ಭಾರತೀಯ ರೂಢಿಯೂ ಮತ್ತು ವೈಚಾರಿಕತೆಯೂ...
ಯಾವುದೇ ಒಂದು ಗುಂಪನ್ನು ತೋರಿಸಿ ಇದರಲ್ಲಿ ಸಾಮಾನ್ಯ ಭಾವ ಗುರುತಿಸಿ ಎಂದರೆ ಸುಲಭವಾಗಿ ಗುರುತಿಸಬಲ್ಲೆವು. ಅದು ಪ್ರದೇಶ, ಜಾತಿ, ಭಾಷಾ ಆಧಾರಿತ ಗುಂಪು ಏನೇ ಆಗಿರಲಿ. ಮಲೆನಾಡಿನವರ ಸಾಮಾನ್ಯ ಭಾವ, ಅದಕ್ಕೆ ಬಯಲು ಸೀಮೆಯ ವಿರುದ್ಧ ಭಾವ. ಬ್ರಾಹ್ಮಣ ಪಂಗಡದ ಸಾಮಾನ್ಯ ಭಾವ ಅಬ್ರಾಹ್ಮಣರ ವಿರೋಧ ಭಾವ ಅಥವಾ ಕನ್ನಡಿಗರ ಸಾಮಾನ್ಯ ಭಾವ, ಹಿಂದಿ ಭಾಷಿಕರ ವಿರುದ್ಧ ಭಾವ, ಹೀಗೆ... ಅದರಂತೆ ಈಗಿನ ರಾಜಕೀಯ ರೇಖೆಯ ಅಡಿಯ ಇಂಡಿಯಾ ಅಥವಾ ಪಾರಂಪರಿಕ ನಂಬಿಕೆಯ ಭರತವರ್ಷದ ಅಡಿಯಲ್ಲಿ ಬದುಕಿದ ಜನರಲ್ಲಿ ಸಾಮಾನ್ಯ ಭಾವವನ್ನು ಗುರುತಿಸುವುದು ಕಷ್ಟವೇನಲ್ಲ, ಅದನ್ನೇ ನಾವು ಭಾರತೀಯ ಮನಸ್ಸು ಎಂದು ಸ್ವೀಕರಿಸೋಣ, ಆದರೆ ಮನಸ್ಸು ಎಂಬುದು ತೀರಾ ಚೌಕಟ್ಟಿಲ್ಲದ ದೊಡ್ಡ ಪದ, ಆದ್ದರಿಂದ ನಾನು ಅದನ್ನು ಭಾರತೀಯ ರೂಢಿ ಎಂದು ಸೀಮಿತಗೊಳಿಸುತ್ತೇನೆ.
ಭಾರತದಲ್ಲಿ ಬದುಕಿದ ಅಮೊನೈಟ್‍ಗಳ ಬಗ್ಗೆ ಆಗಲಿ ಅಥವಾ ಇನ್ನಾವುದೋ ಪಾರಂಭಿಕ ಹಂತದ ಪ್ರಾಣಿ ಪಕ್ಷಿಗಳ ಬಗ್ಗೆ ನಾವು ಮಾತಾಡುತ್ತಿಲ್ಲ. ವಿವೇಚನೆ ಹೊಂದಿರುವ ಮನುಷ್ಯನ ಕುರಿತಾಗಿ ಮಾತ್ರ ಮಾತನಾಡಬಲ್ಲೆವು. ಈ ಮನಸ್ಸು-ರೂಢಿ ಇವುಗಳಿಗೆಲ್ಲ ನೂರೆಂಟು ವ್ಯಾಖ್ಯಾನ ನೀಡಿದವನು ಅವನೇ ಅಲ್ಲವೇ? ಭಾರತದಲ್ಲಿ ಒಂದು ಬಿಂದುವಿನಿಂದ ಇಲ್ಲಿಯವರೆಗೂ ಜೀವಿಸಿದ ಜನರಲ್ಲಿ ಪ್ರಬಲವಾಗಿ ಬೆಳೆದಿರುವ ರೂಢಿ ಎಂದರೆ ಅದು “ಧರ್ಮ”, ಇದಕ್ಕೆ ಪಾಶ್ಚಿಮಾತ್ಯ ಸಮಾನಾರ್ಥಕ ಪದ ಇಲ್ಲ. ಹಾಗೆಯೇ ‘ಫಿಲಾಸಫಿ’ ಎಂಬ ಪದಕ್ಕೆ ಭಾರತೀಯರಲ್ಲಿ ಸಮಾನಾರ್ಥಕ ಪದವಿಲ್ಲ. ಈ ವ್ಯತ್ಯಾಸವೇ ಭಾರತೀಯ ರೂಢಿ ಎಂಬುದಿದೆ ಎಂದು ನಿರೂಪಿಸಿಬಿಡುತ್ತದೆ. ‘ಧರ್ಮ’ ಎಂಬುದು ನೀತಿ, ಸತ್ಯ, ಸೌಂದರ್ಯಗಳ ಶುದ್ಧ ಪರಿಪಾಕ. ಫಿಲಾಸಫಿ ಎಂದರೆ ಸೈನ್ಸ್, ಎಥಿಕ್ಸ್, ಮೆಟಾಫಿಸಿಕ್ಸ್ ಎಂಬ ಭೌತಿಕ-ಸಾಮಾಜಿಕ ಪ್ರಮೇಯಗಳ ಬಗೆಗಿನ ಬೌದ್ಧಿಕ ಸಾಫಲ್ಯತೆ. ನಾವು ಫಿಲಾಸಫಿ ಬದಲಿಗೆ “ದರ್ಶನ” ಎನ್ನುತ್ತೇವೆ, ಅದರಲ್ಲಿ ವೈದಿಕ, ಅವೈದಿಕ, ಶುಂಠಿ ಸುಡುಗಾಡು ಏನೇ ಇರಲಿ, ಬಹುಪಾಲು ಎಲ್ಲವೂ ‘ಧರ್ಮ’ ಎಂಬುದನ್ನು ಪ್ರತಿಪಾದಿಸುತ್ತದೆ. ನನ್ನಜ್ಜಿಗೆ ಅಂಥಹ ದೊಡ್ಡ ಪಾಂಡಿತ್ಯವೇನು ಇರಲಿಲ್ಲ, ಹಾಲಿನವನು; ಹಾಲಿಗೆ ನೀರು ಬೆರೆಸಿದ ಎಂಬ ಸಣ್ಣ ಕಾರಣಕ್ಕೂ “ಧರ್ಮ ಅಲ್ಲಯ್ಯಾ ಇದು” ಎನ್ನುತ್ತಿದ್ದಳು, ಇದು ಭಾರತೀಯ ರೂಢಿ.
ಆಶ್ರಮ ಧರ್ಮ, ಸ್ವಧರ್ಮ, ಆಪದ್ಧರ್ಮ ಎಂಬ ಕವಲುಗಳು ಇದ್ದರೂ ಅದು ತುಂಬಾ ಮೇಲ್ಮಟ್ಟದ ಬೌದ್ಧಿಕ ವರಸೆಗಳು. ಭಾರತೀಯರು ‘ಧರ್ಮ’ ಎಂಬುದಕ್ಕೆ ತಮ್ಮದೇ ಒಂದು ವ್ಯಾಖ್ಯಾನವನ್ನ ತಮ್ಮ ಜೀವನಕ್ಕೆ ಕೊಟ್ಟುಕೊಂಡಿದ್ದಾರೆ. ಭಾರತದಲ್ಲಿ ಹುಟ್ಟಿ ಬೆಳೆದವನಿಗೆ ಈ ಪ್ರಜ್ಞೆ ಬಲವಾಗಿ ಇರುತ್ತದೆ. ಭಾರತವನ್ನು ಖುದ್ದು ಬಾಲ್ಯಮುಖೇನ ಕಾಣದವರು ಮಾತ್ರ ಪಂಡಿತರ, ಸ್ಮೃತಿಕಾರರ ಮಾತುಗಳ ಕೊಳವೆ ತೂತಲ್ಲಿ ಭಾರತವನ್ನು ಕಾಣುತ್ತಾರೆ. ಅಪವಾದವೆಂಬಂತೆ ಎ ಕೆ ರಾಮಾನುಜನ್‍ರಂಥಹ ಬುದ್ಧಿವಂತರು ಕೂಡ Is there an Indian way of thinking? ಎಂಬ ತಮ್ಮ ಪ್ರಬಂಧದಲ್ಲಿ ಮಾತು ಮಾತಿಗೂ ಮ್ಯಾಕ್ಸ್ ಮುಲ್ಲರ್, ಮನು ಎನ್ನುತ್ತಾರೆ. ಮುಲ್ಲರ್ ತನ್ನ ಜೀವನದಲ್ಲಿ ಭಾರತವನ್ನು ನೋಡಿಯೇ ಇರಲಿಲ್ಲ. ಮನು ಭಾರತದ ವಕ್ತಾರನೂ ಆಗಬೇಕಿಲ್ಲ. ಯಾವಜ್ಜೀವೇತ್ ಸುಖಂಜೀವೇತ್ ಋಣಂ ಕೃತ್ವಾಘೃತಂಪಿಬೇತ್ |..... ಅಗ್ನಿಹೋತ್ರಂ ತ್ರಯೋವೇದಾಃ ತ್ರಿಪುಣ್ಡ್ರಭಸ್ಮಗುಣ್ಮನಂ ಬುದ್ಧಿ ಪೌರುಷಹೀನಾನಾಂ ಜೀವಿಕಾ ಧಾತೃನಿರ್ಮಿತಾ || ತತಸ್ತು ಜೀವನೋಪಾಯೋ ಬ್ರಾಹ್ಮಣೈರ್ವಿತಸ್ತ್ಪಿಹ | ಎಂದ ಚಾರ್ವಾಕನು ಭಾರತದವನೇ. ಭಾರತೀಯ ರೂಢಿಯಲ್ಲಿ ತರ್ಕವಿಲ್ಲ ಎಂಬ ಆಪಾದನೆ ಇದೆ, ಸೈಕೋ-ಫಿಸಿಕಲ್ ಪ್ಯಾರಲೆಲಿಸಮ್, ಬಿಹೇವಿಯರಿಸಮ್, ಮೆಟೀರಿಯಲಿಸಮ್, ಕಮ್ಯೂನಿಸಮ್ ಇವೆಲ್ಲವು ವೈಜ್ಞಾನಿಕ ತರ್ಕಕ್ಕೆ ನಿಲುಕುವ ಮುನ್ನವೇ ಚಾರ್ವಾಕ ಮುಂತಾದ ದರ್ಶನಕಾರರು ಈ ಬಗ್ಗೆ ಓಂಕಾರ ಹಾಕಿಲ್ಲವೇ? ಬುದ್ಧನಂಥಹ ವ್ಯಕ್ತಿ ಮಹಮದೀಯ ಮತದ ಆರಂಭದ ನಂತರದಲ್ಲಿ ಅರಬ್ಬಿನಲ್ಲಿ ಹುಟ್ಟಿ (ಹುಟ್ಟಲು ಸಾಧ್ಯವಿಲ್ಲ) ತಾನು ಕಂಡುಕೊಂಡ ಆರ್ಯ ಸತ್ಯ ಹೇಳಿದ್ದರೆ, ಬುದ್ಧನನ್ನು ಜೀವಂತವಾಗಿಯೇ ಉಳಿಸುತ್ತಿರಲಿಲ್ಲ. ಬುದ್ಧ ಭಾರತದವನಲ್ಲವೇ, ಅವನದ್ದು ಭಾರತೀಯ ರೂಢಿಯಲ್ಲವೇ?
