Karanam Pavan Prasad's Blog: ಕರಣಂ ಬರೆಹಗಳು

August 9, 2024

Interview with Karanam Pavan Prasad by Northeast Literature Master's Students Samewanbud Syiemalieh and Temjenyanger Imti for an Academic Journal

1. What are your thoughts on contemporary Indian writers writing in English?

Contemporary literature is widespread. There are lots of books coming in English. There are many Indian writers writing in English, but I must make the strong statement that “an Indian writer can express his innermost emotions better in his own language and not in English. The best of Rabindranath Tagore’s works came in Bengali and not in English; the best of Premchand came in Hindi and not in English.”

2. So, would you suggest that Indian writers who write in their local languages are far more expressive than writers who write in English?

Literature needs a genuine expression. When you don’t have dreams in English, you can't write in English. R.K. Narayan, Raja Rao, Vikram Seth, and Amitav Gosh had all written good stories in English, but I cannot say that they are greater than Rabindranath Tagore or Kuvempu. The best of Indian writings came from regional languages, not from English. The best of Indian emotions is clearly depicted in the works of Kuvempu, Premchand, and other Gujarati writers, Tamil writers, or Assamese writers. Any regional writer is more profound than Indian writers writing in English.

3. Should India then segregate from the English language completely?

I can't deny the fact that for business, we need English as a medium for communication. We must keep English for that section only, not for literature. Literature is a very personal expression or emotion exchanged between the writer and the reader. There is no one between the writer and the reader. Other popular arts are different; when it comes to cinemas or plays, there will be a lot of people involved, but in literature, it is the writer and the reader. “Literature is an inquisitive art; it should not compete with other popular arts.”

4. Would you agree that the best of Indian literature is before us?

I don't think genuine classics can be written in English but in the regional language instead. Therefore, I don’t think the classical era of Indian literature will come again.

5. How important is the cultural root of a writer when it comes to self-expression?

My second novel, ‘Nunni’, is about the Christian missionaries of Prem Nath Ashram, Kolkata. Although I wrote about them in my novel, I was not able to contemplate the cultural roots of the people there. It was as if I was just using it as a peripheral thing in my literature since I was not able to understand the cultural roots of Kolkata. In relation to this, we can consider James Joyce’s ‘Ulysses’ to be all about Dublin, since the novelist is so accustomed to the place. There is cultural conditioning that influences writers, and contemporary writers are not culturally conditioned.

6. What is the state of literature in India today, according to you?

People have now reduced the position of literature to a mere entertainment product and should rather not treat books as a means of entertainment. If you wish to come to books, there should be some ethno feeling. The ethno feeling should attract you towards books. If you are getting poor entertainment from reels, you would expect the same from books. Literature has now become a fifteen-minute scroll, which is wrong.

7. Do you think it is possible to be a full-time writer in India?

There is ample space in English literature, but as far as I know, even the biggest publishing house in India publishes only a thousand copies per print. Writers like Amitav Ghosh have connections with the western world—the first-world countries—but even he can't say that he earns from his books alone. In the US, they know how to turn everything into finance, but we do not have that kind of enthusiasm for literature.

8. What alternative would you suggest to the readers and writers of the modern period in the context of writing, reading, and perceptions towards literature?

Writing should come from our inner emotions; I cannot be commissioned to write a series of books like ‘The Lord of the Rings’. My kind of literature does not work like that. A screenwriter has some aim and will have some boundaries. A writer does not have that. I do not have any goals. My story does not have an aim, but my characters do have intentions. It flows freely in my story. True literature should sensitize our senses. It should sharpen our senses. True literature cannot do anything greater than this.

9. Are there any other art forms that could reiterate the same?

Any art form that can exceed literature is music. Music has crossed the barrier of languages. Literature is the servant of language because it is the medium of expression, but for music, there is no medium of expression. The limitation of literature is language itself; whatever the translation may be, the English translation cannot be true to my own writing in Kannada. There would be so many layers, foam, and cultural roots embedded in the language. We all have individual expressions in our regional language that we cannot express in a true sense in English.

10. What are your thoughts on cultural conditioning? If a writer bridges the gap between expressing deep emotions, do you think it would have an impact on contemporary Indian writers?

In the long run, each and every corner of India will become cosmopolitan. Eventually, our expressions would be cosmopolitan as well. The cultural regional conditioning is gradually disappearing, so the cosmopolitan condition will become a very normal thing. Haruki Murakami, a Japanese writer, writes in Japanese, but his writings are not just about true Japanese cultural conditioning but more about cosmopolitan-brushed Japanese culture presented in the west. Even after seventy-five years of independence from colonial power, Indians never truly converted into a cosmopolitan mindset; we are neither truly concentrated on our conservative sense. We are not into anything now, so we are in a very confused state of mind, and even the literature is confused. I hope better literature will come that can bridge the gap, so it will become different all together. Someday, it will come.
1 like ·   •  0 comments  •  flag
Share on Twitter
Published on August 09, 2024 00:04

September 13, 2021

ಬಾಲ್ಯವು ಸೊಗಸಿತ್ತು ಎಂಬ ನಾಸ್ಟಲಜಿಕ್ ಅಜ್ಞಾನ

---
ಹೀಗೊಂದು ಉದ್ಗಾರ ಬರುವುದುಂಟು, ನಮ್ಮ ಬಾಲ್ಯ ಎಷ್ಟು ಚೆನ್ನಾಗಿತ್ತು. ದಿವ್ಯವೇ ತಾನಾಗಿತ್ತು ಎಂದು ಕವಿಗಳು ಕೊಚ್ಚಿ ಕೆರೆದು ಬರೆದಿದ್ದು ಉಂಟು. ವಯಸ್ಕ ಜೀವನದ ಜವಾಬ್ದಾರಿಯೊಂದಿಗೆ ಬಾಲ್ಯದ ದೇಹ ಕೊಟ್ಟರೆ ಈಗ ತಡೆದುಕೊಳ್ಳುವ ತಾಕತ್ತು ಉಂಟೆ? ಬಾಲ್ಯ ಸೊಗಸು ಎಂಬುದು ಮನುಷ್ಯನ ಅಸಹಾಯಕತೆಯ ದನಿ. ಬಾಲ್ಯದಲ್ಲಿ ಸಾಮಾಜಿಕ ಆವರಣದ ಭಾರ ನಮ್ಮ ಮೇಲೆ ಇರುವುದಿಲ್ಲ, ಅಥವಾ ಪೋಷಕರು ನೀಡಿರುವುದಿಲ್ಲ. ಹಾಗೊಂದು ವೇಳೆ ಅಂಥಹ ವಯಸ್ಸಲ್ಲದ ವಯಸ್ಸಲ್ಲಿ ಸಮಾಜದ ಆವರಣಕ್ಕೆ ಎದೆ ಕೊಟ್ಟ ಮಗು, ಹೀಗೆ ರೊಮ್ಯಾಂಟಿಕ್ ಆಗಿ "ಎಂಥಾ ಬಾಲ್ಯ" ಎಂದು ಹೇಳುವುದಿಲ್ಲ. ಇದು ಮಿಡ್ಲ ಕ್ಲಾಸ್ ಸೊಫಿಸ್ಟಿಕೇಷನ್ನಿನ ಒಂದು ಉದ್ಗಾರ. ಅಯ್ಯೋ ನಮ್ಮ ಬಾಲ್ಯದಲ್ಲಿ ಭೇದ-ಭಾವ ಏನೂ ಗೊತ್ತಿರಲಿಲ್ಲ ಎನ್ನುವುದು ಅದೇ ತರಹದ ಮಾತು. ಹೌದು ಎರಡಕ್ಕೆ ಹೋಗಲಿಕ್ಕೂ ಗೊತ್ತಿರಲಿಲ್ಲ, ಬಟ್ಟೆ ಹಾಕಬೇಕು ಎಂಬುದು ಗೊತ್ತಿರಲಿಲ್ಲ, ದೇವರಿಗೆ ಕೈ ಮುಗಿಯಬೇಕು, ಇನ್ನೊಬ್ಬಳ(ಬ್ಬನ) ಕೈ ಹಿಡಿಯಬೇಕು ಎಂಬುದು ಗೊತ್ತಿರಲಿಲ್ಲ, ದೇಹ ಬೆಳೆದಂತೆ, ಮೆದುಳು ಬಲಿತಂತೆ ಈ ರಮಣೀಯತೆಯ ಪೊರೆ ಕಳಚಿ ಜಗತ್ತು ಕಾಣಲೇಬೇಕು. ಒಮ್ಮೆ ವಯಸ್ಕನಾದ ಮೇಲೆ ಬಾಲ್ಯ ಬೇಕು ಎನ್ನಿಸುವುದು ಈಗಿನ ಜವಾಬ್ದಾರಿಯ ಬಗೆಗಿನ ಅಸಹನೆ, ಭವಿಷ್ಯದ ಬಗೆಗಿನ ನಿರಾಶವಾದವೇ ಹೊರತು ನಿಜವಾದ್ದಲ್ಲ. ಇದು ವಾಸ್ತವದ ಫಲಾಯನವಾದವಷ್ಟೇ. ಬಾಲ್ಯ ಸೊಗಸು ಎಂಬುದು ಅಜ್ಞಾನದ ಆನಂದ, ignorance is bliss ಎಂದು ನಂಬಿರುವ ರಮಣೀಯ ಲಂಪಟತೆ ನಮ್ಮನ್ನು ಹಾಗೆ ಆಡಿಸುತ್ತೆ. ನಾವು ನಮ್ಮದು ಚೆನ್ನಾಗಿತ್ತು ಎನ್ನುತ್ತೇವೆ, ನಮ್ಮ ಮಕ್ಕಳು ನಮ್ಮ ವರ್ತಮಾನವನ್ನು, ಮುಂದೆ ಚೆನ್ನಾಗಿತ್ತು ಎನ್ನುತ್ತಾರೆ. ಒಂದೇ ಕಾಲದಲ್ಲಿ ಇಬ್ಬರಿಗೆ ಚೆನ್ನ-ಚೆಲುವು ವ್ಯತ್ಯಾಸ ಆಗುವುದು ಸರಿಯೇ ಸರಿ. ಮಕ್ಕಳಿಗೆ ಇರುವುದು ಮುಗ್ಧತೆ, ಆದರೆ ವಯಸ್ಕನಾದಮೇಲೂ ಮುಗ್ಧತೆ ಬೇಕು ಎನ್ನುವುದು ಲಂಪಟತೆ...!

