ಬದುಕಿನ ಇಚ್ಛಾಶಕ್ತಿ ಮತ್ತು ಸಮುದಾಯ ಪ್ರಜ್ಞೆ

ಈವರೆಗೂ ನಾವೇನೇನು ಹೇಳುತ್ತಿದ್ದೇವೋ, ಕಂಡುಕೊಂಡಿದ್ದೇವೋ, ಸದ್ಯ ನಾ ಬರೆಯುತ್ತಿರುವುದು ಎಲ್ಲವೂ ಮನುಷ್ಯ ಜೀವಿಯ ದಾಖಲೆ ಮತ್ತು ಗ್ರಹಿಕೆಗಳು. ತುಂಬಾ Anthropocentric ಆದ ಈ ಭೂಮಿಯಲ್ಲಿ ಮನುಷ್ಯ ತನ್ನ ಮಿತಿಯನ್ನೇ ಎಲ್ಲದರ ಮೇಲೆ ಆರೋಪಿಸುತ್ತಾ ಬಂದಿದ್ದಾನೆ. ನಾವು ನೋಡುತ್ತಿರುವ ಬಣ್ಣ ಕೆಂಪು ಬಣ್ಣ ಎಂದಿಟ್ಟುಕೊಳ್ಳಿ, ಅದು ಕೆಂಪೇ ಹೌದೇ ಅಥವಾ ಇಲ್ಲವೇ? ಆ ಬಣ್ಣಕ್ಕೊಂದು ಗ್ರೇಡ್ ಅಥವಾ ಗೋಚರತ್ವ ಬಿಂದು ಇಟ್ಟು ಕೆಂಪು ಎಂದು ಗುರುತಿಸುತ್ತೇವೆ. ಅಕಸ್ಮಾತ್ ಅನ್ಯಗ್ರಹ ಜೀವಿಗೆ (ಇದ್ದರೆ) ಅದು ಇನ್ನೇನೋ ಬಣ್ಣವಾಗಿ ಕಾಣಬಹುದು. ಅದಿರಲಿ, ಈ ಭೂಮಿಯಲ್ಲಿರುವ ಇತರೆ ಪ್ರಾಣಿಗಳಿಗೆ ಅದು ಯಾವ ರೀತಿ ಕಾಣುತ್ತದೆ ಎಂದು ವಿಜ್ಞಾನ ಕಡ್ಡಿ ಮುರಿದಂತೆ ಹೇಳಲಿಕ್ಕೆ ಸಾಧ್ಯವೇ ಆಗಿಲ್ಲ. ಬಣ್ಣದಲ್ಲಿ ಗೋಚರತ್ವದ ಪ್ರಮಾಣ, ಅಗೋಚರತ್ವದ ಪ್ರಮಾಣದ ಅಡಿಯಲ್ಲಿ ಇದು ಡಾರ್ಕ್ ಇದು ಲೈಟ್ ಎನ್ನುವ ನಿರ್ಣಯ ಮಾತ್ರ ಸತ್ಯಕ್ಕೆ ಹತ್ತಿರವಿರಬಹುದು. ಅದೂ ಸುಳ್ಳಾಗಬಹುದು... ನಮಗೆ ಬೆಳಕಿನಲ್ಲಿ ಗೋಚರವಾಗುವ ಬಣ್ಣ ಇನ್ನೊಂದು ಪ್ರಾಣಿಗೆ ಕತ್ತಲಲ್ಲಿ ಹೆಚ್ಚು ಗೋಚರವಾಗಬಹುದು. ಹೀಗಾಗಿ ಗೋಚರತ್ವದ ಗ್ರಹಿಕೆಯೇ ಸಂಕೀರ್ಣ. ಈ ಭೂಮಿಯೇ ಇಲ್ಲ, ಧ್ವಂಸವಾಯ್ತು, ಅಥವಾ ಇದು ಹುಟ್ಟೇ ಇರಲಿಲ್ಲ ಎಂದುಕೊಳ್ಳಿ... ಏನಿದು? ಯಾಕಿದು? ಹೇಗಿದು? ಎಂಬ ಕಲ್ಪನೆಯೇ ಒಂದು ರೀತಿ ಕಸಿವಿಸಿ ಮೂಡಿಸಿ, ಗೊಂದಲಕ್ಕೆ ತಳ್ಳುವಂಥದ್ದು. ಇದುವರೆಗೂ ದಾಖಲಿಸಿದ, ಗ್ರಹಿಸಿದ ಎಲ್ಲವೂ ಅಪ್ರಸ್ತುತವಾಗುತ್ತದೆ, ಭೂಮಿಯೇ ಅಪ್ರಸ್ತುತ, ಇಲ್ಲಿನ ಘನ, ದ್ರವ, ಅನಿಲಗಳು ಅಪ್ರಸ್ತುತ, ಇನ್ನು ಅಲ್ಲಿರುವ ಮನುಷ್ಯನ ದಾಖಲೆಗಳು ಯಾವ ರೀತಿ ಪ್ರಸ್ತುತ? ಡೈನೋಸಾರ್, ವೇದ, ಈಜಿಪ್ಟಿನ ಪಿರಮಿಡ್ಡು, ಅಲೆಗ್ಸಾಂಡರ್, ಮೌಂಟ್ ಎವರೆಸ್ಟು, ಕಾಳಿದಾಸ, ಕಂಪ್ಯೂಟರ್ ಎಲ್ಲವೂ ಅಪ್ರಸ್ತುತ. ಇವೆಲ್ಲಾ ಇದ್ದಿದ್ದರೂ ಇಲ್ಲದಿದ್ದರೂ ವ್ಯತ್ಯಾಸ ಆಗುತ್ತಿರಲಿಲ್ಲ ಎಂಬುದೇ ಭ್ರಮನಿರಸನ ಸತ್ಯ. ನಮ್ಮ ಪರಂಪರೆಯಲ್ಲಿ ಈ ರೀತಿಯ ಭ್ರಮನಿರಸನ ಗೊಂದಲ ಸ್ಥಿತಿಯಲ್ಲಿ ವಿವೇಚನೆ ಇರುವ ಜೀವಿ ಸ್ಥಿಮಿತ ಕಳೆದುಕೊಳ್ಳಬಾರದು ಎಂದೇ ಮೋಕ್ಷ, ಬ್ರಹ್ಮ, ಪರಮಾರ್ಥ ಎಂದೆಲ್ಲಾ ಸೃಷ್ಟಿಸಿದರು ಅನ್ನಿಸುತ್ತದೆ. ಇದೊಂದು ರೀತಿ "ಹಿತವಾದ" (ತರ್ಕ ಮಾಡಿ ಗೆಲ್ಲಲಾಗದ, ಮನಸ್ಸಿಗೆ ನೆಮ್ಮದಿ ತರಿಸುವ ವಾದ) ಮೋಕ್ಷ ಇದೆ... ಗುರಿ ಕೊಟ್ಟ ಹಾಗೆ ಆಯ್ತು. ಇದೆಯೋ ಇಲ್ಲವೋ ತರ್ಕ ಮಾಡಿ ಗೆಲ್ಲಕ್ಕೆ ಆಗೋಲ್ಲ, ಆದರೆ ಮನಸ್ಸಿಗೆ ಹಿತ, ಆದ್ದರಿಂದ ಒಪ್ಪಿತ. ಎಲ್ಲವೂ ಬ್ರಹ್ಮ, ಅದಕ್ಕೆ ಹುಟ್ಟಿಲ್ಲ ಸಾವಿಲ್ಲ, ಯೂನಿವರ್ಸ್ ಹೋಲೋಗ್ರಾಮ್ ಇದ್ದಂತೆ, ಅದಕ್ಕೆ ಬುಡವಿಲ್ಲ, ಕೊನೆಯಿಲ್ಲ, ಅದು ಬೆಳೆಯುತ್ತಿದೆ, ಸಾವು ಕೊನೆಯಲ್ಲ, ಪುನರ್ಜನ್ಮ ಇದೆ, ಬ್ಲಾಕ್ ಹೋಲ್ ಅಲ್ಲಿ ಹೋದದ್ದು ವಾಪಾಸ್ ಬರೋಲ್ಲ, ಕಾಲ ಸಾಪೇಕ್ಷವಾದ್ದು... ಇವೆಲ್ಲವೂ ಹಿತವಾದವೇ. ಸುಸ್ಪಷ್ಟ ತರ್ಕದಲ್ಲಿ ಇದನ್ನು ಸಾಬೀತು ಮಾಡಲು ಸಾಧ್ಯವೇ ಇಲ್ಲ. ಆದರೆ ಏನೋ ತಕ್ಕಮಟ್ಟಿಗೆ ಉತ್ತರ ಹಿತವೆನ್ನಿಸುತ್ತಿದೆ ಎಂದು ಒಪ್ಪಿಕೊಳ್ಳೋದು. ಇದನ್ನು ಫಿಲಾಸಫಿ ಹೇಳಿದರೆ ಹಿತವಾದ, ಸೈನ್ಸ್ ಹೇಳಿದರೆ ಒಪ್ಪಿತವಾದ. ಹಿತವಾದವು ಭಾವ ಕೇಂದ್ರಿತ, ಒಪ್ಪಿತವಾದವು ಧ್ವನಿ ಕೇಂದ್ರಿತ, ಇಷ್ಟೇ ವ್ಯತ್ಯಾಸ. ಎರಡೂ ಅಂತ್ಯದಲ್ಲಿ ಪರಮಸತ್ಯವೇನಲ್ಲ. ಇನ್ನು ದೇವರು ಎಂಬುದಂತೂ... ಬೇಡ ಬಿಡಿ. ಮನಸ್ಸು ಹಿತವಾದದಿಂದ ಹಿತವಾಗಿರಲಿ, ಕದಡುವುದು ಬೇಡ. ಇಷ್ಟು ಪೀಠಿಕೆ ಹಾಕಿದೆ ಉದ್ದೇಶ ಇಷ್ಟೇ. ಇವೆಲ್ಲವೂ ಮನುಷ್ಯ ಕೇಂದ್ರಿತ ಅಥವ ಮನುಷ್ಯ ಗ್ರಹಿಕೆಯ ಉತ್ಪನ್ನ. ಇಂಥಾ ಮಿತಿಶಿಖರಗಳನ್ನು ಹೊಂದಿರುವ ಕುಬ್ಜ ಮಹಾನ್ ಜೀವಿ ಮನುಷ್ಯ; ಯಾಕೆ ಬದುಕಬೇಕು? ಹೇಗೆ ಬದುಕಬೇಕು? ಎಂಬುದನ್ನು ಕ್ಷಣ ಕ್ಷಣಕ್ಕೂ ಚಿಂತಿಸುತ್ತಾನೆ. ಮನುಷ್ಯ ಇತಿಹಾಸವನ್ನು ಪರಿಗಣಿಸುವುದಾದರೆ ಬದಲಾಗದೇ ಪ್ರಾರಂಭದಿಂದ ಉಳಿದ ಎರಡು ಸಂಗತಿಗಳು; ವೈಯಕ್ತಿಕ ಅಸ್ತಿತ್ವ ಮತ್ತು ಸಮುದಾಯ. ಅದಕ್ಕೆ ಪೂರಕವಾದ ಇಚ್ಛಾಶಕ್ತಿ ಮತ್ತು ಪ್ರಜ್ಞೆ. ಭೂಗ್ರಹದ ಇತರ ಜೀವಿಗಳಲ್ಲೂ ಇದನ್ನು ಕಾಣಬಹುದಾದರೂ, ಭೂಗ್ರಹದ ಅತ್ಯಂತ ಪ್ರಗತಿಯುತ ಜೀವ ಉತ್ಪನ್ನವಾದ ಮನುಷ್ಯನನ್ನು ಮಾತ್ರ ಕೈಗೆತ್ತಿಕೊಂಡು ಇಲ್ಲಿ ಪರೀಕ್ಷಿಸೋಣ.

