ಖಾರ ಬೆಳೆದು ಸಿಹಿ ಉಂಡವರು!
ಹಲವು ವರ್ಷಗಳ ಹಿಂದಿನ ಮಾತು. ನನ್ನ ಕ್ರಾಂತಿಕಾರಕ ವಿಚಾರಧಾರೆಗಳು ಮತ್ತು ಯೌವ್ವನ ಎರಡೂ ತಮ್ಮ ತುತ್ತತುದಿಯಲ್ಲಿದ್ದ ಸಮಯವದು. ನನ್ನೂರಿನ ತುಂಬಾ ಬೆಳೆಯುವ ಮೂರು ಕಾಸೂ ಗಿಟ್ಟದ ರಾಗಿ, ಜೋಳದ ಬದಲು ದೂರದ ಆಂಧ್ರ ದೇಶದ ರೈತರ ಹಾಗೆ ನಾನೂ ಕೆಂಪು ಮೆಣಸಿನಕಾಯಿ ಬೆಳೆದು ಕಾಸು ಮಾಡಿ ಬಿಡಬೇಕೆಂದು ನಿರ್ಧರಿಸಿದೆ.
ಬೆಳ್ಳಿಗೆಯಿಂದ ರಾತ್ರಿಯವರೆಗೂ ದೇವಸ್ಥಾನದ ಮುಂದಿನ ಅರಳಿಕಟ್ಟೆಯಲ್ಲಿ ತಣ್ಣಗೆ ಕೂತು ಬೀಡಿ ಎಳೆಯುವ ನನ್ನೂರಿನ ಹಿರಿಯರು ಎನ್ನಬಹುದಾದವರು ಬಿಳಿ ಮೀಸೆ ಮರೆಯಲ್ಲಿ ಆಡಿಕೊಂಡು ನಕ್ಕರು, ಹಳ್ಳಿಯ ತೋಟದ ಸಾಲಿನ ಕಿರಿದಾದ ಇಕ್ಕಟ್ಟು ರಸ್ತೆಗಳಲ್ಲಿ ನಾನು ಓಡಾಡುವಾಗ ನಮ್ಮೂರಿನ ಹೆಂಗಸರು ನನಗೆ ಕೇಳಿಸುವ ಹಾಗೆ ʼಇನ್ನ ಕೋಳಿ ಸಾರು ಮಾಡಲು ಮೆಣಸಿನಕಾಯಿ ಕೊಂಡು ತರುವ ಉಸಾಬರಿ ಇಲ್ಲʼ ಎಂದು ಕೊಂಕಾಡಿದರು.
ಇಷ್ಟಕ್ಕೆಲ್ಲಾ ಬಾಡುವ ಮನಸ್ಸ ನನ್ನದು? ಕಡು ಯುವಕನ ಚೈತನ್ಯ ದೇಹದ ಅಂಗ ಅಂಗಗಳಲ್ಲಿ ತುಂಬಿ ತುಳುಕುತ್ತಿದ್ದರೆ, ಓದಿಕೊಂಡಿದ್ದ ಒಂದಷ್ಟು ಪುಸ್ತಕಗಳು ನನ್ನ ಕ್ರಾಂತಿಕಾರಿ ನಶೆ ಇಳಿಯದ ಹಾಗೆ ನೋಡಿಕೊಳ್ಳುವಲ್ಲಿ ಸಫಲವಾದವು.
ರಬಿ ಚಳಿಗಾಲದ ಶುಭ ಶುಕ್ರವಾರದ ದಿನದಂದು ನನ್ನೂರಿನ ಗ್ರಾಮದೇವತೆಯ ಮಂಗಳಾರತಿ ಆಗುವ ವೇಳೆಗೆ ಗುಂಟೂರು ಮೆಣಸಿನ ಬೀಜಗಳು ಆಂಧ್ರದಿಂದ ಬಂದಿಳಿದವು.ತೋಟದ ಕೆಲಸದವರಿಗೆಲ್ಲಾ ಸ್ವಲ್ಪ ಬಿಗಿಯಾಗಿಯೇ ಹೇಳಿಬಿಟ್ಟಿದ್ದೆ- “ನನ್ನಪ್ಪನ ಕಾಲದ ಬೇಸಾಯ ಇನ್ನ ನಡೆಯೊಲ್ಲ. ನಮ್ಮೂರು ಇನ್ನ ಹೊಸ ಬೇಸಾಯ ನೋಡುತ್ತೆʼ ಎಂದು.ತಲೆ ಅಲ್ಲಾಡಿಸದಿದ್ದರೆ ರಾತ್ರಿಗೆ ಸಾರಾಯಿ ಸಿಗಲಾರದೆನ್ನುವ ಸತ್ಯ ಗೊತ್ತಿದ್ದ ಅವರೂ ಜೋರಾಗಿಯೇ ತಲೆ ಅಲ್ಲಾಡಿಸಿ ʼಖರೆ ಖರೆʼ ಎಂದರು!