ಡಿಸೆಂಬರ್ ೧೦ ೨೦೨೦

ನಮ್ಮವರಿಲ್ಲದ ಊರು ನಮ್ಮ ಊರು ಆಗುತ್ತದೆಯೇ?
---
ನಮ್ಮ ಊರು, ನಾವು ಬೆಳೆದ ಊರು ಎಂಬ ನಾಸ್ಟಾಲಜಿಕ್ ಭಾರ ಮೊಳೆಯಲಿಕ್ಕೆ ಕಾರಣ ನಮ್ಮ ಎಲ್ಲಾ ಕಲ್ಪನೆಗೆ ಇಂಬುಕೊಡುವ ಬಾಲ್ಯದ ಬೆಂಚ್ ಮಾರ್ಕ್ ಅಬ್ಸರವೇಶನ್. ಮನುಷ್ಯ ನೂರು ಊರು ಬದಲಾಯಿಸಬಹುದು, ಆದರೆ ಒಂದು ಊರು ಅವನಿಗೆ ಅರ್ಥವಾಗುವುದು ಬಾಲ್ಯದಲ್ಲಿ ಕಂಡ ಊರು ಮಾತ್ರ! ಇನ್ನೆಲ್ಲಾ ಊರು ಅವನಿಗೆ ಅನುಭೋಗವೇ ಹೊರತು ಅನುಭಾವವಲ್ಲ. ಹೀಗಾಗಿ ಅಲ್ಲಿಗೆ ಹೋಗಬೇಕೆಂಬ ತುಡಿತ ಅವನಿಗೆ ಉಂಟಾಗುತ್ತೆ, ಅದು ನಿಜದಲ್ಲಿ ನನ್ನ ಹಿಂದೊಮ್ಮೆ ಬರೆದಿದ್ದ ಲೇಖನದಲ್ಲಿ ವಿವರಿಸಿದ 'ಬಾಲ್ಯವೇ ಚೆನ್ನಾಗಿತ್ತು ಎಂಬ ನಾಸ್ಟಾಲಜಿಕ್ ಅಜ್ಞಾನ'ದ ಭಾಗವೇ ಆಗಿದೆ. ಮುಂದುವರಿದಂತೆ ನಮ್ಮ ಊರು ಎಂಬ ಭಾವ ಉಳಿಯುವುದು ನಮ್ಮವರಿದ್ದಾಗ ಮಾತ್ರ, ನಾಲ್ಕು ಜನ ನಮ್ಮ ಊರಲ್ಲಿ ನಮ್ಮನ್ನು ಮಾತಾಡಿಸುವಂತಿದ್ದರೆ ಮಾತ್ರ, ಕೇವಲ ಮಣ್ಣು, ಮರ, ಮನೆಗಳು ನಮ್ಮ ಊರು ಎಂಬುದನ್ನು ನಮಗೆ ಮರುಕಳಿಸುವುದಿಲ್ಲ. ಊರೆಂದರೆ ಜನರೇ, ನಮ್ಮ ಜನರೇ... ನಮ್ಮನ್ನು ಗುರುತಿಸದ, ಯಾರೆಂದು ಮಾತಾಡಿಸದ, ನೀನು ಇಲ್ಲಿನವನೋ, ಹೋದವನೋ ಎಂದು ಗೊಂದಲಕ್ಕೂ ಬೀಳದ ಅನ್ಯ ಜನರ ವಾಸ್ತವ್ಯ ಜಾಗದಲ್ಲಿ ನಮ್ಮ ಊರು ಎಂಬ ಭಾವ ಬರುವುದು ಹೇಗೆ? ಹಳ್ಳಿಗಳು ವೃದ್ಧಾಶ್ರಮ ಆಗುತ್ತಿವೆ ಎಂದು ನಗರದಲ್ಲಿ ಒಂದೇ ಕಣ್ಣಲ್ಲಿ ಅಳುವವರನ್ನು ಕಂಡಿದ್ದೇವೆ... ಬಹುಶಃ ಊರಲ್ಲಿ ನಮ್ಮ ಸಂಬಂಧಿಕರು ಯಾರೂ ಇಲ್ಲದೆ ಹೋದರೆ, ನಮ್ಮವರು ಎಲ್ಲರೂ ಗತಿಸಿದ ಮೇಲೆ ನಾನು ಇಲ್ಲಿ ಹುಟ್ಟಿದ್ದೆ, ಈ ಕೆರೆಯಲ್ಲಿ ಈಜಿದ್ದೆ, ಈ ಮರದ ಮೇಲೆ ಕೋತಿಯಾಟ ಆಡಿದ್ದೆ, ಇಲ್ಲಿ ಶುಂಠಿ ಪೆಪ್ಪರ್ಮೆಂಟ್ ತಿಂದಿದ್ದೆ ಎಂಬ ನಾಸ್ಟಾಲಜಿಕ್ ಚಡಪಡಿಕೆಗಳ ಮಾತ್ರದಿಂದ ಪುನಃ ನಮ್ಮ ಊರು ಆಗಲಿಕ್ಕೆ ಆಗುತ್ತದೆಯೇ? ಇನ್ನು ದೇಶ ಬಿಟ್ಟು ಹೋದ ಜನರು ನಮ್ಮ ಊರು ಎಂದು ಚಡಪಡಿಸುವುದು ಕೇವಲ ಮಣ್ಣು, ಮರಕ್ಕಾಗಿ ಅಲ್ಲ, ನಮ್ಮವರಿಲ್ಲವಲ್ಲ ಸುತ್ತಮುತ್ತ, ನಮ್ಮದನ್ನು ಅರ್ಥ ಮಾಡಿಕೊಳ್ಳುವ ಜನರಿಲ್ಲವಲ್ಲ ಎಂಬ ಚಡಪಡಿಕೆಗಳಿಂದಲೇ... ನಮ್ಮವರು ಎಂಬುದಕ್ಕೆ ಸಂಬಂಧಿಕ ಎಂಬ ಅರ್ಥ ಮಾತ್ರವಲ್ಲದೆ, ನಮ್ಮ ಭಾಷಿಕ, ನಮ್ಮ ಕಲ್ಚರಲ್, ಥಿಯಾಲಜಿಕ್ ಮಾತನ್ನು ಅರ್ಥ ಮಾಡಿಕೊಳ್ಳುವವ ಎಂಬುದನ್ನೂ ಸೇರಿಸಿಕೊಳ್ಳತಕ್ಕದ್ದು, ಹೀಗಾಗಿ ಮೂಲ ಪ್ರಶ್ನೆಯಾದ "ನಮ್ಮವರಿಲ್ಲದ ಊರು ನಮ್ಮ ಊರು ಆಗುತ್ತದೆಯೇ?" ಎಂಬುದಕ್ಕೆ ಉತ್ತರವು ಜಟಿಲವಾಗುತ್ತಾ ಹೋಗುತ್ತದೆ.

ಏಪ್ರಿಲ್ ೧೧ ೨೦೨೧

ಬಾಲ್ಯದ ಬೆಂಚ್ ಮಾರ್ಕ್ ಅಬ್ಸರವೇಷನ್ ಮತ್ತು ರೂಢಿಗತ ಆಸೆಗಳು...
---
ನೂರು ಅನುಭವ ನಾವು ಕಂಡರೂ, ಬಾಲ್ಯದ ಅನುಭವ ನಮ್ಮಲ್ಲಿ ಸದಾ ತಾಜಾವಾಗಿ ಉಳಿದಿರುತ್ತೆ. ಈ ಆತ್ಮಕಥೆಗಳನ್ನು ಬರೆಯುತ್ತಾರಲ್ಲ, ಅಲ್ಲಿಯೂ ಗಮನಿಸಿ ಬಾಲ್ಯದ ಅನುಭವವನ್ನು ಅವರು ಕಣ್ಣಿಗೆ ಕಟ್ಟುವಂತೆ ಬರೆಯುವಷ್ಟು ನಂತರದ ಜೀವನವನ್ನು ದಾಖಲಿಸಿರೋಲ್ಲ. ಅಕಸ್ಮಾತ್ ದಾಖಲಿಸಿದರು ಅಲ್ಲಿ ಘಟನೆಯ ಬಗ್ಗೆ ಒಂದು ಪ್ರತ್ಯೇಕ ಅಭಿಪ್ರಾಯ ವ್ಯಕ್ತಿ ಹೇಳಿರುತ್ತಾನೆ. ಅದನ್ನು ತಾನಾಗಿಯೇ ಬಿಚ್ಚಿಡುವುದಿಲ್ಲ, ಅಲ್ಲಿಗಾಗಲೇ ಏನನ್ನು ಹೇಳಿ ಜನ ನನ್ನನ್ನು ಕನಿಕರಿಸಬೇಕು, ಏನನ್ನು ತೇಲಿಸಿ ಮುಚ್ಚಿಹಾಕಬೇಕು, ಏನನ್ನು ಹಿಡಿದು ತಾನು ಸಭ್ಯ ಎಂದು ತೋರಿಸಿಕೊಳ್ಳಬೇಕು ಎಂಬ ಕಂತ್ರಿತನ ಒದಗಿಬಂದಿರುತ್ತದೆ. ಆಶ್ಚರ್ಯ ಎಂಬಂತೆ ಈ ಕಂತ್ರಿತನ ಬಾಲ್ಯದ ಅನುಭವಗಳಲ್ಲಿ ಅಷ್ಟಾಗಿ ಕಾಣುವುದಿಲ್ಲ. ಅಷ್ಟಾಗಿ ವಿಷಯ ಅದಲ್ಲ, ಬಾಲ್ಯದಲ್ಲಿ ಯಾವುದೇ ರೀತಿಯ ಹೊರ ಅಭಿಪ್ರಾಯದ ಭಾರ ನಮ್ಮ ಮೇಲೆ ಇರೋಲ್ಲ, ಹಾಗಾಗಿ ಅಲ್ಲಿ ನಮ್ಮ ಕಣ್ಣು, ಕಿವಿ, ಮನೋಲೋಕದಲ್ಲಿ ದಾಖಲಾದ ಎಲ್ಲಾ ಸಂಗತಿಯೂ ಹೇಗಿದೆಯೋ ಹಾಗೆ, ಪ್ರತ್ಯಕ್ಷ ಪ್ರಮಾಣ ಅನ್ನುತ್ತಾರಲ್ಲ ಹಾಗೆ ದಾಖಲಾಗಿರುತ್ತದೆ. ಅದು ಪುನಃ ಪರೀಕ್ಷೆಗೆ ಒಳಗಾಗುವುದು ತಾರುಣ್ಯದ ನಂತರದಲ್ಲಿಯೇ. ಇಡೀ ಜೀವನದಲ್ಲಿ ಏನೇ ಹೊಸದು ಕಂಡರೂ ಅಥವಾ ಪುನರಾವರ್ತನೆಯಾದರೂ ಅದನ್ನು ಬಾಲ್ಯದ ಬೆಂಚ್ ಮಾರ್ಕ್ ಅಬ್ಸರವೇಶನ್ ಅಡಿಯಲ್ಲೇ ಮನುಷ್ಯ ನೋಡುತ್ತಾನೆ. ನಮ್ಮ ಬಾಲ್ಯದಲ್ಲಿ, ನಮ್ಮ ಊರಲ್ಲಿ, ನಮ್ಮ ಕಾಲದಲ್ಲಿ ಎಂದು ರಾಗ ಎಳೆಯುವುದರ ಮೂಲ ತಂತಿ ಇರುವುದು ಬೆಂಚ್ ಮಾರ್ಕ್ ಅಬ್ಸರವೇಶನ್ನಿನ ಕಾರಣದಲ್ಲಿ. ಅನ್ ಲರ್ನಿಂಗ್ ಎಂಬುದಿದೆಯೆಲ್ಲಾ ಅದು ಬಾಲ್ಯದ ಬೆಂಚ್ ಮಾರ್ಕ್ ಅಬ್ಸರವೇಶನ್ನಿನಲ್ಲಿ ಸಾಧ್ಯವೇ ಇಲ್ಲ. ಈ ಹಿಂದೆ ನಾನು ಬರೆದಿದ್ದ "ಬಾಲ್ಯವು ಎಷ್ಟು ಸೊಗಸಿತ್ತು ಎಂಬ ನಾಸ್ಟಾಲಜಿಕ್ ಅಜ್ಞಾನ" ಎಂಬ ಲೇಖನ ಇದೆಯಲ್ಲ ಅನ್ ಲರ್ನಿಂಗ್ ಕಷ್ಟ ಎಂಬುದಕ್ಕೆ ಈ ಉದ್ಗಾರವೇ ಉದಾಹರಣೆ. ಎಷ್ಟರ ಮಟ್ಟಿಗೆ ಎಂದರೆ ಚಿಕ್ಕಂದಿನಲ್ಲಿ ನೀವು ಒಬ್ಬಟ್ಟು ಎಂಬುದನ್ನು ಕಂಡಿರುತ್ತೀರಿ ಎಂದುಕೊಳ್ಳಿ, ಜೀವನದಲ್ಲಿ ಇನ್ನು ಎಂದೇ ಒಬ್ಬಟ್ಟು ಎಂಬ ಪದ ಬಂದರೂ ನಮ್ಮ ಮೆದಳು ಬಾಲ್ಯದಲ್ಲಿ ರೂಢಿಗತವಾಗಿ ಕಂಡಿದ್ದ ಒಬ್ಬಟ್ಟನ್ನೇ ಕಣ್ಣಚಿತ್ರದಲ್ಲಿ ತಂದುಕೊಡುತ್ತದೆ.

ಸಾಮಾನ್ಯವಾಗಿ ನಮ್ಮ ಮನೆಯಲ್ಲಿ, ನಮ್ಮ ಪ್ರದೇಶದ ಒಂದು ಊಟ ಎಂದುಕೊಳ್ಳಿ ಉದಾ: ಕರಾವಳಿಯ ಮೀನು, ಉತ್ತರ ಕರ್ನಾಟಕದ ಜೋಳದ ರೊಟ್ಟಿ, ನಮ್ಮ ಕಡೆಯ ಮುದ್ದೆ ಹೀಗೆ... ಅದನ್ನು ನಾವು ಜಗತ್ತಲ್ಲೇ ಏನೇ ತಿಂದರೂ ಇದರಷ್ಟು ರುಚಿ ಯಾವುದೂ ಇಲ್ಲ ಎನ್ನುತ್ತೇವೆ. ಮತ್ತು ಬಾಲ್ಯದಲ್ಲಿ ನಿರಂತರವಾಗಿ ರುಚಿಸಿದ ವಸ್ತುವನ್ನು ನಾವು ಹೀಗೆ ಹಿಗ್ಗಿಸುತ್ತೇವೆ. ಹೀಗೆ ಇಂಗ್ಲೆಂಡಿನವನು ಇನ್ನಾವುದೇ ಮೀನಿನ ತಿನಿಸನ್ನು, ರಷಿಯಾದವನು ಲ್ಯಾಂಬಿನ ತಿನಿಸನ್ನು ಜಗತ್ತಲ್ಲೇ ಇದಕ್ಕಿಂತ ತೃಪ್ತಿದಾಯಕ ತಿನಿಸು ಇಲ್ಲ ಎಂದು ಭಾವಿಸುತ್ತಾನೆ. ನಿಜವಾಗಿಯೂ ಆ ತಿನಿಸು ತೌಲನಿಕವಾಗಿ ಅಷ್ಟು ರುಚಿಕರವೇ ಎಂದೆಲ್ಲಾ ಪರೀಕ್ಷಿಸಲಾಗದು. ನಮ್ಮ ಬಾಲ್ಯವು ಕಟ್ಟಿಕೊಟ್ಟ ಅನುಭವವನ್ನು ಸದಾ ಕಾಲ ಪಡೆಯುವ ಆಸೆಯ ಕಾರಣಕ್ಕಾಗಿ ನಮ್ಮ ಬೆಂಚ್ ಮಾರ್ಕ್ ಸ್ವಾದವನ್ನು ಇನ್ನೊಂದು ಮೀರಲಾಗದು ಎಂಬ ಪೂರ್ವಗ್ರಹ ನಮ್ಮಲ್ಲಿ ಇರುವುದರಿಂದ ಇದು ಹುಟ್ಟುತ್ತದೆ. ಕೆಲವೊಂದು ಎಕ್ಸೆಪ್ಷನ್ ಎಂದು ತಗಾದೆ ತೆಗೆಯಲಾಗದು ಒಟ್ಟಾರೆ ಮಾನವ ಹೇಗೆ ವರ್ತಿಸುತ್ತಾನೆ ಎಂಬುದರ ಅವರೇಜ್ ಗ್ರಾಫ್ ಇದು. ಜನಕ್ಕೆ ಬೇಗ ಅರ್ಥವಾಗಲಿ ಎಂಬ ಕಾರಣಕ್ಕಾಗಿ ರೂಢಿಗತ ಆಸೆಯಲ್ಲಿ ತಿನಿಸನ್ನು ಹೇಳಿದೆ.

ವಯಸ್ಸಾದಂತೆ ಹಲವು ದೃಶ್ಯ, ಸಂಗತಿ, ಘಟನೆಗಳು ನಮ್ಮ ಮೆದುಳಲ್ಲಿ ಪೈಲ್ ಅಪ್ ಆಗುತ್ತಾ ಹೋಗುತ್ತದೆ. ಆಗ ನಮ್ಮ ಮೆದಳು ಅಡ್ರೆಸ್ ಮಾಡಲು ಸುಲಭ ಆಗುತ್ತದೆ ಎಂದು, ಹೊಸ ಸಂಗತಿಗಳನ್ನು ಆಗಲೇ ತೆರೆದಿರುವ ಅದಕ್ಕೆ ಸಂಬಂಧಿಸಿದ ಫೋಲ್ಡರಿಗೆ ತಂದು ಹಾಕುತ್ತದೆ. ಅದಕ್ಕೊಂದು ಹೊಸ ಫೋಲ್ಡರ್ ತೆರೆಯಬೇಕೆಂದು ಅದಕ್ಕೆ ಅನ್ನಿಸುವುದೇ ಇಲ್ಲ. ಮನುಷ್ಯ ಬಿಡಿ, ದೇಶ ಎಂಬ ಕಾಲ್ಪನಿಕ ರೇಖೆ ಕೆಳಗಿನ ಪ್ರದೇಶಕ್ಕೂ ಬೆಂಚ್ ಮಾರ್ಕ್ ಅಬ್ಸರ್ವೇಷನ್ನುಗಳಿರುತ್ತದೆ, ರೂಢಿಗತ ಆಸೆಗಳಿರುತ್ತದೆ, ಅದರಾಚೆ ಅದಕ್ಕೆ ಯೋಚಿಸಲೇ ಆಗುವುದಿಲ್ಲ! ಎಲ್ಲವೂ ಹಿಂದಿತ್ತು, ಅದೇ ಚೆನ್ನಿತ್ತು, ಅದೇ ಸರಿಯಿತ್ತು, ಅದೇ ಬೇಕಿತ್ತು! ಎಷ್ಟಾದರೂ ದೇಶ ಎಂಬುದು ಮನುಷ್ಯ ಪ್ರಜ್ಞೆಯ ಸ್ಕೇಲ್ಡ್ ಅಪ್ ವರ್ಷನ್ ಅಲ್ಲವೇ...

ಸೆಪ್ಟೆಂಬರ್ ೧೩ ೨೦೨೧
2 likes ·   •  0 comments  •  flag
Share on Twitter
Published on September 13, 2021 07:53

July 14, 2020

ಚಿತ್ತಶಕ್ತಿ ಮತ್ತು ಅನುಮಾನ

ಇದನ್ನು ಮೊದಲಿಗೆ ಇಂಗ್ಲೀಷಿಗೆ ಅನುವಾದ ಮಾಡಿ ಹೇಳಿದರೆ ಸ್ಪಷ್ಟತೆ ಸಿಗತ್ತೆ... Intellect and Inference. ಇಲ್ಲಿ ಅನುಮಾನ ಅಂದರೆ ಸಂದೇಹ ಎಂದರ್ಥವಲ್ಲ. ಅದು ತತ್ತ್ವಶಾಸ್ತ್ರೀಯ ಪದ. ರೀಸನಿಂಗ್ ಎನ್ನುತ್ತಾರಲ್ಲ ಆ ಪ್ರಕ್ರಿಯೆಯ ಫಲಿತಾಂಶದ ಉನ್ನತ ಘಟ್ಟ "ಅನುಮಾನ". ಇದಕ್ಕೂ ಇಂಟಲೆಕ್ಟ್ ಎಂಬುದಕ್ಕೂ ಏನು ವ್ಯತ್ಯಾಸ ಅಥವಾ ಸಮಾನ ಏನು ಎಂದು ಯೋಚಿಸಬೇಕಾಗುತ್ತದೆ.


ಚಿತ್ತಶಕ್ತಿ ಸಾಮಾನ್ಯವಾಗಿ ಸಂಪ್ರದಾಯದ ಮಗು. ಚಿತ್ತಕ್ಕೆ ಜಾತಗುಣವೇ ಪ್ರಧಾನ, ದತ್ತಗುಣವಲ್ಲ. ವಿಷಯ ಸಂಗ್ರಹ, ಪರಾಮರ್ಶೆ, ನಿರೂಪಣೆ, ಭೇದ ಎಲ್ಲವೂ ಇಲ್ಲಿ ಸಾಧ್ಯ. ಅನುಮಾನವು ಇರುತ್ತದೆ ಆದರೆ ಚಿತ್ತಶಕ್ತಿ ಅನುಮಾನವನ್ನು ಆದಷ್ಟು ತಿರಸ್ಕಾರದಲ್ಲಿ ನೋಡುತ್ತದೆ. ಅಂದರೆ ಚಿತ್ತಶಕ್ತಿ ಎಂಬುದು ನನಗೆ ತಿಳಿದಿದೆ ಎಂಬುದರ ಬಿಂದುವಾದರೆ, ಅನುಮಾನ ತಿಳಿದಿಲ್ಲ ಎಂಬುದರ ಬಿಂದು. ತಿಳಿದಿಲ್ಲ ಎಂಬುದನ್ನು ತಿಳಿಯಲು ಒಂದು ಕಲ್ಪನೆ (ಹೈಪಾಥಿಸಿಸ್) ಬೇಕು. ಅದಕ್ಕೆ ಪುನಃ ಚಿತ್ತಶಕ್ತಿಯೇ ಬೇಕು. ಈ ಹಂತದಲ್ಲಿ ಅನುಮಾನ ಪರಾವಲಂಬಿ ಎನ್ನಬೇಕಾಗುತ್ತದೆ. ಆದಾಗ್ಯೂ ಅನುಮಾನಕ್ಕೆ ದತ್ತಗುಣ ಮುಖ್ಯ ಜಾತಗುಣವಲ್ಲ. ಏಕೆಂದರೆ ದತ್ತಗುಣದಲ್ಲಿ ಮಾತ್ರ ಅನೇಕ ಆಯ್ಕೆಯ ವಿಚಾರ ಲಭ್ಯ. ಜಾತಗುಣದಲ್ಲಿ ’ಪೂರ್ವದ ವಾಸನೆ’ ಅಥವಾ ತನ್ನ ಶ್ರದ್ಧೆಯ ಚೌಕಟ್ಟು ಎಂಬ ಸೀಮಿತ ಪರಿಧಿ ಇರುತ್ತದೆ. ಜಾತಗುಣದಲ್ಲೂ ಅನುಮಾನ ಇರಲು ಸಾಧ್ಯವೇ ಎಂದರೆ, ಇರಬಹುದು... ಆದರೆ ಅದು ಚಿತ್ತಶಕ್ತಿಯನ್ನು ಮೀರಿ ಇರುವುದಿಲ್ಲ ಎಂಬುದು ಪ್ರಮುಖ ಅಂಶ.

ತುಂಬಾ ಕಲಸುಮೇಲೋಗರವಾದ ಚಿತ್ತಶಕ್ತಿ ಮತ್ತು ಅನುಮಾನದ ವಿವರಣೆ ಏಕೆ ಬೇಕು ಎಂಬುದು ಉತ್ತಮವಾದ ಪ್ರಶ್ನೆ. ನಾವು ಬುದ್ಧಿ ಎಂದು ಏನು ಹೇಳುತ್ತಿದ್ದೇವೋ ಅದು ಚಿತ್ತಶಕ್ತಿಯ ಕುರಿತಾದದ್ದು. ಅನುಮಾನ ಬರುವುದು ಪ್ರಶ್ನೆಯಿಂದ, ಪ್ರಶ್ನೆ ಕೇವಲ ಬುದ್ಧಿಯಿಂದ ಹುಟ್ಟುವುದಿಲ್ಲ. ಮನೋಧರ್ಮದಿಂದ ಹುಟ್ಟುತ್ತದೆ. ಅದನ್ನ ಚಿತ್ತವೃತ್ತಿ ಎನ್ನುತ್ತೇವೆ. ಚಿತ್ತಶಕ್ತಿಯನ್ನು ದತ್ತಗುಣ ಬದಲಾಯಿಸಲು ಕಷ್ಟಪಟ್ಟರೂ, ಚಿತ್ತವೃತ್ತಿಯನ್ನು ಬದಲಾಯಿಸುತ್ತದೆ. ಈಗ ನಮ್ಮ ನೆಲದಲ್ಲಿ ಚಿತ್ತಶಕ್ತಿ ಹೆಚ್ಚಿದೆ. ಪಾಶ್ಚಾತ್ಯರಲ್ಲಿ ಚಿತ್ತಶಕ್ತಿ ಮತ್ತು ಅನುಮಾನ ಎರಡೂ ಇದೆ. ಪೂರ್ವದಲ್ಲಿ ಪಾಶ್ಚಾತ್ಯರಲ್ಲಿ ಚಿತ್ತಶಕ್ತಿ ಇತ್ತು, ಅನುಮಾನ ಇರಲಿಲ್ಲ. ನಮ್ಮಲ್ಲಿ ಚಿತ್ತಶಕ್ತಿಯು ಇತ್ತು, ಅನುಮಾನವೂ ಇತ್ತು. ಹಾಗಾಗಿಯೇ ಬುದ್ಧನು ಬಂದ, ಚಾರ್ವಾಕನು ಬಂದ, ಆರ್ಯಭಟನೂ ಬಂದ, ಕಾಳಿದಾಸ-ಶಂಕರನೂ ಬಂದ. ನಂತರ ಈ ವೈಭವ ಬರಲಿಲ್ಲ, ಆದರೆ ಈಗ ಪಾಶ್ಚಾತ್ಯರಲ್ಲಿ ಆ ವೈಭವ ಕಾಣಬಹುದು. ವಿಜ್ಞಾನವೂ ಕೂಡ ಚಿತ್ತಶಕ್ತಿ ಮತ್ತು ಅನುಮಾನ ಎರಡನ್ನೂ ಒಪ್ಪಿಕೊಂಡಿದೆ.


ಇನ್ನೂ ಸರಳವಾಗಿ ವಿವರಕ್ಕೆ ಇಳಿಯೋಣ. ಇರುವುದನ್ನು ಅರ್ಥೈಸಿಕೊಳ್ಳುವುದು ಚಿತ್ತಶಕ್ತಿ, ಇಲ್ಲದೇ ಇರುವುದನ್ನೂ ಅರ್ಥೈಸಿಕೊಳ್ಳುವುದು ಅನುಮಾನ. ಇದ್ದದ್ದಕ್ಕೆ ರೀಸನಿಂಗ್ ಬಹಳ ಕಡಿಮೆ ಬೇಕು. ಇಲ್ಲದ್ದಕ್ಕೆ ರೀಸನಿಂಗ್ ಹೆಚ್ಚು ಬೇಕು. ಇಲ್ಲದ್ದು ಎಂಬುದು ಕಲ್ಪನೆಯೇ. ರಾಷ್ಟ್ರ ಎಂದುಕೊಳ್ಳೋಣ., ಅದು ಅನುಮಾನದ ಕೂಸು, ಮನುಷ್ಯ ಚಿತ್ತಶಕ್ತಿಯ ಕೂಸು. ಒಬ್ಬ ಮನುಷ್ಯ ಹೇಗಿದ್ದಾನೆ ಎಂದು ವಿವರಿಸಲು ಚಿತ್ತಶಕ್ತಿ ಸಾಕು, ಆದರೆ ರಾಷ್ಟ್ರ ಎಂದರೆ ಏನು ಎನ್ನಲು ಅನುಮಾನ ಬೇಕು. ಹಾಗೆಯೇ ಒಬ್ಬ ವಿಜ್ಞಾನಿ ಭೂಮಿ ಹೀಗಿದೆ ಎನ್ನುವುದು ಚಿತ್ತಶಕ್ತಿ. ಬ್ಲಾಕ್ ಹೋಲ್ ಹೀಗಿದೆ ಎನ್ನುವುದು ಅನುಮಾನ. ಅನುಮಾನವೂ ಸಹ ಆತ್ಯಂತಿಕ ಸತ್ಯ ಅಲ್ಲ ಎನ್ನುತ್ತಾರೆ. ಹೌದು, ಹಾಗಾದರೆ ಚಿತ್ತಶಕ್ತಿಯದ್ದು ಆತ್ಯಂತಿಕ ಸತ್ಯವೋ??? ಚಿತ್ತಶಕ್ತಿ ಎಂಬುದು ಚಲನಶೀಲವಲ್ಲದ ಜ್ಞಾನ. ಅನುಮಾನ ಎಂಬುದು ಚಲನಶೀಲತೆಯ ಜ್ಞಾನ.


ಪ್ರತ್ಯಕ್ಷವೇ ಪ್ರಮಾಣ ಎಂಬುದನ್ನು ಕೆಲವರು Inference ಎಂದುಕೊಂಡಿದ್ದಾರೆ. ಕಂಡಿದ್ದು ಮಾತ್ರ ನಂಬಬಹುದು, ಅನುಭವಕ್ಕೆ ಬಂದರೆ ಮಾತ್ರ ಸತ್ಯ ಎನ್ನುವುದು ಚಿತ್ತಶಕ್ತಿ ಅಷ್ಟೇ, ಅನುಮಾನ ಅಲ್ಲ. ’ಬಹುದು’ ಎಂಬ ಕಲ್ಪನೆ ಇಲ್ಲದಿದ್ದರೆ ಮಾನವ ಇಷ್ಟು ಮುಂದುವರೆಯಲು ಸಾಧ್ಯವೇ ಆಗುತ್ತಿರಲಿಲ್ಲ. ಹಿಂದೆ ’ಬಹುದು’ ಆಗಿದ್ದದ್ದು, ಇಂದು ’ಹೌದು’ ಎಂದಾದದ್ದು ಅನುಮಾನದಿಂದ. ಸಂಪ್ರದಾಯದ ವಿರೋಧ ಎಂಬುದೂ ಕೂಡ ಸಂಪ್ರದಾಯದ ಚಿತ್ತಶಕ್ತಿ ಮತ್ತು ಧಿಕ್ಕಾರದ ಚಿತ್ತಶಕ್ತಿಯ ಗಲಾಟೆ ಆಗಿದೆಯೇ ಹೊರತು. ಎರಡೂ ಅನುಮಾನವನ್ನು ಅಳವಡಿಸಿಕೊಂಡಿಲ್ಲ. ಏಕೆಂದರೆ ಅನುಮಾನ, ನಮ್ಮ ಚಿತ್ತಶಕ್ತಿಯನ್ನು ಪ್ರಶ್ನಿಸುತ್ತದೆ. ಸುಲಭವಾಗಿ ನಮಗೆ, ಪ್ರಶ್ನಿಸಿಕೊಳ್ಳುವ ಸ್ವಭಾವ ಬರುವುದಿಲ್ಲ. ಇಲ್ಲಿ ಸಂಪ್ರದಾಯ ಎಂಬುದನ್ನು ಕೇವಲ ಜಾತಿ, ರೂಢಿ, ದೇಶ ಎಂದು ತೆಗೆದುಕೊಳ್ಳಬಾರದು ವಿಜ್ಞಾನದಲ್ಲೂ ಸಂಪ್ರದಾಯತೆ ಇದೆ. ಸೈನ್ ಆರ್ಥಡಕ್ಸಿಯಲ್ಲೂ ಒಂದೊಂದು ವಿಜ್ಞಾನ ವಿಭಾಗ ಮಠ, ಅದಕ್ಕೊಬ್ಬ ವಿಜ್ಞಾನಿ ಮಠಾಧೀಶ ಇದ್ದಾನೆ. ಅದನ್ನು ಧಿಕ್ಕರಿಸಿ ಏನೂ ಮಾಡುವಂತಿಲ್ಲ. ಆದರೆ ಉನ್ನತವಾದ್ದು ಏನಾದರೂ ಸಾಧ್ಯವಾಗಬೇಕಾದರೆ ಚಿತ್ತಶಕ್ತಿ ಮತ್ತು ಅನುಮಾನ ಎರಡೂ ಸಮಪ್ರಮಾಣದಲ್ಲಿ ಇರಬೇಕು. ಆ ಸಮತೋಲನದ ನಿರ್ದಿಷ್ಟ ಬಿಂದುವಿನಲ್ಲಿ ಅಲ್ಲಾಡದೆ ನಿಲ್ಲುವುದನ್ನೇ ನಮ್ಮ ಪೂರ್ವಿಕರು ಬ್ರಹ್ಮತ್ವ, ಬುದ್ಧತ್ವ, ಲಿಬರೇಷನ್ ಇತ್ಯಾದಿಯಾಗಿ ಹೇಳಿರಬೇಕು.
1 like ·   •  3 comments  •  flag
Share on Twitter
Published on July 14, 2020 23:33

April 15, 2020

ಅಪಮೃತ್ಯು ಮತ್ತು ಅನಿಶ್ಚಿತತೆ

ಈ ಹಿಂದೆ ನಮ್ಮಲ್ಲೇ ಒಂದು ಮನೆಯಲ್ಲಿ ಹತ್ತಾರು ಮಕ್ಕಳು, ಖಾಯಿಲೆ ಕಸಾಲೆ ಇಂದ ಒಂದೆರೆಡು ಸಾಯುವವು. ಪ್ಲೇಗ್, ವಿಷಮ ಶೀತ ಜ್ವರವೋ ಮತ್ತೇನೋ ಕಾಲರಾ ಬಂದು ಮನೆಯ ಸದಸ್ಯರು ದಿಢೀರನೆ ಮರೆಯಾಗಿ ಅನಿಶ್ಚಿತತೆ ಬದುಕಿಗೆ ಬರುವುದು ಕಾಣಬಹುದಿತ್ತು. ಇಂದು ಅದೇ ರೀತಿ ಆಯಿತು ಅಂತಿಟ್ಟುಕೊಳ್ಳಿ, ದೈವವಶಾತ್, ಮನೋಬಲವಶಾತ್, ವಿಜ್ಞಾನವಶಾತ್ ಹಾಗಾಗದಿರಲಿ, ಆದರೆ ಇವತ್ತಿನ ವ್ಯವಸ್ಥೆ ಅದನ್ನು ತಾಳಿಕೊಳ್ಳುವುದಿಲ್ಲ. ಏಕೆಂದರೆ ಬದುಕು ತುಂಬಾ ರಚನಾತ್ಮಕವಾಗಿಬಿಟ್ಟಿದೆ, ನಿಶ್ಚಿತತೆ ಅವಿಭಾಜ್ಯ ಅಂಗ ಎಂಬಂತಾಗಿದೆ, ಒಂದು ಮಗು ಇರುವ ಮನೆಗಳಿವೆ, ಆದಾಯಕ್ಕಾಗಿ ಒಬ್ಬನ ಮೇಲೆ ನಂಬಿರುವ ಕುಟುಂಬವಿದೆ, ಆಹಾರ ಸಿಗದೆ ಇದ್ದರೆ ಪಕ್ಕದ ಮನೆಯವನ ಮುಂದೆ ಕೈ ಒಡ್ಡಬಹುದಾದ ಸಹಜ ಸಹಕಾರವು... ದಾನ, ಸಹಾಯ ಎಂಬಂತಹ ಅಹಂಕಾರಿ ಶಬ್ದಗಳಿಂದ ಅಟ್ಟಕ್ಕೇರಿದೆ. ಒಂದಲ್ಲ ಒಂದು ರೀತಿ ಜಗತ್ತಿನ ಪ್ರತಿ ದೇಶವು ಇನ್ನೊಂದರ ಜೊತೆ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ನಿಂತಿದೆ. ಬಿದ್ದರೆ, ಸತ್ತರೆ ಅವನೊಬ್ಬನೇ ಸಾಯಲ್ಲ, ಇನ್ನೊಬ್ಬರನ್ನು ಎಳೆದುಕೊಂಡು ಹೋಗುತ್ತಾನೆ.


ಈಜಿಪ್ಟಿನ ರೆಮಸಿಸ್ ಕಾಲದ ಪ್ಲೇಗುಗಳು, ಬ್ಲಾಕ್ ಡೆತ್, ಇಂಡಿಯನ್ ಕಾಲರಾ, ಸ್ಪ್ಯಾನಿಷ್ ಫ್ಲು ಹೀಗೆ ಇತಿಹಾಸದಲ್ಲಿ ಹಲವು ಅಪಮೃತ್ಯು ಜನಕಗಳು ಬಂದಿವೆ ಆದರೆ ಅದು ಈಗ ನಾವು ಮಾಡಿಕೊಂಡಿರುವ ವ್ಯವಸ್ಥಿತ ಬದುಕಿಗೆ ಬಂದಿದ್ದರೆ ನಾವು ತಾಳಿಕೊಳ್ಳುತ್ತಿರಲಿಲ್ಲ ಅಥವಾ ಆ ಬ್ಯಾಕ್ಟೀರಿಯಾ, ವೈರಾಣು ತಾಳಿಕೊಳ್ಳುತ್ತಿರಲಿಲ್ಲ. ಬೇರೆ ವಿಧದಲ್ಲಿ ನೋಡುವುದಾದರೆ ಇದೆ ಕೊರೊನಾ ಮಧ್ಯ ಯುಗದಲ್ಲಿ ಬಂದಿದ್ದರೆ ಅರ್ಧ ಮಾನವ ಜನಾಂಗವನ್ನೇ ಹೊಸಕಿ ಹಾಕುತ್ತಿತ್ತೇನೋ! ಈಗ ನಾವು ನಿಶ್ಚಿತ ಬದುಕು ಸವೆಸುತ್ತಿದ್ದೇವೆ. ಒಂದು ಸರ್ಕಾರವಿದೆ, ಆರೋಗ್ಯ ವ್ಯವಸ್ಥೆ ಇದೆ, ಅರಾಜಕತೆ ಇಲ್ಲ, ಇತರೆ ಇತರೆ... ಇದನ್ನು ಈ ಹಿಂದೆಯೇ ಡೆಮಾಕ್ರಟಿಕ್ ಸೆಟಲ್ಮೆಂಟ್ ಎರಾ ಎಂದು ನಾನು ಗುರುತಿಸಿದ್ದೇನೆ. ನಿಯಮಿತ ದೈನಂದಿನ chaos ಈಗಿಲ್ಲ. ನಾಳೆ ಬೆಳಗ್ಗೆ ಪೇಪರ್ ಮನೆಯ ಮುಂದೆ ಬೀಳುತ್ತದೆ, ಕರೆಂಟ್ ಸಿಗುತ್ತದೆ, ತಕ್ಕ ಸಮಯಕ್ಕೆ ನೀರು ಬರುತ್ತದೆ, ಸಂಬಳದಲ್ಲಿ ಹೈಕ್ ಬೇಕು, ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟಲ್ವ? ನೋಡುಕೊಳ್ಳಿ ನಮ್ಮನ್ನ ಅನ್ನುವ ಒಪ್ಪಂದಗಾರಿಕೆ ಇದೆ, ಈಗಲೂ ಎಸ್ ಎಸ್ ಎಲ್ ಸಿ ಎಕ್ಸಾಂ ಯಾವಾಗ ನಮ್ಮ ಮಕ್ಕಳಿಗೆ ಎನ್ನುವ ಚಿಂತೆ ಪೋಷಕರದ್ದು! ಏಕೆಂದರೆ ನಿಶ್ಚಿತತೆ ಸಿಕ್ಕಿದೆ. ಇದು ಕಳೆದುಹೋಗುತ್ತದೆ ಎಂಬ ನಿರಾಳ. ನಾಳೆ ಪಕ್ಕದ ರಾಜ್ಯ ದಂಗೆ ಎದ್ದು ಬೆಳಗ್ಗೆ ನಮ್ಮನ್ನು ಲೂಟಿ ಮಾಡುತ್ತದೆ ಎಂಬ ಭಯವಿಲ್ಲ, ಪ್ಲೇಗ್ ಬಂದು ಮನೆ ಬಿಡಬೇಕೆಂಬ ದುಗುಡವಿಲ್ಲ, ಸರ್ವಾಧಿಕಾರಿ ಬೀದಿಯಲ್ಲಿ ನೇಣುಗೇರಿಸುತ್ತಾನೆ ಎಂಬ ಆತಂಕವಿಲ್ಲ. ಈ ನಿಶ್ಚಿತತೆ ಹೆಚ್ಚಿರುವುದರಿಂದ ಅಕಸ್ಮಾತ್ ದೊಡ್ಡಮಟ್ಟದ ಅನಿಶ್ಚಿತತೆ ಎದುರಾದರೆ ಈಗಿನ ಸಮಾಜ ತಾಳಿಕೊಳ್ಳುವುದಿಲ್ಲ. ಅದಕ್ಕೆ ಉದಾಹರಣೆ, ನಮಗೆ ವಾಕಿಂಗ್ ಹೋಗಲಿಕ್ಕೆ ಆಗೋಲ್ಲ, ಪಾನಿಪುರಿ ತಿನ್ನಲು ಆಗುತ್ತಿಲ್ಲ, ಎಂಬುದೇ ಮುಖ್ಯವಾಹಿನಿ ಸಮಸ್ಯೆ ಎಂಬಂತೆ ನಮಗೆ ಕಾಣುತ್ತಿರುವುದು.


ಆದರೆ... ಆದರೆ... ಹಳೆಯುಗದಲ್ಲಿ ಒಂದು ಕೋಟಿ ಜನ ಸತ್ತರೆ ಅದರಿಂದ ನಾಲ್ಕು ಕೋಟಿ ಜನ ಸಫರ್ ಆಗುತ್ತಿದ್ದರು. ಈಗ ಒಂದು ಕೋಟಿ ಜನ ಸತ್ತರೆ ಅದು ನೂರು ಕೋಟಿ ಜನರು ಅನುಭವಿಸುವಂತೆ ಮಾಡುತ್ತದೆ. ಸಹಜವಲ್ಲದ, ಅಕಾಲಿಕ ಸಾವು ಅಪಮೃತ್ಯು, ದಿನವಿಡೀ ಸಾಯುವವರು, ಬೇರೆ ರೋಗದಿಂದ ಸಾಯುವವರ ಸಂಖ್ಯೆ ಹಾಕಿದರೆ ಅದು ಈ ಕೊರೊನಾ ಸಾವಿನ ಸಂಖ್ಯೆಗಿಂತ ದೊಡ್ಡದಿರಬಹುದು, ಆದರೆ ಒಂದೇ ತಿಂಗಳ ಅವಧಿಯಲ್ಲಿ, ಒಂದೇ ಕಾರಣಕ್ಕೆ, ಒಂದು ಲಕ್ಷ ಜನ ಸಾಯುವುದಿದೆಯಲ್ಲ ಅದು ಜಾಗತಿಕ ಅಪಮೃತ್ಯು. Prudence ಎಂಬ ಇಂಗ್ಲಿಷ್ ಪದವಿದೆ. ಆ ಮುಂದುಗಾಣುವಿಕೆ ನಮ್ಮಲ್ಲಿ ಹೆಚ್ಚಾಗಿ, ಎಲ್ಲವನ್ನೂ ನಾವು ಪ್ಲಾನ್ ಮಾಡಿಟ್ಟಿದ್ದೇವೆ, ಜಗತ್ತು ಮಾಡಿದೆ, ಸರ್ಕಾರವು ಮಾಡಿದೆ, ವ್ಯವಹಾರಗಳವರು ಮಾಡಿದ್ದಾರೆ, ಕುಟುಂಬದವರು ಮಾಡಿದ್ದಾರೆ. ಹಿಂದೆ ಈ ಮಟ್ಟಿಗೆ ಅದು ಇರಲಿಲ್ಲ. ಸುಧಾರಿತ ಸಮಾಜದ ಪ್ರತೀಕ ಇದು ಎಂದು ಪಂಡಿತರು ಹೇಳುತ್ತಾರೆ. ಆದರೆ ಆ ಸುಧಾರಣೆ ಅನಿಶ್ಚಿತತೆಯನ್ನು ಎದುರಿಸುವ ಧೈರ್ಯ ಕೊಡಲ್ಲ. ಬೇಗನೆ ಕುಸಿದುಹೋಗುತ್ತೇವೆ. ನಮ್ಮ ಪ್ಲಾನಿಗೆ ಚೂರೇ ಚುರು ಕೊಂಕಾದರು ಈಗಿನ ಸಮಾಜ ಬೆದರಿಹೋಗುತ್ತದೆ. ಬದುಕು ಸುಧಾರಿತವಾದಷ್ಟು fragile ಆಗುತ್ತದೆ. ನಾಳೆ ಬೆಳಗ್ಗೆಯಿಂದ ಒಂದು ಹತ್ತು ದಿನ ಹಾಲು, ಹಣ್ಣು, ದಿನಸಿ, ಪೇಪರ್, ಟಿವಿ ಇತ್ಯಾದಿಗಳ ಲಭ್ಯತೆಯು ಬಂದ್ ಆದರೆ ಅಥವಾ ಸಿಗದೇ ಹೋದರೆ ಈಗಿನ ಸಮಾಜದ ಹಾಹಾಕಾರ ಯಾವ ಮಟ್ಟದಲ್ಲಿರುತ್ತದೆ ಎಂದರೆ ಅದು ಕೋರಾನ ಸಾವಿಗಿಂತ ದೊಡ್ಡದಾಗಿರುತ್ತದೆ. ಅತಿಯಾದ ನಿಶ್ಚಿತತೆ ಆರ್ಥಿಕವಾಗಿಯೂ ಮತ್ತು ಸಾಮಾಜಿಕವಾಗಿಯೂ ಒಳ್ಳೆಯದಲ್ಲ. ನಮ್ಮ ಹಿರಿಯರು 'ಕಷ್ಟ ನೋಡಿಲ್ಲ ಮುಂಡೇವ ನೀವು, ಸುಖ ಹೀಗ್ ಆಡಿಸತ್ತೆ' ಎಂದೆನ್ನುತ್ತಿದ್ದರ ಸೂಕ್ಷ್ಮಾರ್ಥ ಇದರಲ್ಲಿದೆ. ಅವರ ಹಿಂದಿನವರು ಅವರಿಗೂ ಹೀಗೆ ಅಂದಿರುತ್ತಾರೆ ಅದು ಬೇರೆ ಪ್ರಶ್ನೆ!
1 like ·   •  0 comments  •  flag
Share on Twitter
Published on April 15, 2020 23:16

February 27, 2019

ಯುದ್ಧ, ಶಾಂತಿ ಮತ್ತು ಸೈಕಲ್ ಗ್ಯಾಪ್

ಮನುಷ್ಯ ಯುದ್ಧವಿಲ್ಲದೆ ಬದುಕುತ್ತಾನೆ ಅನ್ನಿಸುತ್ತಾ!? ಅವನ ಹುಟ್ಟುಗುಣದಲ್ಲೇ ಅದಿಲ್ಲ. ಅವನಿಗೆ ಯುದ್ಧ ಬೇಕು, ಪ್ರಪಂಚದ ಇತಿಹಾಸದಲ್ಲಿ ಎಷ್ಟು ಅವಧಿಯ ಕಾಲ ಮನುಷ್ಯ ಹೊಡೆದಾಟ ಮಾಡದೇ, ಶಾಂತಿಯಿಂದ, ಎಲ್ಲರಿಗೂ ಮುತ್ತಿಟ್ಟುಕೊಂಡು ಬದುಕಿದ್ದಾನೆ? ನಮ್ಮ ನಮ್ಮನ್ನೇ ನೋಡಿಕೊಳ್ಳಿ, ಕನ್ನಡಿಯಲ್ಲಿ ಸರಿಯಾಗಿ ನೋಡಿಕೊಳ್ಳಿ. ಹಿಂದಿನ ದಿನ ಶಾಂತಿ ಎನ್ನುತ್ತೇವೆ, ಮರುದಿನ ವ್ಹಾ ವ್ಹಾ ನಮ್ಮ ಸೈನ್ಯ ನಮ್ಮ ಹೆಮ್ಮೆ ಎನ್ನುತ್ತೇವೆ, ಮತ್ತೆ ಮರುದಿನ ರಕ್ತ ನೋಡಿದ ತಕ್ಷಣ ಅಯ್ಯೋ ಬೇಡಪ್ಪ ಯುದ್ಧ ಅನ್ನುತ್ತೇವೆ. ಮನುಷ್ಯನಲ್ಲಿ ಸುಪ್ತವಾಗಿ ಕ್ರೌರ್ಯ ಇದ್ದೇ ಇದೆ. ಅಪ್ರಯತ್ನ ಪೂರ್ವಕವಾಗಿ ಅದು ಹೊರಗೆ ಬಂದುಬಿಡುತ್ತದೆ. ಶಾಂತಿ ಎಂಬುದು ನಾಗರೀಕ ಮನುಷ್ಯ ಕಾಲಾಕಾಲಾದಿಂದ ರೂಢಿಸಿಕೊಳ್ಳಲು ಯತ್ನಿಸುತ್ತಿರುವ ಆದರ್ಶವೇ ಹೊರತು ವಾಸ್ತವವಲ್ಲ. ಯುದ್ಧದ ಉನ್ಮಾದ ನಮ್ಮಲ್ಲಿ ಇದೆ, ಶಾಂತಿ ಬೇಕೆನ್ನುವ ಹಿತವಾದವು ಇದೆ. ಸಮಯಾಸಮಯಕ್ಕೆ ನಾವು ಯುದ್ಧ ಮತ್ತು ಶಾಂತಿಯನ್ನು ನಮ್ಮ ಹಿತಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳುತ್ತೇವೆ ಹೊರತು ನಾವು ಹೊಡೆದಾಟ ಪ್ರಿಯರೇ! ಬುದ್ಧ, ಗಾಂಧಿ, ಮತ್ತೊಬ್ಬನೂ ಇದಕ್ಕೆ ಹೊರತಲ್ಲ. ಆದರೆ ಅವರ ಇರುವು ಬಹುಮುಖ್ಯ. ಶಾಂತಿದೂತರು ಆಗಾಗ ಹುಟ್ಟಬೇಕು, ಶಾಂತಿಯ ಮಾತಾಡುವವರು ಇರಬೇಕು... ಶಾಂತಿ ಸ್ಥಾಪನೆಯಾಗುತ್ತದೆ ಎಂದಲ್ಲ, ಯುದ್ಧದ ತೀವ್ರತೆಯನ್ನು ಹತೋಟಿಯಲ್ಲಿಡಲು ಅಷ್ಟೇ. ಪಿತ್ತ ನೆತ್ತಿಗೇರಿದಾದ ಮಾತ್ರ ನಿಂಬೆಹಣ್ಣನ್ನು ತಲೆಗೆ ತಿಕ್ಕುವಂತೆ.

ಇಲ್ಲೊಂದು ಸೂಕ್ಷ್ಮವಿದೆ, ಯುದ್ಧ ಎನ್ನುವ ಮನುಷ್ಯ ಸಹಜ ಜಾತಗುಣಕ್ಕೂ, ಶಾಂತಿ ಎಂಬುವ ಮನುಷ್ಯ ನಿರ್ಮಿತ ಆದರ್ಶದ ನಡುವೆ ಸಣ್ಣ ಅಂತರವಿದೆ. ಅದನ್ನು ಆಡುಭಾಷೆಯಲ್ಲಿ ಸೈಕಲ್ ಗ್ಯಾಪ್ ಎನ್ನುತ್ತಾರೆ ಅದು ಮನುಷ್ಯನ ವ್ಯವಹಾರ ವಿಟತ್ವ. ಪ್ರಪಂಚದ ಮುಂದಿನ ದಿನಗಳಲ್ಲಿ ಈ ಗ್ಯಾಪ್ ದೊಡ್ಡದಾಗುತ್ತದೆ. ಈ ಅಂತರ ದೊಡ್ಡದಾದಷ್ಟು ಯುದ್ಧವೂ ಕಡಿಮೆಯಾಗುತ್ತದೆ, ಶಾಂತಿಯೂ ಕಡಿಮೆಯಾಗುತ್ತದೆ! ಈ ಅಂತರವನ್ನು ವ್ಯವಹಾರ ವಿಟರು ಆಳುತ್ತಾರೆ. ಅವರೇ ಯುದ್ಧವನ್ನು, ಶಾಂತಿಯನ್ನು ನಿಯಂತ್ರಿಸುತ್ತಾರೆ.

ಲೋಭಿಯಾದ ಮನುಷ್ಯ ತನ್ನ ಸುಖವನ್ನು ಹೇಗೆ ಗಿಟ್ಟಿಸಿಕೊಳ್ಳಬಹುದು ಎಂತಲೇ ನೋಡುತ್ತಿರುತ್ತಾನೆ. ಹಣ, ಮೈಥುನ, ಹಿತ ವಸ್ತು ಖರೀದಿ, ಸಂಸಾರ ವೃದ್ಧಿ, ಸಂಸಾರ ಪೋಷಣೆ ಇವೆಲ್ಲಾ ಲೋಭಿತನದ ಪ್ರಾಥಮಿಕತೆಗೆ ಸೇರುವುದು. "ಅಧಿಕಾರ" ಎಂಬುದಿದೆಯೆಲ್ಲಾ ಅದು ಲೋಭದ ಕೊನೆಯ ಮಟ್ಟ. ತನ್ನ ಅಡಿಯಲ್ಲಿ ಎಲ್ಲ ಇರಬೇಕು ಎಂಬ ಅಹಂಕಾರಕ್ಕಿಂತ ದೊಡ್ಡ ಲೋಭ ಮತ್ತೊಂದಿಲ್ಲ. ಈಗಿನ ದಿನಮಾನದಲ್ಲಿ ಸನ್ಯಾಸಿ; ಎಲ್ಲ ಬಿಟ್ಟವನು ಅವನಿಗೆಂತ ಆಸೆ? ಮಕ್ಕಳು ಮರಿ ಇಲ್ಲದವನು ಅವನಿಗೆಂತ ಆಸೆ? ಎಂದುಬಿಡುತ್ತೇವೆ. ಎಂಥಾ ಸಾಮಾನ್ಯ ಸನ್ಯಾಸಿಗೂ, ತನ್ನನ್ನು ಎಲ್ಲರೂ ಪೂಜ್ಯ ಎನ್ನಬೇಕು, ನಾನು ಅಭಯಹಸ್ತ ಹಿಡಿದಾಗ ಕಾಲು ಮುಗಿಯಬೇಕು ಎಂಬ ಆಸೆ ಇರುತ್ತದೆ, ಇನ್ನು ಅದಕ್ಕೊಂದು ಸುವ್ಯವಸ್ಥಿತ ಕೇಂದ್ರವಿದ್ದರಂತೂ ಅಧಿಪತ್ಯದ ಅಲೋಚನೆ. ಲೋಭ ಎಂದರೆ ಕೇವಲ ಮೈಥುನ ಮಟ್ಟದ್ದು ಎಂದುಕೊಳ್ಳುವುದು ಎಳಸು ಚಿಂತನೆ. ದೇಶದ ಗದ್ದುಗೆ ಏರಿ, ತನ್ನ ಹೆಸರು ಇತಿಹಾಸ ಪುಟದಲ್ಲಿ ರಾರಾಜಿಸಬೇಕು, ಸಕಲ ಜನಸ್ತೋಮ ತನ್ನಡಿಯಲ್ಲಿ ಇರಬೇಕು ಎಂಬ ಲೋಭ; ಹೆಂಡತಿ, ಮಕ್ಕಳಿಗೆ ಹಣ ಮಾಡಬೇಕು ಎಂಬ ಲೋಭಕ್ಕಿಂತ ಅತಿ ಹೆಚ್ಚಿನ ವಿಟತ್ವ ಹೊಂದಿರುತ್ತದೆ. ಅದೊಂದು ರೀತಿ ಅಮಲು. ಇಡೀ ಜಗತ್ತಿನಲ್ಲಿ ಮನುಷ್ಯನೊಬ್ಬನೇ ಬದುಕಬೇಕು ಸಕಲ ಇನ್ನಿತರ ಪ್ರಾಣಿ ತನ್ನಡಿ ಎಂಬ ಅಧಿಕಾರ ಚಲಾವಣೆ ಇದೆಯೆಲ್ಲಾ ಅದೂ ಇದೆ. ಅಧಿಕಾರ ಭಾವವೇ ಯುದ್ಧವನ್ನು ನಿರ್ಣಯಿಸುವುದಿಲ್ಲವೇ. ಒಂದು ದಾಯಾದಿ ಕಲಹಕ್ಕಾಗಿ, ಒಂದು ಜಾಗದ ಮೇಲಿನ ಅಧಿಕಾರಕ್ಕಾಗಿ ಸಕಲ ಆರ್ಯಾವರ್ತದ ರಾಜರು ಹೊಡೆದಾಡಿ ಸತ್ತದ್ದನ್ನು ಮಹಾಕಾವ್ಯಗಳಲ್ಲಿ ಓದಿ ಬೆಳೆದ ಜನರಲ್ಲವೇ ನಾವು. ಇದು ಬೇಗನೇ ಅರ್ಥವಾಗಬೇಕು.

ಎಲ್ಲೆಡೆ ಶಾಂತಿ ಒದಗಿತು ಎಂದಿಟ್ಟುಕೊಳ್ಳಿ ಆಗ ಶಸ್ತ್ರಾಸ್ತ್ರ ಮಾರಾಟ ಮಾಡುವವರು ಏನು ಮಾಡಬೇಕು? ಎಲ್ಲರೂ ನೆಮ್ಮದಿ ಇಂದಿದ್ದರೆ ಯಾವ ವಿಚಾರ ಇಟ್ಟು ಒಬ್ಬನನ್ನು ಇಳಿಸಿ ಇನ್ನೊಬ್ಬ ಗದ್ದುಗೆ ಏರಬಹುದು? ಯಾರೂ ಜಗಳ ಮಾಡದೇ ಮುತ್ತಿಟ್ಟುಕೊಂಡಿದ್ದರೆ ತಾನು ನಂಬಿದ ಮತದ ಅಸ್ತಿತ್ವ ಏನಾಗಬೇಕು? ಆದ್ದರಿಂದ ಜಗತ್ತಿನ ವ್ಯವಹಾರ ನಡೆಯಬೇಕಾದರೆ ಶಾಂತಿ ಇರಬಾರದು. ಇದೇ ವ್ಯವಹಾರ ವಿಟರ ಮೂಲ ಮಂತ್ರ. ಜನರಲ್ಲಿ ಅಭದ್ರತೆ ಹೆಚ್ಚಾದಷ್ಟು ವ್ಯವಹಾರ ಕುದುರುತ್ತದೆ. ಯುದ್ಧಕ್ಕೆ ಪೋಷಣೆ ಕೊಡುವುದು, ಅದು ತೀರಾ ಹೆಚ್ಚಾಗಿ ವ್ಯವಹಾರ ವಿಟತ್ವದ ಸೈಕಲ್ ಗ್ಯಾಪನ್ನೆ ಆಕ್ರಮಿಸುತ್ತಿದೆ ಎಂದಾಗ ಶಾಂತಿಯನ್ನು ಪೋಷಣೆ ಮಾಡುವುದು. ಬೇಕಿದ್ದರೆ ಗಮನಿಸಿ ಯಾವ ಯುದ್ಧವೂ ದೀರ್ಘಕಾಲ ನಡೆದು ಇಡೀ ಜಗತ್ತು ಸರ್ವನಾಶವಾದ ಉದಾಹರಣೆ ಇಲ್ಲ. ವ್ಯವಹಾರ ವಿಟರಿಗೆ ಗೊತ್ತು ಯಾವಾಗ ಯುದ್ಧ ನಿಲ್ಲಿಸಬೇಕು, ಯಾವಾಗ ಶಾಂತಿ ಹೊರಡಿಸಬೇಕು ಎಂದು.

ಪ್ರಸ್ತುತ ಜಗತ್ತು ಪೂರ್ಣ ವ್ಯವಹಾರದ ಮೇಲೆ ನಿಂತಿದೆ. ದೇಶ-ದೇಶ, ಮನುಷ್ಯ-ಮನುಷ್ಯ ಅನುಮತಿಯಿಲ್ಲದೆ ಯುದ್ಧವಾಡುವಂತೆಯೂ ಇಲ್ಲ, ಶಾಂತಿ ಒಪ್ಪಂದ ಮಾಡುವಂತೆಯೂ ಇಲ್ಲ. ಜಗತ್ತನ್ನು ಎದುರುಹಾಕಿಕೊಂಡು ಬದುಕಬಹುದು, ವ್ಯವಹಾರವನ್ನು ಎದುರುಹಾಕಿಕೊಂಡು ಬದುಕಲಿಕ್ಕೆ ಆಗುವುದಿಲ್ಲ ಅಲ್ಲವೇ? ನಾವು ಗೊತ್ತಿದ್ದೋ ಗೊತ್ತಿಲ್ಲದೆಯೂ ಇನ್ನೊಬ್ಬರ ಕೈಗೊಂಬೆಗಳು. ದೈವವಶಾತ್ ಎಲ್ಲೆಡೆಯೂ ಶಾಂತಿ ಕೂಡಿ, ಯುದ್ದವಿಲ್ಲ ಎಂದಿಟ್ಟುಕೊಳ್ಳಿ... ಸುಖ ಹೆಚ್ಚಾಗಿ ತಮಗೆ ಮಾರಿದ ಟೂಥ್ ಪೇಸ್ಟಲ್ಲಿ ೧ಮಿಲಿಗ್ರಾಂ ಕಡಿಮೆ ಬಂದಿದೆ ಎಂದು ಉಗ್ರಹೋರಾಟ ಮಾಡಿ, ಅದನ್ನು ಜಾಗತಿಕ ಸಮಸ್ಯೆ ಎಂಬಂತೆ ಬಿಂಬಿಸುತ್ತಾರೆ. ಅತಿ ಶ್ರೀಮಂತ ರಾಷ್ಟ್ರಗಳಲ್ಲಿ ತೊಂದರೆ ಎಂದರೆ ಇದೆ! ಇದೆಲ್ಲಾ ಪುರಾಣ ಬೇಡ ಈಗ ಯುದ್ಧಾ ಬೇಕೋ? ಶಾಂತಿ ಆಗಬೇಕೋ... ಅಷ್ಟು ಹೇಳಿ ಸಾಕು ಎಂದರೆ... ನಿಮ್ಮ ವೈಯಕ್ತಿಕ ಹಿತಕ್ಕೆ ಯಾವುದು ಧಕ್ಕೆ ಮಾಡುವುದಿಲ್ಲವೋ ಅದನ್ನು ಆಯ್ಕೆ ಮಾಡಿಕೊಳ್ಳಿ ಎನ್ನಬೇಕಾಗುತ್ತದೆ. ಅದನ್ನೇ ತಾನೇ ಜೀವನದುದ್ದಕ್ಕೂ ನಾವು ಮಾಡಿರುವುದು.
3 likes ·   •  0 comments  •  flag
Share on Twitter
Published on February 27, 2019 23:44

December 29, 2018

Vulgar Richness ನಮ್ಮಲ್ಲಡಗಿರುವ ಹಲ್ಕತನ...

ನಾನು ಬಾಲ್ಯದಿಂದ ಕೋರಮಂಗಲದಂಥ ಪ್ರದೇಶದಲ್ಲಿ ಓಡಾಡಿದವನಾಗಿ ನನ್ನೊಲ್ಲೊಂದು ವಿಕಾರವಾದ ಹತಾಶೆಯಿತ್ತು. ವೈಭವೋಪೇತ ಶಾಲೆಗಳು ನನ್ನ ಕಾಲಳತೆ ದೂರದಲ್ಲಿ ಇದ್ದವು. ನಾನು ಓದುತ್ತಿದ್ದದ್ದು ಸತ್ಯನಾರಾಯಣ ಹಿರಿಯ ಪ್ರಾಥಮಿಕ ಶಾಲೆ ಎಂಬ ಏಡೆಡ್ ಕನ್ನಡ ಶಾಲೆಯಲ್ಲಿ... ಅತ್ತಲಾಗಿ ಅದು ಸರ್ಕಾರಿ ಶಾಲೆಯಾದರೆ ಸರಿಹೋಗುತ್ತಿತ್ತೇನೋ, ಅತ್ತ ಪ್ರೈವೇಟು ಅಲ್ಲದ ಸರ್ಕಾರಿಯೂ ಅಲ್ಲದ, ಡೆಸ್ಕೂ ಇಲ್ಲದ, ಕೇವಲ ೧೦ಅಡಿ ಅಗಲದ ನಾಲ್ಕು ಕೋಣೆಯ ಶಾಲೆಯದು. ಆಗಿನ ಕಾಲಕ್ಕೆ ನಮ್ಮ ಶಾಲೆಯ ಪಕ್ಕಕ್ಕೆ ಫ್ಯಾಬ್ಇಂಡಿಯಾ ಮಳಿಗೆ ಇತ್ತು. ಸಾಫ್ಟ್’ವೇರ್ ಕಂಪನಿ ಇತ್ತು. ಕೇಳಿದರೆ ನಗುತ್ತೀರಿ... ನಾನು ಏಳನೇ ತರಗತಿಗೆ ಆ ಸ್ಕೂಲು ಬಿಟ್ಟಾಗಲು ಅಲ್ಲಿ ಬಲ್ಬು, ಕರೆಂಟು ಇರಲಿಲ್ಲ! ಯಾವುದೋ ಕುಗ್ರಾಮದ ಕಥೆಯಲ್ಲ ಇದು. ಬೆಂಗಳೂರಿನ ಕೋರಮಂಗಲದಂಥ ವೈಭವದ ಮಧ್ಯದ ಸೊಂದಿಯಲ್ಲಿ ಬದುಕಿದ್ದ ನನ್ನ ಸ್ಕೂಲಿನ ಕತೆ. "ಬೆಂಗಳೂರಿನ ಬಡತನವೆಂದರೆ ಚಿನ್ನದರಮನೆಯಲ್ಲಿ ಚರಂಡಿಯ ಬಾಳು" ಎಂದು ನಾನು ‘ಗ್ರಸ್ತ’ ಕಾದಂಬರಿಯಲ್ಲಿ ಸುಮ್ಮನೆ ಬರೆದಿಲ್ಲ... ಅದು ನನ್ನ ಒಟ್ಟು ಅನುಭವದಿಂದ ಉಮ್ಮಳಿಸಿ ಬಂದ ವಾಕ್ಯ. ಈ ವಿಷಾದದ ಪೀಠಿಕೆ ಬೇಕಿರಲಿಲ್ಲವೇನೋ ಆದರೂ ಇರಲಿ. ಫ್ಯಾಬ್ ಇಂಡಿಯಾ ಮಳಿಗೆಗೆ ದೊಡ್ಡ ಕಾರಿನಲ್ಲಿ ಬಿಳಿಯ ಜನ, ಶ್ರೀಮಂತ ಜನ ಬಂದು ಬಟ್ಟೆ ಕೊಳ್ಳುವುದನ್ನು ಅದರ ಒಳವಿನ್ಯಾಸವನ್ನು, ನಾವು ಹುಡುಗರು ಉಚ್ಚೆ ವಿರಾಮಕ್ಕೆಂದು ಬಿಟ್ಟಾಗ ಕದ್ದು ನೋಡುತ್ತಿದ್ದೆವು, ಅದರ ವಾಚ್’ಮನ್ ನಮ್ಮನ್ನು ನಾಯಿಗಳಂತೆ ಓಡಿಸುತ್ತಿದ್ದ. ನನ್ನ ಜೀವನದ ಅತ್ಯಮೋಘ ಆಸೆ ಆಗ ಇದ್ದದ್ದು ಇಷ್ಟೇ... ನಾನೂ ದೊಡ್ಡಕಾರಿನಲ್ಲಿ ಇಲ್ಲಿ ಬಂದು ಬಟ್ಟೆ ಕೊಂಡು ಇವರೆಲ್ಲರ ಮುಂದೆ ಮಿಂಚಬೇಕು. ಅದು ಆಸೆ ಎನ್ನುವುದಕ್ಕಿಂತ ಇವರ ಮುಂದೆ ನನ್ನ ಸೊಫಿಸ್ಟಿಕೇಷನ್ ತೋರಿಸಿ ಮೆರೆಯಬೇಕು ಎಂಬ ಸುಪ್ತ ಹಲ್ಕತನ. ಈ ರೀತಿಯ ಮನೋಭಾವ ಒಮ್ಮೆ ನಾಟಿ, ಸಮಾಜದ ಆಗುಹೋಗಿನ ಜೊತೆ ಸ್ಪಂದಿಸುವುದನ್ನು ಮರೆತ ತಕ್ಷಣ... ಜಾಗೃತವಾಗುವುದೇ Vulgar richnessನ ಪ್ರದರ್ಶನ.

