುತ್ತಾ, ಪ್ರತಿಯೊಬ್ಬರಿಂದ ಒಂದೊಂದು ಮಾನವೀಯತೆಯ ಸಾರಗಳನ್ನು ಕಲಿಯುತ್ತಾ, ಅವುಗಳನ್ನು ತನ್ನ ನಿಜಜೀವನದಲ್ಲಿ ಅನುಸರಿಸಿ ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾ, ತನ್ನನ್ನು ತಾನು ವಿಮರ್ಶಿಸಿ ಕೊಳ್ಳುತ್ತಾ ಬೆಳೆದಿದ್ದಾನೆ, ಈ ರೀತಿ ಪ್ರತಿಯೊಬ್ಬ ಮಾನವನೂ ಪುರುಷೋತ್ತಮ ನಾಗಬಹುದು ಎಂಬುದು ಈ ಕಾದಂಬರಿ ನಮಗೆ ನೀಡುವ ಸಂದೇಶವಾಗಿದೆ ಎಂದು ಆರ್. ಶೇಷಶಾಸ್ತ್ರಿ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
ಲೇಖಕ ರುದ್ರಮೂರ್ತಿ ಶಾಸ್ತ್ರಿ ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸುಗ್ಗನಹಳ್ಳಿಯವರು. ತಂದೆ-ಎಸ್.ಎನ್. ಶಿವರುದ್ರಯ್ಯ, ತಾಯಿ- ಸಿದ್ಧಗಂಗಮ್ಮ. ಪ್ರಾರಂಭಿಕ ಶಿಕ್ಷಣ ಹುಟ್ಟೂರಿನಲ್ಲಿ , ಪ್ರೌಢಶಾಲೆಯನ್ನು ರಾಮನಗರದಲ್ಲಿ ಪೂರ್ಣಗೊಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವೀಧರರು. ಬೆಂಗಳೂರಿನ ರೇಣುಕಾಚಾರ್ಯ ಸಂಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ನಂತರ ವೃತ್ತಿಗೆ ರಾಜೀನಾಮೆ ನೀಡಿ ಸಾಹಿತ್ಯ ಸೇವೆಯಲ್ಲಿ ತೋಡಗಿ, ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ.
‘ಭಾವ ಲಹರಿ’, ಪರಿ, ಅಂತರಂಗ-ಬಹಿರಂಗ, ಚಿತ್ರಕಲ್ಪನೆ, ರಾಗ, ನಾಡಗೀತೆಗಳು, ನಾದರೂಪಕ ಕವನ ಸಂಕಲನಗಳು. ಪ್ರಾಸ-ಪ್ರಯಾಸ, ಕೆಂಪಭಾರತಂ, ಕೆಂಪರಾಮಾಯಣಂ, ಕೆಂಪನ ವಚನಗಳು, ಅಲ್ಪಜ್ಞನ ವಚನಗಳು ಮುಂತಾದ ಹಾಸ್ಯ ಸಂಕಲನಗಳು ಸೇರಿ ಸುಮಾರು 16 ಕಾವ್ಯ ಕೃತಿಗಳು. ಕಾದಂಬರಿ-ಧರ್ಮಚಕ್ರವರ್ತಿ ಅಶೋಕ, ಔರಂಗಜೇಬ, ಕುಮಾರರಾಮ, ಚಾಣಕ್ಯ, ಸರ್ವಜ್ಞ, ಚಾರುದತ್ತ, ಬಣ್ಣದ ಹಕ್ಕಿ, ಸ್ವಪ್ನಗಾನ, ರಾಧಾರಜನಿ, ಮಣ್ಣಿನ ಋಣ ಹೀಗೆ ಸಾಮಾಜಿಕ, ಐತಿಹಾಸಿಕ ಕಾದಂಬರಿಗಳು ಸೇರಿ 30 ಕೃತಿ ರಚಿಸಿದ್ದು, ಮಕ್ಕಳ ಸಾಹಿತ್ಯಕ್ಕೂ ಅಪಾರ ಕೊಡುಗೆ ನೀಡಿದ್ದಾರೆ.