ಫಂಗೈ ನಿರೋಧಕ ದ್ರಾವಣದಿಂದ ಬೀಜೋಪಾಚಾರ ಮಾಡಿ, ಮಡಿಗಳಲ್ಲಿ ಬೀಜವನ್ನು ತೊಳೆದು ಎದೆಯುಬ್ಬಿಸಿ, ಟವೆಲ್ ಕೊಡವಿ ಊರ ತುಂಬ ಓಡಾಡಿದೆ. ದಿನ ರಾತ್ರಿ ಬೀರಪ್ಪನ ಗುಡಿಯಲ್ಲಿ ನಡೆಯುವ ಭಜನೆಯ ಸಮಯದಲ್ಲಿ ಅವರಿವರು ನನ್ನ ಮೆಣಸಿನಕಾಯಿಯ ಬಗ್ಗೆ ಚರ್ಚಿಸುವುದನ್ನು ರಂಗ ತಪ್ಪದೆಯೇ ನನ್ನ ಕಿವಿಯಲ್ಲಿ ಊದುತ್ತಿದ್ದದ್ದು ನನ್ನ ಖುಷಿಯನ್ನು ಸಾವಿರವಾಗಿಸಿತು.
ಊರಿನಲ್ಲಿ ನನಗೆ ಆಗದವರ ಪೈಕಿ ಯಾರು ಅದೇನು ಮಾಡಿಸಿದರೋ, ಅದ್ಯಾವ ಶಕ್ತಿಗೆ ಕೋಳಿ ಕೊಯ್ದು ನನ್ನ ವಿರುದ್ಧ ಚಾಡಿ ಹೇಳಿದರೋ ನನಗೆ ತಿಳಿಯದು! ಇಲ್ಲಿಂದ ಶುರುವಾಯಿತು ನೋಡಿ ತೊಂದರೆಗಳು. ಮಾರನೆ ಮುಂಜಾವಿಗೆ ತೋಟಕ್ಕೆ ಹೋದವನಿಗೆ ದಿಗಿಲಾಯಿತು. ಇರುವೆಗಳ ತರಹದ್ದೆ, ಆದರೆ ಗಾತ್ರದಲ್ಲಿ ದೊಡ್ಡದಾದ ಗೊದ್ದಗಳು ಬಲಿಷ್ಠವಾದ ಸೈನ್ಯವನ್ನೆ ಕಟ್ಟಿಕೊಂಡು ಬಂದು, ತೊಳೆದಿದ್ದ ಮೆಣಸಿನ ಬೀಜಗಳನ್ನು ಹೆಕ್ಕಿ ಹೆಕ್ಕಿ ಕಚ್ಚಿಕೊಂಡು ತಮ್ಮ ಬೇಸ್‌ಕ್ಯಾಂಪ್‌ಕಡೆಗೆ ಓಡುತ್ತಿದ್ದವು.ಎಲ್ಲಾ ಮಡಿಗಳನ್ನು ಆಕ್ರಮಿಸಿಕೊಂಡು ಬಿಟ್ಟಿದ್ದವು.ಕಣ್ಣ ಲೆಕ್ಕದಲ್ಲೆ ಗೊತ್ತಾಗಿ ಹೋಯಿತು ಸುಮಾರು ಸಾವಿರಕ್ಕೂ ಮೀರಿದ ದೊಡ್ಡ ಸೈನ್ಯವದು!ಬಲಿಷ್ಢ ಕಾಲಾಳುಗಳ ಪಡೆ ಬೀಜಗಳನ್ನು ಹೊತ್ತು ಹೊಯ್ಯತ್ತಿರುವ ಅಶ್ವಸೇನೆಗೆ ಬೆಂಗಾವಲಾಗಿದ್ದವು! ನನ್ನ ಜಂಘಾಬಲವೇ ಉಡುಗಿ ಹೋದಂತಾಯಿತು.
ಮುಂದಿನ ವಾರ ಉರುಳಿ ಹೊರಳುವಷ್ಟರಲ್ಲೆ ಬೀಜಗಳು ಮೊಳಕೆಯೊಡೆದು ಎರಡು ಕುಡಿಗಳ ಮುದ್ದಿನ ಸಸಿಯಾದವು! ಗೊದ್ದಗಳ ಸೈನ್ಯ ಒಂದಷ್ಟು ಬೀಜಗಳನ್ನು ದೋಚಿದ್ದು ಸತ್ಯವಾದರೂ ಎಲ್ಲಾವನ್ನು ದೋಚಲಾಗಲಿಲ್ಲ! ತಾಲ್ಲೂಕು ಕಛೇರಿಯಲ್ಲಿ ಒಂದಷ್ಟು ಕೆಲಸವು ತಗುಲಿ ಹಾಕಿಕೊಂಡದ್ದರಿಂದ ಸ್ವಲ್ಪ ದಿನಗಳ ಕಾಲ ತೋಟದ ಕಡೆ ಹೋಗಲಾಗಲಿಲ್ಲ.ಹಾಳಾದ ಬಾವಿಯ ಪಂಪೂ ಅದೇ ಸಮಯಕ್ಕೆ ರಿಪೇರಿಗೆ ಬಂದು ನಿಲ್ಲಬೇಕೇ? ಪಂಪನ್ನು ಬಿಚ್ಚಿಕೊಂಡು ರಿಪೇರಿಗೆಂದು ಬೆಂಗಳೂರಿಗೆ ಬರಬೇಕಾಯಿತು. ಪೀಣ್ಯದ ಮುರುಗನ್ ಬಿಟ್ಟರೆ ಅಂಥಹ ಹಳೆಕಾಲದ ಪಂಪನ್ನು ರಿಪೇರಿ ಮಾಡುವ ತಾಕತ್ತು ಮತ್ತ್ಯಾರಿಗೂ ಇಲ್ಲ ಎಂದೇ ನಾನು ಹೇಳುವುದು. ಮುರುಗನ್ ಅಲ್ಲದೆ ಬೇರೆ ಯಾವಾನಾದರೂ ರಿಪೇರಿಗೆ ಕೈ ಇಟ್ಟರೆ ಆ ಪಂಪು ಸುತಾರಾಂ ಒಪ್ಪುತ್ತಿರಲಿಲ್ಲ! ಅಂಥಹ ಪತಿವ್ರತೆ!
ಪಂಪನ್ನು ರಿಪೇರಿ ಮಾಡಿಸಿಕೊಂಡು ತೋಟಕ್ಕೆ ಹೋದರೆ, ಪಾರಿವಾಳಕ್ಕಿಂತಲೂ ಗಾತ್ರದಲ್ಲಿ ಸಣ್ಣದಾದ ಆದರೆ ಬಹುಪಾಲು ಪಾರಿವಾಳಗಳನ್ನೆ ಹೋಲುವ ಕಲ್ಲು ಹಕ್ಕಿಗಳು ನನ್ನ ಮೆಣಸಿನ ಗಿಡದ ಕುಡಿ ಎಲೆಗಳನ್ನು ಕುಟುಕಿ ಕುಟುಕಿ ತಿನ್ನುತ್ತಿದ್ದವು. ತೋಟದ ತುಂಬೆಲ್ಲ ತಿರುಗಿ ನೋಡಿದೆ. ಬಹುಪಾಲು ಸಸಿಗಳದ್ದು ಅದೇ ಕಥೆಯಾಗಿತ್ತು.ಅರ್ಧಂಬರ್ಧ ತಿಂದು ಬಿಟ್ಟಿದ್ದ ಕುಡಿಗಳು ಕಲ್ಲಕ್ಕಿಗಳ ಮೇಲೆ ದೂರಿದವು. ಕರುಳು ಕಿತ್ತು ಬಂತು. “ಎಲ್ಲಾ ಕಲ್ಲಕ್ಕಿಗಳಾ? ಇಂಥ ಸೊಕ್ಕೆ? ಎಂದುಕೊಂಡು ಒಂದಷ್ಟು ಬೆದರು ಬೊಂಬೆಗಳನ್ನು ನಾನು ರಂಗ ಸೇರಿ ತೋಟದ ತುಂಬ ಕಟ್ಟಿದೆವು.ಮುಂದಿನ ಕೆಲವು ದಿನಗಳವರೆಗೂ ಬೆದರು ಬೊಂಬೆಗಳನ್ನೆ ಬೆದರಿಸಿ ಎರ್ರಾಬಿರ್ರಿ ಕುಡಿಗಳನ್ನು ಕಲ್ಲಕ್ಕಿಗಳು ತಿಂದು ತೇಗಿದವು.