ಇದು ಕೇವಲ ಅಂಬಾನಿಯಂಥ ಜನರಿಗೇ ಇರುತ್ತದೆ ಎಂದು... ಅವನ ಮಗಳ ಮದುವೆಯಲ್ಲಿ ದುಡ್ಡು ಪಡೆದು ಬಂದು ಕುಣಿದ, ಎಂಜಲು ಎತ್ತಿದ ಸ್ಟಾರ್ ನಟರಿಗೆ, ಕ್ರಿಕೆಟಿಗರಿಗೆ, ಇನ್ನಿತರ ತೋಲಾಂಡಿಗಳಿಗೆ ಇರುತ್ತದೆ ಎಂದು ಭಾವಿಸಿ ಸುಮ್ಮನಾಗಬೇಡಿ ಜನರೇ. ಅದು ನಿಮ್ಮಲ್ಲೂ ಇದೆ... ಹೌದು ಭಾರತೀಯರಿಗೆ ಚಿನ್ನವೆಂದರೆ ಬಲುಪ್ರಿಯ. ಅಲಂಕಾರಕ್ಕೆ ಅದೊಂದು ಮೆರಗನ್ನು ನೀಡುತ್ತದೆ. ನಾವೂ ಒಂದು ಚಿನ್ನದ ಸರವನ್ನೋ, ಸಣ್ಣ ಉಂಗುರವನ್ನೋ ತೊಡುತ್ತೇವೆ. ಅಲ್ಲಿಗೆ ಅದು ಮುಗಿಯಬೇಕು... ಆದರೆ ಮುಗಿಯಲ್ಲ. ನಮ್ಮ ಸುತ್ತಲಿನ ಜನರನ್ನೇ ವಿಮರ್ಶಿಸಿ ನೋಡಿ ಚಿನ್ನ ತೊಡುವಿಕೆ ಎಂಬುದು ಯೋಗ್ಯತೆಯ ಪ್ರದರ್ಶನ ಅವರಿಗೆ. ನಾಯಿಚೈನಿನಂಥ ಚಿನ್ನದ ಸರ ಹಾಕುವುದು ಅಲಂಕಾರವೂ ಅಲ್ಲ, ಆರಾಮು ಅಲ್ಲ, ಸುಖವೂ ಅಲ್ಲ, ಹೊಟ್ಟೆ ತುಂಬಿಸಿಕೊಳ್ಳಲೂ ಅಲ್ಲ, ಆರೋಗ್ಯಕ್ಕೂ ಅಲ್ಲ. ಎಲ್ಲಾ ಮೂಲ ಅನಿವಾರ್ಯ, ಅಗತ್ಯ, ಆರಾಮು ಮೀರಿದ ಹಲ್ಕ ಶ್ರೀಮಂತಿಕೆ ತೋರಲು. ಹಣಗಳಿಕೆಯನ್ನೇ ವಸ್ತುಖರೀದಿಯನ್ನೇ ತಪ್ಪು ಎಂದು ಬಿಂಬಿಸುವ ಸಮತಾವಾದಿ ನಾನಲ್ಲ ಎಂಬುದು ನೆನಪಿರಲಿ. ಅನಿವಾರ್ಯ; ಕನಿಷ್ಠ ಬದುಕಲು ಬೇಕೇ ಬೇಕಾದ್ದು... ಅಗತ್ಯ; ಒಂದು ವ್ಯವಸ್ಥಿತ ಜೀವನ ನಡೆಸಲು ಬೇಕಾದ್ದು... ಆರಾಮು; ರಚನಾತ್ಮಕವಾಗಿ ಜೀವನ ನಡೆಸಲು ಬೇಕಾದ ಸೌಕರ್ಯ. ಆರಾಮನ್ನು ಇಂಗ್ಲೀಷಿನಲ್ಲಿ comfort ಎನ್ನುತ್ತಾರಲ್ಲ ಆ ಅರ್ಥದಲ್ಲಿ ತೆಗೆದುಕೊಳ್ಳಿ. ಇನ್ನು ವೈಭವ ಮತ್ತು ಲಕ್ಸುರಿ ಅನ್ನೋದು ಏನಿದೆ ಅದು ವಲ್ಗರ್ ಎನ್ನುವಂಥದ್ದೇ. ಅದರಲ್ಲಿ ತನ್ನ ವೈಯಕ್ತಿಕ ತೋಲಾಂಡಿತನದ ಸಾಬೀತುಪಡಿಸುವಿಕೆಯೇ ಮುಖ್ಯ. ಒಮ್ಮೊಮ್ಮೆ ವೈಭವವೂ ರಚನಾತ್ಮಕವಾಗಿರಬಹುದು... ಅದನ್ನು ಗುರುತಿಸುವುದು ಸ್ವಲ್ಪ ಕಷ್ಟ ಸಾಧ್ಯ. ಭೀಮಸೇನ್ ಜೋಷಿಯೂ ದುಡ್ಡು ಕೊಟ್ಟರೆ ನಿಮ್ಮ ಮನೆಗೆ ಬಂದು ಹಾಡುತ್ತಿದ್ದರು... ಸಲ್ಮಾನ್ ಖಾನ್ ಕೂಡ ದುಡ್ಡು ಕೊಟ್ಟರೆ ನಿಮ್ಮ ಮನೆಗೆ ಬಂದು ಕುಣಿಯುತ್ತಾನೆ. ಆದರೆ ಭೀಮಸೇನ್ ಜೋಷಿಗೆ... ಒಂದು ಬಿಟ್ ನೀವು ಹಾಡಿ ಆಮೇಲೆ ನನ್ನ ಮಗ ಕತ್ತೆಕಂಠದಲ್ಲಿ ಜಲಕ್ ದಿಕಲಾಜ ಹಾಡುತ್ತಾನೆ ಎಂದು ಹೇಳಲಾಗುತ್ತಿರಲಿಲ್ಲ. ಏಕೆಂದರೆ ಇಲ್ಲಿ ಭೀಮಸೇನರದ್ದು ಕಲೆ... ಸಲ್ಮಾನ್ ಖಾನನದ್ದು ವ್ಯವಹಾರ. ಎರಡೂ ವೈಭವಕ್ಕೆ ಬಗ್ಗುತ್ತದೆ... ಆದರೆ ಒಂದರಲ್ಲಿ ರಚನಾತ್ಮಕತೆ ಇದೆ, ಇನ್ನೊಂದರಲ್ಲಿ ಹಲ್ಕತನವಿದೆ. ವೈಭವ ಅಥವಾ ಸೊಬಗು ಅಥವಾ ಸೌಂದರ್ಯ ಎಂಬುದಕ್ಕೂ ರಚನಾತ್ಮಕತೆ ಇದ್ದಾಗ ಅದು ವಲ್ಗರ್ ಎನ್ನಿಸಿಕೊಳ್ಳುವುದಿಲ್ಲ. ತುಂಬಾ ತಾತ್ತ್ವಿಕವಾದ ಉದಾಹರಣೆ ಇದಕ್ಕೆ ಬೇಡ. ಕಡಿಮೆ ದುಡ್ಡಿನಲ್ಲೂ ವೈಭವ ಇರುವಂತೆ ಮನೆ ಕಟ್ಟಿರುವುದನ್ನೂ, ದುಡ್ಡಿದೆ ಎಂದು ಲೇಟ್ರೀನಿಗೂ ಚಿನ್ನದ ಲೇಪನ, ಬಚ್ಚಲಿಗೂ ಶ್ಯಾಂಡಲಿಯರ್ ಹಾಕುವುದನ್ನ ದಿನನಿತ್ಯದ ಜೀವನದಲ್ಲಿ ನೋಡಿರುತ್ತೇವೆ. ಈ ವ್ಯತ್ಯಾಸಗಳನ್ನು ಗುರ್ತಿಸುವ ಸೂಕ್ಷ್ಮತೆ ನಮಗಿರಬೇಕಷ್ಟೇ.

comfort ಬಿಟ್ಟುಬಿಡಿ ಎಂದು ಜನರಿಗೆ ಹೇಳಿದರೆ ಯಾರೂ ಕೇಳುವುದೂ ಇಲ್ಲ. ಅದು ಮನುಷ್ಯನ ಸ್ವಭಾವವೂ ಅಲ್ಲ. ಸಮತಾವಾದಿಗಳಂತೆ ಒತ್ತಾಯಪೂರ್ವಕವಾಗಿ ಜನರ ಮೇಲೆ ಅದನ್ನು ಹೇರಿದರೆ, ಹಿಡಿತ ಬಿಟ್ಟುಹೋದಾಗ ಸ್ವಭಾವ ದುಪ್ಪಟ್ಟಾಗುತ್ತದೆ. ೧೯೯೩ರ ತನಕ ಲಾಡಾ ಇನ್ನಿತರ ಕಾರುಗಳನ್ನೇ, ಥರ್ಡ್ ವರ್ಲ್ಡ್ ಉತ್ಪಾದನೆಯನ್ನೇ ನಂಬಿಕೊಂಡಿದ್ದ ಜನರಿಗೆ, ಹಿಡಿತ ತಪ್ಪಿದ ತಕ್ಷಣ, ಬಿಎಂಡಬ್ಯೂ, ಬೆನ್ಜ್, ಬರ್ಗರ್ ಕಿಂಗ್, ಮೆಕ್ಡೊನಾಲ್ಡ್ಸ್ ಮೋಹ ಹೆಚ್ಚಾಗಿ ಯಾವ ನೆಲದಲ್ಲಿ ಸಮತಾವಾದವಿತ್ತೋ ಅಲ್ಲಿ ಇಂದು Comfort ಮೀರಿದ ಲಕ್ಸುರಿಯದ್ದೇ ಕಾರುಬಾರಾಗಿದೆ. ಸಮಾಜ ಸ್ಪಂದನ ಪ್ರಜ್ಞೆ ಎಂಬುದನ್ನು ನಾವೇ ವೈಯಕ್ತಿಕವಾಗಿ ಬೆಳೆಸಿಕೊಳ್ಳಬೇಕು. ಅದು ಚಳುವಳಿಯಿಂದ ಬರುವುದಲ್ಲ, ಅಥವಾ ಪುಸ್ತಕ ಓದಿದ ಮಾತ್ರಕ್ಕೆ ಆಗುವುದಲ್ಲ. ಅನಿವಾರ್ಯ; ಅಗತ್ಯ; ಆರಾಮಿನ ನಡುವಿನ ವ್ಯತ್ಯಾಸ ಅರಿಯಬೇಕು. ನಮ್ಮ ಬದುಕಿನ ಸ್ತರಗಳು ಬದಲಾದಂತೆ, ನಮ್ಮ ಕೆಳಸ್ತರದ ಬದುಕಿನವನ ಮುಂದೆ ನನ್ನ ಹೆಚ್ಚುಗಾರಿಕೆ ತೋರಿಸುವುದೇ ನನ್ನ ಯಶಸ್ಸು ಎಂಬ ಸುಪ್ತಹಲ್ಕತನವನ್ನ ನಾವು ಬಿಡಬೇಕು. ನಮ್ಮ ಮನಸ್ಸಿನಲ್ಲೇ ಅಂಬಾನಿಯಿದ್ದಾನೆ... ನಾವೂ ಹಾಗೆ ಆಗಬೇಕು, ಅವನಂತೆ ಇರಬೇಕು, ಅವನಂತೆ ಕೊಳ್ಳಬೇಕು ಎಂಬ ಲಾಲಸೆ ಸುಪ್ತವಾಗಿ ನಮ್ಮಲ್ಲಿ ಬೇರೂರಿಬಿಟ್ಟಿರುತ್ತದೆ. ನಿಜವಾಗಿಯೂ ವಲ್ಗರ್ ರಿಚ್ನೆಸ್ ಎಂಬುದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುವುದೇ ಈ ಮಧ್ಯಮ ವರ್ಗದ ಜನ. ಇವರಿಗೆ ಕೆಳಗಿನ ಬಗ್ಗೆ ಭಯ-ಅಸಹ್ಯ. ಮೇಲಿನದರ ಬಗ್ಗೆ ಆಸೆ-ಭಕ್ತಿ! ವಲ್ಗರ್ ಆದದ್ದನ್ನು ಸಂಭ್ರಮಿಸುವುದೇ ಇವರು. ಪರೋಕ್ಷವಾಗಿ ಇವರೇ ವಲ್ಗರ್ ರಿಚ್ನೆಸ್’ನ ಆರಾಧಕರು, ಉತ್ತೇಜಕರು. ಚಿಕ್ಕಂದಿನಲ್ಲಿ ವೈಭವವಾಗಿ ಕಾಣುತ್ತಿದ್ದ ಎಷ್ಟೋ ಸಂಗತಿ ನನಗೀಗ ವಲ್ಗರ್ ಎನ್ನಿಸಿದೆ. ಒಮ್ಮೊಮ್ಮೆಯಂತೂ ಇದು ನನ್ನ ಅವಶ್ಯಕತೆಗೆ ಮೀರಿದ್ದು ಎಂದೆನಿಸಿ ಕೆಲವು ಕೊಂಡ ವಸ್ತುಗಳನ್ನು ವಾಪಾಸು ಮಾರಿ, ನನ್ನ ಅಗತ್ಯಕ್ಕೆ ಬೇಕಾದ್ದು ಮಾತ್ರ ಕೊಂಡಿದ್ದೇನೆ. ನಮ್ಮ ಅಗತ್ಯದ ಗೆರೆಗಳವರೆಗೂ ನಾವು ಬೆಳೆಯುವುದು ಎಷ್ಟು ಮುಖ್ಯವೋ ಗೆರೆಯನ್ನು ದಾಟಬಾರದು ಎಂಬ ಪ್ರಜ್ಞೆಯೂ ಅಷ್ಟೇ ಮುಖ್ಯ.
1 like ·   •  0 comments  •  flag
Share on Twitter
Published on December 29, 2018 08:24

December 17, 2018

ಪೂರ್ಣ ರಂಜನೆ, ಅರ್ಧ ಸತ್ಯ ಮತ್ತು ಖಾಲಿ ಮೌಲ್ಯ...