ಈ ಪುಸ್ತಕದ ಹೆಸರಿನ ಕೆಳಗೆ ಒಂದು ಇಂಟರೆಸ್ಟಿಂಗ್ ಉಪ ಶೀರ್ಷಿಕೆ ಇದೆ. "ಪುರುಷ ಪುರುಷೋತ್ತಮನಾದ ಕಥೆ" ಅಂತಾ! ಪುಸ್ತಕದ ಆಳಾಂತರಾಳ ಇಷ್ಟರಲ್ಲೇ ತಿಳಿದುಕೊಳ್ಳುತ್ತೀವಿ ಎಂದರೆ ಓದುಗರಾಗಿ ಅದು ನಮ್ಮ ಸೋಲು. ಇದು ಕೃಷ್ಣ ಶ್ರೀ ಕೃಷ್ಣನಾದ ಕಥೆ, ಮಾನವನಿಂದ ವಿಶ್ವಮಾನವನಾದ ಕಥೆ. ಇದು ಕೃಷ್ಣ ಪುರುಷೋತ್ತಮನಾದ ಯಶೋಗಾಥೆ.
ಸು ರುದ್ರಮೂರ್ತಿ ಶಾಸ್ತ್ರಿಗಳ ಪುಸ್ತಕಗಳು ಬಹಳಷ್ಟು ಬಾರಿ ನನ್ನೊಳಗಿನ ಓದುಗನನ್ನು ಆಕರ್ಷಿತಗೊಳಿಸಿದ್ದವು. ಅವರ ಚಾಣಕ್ಯ, ಗೌತಮ ಬುದ್ಧ, ಭೀಷ್ಮ ಸೇರಿದಂತೆ ಹಲವಾರು ಪುಸ್ತಕಗಳನ್ನು ಪ್ರತಿ ಬಾರಿ ಓದಬೇಕೆಂದುಕೊಂಡು ಕೊನೆಗೆ ಕೊಂಡದ್ದು ಶ್ರೀ ಕೃಷ್ಣ ಪುಸ್ತಕವನ್ನು! ಬರೋಬ್ಬರಿ ಆರುನೂರಾ ಐವತ್ತೊಂಭತ್ತು ಪುಟಗಳಿರುವ ಈ ಪುಸ್ತಕದಲ್ಲಿ ಪುಟಪುಟಕ್ಕೂ ಜೀವನ ಸಂದೇಶವನ್ನು ನೀಡಲು ಹೊರಟಿದ್ದು ಈ ಪುಸ್ತಕದ ಹೆಗ್ಗಳಿಕೆ. ಇಡೀ ಪುಸ್ತಕವನ್ನು ಒಂದೇ ಟೋನಿನಲ್ಲಿ ಬರೆದಿರುವುದು ಲೇಖಕರ ಅಗಾಧ ಪ್ರತಿಭೆಗೆ ಹಿಡಿದ ಕೈಗನ್ನಡಿ. ಇದು ಕೇವಲ ಕಾದಂಬರಿಯಲ್ಲ ಅಥವಾ ಹತ್ತರಲ್ಲಿ ಹನ್ನೊಂದರಂತಹ ಮತ್ತೊಂದು ಪೌರಾಣಿಕ ಕಥೆಯಲ್ಲ. ಇಲ್ಲಿ ಕೃಷ್ಣ ನಮ್ಮೊಂದಿಗೆ ಮಾತಾಡುತ್ತಾನೆ, ಅವನ ತಳಮಳ ತಹತಹಗಳನ್ನು ನಮ್ಮಂತೆ ನಿಮ್ಮಂತೆ ಒಬ್ಬ ಸಾಮಾನ್ಯ ಮನುಷ್ಯನಾಗಿ ಹಂಚಿಕೊಳ್ಳುತ್ತಾನೆ. ಉತ್ತಮನಾಗುತ್ತಾನೆ, ಪುರುಷೋತ್ತಮನಾಗಿ ಮಾದರಿಯಾಗುತ್ತಾನೆ.
ದ್ವಾಪರಯುಗವನ್ನು ಕೃಷ್ಣನ ಕಣ್ಣಿಂದ ನೋಡಿರುವ ಲೇಖಕರು ಇಡೀ ಪುಸ್ತಕದ ತುಂಬಾ ದ್ವಾಪರದ ಪ್ರತಿಯೊಂದು ಸಂದರ್ಭವನ್ನು ಕೃಷ್ಣನಿಂದ ಆಡಿಸಿದ್ದಾರೆ. ಸೂತ್ರಧಾರನ ಸೂತ್ರವನ್ನು ಹಿಡಿದಿದ್ದಾರೆ. ಇನ್ ಫ್ಯಾಕ್ಟ್, ಸೂತ್ರಧಾರ ಇಲ್ಲಿ ಪಾತ್ರಧಾರಿ.
