ಸೃಜನಶೀಲ ಅಥವಾ ಸೃಷ್ಟಿಶೀಲ ಸಾಹಿತ್ಯ ಎಂದರೆ...

ಸೃಷ್ಟಿ ಎಂಬ ಪದವು ಹೊಸದಾದ ಉತ್ಪನ್ನ ಸೂಚಕವಲ್ಲ. ಸಾಹಿತ್ಯ ಸೃಷ್ಟಿ ಶೂನ್ಯದಿಂದ ಹೊರತೆಗೆದ ಮಾಯಾವಸ್ತುವಲ್ಲ. ಸಾಹಿತ್ಯದಲ್ಲಿ ಸೃಷ್ಟಿ ಪ್ರಕ್ರಿಯೆ ಎಂಬುದು ಜಗತ್ತಿನಲ್ಲಿ ಯಾರೂ ಗ್ರಹಿಸದ್ದನ್ನು, ಯಾರಿಗೂ ಅನುಭವ ಆಗದಿದ್ದನ್ನು, ಮನುಷ್ಯ ಆಲೋಚನೆಯ ಮಿತಿ ಮೀರಿದ್ದನ್ನು ಅನ್ವೇಷಿಸುವುದಲ್ಲ. ಸೃಷ್ಟಿ ಪ್ರಕ್ರಿಯೆ ಎಂದರೆ ಸಾಕ್ಷಾತ್ಕಾರ. ಅದರಲ್ಲಿ ನಮ್ಮನ್ನು ನಾವೇ ನಿರೀಕ್ಷಿಸುವ ಗುಣವಿರುತ್ತದೆ, ಹೊರಗಿನ ಜಗತ್ತನ್ನು ನಮ್ಮ ನೋಟದಲ್ಲಿ ಆಲ್ಲದೇ ವಿಸ್ತಾರವಾಗಿ ನೋಡುವ ಶಕ್ತಿ ಇರಬೇಕಾಗುತ್ತದೆ. ತನ್ನ ಅನುಭವ ಮಿತಿಯನ್ನು ಮೀರಿದ ಅಂಶಗಳನ್ನು ತಾದಾತ್ಮ್ಯದಲ್ಲಿ ಸ್ವೀಕರಿಸುವ, ವಿಮರ್ಶಿಸುವ ದೃಷ್ಟಿ ಬೇಕಾಗುತ್ತದೆ. ಎಲ್ಲಾ ಬರೆಹವೂ ಸೃಷ್ಟಿಶೀಲವೇ ಎಂಬ ವಾದವಿದೆ. ಆದರೆ ಅದು ಸಾಹಿತ್ಯ ದೃಷ್ಟಿಯಿಂದ ಅಪ್ರಬುದ್ಧ ಗ್ರಹಿಕೆ. ಮೇಲೆ ತಿಳಿಸಿದ ಸೃಷ್ಟಿಶೀಲ ಸಾಹಿತ್ಯದ ಪ್ರಮುಖಾಂಶಗಳು ಹಲವು ಬರೆಹ ಪ್ರಕಾರದಲ್ಲಿ ದೊರೆಯುವುದಿಲ್ಲ. ವಿಚಾರವನ್ನು ದಾಖಲಿಸುವ, ಯಾರೋ ಹೇಳಿದ್ದನ್ನು ನಮೂದಿಸುವ, ಅದಕ್ಕೆ ನಮ್ಮ ವಿಶ್ಲೇಷಣೆ ಜೋಡಿಸುವ, ತನ್ನ ಅರಿವನ್ನು ತೋರ್ಪಡಿಸುವ ಅಥವಾ ತನ್ನ ಅರಿವನ್ನು ಮಂಡಿಸುವ ಕ್ರಿಯೆ ಸೃಷ್ಟಿಶೀಲವಲ್ಲ. ಸೃಷ್ಟಿಶೀಲ ಸಾಹಿತ್ಯದ ಮೂಲ ಬೇರು ಜೀವನದ ಅಂತಃದೃಷ್ಟಿ. ಅದು ಕಥನವಾಗಲಿ, ಕಾವ್ಯವಾಗಲಿ, ಕಾದಂಬರಿಯಾಗಲಿ. ಅಲ್ಲಿ ಬರೆಹಗಾರ ತನ್ನದೇ ಒಂದು ಚೌಕಟ್ಟು ಹಾಕಿ, ರಸಪಾಕವನ್ನು ಅದರಲ್ಲಿ ಸುರಿಯುತ್ತಾನೆ. ಕೊನೆಗೆ ಚೌಕಟ್ಟು ತೆಗೆದಾಗ ಪಾಕದ ರುಚಿ, ಹದ, ಗಟ್ಟಿತನ, ಸ್ವಾದಕ್ಕೆ ಕುಂದು ಬರಬಾರದು. ಅದು ಚೌಕಟ್ಟಿನಾಚೆ ಹೊರಬರಬಾರದು. ಇಲ್ಲಿ ಪಾಕಕ್ಕೆ ಬೇಕಾದ ಸಾಮಗ್ರಿ ಯಾರದ್ದೇ ಆಗಲಿ ಅಥವಾ ಅವನದ್ದೇ ಆಗಲಿ, ಬಾಣಸಿಗನಾಗಿ ಅವನು ಪುನಃ ಸಂಸ್ಕಾರ ಅದಕ್ಕೆ ಕೊಡಬೇಕು. ಇದು ನನ್ನದೇ ಸಾಮಗ್ರಿ ಎಂದು ಸಂಸ್ಕಾರ ನೀಡದೇ ಹಾಗೆ ಇಟ್ಟರೆ ಅದು ಸಾಮಾಗ್ರಿಯಾಗಿಯೇ ಉಳಿಯುತ್ತದೆ, ಅದು ರಸಪಾಕವಾಗೋಲ್ಲ. ಸಾಮಗ್ರಿಗೆ ಮತ್ತು ಪಾಕಕ್ಕೆ ಎಷ್ಟು ವ್ಯತ್ಯಾಸವಿದೆಯೋ ಅಷ್ಟೇ ವ್ಯತ್ಯಾಸ ಸೃಷ್ಟಿಶೀಲ ಸಾಹಿತ್ಯಕ್ಕೂ, ಇತರ ಬರೆಹಕ್ಕೂ ಇದೆ.


ಸೃಷ್ಟಿಶೀಲತೆ ಎಂಬುದು ವಸ್ತುವಿನ ಮೌಲ್ಯದ ಅನ್ವೇಷಣೆಯೂ ಹೌದು. ಒಂದೇ ಪಾತ್ರ ಅಥವಾ ಘಟನೆಯನ್ನು ವಿಭಿನ್ನ ವಾತಾವರಣದಲ್ಲಿ ಇಟ್ಟು ಅದು ಅದಕ್ಕೆ ಪ್ರತಿಸ್ಪಂದಿಸುವ ಗುಣವನ್ನು ಗಮನಿಸಬೇಕು. ಕಥಾನಕಕ್ಕೆ ಬೇಕಾದ ರಸವೈವಿಧ್ಯತೆಯನ್ನು ಅದರಿಂದ ಹೊರತರಬೇಕು. ಇದನ್ನು ನಾನು ಅನುಭವದಿಂದಲೇ ವ್ಯಕ್ತಪಡಿಸುತ್ತಿದ್ದೇನೆ. ಇಲ್ಲಿ ಒಣ ಗ್ರಹಿಕೆ ಇಲ್ಲ. ದುರಂತ ಸೃಷ್ಟಿಶೀಲ ಲೇಖಕ, ವಿಮರ್ಶಕನಾದಾಗ ಬಡಬಡಿಸುವ ಮಾತಿದಲ್ಲ. ಮೌಲ್ಯದ ಅನ್ವೇಷಣೆ ಮಾಡದ ಹೊರತು ಕಥಾನಕವು, ಪಾತ್ರವು, ಘಟನೆಯೂ ಗಟ್ಟಿತನ ಪಡೆಯಲಾಗದು. ಹಾಗು ಮೌಲ್ಯ ಹುಡುಕುವ ದಾರಿ ಪೂರ್ವಗ್ರಹ ಪೀಡಿತವಾಗಿರಬಾರದು. ಪ್ರತಿ ಪಾತ್ರಕ್ಕೂ ಉದ್ದೇಶವಿರುತ್ತದೆ ಆದರೆ ಕಥಾನಕಕ್ಕೇ ಉದ್ದೇಶ ಇರಬಾರದು. ಕಥಾನಕಕ್ಕೆ ಉದ್ದೇಶ ಇದ್ದರೆ ಅದು ಲೇಖಕನ ವೈಯಕ್ತಿಕ ತುಮುಲಗಳ ಸಮರ್ಥನೆಯಾಗಿ ಹೊರಹುಮ್ಮುತ್ತದೆ. ಇಲ್ಲೊಂದು ಉದಾಹರಣೆ ಗಮನಿಸೋಣ. ಕರ್ಮ ಕಾದಂಬರಿಯಲ್ಲಿ ವೆಂಕಟೇಶ ಭಟ್ಟ, ಪುರುಷೋತ್ತಮ ಮತ್ತು ಸುರೇಂದ್ರ ಮೂರು ಪಾತ್ರದ ಭಾವನೆಯೇ ಬೇರೆ. ಮೂರು ಪಾತ್ರದ ಮೌಲ್ಯಗಳೇ ಬೇರೆ. ಅವು ಕಥಾನಕಕ್ಕೆ ಚೆಲ್ಲುವ ಪರಿಣಾಮವೇ ಬೇರೆ. ಮೂರೂ ಪಾತ್ರದಲ್ಲು ಲೇಖಕನ ಭಾವನೆಯೇ ಹೊಮ್ಮಿದರೆ ಅದು ಸೃಷ್ಟಿಶೀಲತೆಯ ದುರಂತ. ಇದನ್ನು ಕರ್ಮ ಕಾದಂಬರಿಯಲ್ಲಿ ದಾಟಿದ್ದೇನೆ. ನನ್ನಿ ಕಾದಂಬರಿಯಲ್ಲಿ ರೋಣಾಳಿಗೆ, ಮದರ್ ಎಲಿಸಾ ಪಾತ್ರದ ಮೇಲೆ ಅಸಹನೆ ಇರಬೇಕೆ ಹೊರತು ಲೇಖಕನಿಗಲ್ಲ. ಮೂರನೇ ವ್ಯಕ್ತಿಯಾಗಿ ಲೇಖಕ ಎಲಿಸಾರ ಪಾತ್ರವನ್ನು ಎಲ್ಲೂ ವಿಮರ್ಶಿಸುವುದಿಲ್ಲ. ಒಂದು ಕೃತಿಯಲ್ಲಿ ಲೇಖಕ ಅನುಸರಿಸಬೇಕಾದ ಸೂಕ್ಷ್ಮಗಳಿವು. ಸೃಷ್ಟಿಶೀಲತೆಯನ್ನು ಆವಾಹನೆ ಮಾಡಿಕೊಳ್ಳಬೇಕಾದರೆ, ಆಯಾ ಪಾತ್ರ ಆಯಾ ಘಟನೆಗೆ ಲೇಖಕನು ಹೋಗಿ ಅವರದ್ದೇ ಮಿತಿಯಲ್ಲಿ, ಅವರದ್ದೇ ವ್ಯಕ್ತಿತ್ವದಲ್ಲಿ, ಅವರದ್ದೇ ವಾತಾವರಣದಲ್ಲಿ ಮಿಳಿತವಾಗಿ ಅದರ ಅಭಿವ್ಯಕ್ತಿಯನ್ನು ಹೊಮ್ಮಿಸಬೇಕೆ ವಿನಹ ತನ್ನ ಅಭಿವ್ಯಕ್ತಿಗೆ ತಕ್ಕ ಹಾಗೆ ಪಾತ್ರವನ್ನು ಕುಣಿಸಬಾರದು. ಆ ದೃಷ್ಟಿಯಲ್ಲಿ ಸ್ವಲ್ಪಮಟ್ಟಿಗೆ ’ಗ್ರಸ್ತ’ದ ಅವಿನಾಶನನ್ನು ಬಿಟ್ಟರೆ, ನನ್ನ ಕಾದಂಬರಿಯ ಯಾವುದೇ ಪಾತ್ರಗಳಲ್ಲೂ ನನ್ನ ಅಭಿಪ್ರಾಯವನ್ನು ತುಂಬಿಲ್ಲ. ಪಾತ್ರ ಮತ್ತು ಘಟನೆಗಳನ್ನು ಸಂಘಟಿಸುವಾಗ ನಾನು ಅದಕ್ಕೆ ರೂಪ ನೀಡಿದ್ದೇನೆ, ಸೌಂದರ್ಯ ನೀಡಿದ್ದೇನೆ. ಈ ನಿಟ್ಟಿನಲ್ಲಿ ಸೃಷ್ಟಿಶೀಲ ಸಾಹಿತ್ಯವು ಸ್ವತಂತ್ರವು, ವಿಸ್ತಾರವು, ಉನ್ನತವು ಆಗಿರಬೇಕು. ಅಭಿಪ್ರಾಯ ಮಂಡನೆ ಸೃಷ್ಟಿಶೀಲ ಸಾಹಿತ್ಯವಲ್ಲ.


ರಸಾನುಭೂತಿ ಮತ್ತು ಚಳುವಳಿ ಮನಸ್ಥಿತಿ ಇವುಗಳಲ್ಲಿ ಸೃಷ್ಟಿಶೀಲ ಸಾಹಿತ್ಯಕ್ಕೆ ಬೇಕಾದ ಅಂಶ ಯಾವುದು ಎಂದರೆ, ಸ್ಪಷ್ಟವಾಗಿ ರಸಾನುಭೂತಿ ಎಂದೆನ್ನಬೇಕಾಗುತ್ತದೆ. ರಸಾನುಭೂತಿಯಲ್ಲೇ, ಚಳುವಳಿ ಮನಸ್ಥಿತಿ ಎಂಬುದು ಧೀರವೋ, ಭೀಭತ್ಸವೋ, ವೀರತ್ವ ರಸದ ಬಿಂಬವೇ ಆಗಿದೆ. ಯಾವುದೋ ಒಂದು ರಸದ ಅನ್ವೇಷಣೆಯಲ್ಲಿ ತೊಡಗುತ್ತಾ, ಅದನ್ನು ಸೃಷ್ಟಿಶೀಲ ಸಾಹಿತ್ಯದ ಮೂಲಭೂತ ಅಂಶ ಎಂದು ತೋರ್ಪಡಿಸುವುದು ಸಾಹಿತ್ಯದ ಸಂವೇದನೆಗೆ ಮಾಡುವ ಮೋಸ. ನನ್ನಿ ಕಾದಂಬರಿಯಲ್ಲಿ ರೋಣಾಳದ್ದು ಚಳುವಳಿಯ ಮನಸ್ಥಿತಿಯೇ, ಫಾಬ್ರಿಗಾಸ ತಾನಿರುವ ವ್ಯವಸ್ಥೆಯನ್ನೇ ಖಂಡಿಸುವಾತ. ತಪ್ಪನ್ನು ಖಂಡಿಸುವ, ತನಗಾದ ಮೋಸವನ್ನು ಪ್ರತಿಭಟಿಸುವ ವೀರ, ಧೀರ ರಸವು ಸ್ವಾಭಾವಿಕವಾಗಿ ಪ್ರತಿ ವಸ್ತುನಿಷ್ಠ ಸೃಷ್ಟಿಶೀಲ ಸಾಹಿತ್ಯದಲ್ಲೂ ಕಾಣುತ್ತದೆ. ಇಡೀ ಕಾದಂಬರಿಯುದ್ದಕ್ಕೂ ರೋಣಾ "ನನಗೆ ಗಂಡೆದರೆ ಆಗುವುದಿಲ್ಲ, ಫಾಬ್ರಿಗಾಸನು ಗಂಡು, ಅವನ ಜೊತೆ ಮಲಗುವುದಿಲ್ಲ. ಅವನನ್ನು ಕೊಲ್ಲಬೇಕು" ಎಂದು ಹೇಳಿದ್ದರೆ ಅದು ರೊಣಾಳ ಪಾತ್ರಕ್ಕೆ ಮಾಡಿದ ಅವಮಾನವಾಗುತ್ತಿತ್ತು. ಅವಳು ಚಳುವಳಿಯ ಮನಸ್ಥಿತಿಯನ್ನು ತೋರಬಲ್ಲಳು, ಶೃಂಗಾರವನ್ನು ಹರಿಸಬಲ್ಲಳು, ಹತಾಶಳಾಗಿ ಅಳುವಳು. ಎಂಥಾ ಸಂದರ್ಭದಲ್ಲೂ ಅವಳು ಗಂಡನ್ನು ದ್ವೇಷಿಸುತ್ತಾಳೆ ಎಂದು ಬರೆದಿದ್ದರೆ ಅಲ್ಲಿ ಲೇಖಕನ ಉದ್ದೇಶ ಕಾಣುತ್ತದೆ, ಪಾತ್ರದ ಹರಿವಲ್ಲ. ಪಾತ್ರದ ಸಹಜತೆಯನ್ನು ಅರ್ಥಮಾಡಿಕೊಳ್ಳದಿದ್ದರೆ, ಕಥಾನಕದ ಒಟ್ಟು ಪಾಕ ಒಂದೋ ಅತಿಯಾದ ಸ್ವಾದವನ್ನು ನೀಡಿ ಅಸಹ್ಯವಾಗುತ್ತದೆ, ಇಲ್ಲ ಸ್ವಾದವೇ ಇಲ್ಲದೆ ಸಪ್ಪೆಯಾಗುತ್ತದೆ. ಪ್ರತಿ ಸೃಷ್ಟಿಶೀಲ ಲೇಖಕನ ಕೃತಿಯಲ್ಲು ಪ್ರತಿಭಟನೆ ಮತ್ತು ಚಳುವಳಿಯ ಮನಸ್ಥಿತಿ ಕಾಣಬಹುದು. ಅದನ್ನು ಅವನು ಸಾಹಿತ್ಯಾತ್ಮಕವಾಗಿಯೇ ಹೊಮ್ಮಿಸಿರಬೇಕೆ ವಿನಹ, ರಾಜಕೀಯ ಭಾಷಣದಂತಲ್ಲ. ಪುಢಾರಿಗೂ ಮತ್ತು ಸೃಷ್ಟಿಶೀಲ ಲೇಖಕನಿಗೂ ಇರಬೇಕಾದ ವ್ಯತ್ಯಾಸವಿದು.