ಭಾರತೀಯ ರೂಢಿಯನ್ನು ನಾವು ಎಷ್ಟು ವ್ಯಾಪಕವಾಗಿ ನೋಡುತ್ತೇವೋ ಅದರಂತೆ ವಿವರಣೆ ನಿಲ್ಲುತ್ತದೆ. ಸಾಮಾನ್ಯ ಗ್ರಹಿಕೆಗಾಗಿ ಆತ್ಮಚಿತ್ತ ಮತ್ತು ಲೋಕಚಿತ್ತ ಎಂದು ಭಾರತೀಯ ರೂಢಿಯನ್ನ ವಿಭಾಗಿಸಿಕೊಳ್ಳೋಣ. ಭಾರತೀಯ ಕಾಲಕಾಲಕ್ಕೂ ತನ್ನ ಲೋಕಚಿತ್ತವನ್ನು ಬದಲಾದ ಪ್ರಭುತ್ವ-ಭಾಷೆಯ ಪರಿಣಾಮವಾಗಿ ಬದಲಿಸಿಕೊಂಡ. ಅವನಲ್ಲಿನ ಆತ್ಮಚಿತ್ತ ಮಾತ್ರ ಬದಲಾಗಿಲ್ಲ. ಪಾಶ್ಚಿಮಾತ್ಯರ ಬಹುಪಾಲೆಲ್ಲವೂ ಲೋಕಚಿತ್ತವೇ ಆದ್ದರಿಂದ (ಉದಾ: ಆದರ್ಶ ರಾಜ್ಯ, ರೀಸನಿಂಗ್, ಅಸ್ತಿತ್ವವಾದ ಇತ್ಯಾದಿ) ಈ ಸಮಸ್ಯೆ ಅವರಲ್ಲಿ ಉದ್ಭವವಾಗಲೇ ಇಲ್ಲ. ತುಂಬಾ ಫಲವತ್ತಾದ ಭೂಮಿ, ಉತ್ತಮ ವಾತಾವರಣ, ಜೀವಯೋಗ್ಯ ಸೆಲೆಗಳು ಭಾರತದಲ್ಲಿ ಇದ್ದಿದ್ದರಿಂದ ನಾಳೆಯ ಅನ್ನದ ಚಿಂತೆಯ ಹೊರತಾದ ಆತ್ಮಚಿತ್ತ ಇಲ್ಲಿ ಬೇಗನೇ ಚಿಗುರೊಡೆಯಿತು. ನಾಳೆಯ ಅನ್ನದ ಚಿಂತೆಯೇ ದೊಡ್ಡದಾಗಿದ್ದ ಪ್ರದೇಶಗಳಲ್ಲಿ ಇದು ಬರಲು ಸಾಧ್ಯವಿರಲಿಲ್ಲ, ಆದ್ದರಿಂದ ಅಲ್ಲಿನ ವಿವೇಚನಾ ಲಹರಿಯೇ ಬೇರೆ. ಇಂದು ಪ್ರಪಂಚವೆಲ್ಲಾ ಒಂದು ಗೂಡು ಎಂಬಂತಾದರೂ ನಿರ್ದಿಷ್ಟ ಜನರು ಬೆಳೆದುಬಂದ ರೂಢಿ ಕಂಡೇ ಕಾಣುತ್ತದೆ. ಭಾರತೀಯರ ದೈವ-ಕರ್ಮ-ಪುನರ್ಜನ್ಮ-ಮೋಕ್ಷ ಎಂಬ ಕಲ್ಪನೆಗಳು ಲೋಕಚಿತ್ತವನ್ನು ಗೌಣ ಮಾಡಿರುವುದು ಸಹ ಸತ್ಯವೇ. ಭಾರತೀಯ ಮನಸ್ಸು ತುಂಬಾ ಸಂಪ್ರದಾಯವಾದಿಯಾದ್ದು. ಅದು ಸಂಪ್ರದಾಯದ ಮೂಲಕವೇ ಎಲ್ಲವನ್ನೂ ನಿರ್ಧರಿಸುತ್ತದೆ, ಅದೇ ಅದರ ಶಕ್ತಿ ಮತ್ತು ಮಿತಿ. ಈ ‘ಮಿತ್’ ಎಂಬುದಿದೆಯೆಲ್ಲಾ ಅದು ನಮ್ಮ ರೂಢಿಯ ವಾಹಕವೇ ಹೊರತು ಅದೇ ಮೂಲದ್ರವ್ಯವಲ್ಲ. ದುರಂತವೆಂದರೆ ಕೆಲ ಭಾರತೀಯರು ಮಿತ್ ಅನ್ನೇ ನಮ್ಮ ರೂಢಿ ಎಂದುಕೊಂಡಿದ್ದಾರೆ. ಭಾರತೀಯ ರೂಢಿಯನ್ನು ಅಟ್ಯಾಕ್ ಮಾಡುವವರು ಕೂಡ ‘ಮಿತ್’ ಅನ್ನೇ ಗುರಿಯಾಗಿಸುತ್ತಾರೆ ಹೊರತು, ಮೂಲದ ಅರಿವು ಅವರಿಗಿಲ್ಲ. ಏಕೆಂದರೆ ಪಶ್ಚಿಮವು ‘ಮಿತ್’ ಅನ್ನೇ ಪರಮಸತ್ಯವೆಂದುಕೊಂಡಿತ್ತು, ‘ಮಿತ್’ನ ಮಿತಿ ತಿಳಿದ ತಕ್ಷಣ ಅದು ಭ್ರಮನಿರಸನಕ್ಕೊಳಗಾಯಿತು, ಬಲವಾದ ಅಸ್ಥಿರತೆ ಅವರನ್ನು ಕಾಡಿತು, ಇದರಿಂದಲೇ ಅವರು ಲೋಕಚಿತ್ತಕ್ಕೆ ಮಾರುಹೋಗಿ ಅದರಲ್ಲೇ ಅಭಿವೃದ್ಧಿ ಮತ್ತು ಬದುಕಿನ ಸಾಫಲ್ಯವನ್ನು ಕಂಡುಕೊಳ್ಳಲು ಹಾತೊರೆದರು.
ವೈಚಾರಿಕತೆ ಮತ್ತು ರೂಢಿ ಬಹಳ ನಿಕಟವಾದ್ದು, ರೂಢಿಯನ್ನು ದಾಟುವುದೇ ವೈಚಾರಿಕತೆ ಎಂಬುದು ಪಶ್ಚಿಮದ ವಾದ. ರೂಢಿಯಲ್ಲೇ ವೈಚಾರಿಕತೆ ಕಂಡುಕೊಳ್ಳಬೇಕು ಎಂಬುದು ಭಾರತೀಯ ವಾದ. ಇವೆರೆಡರ ತಾಕಲಾಟದಲ್ಲಿ ಭಾರತೀಯನು ಪೂರ್ಣವಾಗಿ ವೈಚಾರಿಕನೂ ಅನ್ನಿಸಿಕೊಳ್ಳಲಾರ, ಪೂರ್ಣ ರೂಢಿನಿಷ್ಠನಾಗಿಯೂ ಉಳಿಯಲಾರ. ಅಥವಾ ಎರಡರ ಸಮನ್ವಯ ಕಾಯ್ದುಕೊಂಡು ಯಾವುದೂ ಅತಿಯಾಗಬಾರದು ಎಂಬುದೇ ಭಾರತೀಯ ದೃಷ್ಟಿಯಾಗಿರಬಹುದು.
-ಕರಣಂ ಪವನ್ ಪ್ರಸಾದ್
ಪ್ರಜಾವಾಣಿ ವಿಶೇಷಾಂಕ | 24.09.2018

Published on November 19, 2018 20:28
No comments have been added yet.