Vulgar Richness ನಮ್ಮಲ್ಲಡಗಿರುವ ಹಲ್ಕತನ...

ನಾನು ಬಾಲ್ಯದಿಂದ ಕೋರಮಂಗಲದಂಥ ಪ್ರದೇಶದಲ್ಲಿ ಓಡಾಡಿದವನಾಗಿ ನನ್ನೊಲ್ಲೊಂದು ವಿಕಾರವಾದ ಹತಾಶೆಯಿತ್ತು. ವೈಭವೋಪೇತ ಶಾಲೆಗಳು ನನ್ನ ಕಾಲಳತೆ ದೂರದಲ್ಲಿ ಇದ್ದವು. ನಾನು ಓದುತ್ತಿದ್ದದ್ದು ಸತ್ಯನಾರಾಯಣ ಹಿರಿಯ ಪ್ರಾಥಮಿಕ ಶಾಲೆ ಎಂಬ ಏಡೆಡ್ ಕನ್ನಡ ಶಾಲೆಯಲ್ಲಿ... ಅತ್ತಲಾಗಿ ಅದು ಸರ್ಕಾರಿ ಶಾಲೆಯಾದರೆ ಸರಿಹೋಗುತ್ತಿತ್ತೇನೋ, ಅತ್ತ ಪ್ರೈವೇಟು ಅಲ್ಲದ ಸರ್ಕಾರಿಯೂ ಅಲ್ಲದ, ಡೆಸ್ಕೂ ಇಲ್ಲದ, ಕೇವಲ ೧೦ಅಡಿ ಅಗಲದ ನಾಲ್ಕು ಕೋಣೆಯ ಶಾಲೆಯದು. ಆಗಿನ ಕಾಲಕ್ಕೆ ನಮ್ಮ ಶಾಲೆಯ ಪಕ್ಕಕ್ಕೆ ಫ್ಯಾಬ್ಇಂಡಿಯಾ ಮಳಿಗೆ ಇತ್ತು. ಸಾಫ್ಟ್’ವೇರ್ ಕಂಪನಿ ಇತ್ತು. ಕೇಳಿದರೆ ನಗುತ್ತೀರಿ... ನಾನು ಏಳನೇ ತರಗತಿಗೆ ಆ ಸ್ಕೂಲು ಬಿಟ್ಟಾಗಲು ಅಲ್ಲಿ ಬಲ್ಬು, ಕರೆಂಟು ಇರಲಿಲ್ಲ! ಯಾವುದೋ ಕುಗ್ರಾಮದ ಕಥೆಯಲ್ಲ ಇದು. ಬೆಂಗಳೂರಿನ ಕೋರಮಂಗಲದಂಥ ವೈಭವದ ಮಧ್ಯದ ಸೊಂದಿಯಲ್ಲಿ ಬದುಕಿದ್ದ ನನ್ನ ಸ್ಕೂಲಿನ ಕತೆ. "ಬೆಂಗಳೂರಿನ ಬಡತನವೆಂದರೆ ಚಿನ್ನದರಮನೆಯಲ್ಲಿ ಚರಂಡಿಯ ಬಾಳು" ಎಂದು ನಾನು ‘ಗ್ರಸ್ತ’ ಕಾದಂಬರಿಯಲ್ಲಿ ಸುಮ್ಮನೆ ಬರೆದಿಲ್ಲ... ಅದು ನನ್ನ ಒಟ್ಟು ಅನುಭವದಿಂದ ಉಮ್ಮಳಿಸಿ ಬಂದ ವಾಕ್ಯ. ಈ ವಿಷಾದದ ಪೀಠಿಕೆ ಬೇಕಿರಲಿಲ್ಲವೇನೋ ಆದರೂ ಇರಲಿ. ಫ್ಯಾಬ್ ಇಂಡಿಯಾ ಮಳಿಗೆಗೆ ದೊಡ್ಡ ಕಾರಿನಲ್ಲಿ ಬಿಳಿಯ ಜನ, ಶ್ರೀಮಂತ ಜನ ಬಂದು ಬಟ್ಟೆ ಕೊಳ್ಳುವುದನ್ನು ಅದರ ಒಳವಿನ್ಯಾಸವನ್ನು, ನಾವು ಹುಡುಗರು ಉಚ್ಚೆ ವಿರಾಮಕ್ಕೆಂದು ಬಿಟ್ಟಾಗ ಕದ್ದು ನೋಡುತ್ತಿದ್ದೆವು, ಅದರ ವಾಚ್’ಮನ್ ನಮ್ಮನ್ನು ನಾಯಿಗಳಂತೆ ಓಡಿಸುತ್ತಿದ್ದ. ನನ್ನ ಜೀವನದ ಅತ್ಯಮೋಘ ಆಸೆ ಆಗ ಇದ್ದದ್ದು ಇಷ್ಟೇ... ನಾನೂ ದೊಡ್ಡಕಾರಿನಲ್ಲಿ ಇಲ್ಲಿ ಬಂದು ಬಟ್ಟೆ ಕೊಂಡು ಇವರೆಲ್ಲರ ಮುಂದೆ ಮಿಂಚಬೇಕು. ಅದು ಆಸೆ ಎನ್ನುವುದಕ್ಕಿಂತ ಇವರ ಮುಂದೆ ನನ್ನ ಸೊಫಿಸ್ಟಿಕೇಷನ್ ತೋರಿಸಿ ಮೆರೆಯಬೇಕು ಎಂಬ ಸುಪ್ತ ಹಲ್ಕತನ. ಈ ರೀತಿಯ ಮನೋಭಾವ ಒಮ್ಮೆ ನಾಟಿ, ಸಮಾಜದ ಆಗುಹೋಗಿನ ಜೊತೆ ಸ್ಪಂದಿಸುವುದನ್ನು ಮರೆತ ತಕ್ಷಣ... ಜಾಗೃತವಾಗುವುದೇ Vulgar richnessನ ಪ್ರದರ್ಶನ.

ಇದು ಕೇವಲ ಅಂಬಾನಿಯಂಥ ಜನರಿಗೇ ಇರುತ್ತದೆ ಎಂದು... ಅವನ ಮಗಳ ಮದುವೆಯಲ್ಲಿ ದುಡ್ಡು ಪಡೆದು ಬಂದು ಕುಣಿದ, ಎಂಜಲು ಎತ್ತಿದ ಸ್ಟಾರ್ ನಟರಿಗೆ, ಕ್ರಿಕೆಟಿಗರಿಗೆ, ಇನ್ನಿತರ ತೋಲಾಂಡಿಗಳಿಗೆ ಇರುತ್ತದೆ ಎಂದು ಭಾವಿಸಿ ಸುಮ್ಮನಾಗಬೇಡಿ ಜನರೇ. ಅದು ನಿಮ್ಮಲ್ಲೂ ಇದೆ... ಹೌದು ಭಾರತೀಯರಿಗೆ ಚಿನ್ನವೆಂದರೆ ಬಲುಪ್ರಿಯ. ಅಲಂಕಾರಕ್ಕೆ ಅದೊಂದು ಮೆರಗನ್ನು ನೀಡುತ್ತದೆ. ನಾವೂ ಒಂದು ಚಿನ್ನದ ಸರವನ್ನೋ, ಸಣ್ಣ ಉಂಗುರವನ್ನೋ ತೊಡುತ್ತೇವೆ. ಅಲ್ಲಿಗೆ ಅದು ಮುಗಿಯಬೇಕು... ಆದರೆ ಮುಗಿಯಲ್ಲ. ನಮ್ಮ ಸುತ್ತಲಿನ ಜನರನ್ನೇ ವಿಮರ್ಶಿಸಿ ನೋಡಿ ಚಿನ್ನ ತೊಡುವಿಕೆ ಎಂಬುದು ಯೋಗ್ಯತೆಯ ಪ್ರದರ್ಶನ ಅವರಿಗೆ. ನಾಯಿಚೈನಿನಂಥ ಚಿನ್ನದ ಸರ ಹಾಕುವುದು ಅಲಂಕಾರವೂ ಅಲ್ಲ, ಆರಾಮು ಅಲ್ಲ, ಸುಖವೂ ಅಲ್ಲ, ಹೊಟ್ಟೆ ತುಂಬಿಸಿಕೊಳ್ಳಲೂ ಅಲ್ಲ, ಆರೋಗ್ಯಕ್ಕೂ ಅಲ್ಲ. ಎಲ್ಲಾ ಮೂಲ ಅನಿವಾರ್ಯ, ಅಗತ್ಯ, ಆರಾಮು ಮೀರಿದ ಹಲ್ಕ ಶ್ರೀಮಂತಿಕೆ ತೋರಲು. ಹಣಗಳಿಕೆಯನ್ನೇ ವಸ್ತುಖರೀದಿಯನ್ನೇ ತಪ್ಪು ಎಂದು ಬಿಂಬಿಸುವ ಸಮತಾವಾದಿ ನಾನಲ್ಲ ಎಂಬುದು ನೆನಪಿರಲಿ. ಅನಿವಾರ್ಯ; ಕನಿಷ್ಠ ಬದುಕಲು ಬೇಕೇ ಬೇಕಾದ್ದು... ಅಗತ್ಯ; ಒಂದು ವ್ಯವಸ್ಥಿತ ಜೀವನ ನಡೆಸಲು ಬೇಕಾದ್ದು... ಆರಾಮು; ರಚನಾತ್ಮಕವಾಗಿ ಜೀವನ ನಡೆಸಲು ಬೇಕಾದ ಸೌಕರ್ಯ. ಆರಾಮನ್ನು ಇಂಗ್ಲೀಷಿನಲ್ಲಿ comfort ಎನ್ನುತ್ತಾರಲ್ಲ ಆ ಅರ್ಥದಲ್ಲಿ ತೆಗೆದುಕೊಳ್ಳಿ. ಇನ್ನು ವೈಭವ ಮತ್ತು ಲಕ್ಸುರಿ ಅನ್ನೋದು ಏನಿದೆ ಅದು ವಲ್ಗರ್ ಎನ್ನುವಂಥದ್ದೇ. ಅದರಲ್ಲಿ ತನ್ನ ವೈಯಕ್ತಿಕ ತೋಲಾಂಡಿತನದ ಸಾಬೀತುಪಡಿಸುವಿಕೆಯೇ ಮುಖ್ಯ. ಒಮ್ಮೊಮ್ಮೆ ವೈಭವವೂ ರಚನಾತ್ಮಕವಾಗಿರಬಹುದು... ಅದನ್ನು ಗುರುತಿಸುವುದು ಸ್ವಲ್ಪ ಕಷ್ಟ ಸಾಧ್ಯ. ಭೀಮಸೇನ್ ಜೋಷಿಯೂ ದುಡ್ಡು ಕೊಟ್ಟರೆ ನಿಮ್ಮ ಮನೆಗೆ ಬಂದು ಹಾಡುತ್ತಿದ್ದರು... ಸಲ್ಮಾನ್ ಖಾನ್ ಕೂಡ ದುಡ್ಡು ಕೊಟ್ಟರೆ ನಿಮ್ಮ ಮನೆಗೆ ಬಂದು ಕುಣಿಯುತ್ತಾನೆ. ಆದರೆ ಭೀಮಸೇನ್ ಜೋಷಿಗೆ... ಒಂದು ಬಿಟ್ ನೀವು ಹಾಡಿ ಆಮೇಲೆ ನನ್ನ ಮಗ ಕತ್ತೆಕಂಠದಲ್ಲಿ ಜಲಕ್ ದಿಕಲಾಜ ಹಾಡುತ್ತಾನೆ ಎಂದು ಹೇಳಲಾಗುತ್ತಿರಲಿಲ್ಲ. ಏಕೆಂದರೆ ಇಲ್ಲಿ ಭೀಮಸೇನರದ್ದು ಕಲೆ... ಸಲ್ಮಾನ್ ಖಾನನದ್ದು ವ್ಯವಹಾರ. ಎರಡೂ ವೈಭವಕ್ಕೆ ಬಗ್ಗುತ್ತದೆ... ಆದರೆ ಒಂದರಲ್ಲಿ ರಚನಾತ್ಮಕತೆ ಇದೆ, ಇನ್ನೊಂದರಲ್ಲಿ ಹಲ್ಕತನವಿದೆ. ವೈಭವ ಅಥವಾ ಸೊಬಗು ಅಥವಾ ಸೌಂದರ್ಯ ಎಂಬುದಕ್ಕೂ ರಚನಾತ್ಮಕತೆ ಇದ್ದಾಗ ಅದು ವಲ್ಗರ್ ಎನ್ನಿಸಿಕೊಳ್ಳುವುದಿಲ್ಲ. ತುಂಬಾ ತಾತ್ತ್ವಿಕವಾದ ಉದಾಹರಣೆ ಇದಕ್ಕೆ ಬೇಡ. ಕಡಿಮೆ ದುಡ್ಡಿನಲ್ಲೂ ವೈಭವ ಇರುವಂತೆ ಮನೆ ಕಟ್ಟಿರುವುದನ್ನೂ, ದುಡ್ಡಿದೆ ಎಂದು ಲೇಟ್ರೀನಿಗೂ ಚಿನ್ನದ ಲೇಪನ, ಬಚ್ಚಲಿಗೂ ಶ್ಯಾಂಡಲಿಯರ್ ಹಾಕುವುದನ್ನ ದಿನನಿತ್ಯದ ಜೀವನದಲ್ಲಿ ನೋಡಿರುತ್ತೇವೆ. ಈ ವ್ಯತ್ಯಾಸಗಳನ್ನು ಗುರ್ತಿಸುವ ಸೂಕ್ಷ್ಮತೆ ನಮಗಿರಬೇಕಷ್ಟೇ.

comfort ಬಿಟ್ಟುಬಿಡಿ ಎಂದು ಜನರಿಗೆ ಹೇಳಿದರೆ ಯಾರೂ ಕೇಳುವುದೂ ಇಲ್ಲ. ಅದು ಮನುಷ್ಯನ ಸ್ವಭಾವವೂ ಅಲ್ಲ. ಸಮತಾವಾದಿಗಳಂತೆ ಒತ್ತಾಯಪೂರ್ವಕವಾಗಿ ಜನರ ಮೇಲೆ ಅದನ್ನು ಹೇರಿದರೆ, ಹಿಡಿತ ಬಿಟ್ಟುಹೋದಾಗ ಸ್ವಭಾವ ದುಪ್ಪಟ್ಟಾಗುತ್ತದೆ. ೧೯೯೩ರ ತನಕ ಲಾಡಾ ಇನ್ನಿತರ ಕಾರುಗಳನ್ನೇ, ಥರ್ಡ್ ವರ್ಲ್ಡ್ ಉತ್ಪಾದನೆಯನ್ನೇ ನಂಬಿಕೊಂಡಿದ್ದ ಜನರಿಗೆ, ಹಿಡಿತ ತಪ್ಪಿದ ತಕ್ಷಣ, ಬಿಎಂಡಬ್ಯೂ, ಬೆನ್ಜ್, ಬರ್ಗರ್ ಕಿಂಗ್, ಮೆಕ್ಡೊನಾಲ್ಡ್ಸ್ ಮೋಹ ಹೆಚ್ಚಾಗಿ ಯಾವ ನೆಲದಲ್ಲಿ ಸಮತಾವಾದವಿತ್ತೋ ಅಲ್ಲಿ ಇಂದು Comfort ಮೀರಿದ ಲಕ್ಸುರಿಯದ್ದೇ ಕಾರುಬಾರಾಗಿದೆ. ಸಮಾಜ ಸ್ಪಂದನ ಪ್ರಜ್ಞೆ ಎಂಬುದನ್ನು ನಾವೇ ವೈಯಕ್ತಿಕವಾಗಿ ಬೆಳೆಸಿಕೊಳ್ಳಬೇಕು. ಅದು ಚಳುವಳಿಯಿಂದ ಬರುವುದಲ್ಲ, ಅಥವಾ ಪುಸ್ತಕ ಓದಿದ ಮಾತ್ರಕ್ಕೆ ಆಗುವುದಲ್ಲ. ಅನಿವಾರ್ಯ; ಅಗತ್ಯ; ಆರಾಮಿನ ನಡುವಿನ ವ್ಯತ್ಯಾಸ ಅರಿಯಬೇಕು. ನಮ್ಮ ಬದುಕಿನ ಸ್ತರಗಳು ಬದಲಾದಂತೆ, ನಮ್ಮ ಕೆಳಸ್ತರದ ಬದುಕಿನವನ ಮುಂದೆ ನನ್ನ ಹೆಚ್ಚುಗಾರಿಕೆ ತೋರಿಸುವುದೇ ನನ್ನ ಯಶಸ್ಸು ಎಂಬ ಸುಪ್ತಹಲ್ಕತನವನ್ನ ನಾವು ಬಿಡಬೇಕು. ನಮ್ಮ ಮನಸ್ಸಿನಲ್ಲೇ ಅಂಬಾನಿಯಿದ್ದಾನೆ... ನಾವೂ ಹಾಗೆ ಆಗಬೇಕು, ಅವನಂತೆ ಇರಬೇಕು, ಅವನಂತೆ ಕೊಳ್ಳಬೇಕು ಎಂಬ ಲಾಲಸೆ ಸುಪ್ತವಾಗಿ ನಮ್ಮಲ್ಲಿ ಬೇರೂರಿಬಿಟ್ಟಿರುತ್ತದೆ. ನಿಜವಾಗಿಯೂ ವಲ್ಗರ್ ರಿಚ್ನೆಸ್ ಎಂಬುದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುವುದೇ ಈ ಮಧ್ಯಮ ವರ್ಗದ ಜನ. ಇವರಿಗೆ ಕೆಳಗಿನ ಬಗ್ಗೆ ಭಯ-ಅಸಹ್ಯ. ಮೇಲಿನದರ ಬಗ್ಗೆ ಆಸೆ-ಭಕ್ತಿ! ವಲ್ಗರ್ ಆದದ್ದನ್ನು ಸಂಭ್ರಮಿಸುವುದೇ ಇವರು. ಪರೋಕ್ಷವಾಗಿ ಇವರೇ ವಲ್ಗರ್ ರಿಚ್ನೆಸ್’ನ ಆರಾಧಕರು, ಉತ್ತೇಜಕರು. ಚಿಕ್ಕಂದಿನಲ್ಲಿ ವೈಭವವಾಗಿ ಕಾಣುತ್ತಿದ್ದ ಎಷ್ಟೋ ಸಂಗತಿ ನನಗೀಗ ವಲ್ಗರ್ ಎನ್ನಿಸಿದೆ. ಒಮ್ಮೊಮ್ಮೆಯಂತೂ ಇದು ನನ್ನ ಅವಶ್ಯಕತೆಗೆ ಮೀರಿದ್ದು ಎಂದೆನಿಸಿ ಕೆಲವು ಕೊಂಡ ವಸ್ತುಗಳನ್ನು ವಾಪಾಸು ಮಾರಿ, ನನ್ನ ಅಗತ್ಯಕ್ಕೆ ಬೇಕಾದ್ದು ಮಾತ್ರ ಕೊಂಡಿದ್ದೇನೆ. ನಮ್ಮ ಅಗತ್ಯದ ಗೆರೆಗಳವರೆಗೂ ನಾವು ಬೆಳೆಯುವುದು ಎಷ್ಟು ಮುಖ್ಯವೋ ಗೆರೆಯನ್ನು ದಾಟಬಾರದು ಎಂಬ ಪ್ರಜ್ಞೆಯೂ ಅಷ್ಟೇ ಮುಖ್ಯ.
1 like ·   •  0 comments  •  flag
Share on Twitter
Published on December 29, 2018 08:24
No comments have been added yet.