ಜನರನ್ನು ರಂಜಿಸುವುದು, ರಸಸ್ವಾದ ನೀಡುವುದೊಂದೇ ಇದರ ಉದ್ದೇಶವೇ ಎಂದರೆ ಅದೂ ತಪ್ಪು. ಸಾಮಾನ್ಯವಾಗಿ ಸೃಷ್ಟಿಶೀಲ ಸಾಹಿತ್ಯ ಕೆಡುವುದೇ ರಂಜನೆಯಿಂದ. ರಂಜನೆಯಲ್ಲಿ ರೋಚಕತೆ ಮುಖ್ಯವಾಗುತ್ತದೆ ಹೊರತು, ಮೌಲ್ಯವಲ್ಲ. ರೋಚಕತೆ, ಪಾತ್ರ ಮತ್ತು ಘಟನೆಯನ್ನು ಕಥೆಯ ರಂಜನೆಗೆ ಬಳಸುತ್ತದೆ. ಮೌಲ್ಯವು, ಪಾತ್ರ ಮತ್ತು ಘಟನೆಯನ್ನು ಕಥೆಯ ಅಂತರ್ಯವನ್ನು ಹಿಡಿಯಲು ಬಳಸುತ್ತದೆ. ಇವೆರೆಡರ ಆಯ್ಕೆ ಸಾಹಿತಿಗೆ ಬಿಟ್ಟದ್ದೇ ಆದರೂ, ಸಾಹಿತ್ಯ ಸಂವೇದನೆ ಇರುವುದೇ ಅಂತಃದೃಷ್ಟಿಯಲ್ಲಿ ಎಂದಮೇಲೆ. ಮೌಲ್ಯವೇ ಸೃಷ್ಟಿಶೀಲತೆಗೆ ಆಧಾರವಾಗಬೇಕೆ ಹೊರತು, ರಂಜನೆಯಲ್ಲ. ಇದಕ್ಕೆ ಯಾವುದೇ ಎಗ್ಗಿಲ್ಲದೆ ಒಂದು ಉದಾಹರಣೆ ನೀಡುತ್ತೇನೆ, ಕರ್ಮ ಕಾದಂಬರಿಯಲ್ಲಿ ನರಹರಿ ಮತ್ತು ನೇಹಾಳ ದೃಶ್ಯ ಮೌಲ್ಯಕ್ಕಿಂತಲೂ ರೋಚಕತೆಗೆ ಬಳಕೆಯಾಗಿದೆ, ಆದರೆ ನನ್ನಿಯಲ್ಲಿ ಫಾಬ್ರಿಗಾಸ ಮತ್ತು ರೋಣಾಳ ದೃಶ್ಯ ರೂಪಕವಾಗಿ ನಿಂತು, ತನ್ನತನವನ್ನು ಬೇರೊಬ್ಬರು ಕಸಿದಾಗ ಆಗುವ ತಳಮಳದ ಮೌಲ್ಯವನ್ನು ಬಿಂಬಿಸಿದೆ. ಗ್ರಸ್ತ ಕಾದಂಬರಿಯಲ್ಲಿ ಅವಿನಾಶನ ಹಪಹಪಿ ಮಾನವನ ಮಿತಿಯನ್ನು ವಿಶ್ಲೇಷಿಸುವ ಮೌಲ್ಯವಾಗಿ ಕಾಣುತ್ತದೆ. ಸೃಷ್ಟಿಶೀಲ ಲೇಖಕರ ಪ್ರತಿ ಬರೆವಣಿಗೆಯಲ್ಲೂ ರಂಜನೆ ನುಸುಳೇ ನುಸುಳುತ್ತದೆ, ಆದರೆ ಅದಕ್ಕೆ ಅಂಟಿಕೊಳ್ಳದೇ ಮೌಲ್ಯಾನ್ವೇಷಣೆಯನ್ನು ಹೆಚ್ಚು ರೂಢಿಸಿಕೊಂಡವ ಸೃಷ್ಟಿಶೀಲ ಸಾಹಿತ್ಯದ ಔನ್ನತ್ಯ ತಲುಪುತ್ತಾನೆ. ಮೊದಲೇ ಪ್ರಸ್ತಾಪಿಸಿದ ಹಾಗೆ ಸೃಷ್ಟಿಶೀಲ ಸಾಹಿತ್ಯವೆಂದರೆ ಕೇವಲ ಭಾಷೆ, ರಸ, ಅಭಿವ್ಯಕ್ತಿಯ ಸಂಯೋಜನೆ ಮತ್ತು ಪ್ರಸ್ತುತಿಯಲ್ಲ, ಅದು ಸತ್ಯ ಸಾಕ್ಷಾತ್ಕಾರ. ಅದನ್ನು ಸೌಂದರ್ಯ ಸಾಕ್ಷಾತ್ಕಾರದ ಅಂತಿಮ ರೂಪ ಎನ್ನಲೂಬಹುದು.
2 likes ·   •  0 comments  •  flag
Share on Twitter
Published on March 15, 2017 02:33
No comments have been added yet.