ಲೇಖಕರ ಅಗಾಧವಾದ ಜ್ಞಾನ ಸಂಪತ್ತಿನ ಬಗ್ಗೆ ಓದುಗ ಇಲ್ಲಿ ಮೋಹಿತಗೊಳ್ಳುತ್ತಾನೆ. ಎಲ್ಲ ರೀತಿಯ ಪುರಾಣಗಳನ್ನು ಓದಿ ತಮ್ಮ ಜ್ಞಾನ ಸಂಪತ್ತನ್ನು ದುಡಿಸಿಕೊಂಡಿರುವ ಪರಿ ಬೆರಗಾಗುತ್ತಾನೆ. ನಾವು ಕೃಷ್ಣರಾಗಬಲ್ಲೆವು ಎಂಬುದನ್ನು ಮನವರಿಕೆ ಮಾಡಿಕೊಡುತ್ತಾ ಪೂರ್ತಿಯಾಗಿ ಗೆದ್ದು ಬಿಡುತ್ತಾರೆ.
ಈ ಆರುನೂರಾ ಐವತ್ತೊಂಭತ್ತು ಪುಟಗಳ ಕಾದಂಬರಿಯಲ್ಲಿ ಒಟ್ಟು ಐದು ಅಧ್ಯಾಯಗಳಿವೆ. ಕೃತಿ, ಆಕೃತಿ, ಸ್ವೀಕೃತಿ, ಸ್ವಯಂಕೃತಿ ಮತ್ತು ನಿರಾಕೃತಿ. ಇವು ಕೃಷ್ಣನ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸಾವಸ್ಥೆಗಳೊಂದಿಗೆ ತಳುಕು ಹಾಕಿಕೊಂಡಂತೆ ಬರೆದಿರುವುದು ಮತ್ತೊಂದು ವಿಶೇಷ. ತೀರಾ ಸಹಜವೆನಿಸುವ ನಿರೂಪಣೆ, ಮೋಹಕ ಭಾಷಾ ಬಳಕೆಗಳನ್ನೇ ಹೊಂದಿರುವ ಈ ಪುಸ್ತಕ ಎಸ್ ಎಲ್ ಭೈರಪ್ಪನವರ ಪರ್ವದ ಸಾಲಿನಲ್ಲಿ ನಿಲ್ಲಬಲ್ಲ ಮತ್ತೊಂದು ಪುಸ್ತಕ ಎಂದರೂ ಅತಿಶಯೋಕ್ತಿಯಲ್ಲವೇನೋ. ಭಾಗವತಗಳನ್ನು ರಾಶಿ ರಾಶಿ ಓದದ ಹೊರತು ಇಂಥದ್ದೊಂದು ಸೃಷ್ಟಿ ಸಾಧ್ಯವಿಲ್ಲ. ಕೃಷ್ಣನ ಅಂತರಂಗವನ್ನು ಪ್ರವೇಶಿಸಿ ಅವನಿಂದ ಒಂದೊಂದು ಮಾತನ್ನು ಆಡಿಸಿ, ಅವನು ತನ್ನ ತಾನು ವಿಮರ್ಶಿಸಿಕೊಂಡು ಬದುಕನ್ನು ಸಾಕ್ಷಾತ್ಕಾರಗೊಳಿಸಿಕೊಳ್ಳುವುದನ್ನು ಬರೆಯುವುದೆಂದರೆ ಸುಲಭದ ಮಾತಲ್ಲ. ಜಗದ್ಗುರುವಿನ ಎದೆಯಾಳವನ್ನು ಓದುವ ಮತ್ತು ಅವನ ಹಾದಿಯನ್ನನುಸರಿಸುವ ಪ್ರಯತ್ನ ನಮ್ಮದಾಗಲಿ.
ಹೇಳದೇ ಉಳಿಸುವಂತಹ ವಿಷಯಗಳೇನು ನನ್ನೊಳಗಿನ ಓದುಗನಿಗೆ ಸಿಗಲಿಲ್ಲ. ಹೇಳಿರುವ ರೀತಿಯನ್ನು ಆಸ್ವಾದಿಸಿದ್ದು ಮಾತ್ರ ಸುಳ್ಳಲ್ಲ.