ಇಷ್ಟೆಲ್ಲಾ ಆಗುವ ಹೊತ್ತಿಗೆ ನಮ್ಮೂರಿನ ಕಾಂಕ್ರಿಟ್ ರೋಡ್ ಉದ್ಘಾಟನೆಗೆ ಬಂದ ಶಾಸಕರು ತಮ್ಮ ಭಾಷಣದ ನಡುವೆ ನನ್ನ ಮೆಣಸಿನಕಾಯಿ ಕೃಷಿ ಹೊಗಳುತ್ತ ಮೈಕ್‌ನಲ್ಲಿ ಕಿರುಚಿ ಕಿರುಚಿ ಮೆಣಸಿನಕಾಯಿ ಎಂದು ತಿರುಗಿ ತಿರುಗಿ ಹೇಳಿದ್ದು ನಮ್ಮೂರಿನ ಕೆರೆಯ ಹಿಂದಿರುವ ನಂದಿ ಗುಡ್ಡದಲ್ಲಿ ಬೀಡು ಬಿಟ್ಟದ್ದ ನವಿಲುಗಳ ಹಿಂಡಿಗೆ ಕೇಳಿಸಿತೊ ಏನೋ? ನವಿಲುಗಳೆಲ್ಲಾ ನೂರಾರು ಸಂಖ್ಯೆಯಲ್ಲಿ ತಮ್ಮ ಸಂಸಾರ ಸಮೇತ ತೋಟಕ್ಕೆ ನುಗ್ಗಿ ಆಗಷ್ಟೆ ಕಟ್ಟಿದ್ದ ಎಳೆ ಮೆಣಸಿನಕಾಯಿಗಳನ್ನು ಮನಸೊ ಇಚ್ಚೆ ತಿನ್ನಲಾರಂಭಿಸಿದವು. ನಾನೆಂತು ಕಂಗೆಟ್ಟು ರೋಡ್ ಉದ್ಘಾಟನೆಗೆ ಬಂದ ಶಾಸಕರನ್ನು ಬಾಯಿ ತುಂಬಾ ಶಪಿಸಿದೆ.ಒಟ್ಟಿನಲ್ಲಿ ಮೆಣಸಿನಕಾಯಿ ಕೊಯ್ಲಿಗೆ ಬರುವಷ್ಟರಲ್ಲಿ ಹೈರಾಣಾಗಿ ಹೋದೆ! ಲಕ್ಷ ರೂಪಾಯಿಗಳಷ್ಟು ನಷ್ಟ ಖಾಯಂ ನಿನಗೆ ಎಂದು ಮೆಣಸಿನಕಾಯಿ ತಿನ್ನಲು ಬಂದ ನವಿಲು ಮರಿಯೊಂದು ಕೇಕೆ ಹಾಕಿ ಹೇಳಿತು!
ತೋಟದಲ್ಲಿ ಕುಳಿತು ಯೋಚಿಸತೊಡಗಿದೆ. ಮೊದಲಿಗೆ ಈ ಮೆಣಸಿನಕಾಯಿ ಬೆಳೆಯುವ ಖಯಾಲಿ ನನಗೆ ಹುಟ್ಟಿದ್ದು ಹೇಗೆ?- ಬುಧವಾರದ ಕೃಷಿ ಪುರವಣಿಯೊಂದರಲ್ಲಿ ಬಂದಿದ್ದ ಅಂಕಣವೊಂದು ನೆನಪಾಯಿತು. ಅಂಕಣದ ಶೀರ್ಷಿಕೆ ʼಖಾರ ಬೆಳೆದು ಸಿಹಿ ಉಂಡವರುʼ!
(ಸೂಚನೆ: ಇದು ಸತ್ಯ ಘಟನೆ)
-ಸುಧಾಕರ ರಾಮಯ್ಯ