ಮನುಷ್ಯ ಬದುಕಬೇಕು...
ತನ್ನದೊಂದು ಕ್ಷೇತ್ರ, ಅಲ್ಲಿ ತನಗಾದದ್ದನ್ನು ಮಾಡುತ್ತಾ, ತನ್ನನ್ನು ಸಂತೈಸಿಕೊಳ್ಳುತ್ತಾ, ಪಾಲಿಸಿಕೊಳ್ಳುತ್ತಾ ಬದುಕುವುದೇ ಮನುಷ್ಯನ ಪ್ರಾಥಮಿಕ ಗುರಿ. ಹಾಗೆ ಆಗಬೇಕು, ಹೀಗೆ ಆಗಬೇಕು, ಇದೆಲ್ಲಾ ಮಾಡಬೇಕು, ಇಲ್ಲೆಲ್ಲಾ ಹೋಗಬೇಕು, ಇದೆಲ್ಲಾ ತಿಳಿಯಬೇಕು, ಹೀಗೆಲ್ಲಾ ಸವಿಯವೇಕು, ಹಾಗೆಲ್ಲಾ ನೋಡಬೇಕು ಇವೇ ಮುಂತಾದ ಸಾಫಲ್ಯತೆಯ ಬಯಕೆಯೇ ಅವನ ಜೀವನಕ್ಕೆ ಇಂಧನ. ಹುಟ್ಟಿದೆ ಇದ್ದೀನಿ ಸಾಯ್ತೀನಿ ಅನ್ನುವ ಸಾಮಾನ್ಯನಿಗೂ ಉಡಾಫೆಯ ಸಾಫಲ್ಯತೆ ಇದೆ. ವಿರಕ್ತ ನಾನು, ಒಬ್ಬಂಟಿ, ಇಂದ್ರಿಯಾತೀತ ನಿರಾಕಾರ ಬ್ರಹ್ಮ ಸೇರುತ್ತೇನೆ, ಎಲ್ಲದರಲ್ಲಿ ಒಂದಾಗುತ್ತೇನೆ ಎನ್ನುವವನಿಗೂ "ಅದಾಗುವ" ಸಾಫಲ್ಯದ ಕನಸು. ಬಿಡುತ್ತೇನೆ ಎನ್ನುವುದು ಬಯಕೆಯೇ! ತಮ್ಮ ಶಕ್ತಿ, ಯುಕ್ತಿಗನುಗುಣವಾದ ಸಾಫಲ್ಯದ ಸೆಳೆತವೇ ಬದುಕಬೇಕು ಎಂಬುದರ ಮೂಲ ದ್ರವ್ಯ. ನಾನು ಬದುಕೊಲ್ಲ ಎನ್ನುವವನಿಗೂ "ಸಾಕು" ಎನ್ನುವ ಸಾಫಲ್ಯದ ಬಯಕೆ! ತನಗೆ ಅನ್ನಿಸಿದ್ದನ್ನು ಸಾಕ್ಷೀಕರಿಸುವುದೇ ಮನುಷ್ಯನ ಗುಣ ಎಂದಾಯ್ತು. ಒಂದು ಹಂತದವರೆಗೂ ಅವನಿಗೆ ಅವನೇ ಅದನ್ನು ಸಾಬೀತುಮಾಡಿಕೊಳ್ಳುತ್ತಾ ಸಾಗುತ್ತಾನೆ, ಆದರೆ ಇತರರ ಮುಂದೆ ಅದನ್ನು ಸಾಬೀತು ಮಾಡುವ ಇಚ್ಛೆ ಅವನನ್ನು ಮೇಲಕ್ಕೂ, ಕೆಳಕ್ಕೂ ತಳ್ಳಾಡುತ್ತದೆ. ಸಾಬೀತು ಮಾಡಿಕೊಳ್ಳುವ ಪ್ರಕ್ರಿಯೆಯೇ ಅವನ ಬದುಕನ್ನು ನಿರ್ಧರಿಸುತ್ತದೆ. ಈ ಹಂತದಲ್ಲಿಯೇ ಮನುಷ್ಯ ತನ್ನ ಗುಣಕರ್ಮ ಆಧಾರದಲ್ಲಿ ವಿಭಾಗವಾಗುವುದು. ಸಾಬೀತು ಎಂಬ ಪದವಿದೆಯಲ್ಲ ಅದು ಎಷ್ಟು ಪದ-ವಸ್ತುಗಳನ್ನು ಸೃಷ್ಟಿಸುತ್ತದೆ ಗೊತ್ತೆ? ಸಾಬೀತುದಾರ, ಸಾಬೀತಿಗೆ ಸಾಕ್ಷಿ, ಅದಕ್ಕೆ ತೀರ್ಪುಗಾರ, ತೀರ್ಪುಗಾರನಿಗೆ ಕಟ್ಟಳೆ, ಕಟ್ಟಳೆ ಮಾಡುವ ಸಮಿತಿ, ಸಮಿತಿಗೊಂದು ಸಮಾಜ, ಸಾಬೀತು ಮಾಡಲಿಕ್ಕೆ ಆವರಣ, ಆ ಆವರಣಕ್ಕೊಂದು ವ್ಯಾಪ್ತಿ, ಅದಕ್ಕೊಂದು ಭೌಗೋಳಿಕ ರೇಖೆ, ಅದಕ್ಕೊಂದು ಸಂಸ್ಕೃತಿ, ಅದಕ್ಕೊಂದು ನಾಗರೀಕತೆ. ಇತ್ಯಾದಿ ಇತ್ಯಾದಿ ಎಲ್ಲವೂ ಪೂರಕ. ಮನುಷ್ಯ ಸಂಘಜೀವಿ ಎಂದರೆ... ಗುಂಪಾಗಿ ಬೇಟೆ ಮಾಡಿ ತಿನ್ನುತ್ತಾನೆ, ಒಟ್ಟಾಗಿ ಮಲಗುತ್ತಾನೆ, ಒಟ್ಟಾಗಿ ಉಣ್ಣುತ್ತಾನೆ, ಒಬ್ಬನೇ ಅಲೆಮಾರಿಯಾಗಿ ಬದುಕೊಲ್ಲ ಎಂಬ ಸಾಮಾನ್ಯ ಅರ್ಥ ತೆಗೆದುಕೊಳ್ಳಬಾರದು. ತಾನು ಇವೆಲ್ಲವನ್ನೂ ತ್ಯಜಿಸುತ್ತೇನೆ ಎಂದು ಸಾಬೀತು ಮಾಡಲೊರಡುವ ಮನುಷ್ಯನೂ ಸಹ ಈ ಎಲ್ಲಾ ಪೂರಕಗಳ ನೆರಳಲ್ಲೇ ಸಾಬೀತುಪಡಿಸಬೇಕು. ಇದರಿಂದ ಹೊರತಾಗೋಲ್ಲ. ಈ ಅವಲಂಬನೆಯೇ, ಅವಶ್ಯಕತೆಯೇ ಅವನು ಸಂಘಜೀವಿ ಎಂಬುದಕ್ಕೆ ತಕ್ಕ ಉತ್ತರ. ಸಾಮಾನ್ಯ ದೃಷ್ಟಾಂತ ಹೇಳುತ್ತೇವಲ್ಲ. ನಾನು ಎತ್ತರ ಎಂದು ತೋರಿಸಬೇಕಾದರೆ ಇನ್ನೊಂದು ಗಿಡ್ಡವಾದ್ದು ತೋರಿಸಬೇಕು. ನಾನೊಬ್ಬನೇ ಇದ್ದರೆ ನಾನು ಎತ್ತರವೋ, ಗಿಡ್ಡವೋ, ದಪ್ಪವೋ, ಸಣ್ಣವೋ ಹೇಗೆ ಗೊತ್ತಾಗುತ್ತದೆ. ಆದ್ದರಿಂದ ಮನುಷ್ಯ ತನ್ನ ಬದುಕನ್ನು ಸಮುದಾಯದ ಜೊತೆಯಲ್ಲಿ ಬೆಸೆದುಕೊಂಡ. ಸಮುದಾಯದ ನೆರಳಲ್ಲಿ ತನ್ನ ಅಸ್ತಿತ್ವ ಮತ್ತು ಇಚ್ಛಾಶಕ್ತಿ ನಿರೂಪಿಸಿಕೊಂಡ. ತಾನು ಬದುಕಬೇಕು ಎಂಬುದರ ಜೊತೆಗೆ ಸಮುದಾಯವು ಬದುಕಬೇಕು ಎಂಬ ಭಾವ, ಗಾಢವಾಗಿ ಅವನಲ್ಲಿ ಬೇರೂರಿದೆ. ಈ ಸಮುದಾಯ ಪ್ರಜ್ಞೆ... ಜಾತಿ, ವರ್ಣ, ದೇಶ, ವರ್ಗ, ಕುಲ, ನೆಲ, ಭಾಷೆ, ಊಟ, ಬಟ್ಟೆ, ಆಚಾರ, ವಿಚಾರ ಹೀಗೆ ಬೇರೆ ಬೇರೆ ರೀತಿಯಲ್ಲಿ ಗುಂಪುಗಳಾಗಿ ಅವನನ್ನು ಆವರಿಸಿರುತ್ತದೆ. ತನ್ನ ಹಿತಕ್ಕೆ ಅನುಗುಣವಾಗಿ ಆಯಾಯ ಸಂದರ್ಭದಲ್ಲಿ ಅವನು ಆ ಸಮುದಾಯ ಪ್ರಜ್ಞೆ ಪ್ರದರ್ಶಿಸುತ್ತಾನೆ. ಅದನ್ನು ಸಮರ್ಥಿಸಿಕೊಳ್ಳುತ್ತಾನೆ. ತನ್ನ ಅಸ್ತಿತ್ವವನ್ನು ಅದರಲ್ಲಿ ನಮೂದಿಸುತ್ತಾನೆ.

ಸಮುದಾಯಗಳ ಅಸ್ತಿತ್ವ...
ಪ್ರಾರಂಭದಲ್ಲಿ ದೊಡ್ಡ ಪ್ರಾಣಿಗಳನ್ನು ಬೇಟೆಯಾಡುವಾಗ ಗುಂಪಲ್ಲಿ ವಯಸ್ಸಾದ ಜನ ಮುಂದೆಯೂ, ಮಧ್ಯಮ ವಯಸ್ಕರು ಹಿಂದೆಯೂ, ಚಿಕ್ಕಮಕ್ಕಳು ದೂರದಲ್ಲಿ ತುರ್ತುಪರಿಸ್ಥಿತಿಯಲ್ಲಿ ಮಾತ್ರ ಬರುವಂತೆಯೂ ನೋಡಿಕೊಳ್ಳುತ್ತಿದ್ದರಂತೆ. ಕುಲದ ಮಕ್ಕಳಲ್ಲಿ ಒಬ್ಬನು ಮಾತ್ರ ಬೇಟೆಗೆ ಹೊರಡಬೇಕು, ಇಲ್ಲವಾದರೆ ಕುಲ ನಿರ್ಣಾಮ ಆಗುತ್ತದೆ. ದೊಡ್ಡವರು ಕುಲಕ್ಕಾಗಿ ಪ್ರಾಣ ಬಿಡಲಿಕ್ಕೂ ಸಿದ್ಧವಿದ್ದರು. ಅನೇಕ ಪ್ರಾಣಿಗಳಲ್ಲೂ ಈ ವರ್ತನೆ ಕಾಣಬಹುದು. ಅಂದಿನ ಕುಲ ಅಥವಾ ಕುಟುಂಬ, ಸಮಾಜವಾಯಿತು, ರಾಜ್ಯವಾಯಿತು, ಈಗ ದೇಶ ಎಂಬುದಕ್ಕೆ ಆ ಪ್ರವೃತ್ತಿ ನಿಷ್ಠವಾಗಿದೆ. ಮನುಷ್ಯ ಕುಲ ಉಳಿಯುವುದಕ್ಕೆ ಈ ಸಮುದಾಯ ಪ್ರಜ್ಞೆಯೇ ಕಾರಣ. ಇಲ್ಲದಾವರೆ ಎಷ್ಟೋ ಜೀವಿಗಳು ನಾಶವಾದಂತೆ ಮನುಷ್ಯ ಪ್ರಾಣಿ ನಶಿಸಿ ಹೋಗುತ್ತಿದ್ದ, ಅವನ ವಿಕಸನಕ್ಕೂ ಇದೇ ಕಾರಣ ಎನ್ನುತ್ತಾರೆ. ಭಾರತ ದೇಶದ ಎಲ್ಲರನ್ನೂ ಪೂರ್ಣವಾಗಿ ಒಂದು ಮತಕ್ಕೆ ಮತಾಂತರ ಮಾಡಲಿಕ್ಕೆ ಸಾಧ್ಯವಾಗದ್ದಕ್ಕೆ ಮುಖ್ಯ ಕಾರಣ "ಜಾತಿ" ಎನ್ನುವ ವಾದವಿದೆಯಲ್ಲ ಅದೂ ಹೀಗೆಯೇ ಇರಬಹುದು. ಅದರ ಸಾಧ್ಯಾಸಾಧ್ಯತೆ ಆಲೋಚಿಸಿ, ನಾನು ಮೂಲವನ್ನು ಮಾತ್ರ ಪ್ರಸ್ತಾಪಿಸುತ್ತೇನೆ. ಒಟ್ಟಾಗಿ ತಾನೊಂದು ಬುಡಕಟ್ಟು ಎಂಬ ಪ್ರಜ್ಞೆ ಮನುಷ್ಯನಲ್ಲಿದೆ. ಬುಡಕಟ್ಟುವಿಗೆ ಇರಬೇಕಾದ ಎಲ್ಲಾ ಗುಣಗಳನ್ನೂ ದೇಶ ಎಂಬುದರಲ್ಲೂ ಕಾಣಬಹುದು, ಆದರೆ ಪ್ರಮಾಣ ಮತ್ತು ಗಾತ್ರ ವ್ಯತ್ಯಾಸ ಅಷ್ಟೇ. ಪ್ರಮಾಣ ಮತ್ತು ಗಾತ್ರ ಹೆಚ್ಚಾದಂತೆ ಸಂಕೀರ್ಣತೆ, ವಿಭಾಗವೂ ಹೆಚ್ಚಾಗುತ್ತದೆ, ಆದರೆ ಮೂಲದ್ರವ್ಯ ಅದೇ. ಸಮುದಾಯವನ್ನು ಧಿಕ್ಕರಿಸುವ ಕೆಲಸ ಮಾಡುವಾಗ ಇನ್ನೊಂದು ಸಮುದಾಯದ ಸೃಷ್ಟಿಯಾಗುತ್ತದೆ. ಸಮುದಾಯಕ್ಕೆ ವ್ಯಕ್ತಿ ಪರ್ಯಾಯ ಆಗುವುದೇ ಇಲ್ಲ. ಸಮುದಾಯಕ್ಕೆ ಸಮುದಾಯವೇ ಪರ್ಯಾಯ. ಬದುಕಬೇಕು ಎಂಬ ಸಾಮಾನ್ಯ ಆಸೆಗೂ, ಸಮುದಾಯದ ಉಳಿವು ಎಂಬ ಅಸಮಾನ್ಯ ಬಯಕೆಯ ಮಧ್ಯೆ ಹಲವಾರು ಮಜಲು, ತಿರುವು ಇದೆ. ಆದರೆ ಇವು ಒಂದೇ ದಾರದ ಎರಡು ತುದಿ ಎಂಬುದು ಸಹಜ ವಿಸ್ಮಯ. ಅನ್ಯಗ್ರಹ ಜೀವಿಯ ಬಗ್ಗೆ ಮೊದಲು ಮಾತಾಡಿದೆ, ಅವರು ಬಂದು ದಾಳಿ ಮಾಡುವ, ನಾಶಗೊಳಿಸುವ ಕಾರ್ಟೂನ್ ಕಲ್ಪನೆ ಬದಿಗಿಡೋಣ. ಅವರ ಕಲ್ಪನೆ ನಮ್ಮಂತೆಯೇ ಇದೆಯೇ? ಅವರಿಗೆ ಕೆಂಪು, ಹಳದಿಯಾಗಿದ್ದರೇ? ನಮ್ಮ ನೀರು ಅವರಿಗೆ ಗಾಳಿಯಂತಾಗಿಯೂ, ಗಾಳಿಯೂ ನೀರಿನಂತೆ ಕೆಲಸ ಮಾಡುವ ದೇಹ ರಚನೆ ಹೊಂದಿದ್ದರೆ? ಎಂಬ ಪ್ರಶ್ನೆಗಳನ್ನು ಹಿಡಿಯಬೇಕಾಗುತ್ತದೆ. ವಿಷಯಕ್ಕೆ ಬರೋದಾದರೆ ಅವರೂ ಒಂದು ಸಮುದಾಯವೇ ಆಗಿರಬೇಕಲ್ಲವೇ. ಸಮುದಾಯವಲ್ಲದಿದ್ದರೆ ನಮ್ಮ ಭೂಗ್ರಹದ ಬಳಿ ಬರುವಷ್ಟು!? (ಬಂದರೆ) ವಿಕಸನವಾಗುತ್ತಿರಲಿಲ್ಲ ಅಲ್ಲವೇ. ಈ ಬ್ರಹ್ಮಾಂಡದಲ್ಲಿ ಏನೂ ಇಲ್ಲದೇ ಬರೀ ಭೂಗ್ರಹ ಮಾತ್ರ ಇದ್ದಿದ್ದರೇ!? ಮನುಷ್ಯ ಅದನ್ನು ತಾಳಿಕೊಳ್ಳುತ್ತಿದ್ದನಾ? ಹಾಗಾದರೆ ಭೂಮಿಗೂ ಸಮುದಾಯ ಬೇಕಲ್ಲವೇ? ಸಮುದಾಯ ಇರುವುದರಿಂದಲೇ ಭೂಮಿ; ಭೂಮಿ ಎನ್ನಿಸಿಕೊಂಡಿತಲ್ಲವೇ. ಭೂಮಿಗೆ ಬದುಕಬೇಕು ಎಂಬ ಇಚ್ಛಾಶಕ್ತಿ ಬೆಳೆದದ್ದು ತನ್ನ ಸೂರ್ಯ ಮಂಡಲ ಸಮುದಾಯದ ಆಧಾರದಲ್ಲೇ ಅಲ್ಲವೇ? ಈ ಭೂಮಿ ಇಲ್ಲ, ಸೂರ್ಯ ಇಲ್ಲ, ಕಣ ಇಲ್ಲ, ತೃಣ ಇಲ್ಲ, ಅಸಲಿಗೆ ಬ್ರಹ್ಮಾಂಡವೇ ಇಲ್ಲ ಎಂದರೆ... ಅಲ್ಲಿ ಕತ್ತಲೆಯೇ. ಕತ್ತಲೆ ಎನ್ನಲಿಕ್ಕಾದರೂ ಏನಾದರೂ ಇರಬೇಕಲ್ಲವೇ, ಬೆಳಕು ಇದ್ದರೆ ತಾನೆ ಕತ್ತಲು ಎಂಬುದಕ್ಕೆ ಅರ್ಥ. ಅಂದರೆ ಕತ್ತಲು, ಬೆಳಕು ಎಂಬುದು ಸಮುದಾಯ ವಾಚಕ!
 •  0 comments  •  flag
Share on Twitter
Published on June 23, 2018 22:52
No comments have been added yet.