ನಾವೀಗ ಕಥನ ಸ್ವರೂಪದ ಬಗ್ಗೆ ಮಾತನಾಡಲು ಹೊರಟಿದ್ದೇವೆ, ಭಾರತದ ಪ್ರಥಮ ಲಭ್ಯ ಸಾಹಿತ್ಯವಾದ ವೇದಗಳಿಂದ ಪ್ರಾರಂಭಿಸೋಣವೇ ಎಂದರೆ ಅದು ಕಥನವಲ್ಲ, ಇಲ್ಲ ಇಲ್ಲ... ಪುರುಷಸೂಕ್ತ ಮುಂತಾದ ಭಾಗಗಳು ಸೃಷ್ಟಿಶೀಲ ಕಥನವೇ ಎನ್ನುತ್ತಾರೆ ಕೆಲವರು. ನನ್ನ ಒಪ್ಪಿಗೆ ಅದಕ್ಕಿಲ್ಲ. ಮನುಷ್ಯ ಬುದ್ಧಿಯಿಂದ ಸ್ಫುರಿಸಲ್ಪಟ್ಟು ಅದಕ್ಕೆ ರಚನಾತ್ಮಕವಾದ ಬಂಧವನ್ನಿಟ್ಟು, ಕಲ್ಪನೆ, ಅಭಿವ್ಯಕ್ತಿ, ವಿಚಾರ ಮುಂತಾದ ಹೊಳಹುಗಳನ್ನು ಮನುಷ್ಯ ಜೀವನವೆಂಬ ಮಸೂರದ ಮೂಲಕ ಸಂಚರಿಸುವಂತೆ ಮಾಡುವುದೇ ಕಥನ. ಆದರೆ ವೇದವು ಪುರುಷ ಬುದ್ಧಿಪ್ರಯತ್ನದಿಂದ ರಚಿತವಾದದ್ದಲ್ಲ!(?) ಎಂದು ಶಂಕರರು ಹೇಳಿದ್ದಾರೆ (ಬೃಹ.ಭಾ.2.4.10) ಹಾಗಾಗಿ ರಾಮಾಯಣವನ್ನು ತೆಗೆದುಕೊಳ್ಳೋಣ. ಅದು ಶುದ್ಧ ಕಾವ್ಯವೇ, ಅದರ ಕಥನ ಸರಳ. ನಾಯಕ, ನಾಯಕಿ ಮತ್ತು ಕೇಡಿ ಇದ್ದಾನೆ, ನಾಯಕಿಯನ್ನು ಕೇಡಿ ಕಿಡ್ನಾಪ್ ಮಾಡುತ್ತಾನೆ, ನಾಯಕ ಕೇಡಿಯನ್ನು ಕೊಂದು ನಾಯಕಿಯನ್ನು ರಕ್ಷಿಸುತ್ತಾನೆ, ಅಷ್ಟೇ! ಉತ್ತರಕಾಂಡ ನನಗೇನೋ ಪ್ರಕ್ಷಿಪ್ತವೇ ಅನ್ನಿಸುತ್ತದೆ. ರಾಮಾಯಣದ ಮಿಕ್ಕೆಲ್ಲವೂ ಈ ಕಥಾ ಎಳೆಗೆ ಪೂರಕ ಮತ್ತು ಪ್ರೇರಕ ಅಂಶವೇ ಹೊರತು ಇನ್ನೊಂದು ಹೊಸ ಅಯಾಮ ಇಲ್ಲ (ವಾಲ್ಮೀಕಿ ರಾಮಾಯಣ ಋಣವಾಗಿಸಿಕೊಂಡರೆ). ಆದರೆ ವ್ಯಾಸ ಮಹಾಭಾರತ ಗಮನಿಸಿದರೆ ಇಷ್ಟು ಸರಳವಾದ ವಿವರಣೆ ಅದಕ್ಕೆ ದೊರಕುವುದಿಲ್ಲ. ಅದು ಸಂಕೀರ್ಣತೆಯನ್ನು ಮೈಗೂಡಿಸಿಕೊಂಡು ಪ್ರತಿ ಅಂಗವೂ ತನ್ನದೇ ಕೊಡುಗೆಯನ್ನು ಕಥನಕ್ಕೆ ನೀಡಿದೆ. ಕಥನ ಎಂದರೆ ಏನು? ಯಾವ ಕಥನ ಸ್ವರೂಪ ನಮ್ಮನ್ನು ಪೊರೆಯಬಲ್ಲದು? ಕಥನದ ಉದ್ದೇಶವೇನು ಎಂಬ ಎಲ್ಲಾ ಪ್ರಶ್ನೆಗೂ ಮಹಾಭಾರತ ಪ್ರಮಾಣಿತ ಉತ್ತರವಾಗಿ ನಿಲ್ಲುತ್ತದೆ. 19ನೇ ಶತಮಾನದವರೆಗೂ ಭಾರತದ ಎಲ್ಲಾ ಕವಿಗಳೂ ಈ ಕಥನ ಸ್ವರೂಪವನ್ನು ದಾಟಿ ಬೇರೇನೂ ಮಾಡಲಿಲ್ಲ ಎಂದು ಕಟುವಾಗಿ ಹೇಳಬೇಕಾಗುತ್ತದೆ. ವಾಲ್ಮೀಕಿ, ವ್ಯಾಸರ ಋಣದಲ್ಲಿದ್ದೇವೆ ಎಂಬುದನ್ನು ಸಂಕೋಚ ಬಿಟ್ಟು ಭಾರತದ ಕವಿಗಳು ಒಪ್ಪಬೇಕು.

ಕಥನ ಸ್ವರೂಪ ಬದಲಾಯಿತೇ?
ಪೂರ್ಣವಾಗಿ ಬದಲಾಯಿತು ಎನ್ನಲಿಕ್ಕೆ ಸಾಧ್ಯವಿಲ್ಲ. ಈ ಶತಮಾನದ ಉತ್ತಮ, ಶ್ರೇಷ್ಠ ಎಂದು ಪ್ರಚಲಿತದಲ್ಲಿರುವ ಭಾರತೀಯ ಕೃತಿಗಳೂ ಕೂಡ ಮೇಲೆ ತಿಳಿಸಿದಂತೆ ಋಣದಲ್ಲಿರುವುದು ಕಂಡುಬರುತ್ತದೆ. ಆದರೆ ಪಾಶ್ಚಾತ್ಯ ಸಾಹಿತ್ಯದ ಓದು ಹೆಚ್ಚಾದಂತೆ ಕಥನ ಸ್ವರೂಪಕ್ಕೆ ತಮ್ಮದೇ ವ್ಯಾಖ್ಯಾನಗಳನ್ನು ಸಾಹಿತಿಗಳು ನೀಡುತ್ತಾ ಹೋದರು. ಒಂದಷ್ಟು ಜನ ಅನುಭವವೇ ಅಂತಿಮ ಎಂದರು, ಈ ಋಣವನ್ನು ತಿರಸ್ಕರಿಸುವುದೇ ಹೊಸ ಕಥನ ಸ್ವರೂಪ ಎಂದರು, ಸಾಮಾಜಿಕ ಕ್ರಾಂತಿಯೇ ಕಥನದ ಉದ್ದೇಶ ಎಂದರು. ಏನೇ ಆದರೂ ಕಥನವು ಮನುಷ್ಯನನ್ನು ಬಿಟ್ಟು ಕದಲಲಿಲ್ಲ. ಆದ್ದರಿದಲೇ... ಮನುಷ್ಯ ಭಾವ ಮತ್ತು ಸಂಬಂಧಗಳ ಸೂಕ್ಷ್ಮಗಳನ್ನು ಸಂಶೋಧಿಸುತ್ತಾ ಸಾಗುವುದೇ ನಿಜ ಕಥನವೇ ಹೊರತು ಮಿಕ್ಕೆಲ್ಲ ಧೋರಣೆಗಳು ಅದರ ಹೊದಿಕೆಗಳಷ್ಟೇ ಎಂದೆನ್ನಬೇಕಾಗುತ್ತದೆ. ಮತೀಯ ಕಥನ, ರಾಜಕೀಯ ಕಥನ, ಸಾಮಾಜಿಕ ಕ್ರಾಂತಿಯ ಕಥನ, ಅಸಮಾನತೆಯ ಕಥನ ಇವೆಲ್ಲವೂ ಮನುಷ್ಯನ ಉಚ್ಛ, ನೀಚ ಭಾವಗಳ ಸಂಶೋಧನೆಯೇ ಅಲ್ಲವೇ? ಮನುಷ್ಯ ಸಂಬಂಧಗಳ ಹುಡುಕಾಟವಲ್ಲವೇ? ಹಾಗಾದರೆ ನಿಜವಾಗಲೂ ನಾವು ಈ ನಿಟ್ಟಿನಲ್ಲಿ ಕಥನ ಸ್ವರೂಪಗಳನ್ನು ಪರಾಮರ್ಶಿಸಿದ್ದೀವ? ಯಾವುದೇ ಕಲೆಯಾಗಲಿ ಅದು ಮನುಷ್ಯನಿಗೆ ಪ್ರತಿಯಾಗಿ ಇದನ್ನಲ್ಲದೇ ಇನ್ನೇನನ್ನು ಕೊಡುತ್ತಿದೆ? ಎಂದು ಕೇಳಿಕೊಳ್ಳಬೇಕಾಗುತ್ತದೆ.

ಕಥನದ ಸ್ವರೂಪ ಈಗ ಏನಾಗುತ್ತಿದೆ?
ಸಿನಿಮಾ, ವೆಬ್ ಸೀರಿಯಲ್, ಪೋಡ್’ಕಾಸ್ಟ್ ಹೀಗೆ ಕಥನದ ಮಾಧ್ಯಮಗಳು ಬದಲಾಗಿರಬಹುದು ಆದರೆ ಅದಕ್ಕೆ ಸಾಹಿತ್ಯವೇ ಮೂಲಧಾತು. ಭಾಷೆ ಮತ್ತು ದೃಶ್ಯವನ್ನು ಬಳಸುವ ಪ್ರತಿಯೊಂದು ಕಲೆಯು ಸಾಹಿತ್ಯವೇ. ಆ ಸಾಹಿತ್ಯದಲ್ಲಿ ಕಥನ ಸ್ವರೂಪವು ಮೇಲೆ ತಿಳಿಸಿದ ಆದರ್ಶದಂತೆ ರೂಪುಗೊಳ್ಳುವ ಪ್ರಯತ್ನವನ್ನಾದರು ಮಾಡಿದೆಯೇ ಇಲ್ಲವೇ ಎಂಬುದು ಸದ್ಯದ ಪ್ರಶ್ನೆ. ಇಲ್ಲಿ ಬೋಧಕ, ರಂಜಕ, ಸಿದ್ಧಾಂತ ಪ್ರತಿಪಾದಕ, ಸ್ವರತಿ ಹೀಗೆ ಹಲವಾರು ವಿಭಿನ್ನ ಕಥನಗಳಿದೆ. ಜನಕ್ಕೆ ಏನು ಬೇಕು ಅದಕ್ಕೆ ತಕ್ಕಂತೆ ಕೊಡುತ್ತೇವೆ ಎಂಬ ವ್ಯವಹಾರದ (ಆರ್ಥಿಕ ದೃಷ್ಟಿ ಮಾತ್ರವಲ್ಲ, ಸಮಾನ ಮನೋಧರ್ಮದ ವ್ಯಾಪಾರ ಎಂಬಂತೆಯೂ) ಮೇಲೆ ಸಾಹಿತ್ಯವನ್ನು ಸ್ಥಾಪಿಸಿದಾಗ ಇವೆಲ್ಲಾ ಹುಟ್ಟುಕೊಳ್ಳುತ್ತವೆ. ನಮ್ಮ ಪ್ರಜ್ಞೆಯನ್ನು ಜಾಗೃತಗೊಳಿಸಿದಂತ, ರಸ ಮತ್ತು ಮೌಲ್ಯ ಹದಗೆಡದಂತೆ ಕಥನವನ್ನು ಉಣಬಡಿಸಿದ ಜಗತ್ತಿನ ಕೃತಿಗಳು ಎಂದು ನಾವು ಯಾವುದಾವುದನ್ನು ಗುರುತಿಸುತ್ತೇವೆ ಅವೆಲ್ಲವೂ ಈ ರೀತಿಯ ವ್ಯವಹಾರದಿಂದ ಹುಟ್ಟಿದ ಉತ್ಪನ್ನಗಳಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಪೂರ್ಣ ರಂಜನೆ, ಅರ್ಧ ಸತ್ಯ ಮತ್ತು ಖಾಲಿ ಮೌಲ್ಯ ಎಂಬ ಯಶಸ್ವಿ ಸಿದ್ಧಸೂತ್ರದ ವ್ಯಭಿಚಾರಿ ಭಾವಗಳನ್ನೇ ಕೇಂದ್ರವಾಗಿಸಿಕೊಂಡ ಕಥನ ಸ್ವರೂಪವು ತಾತ್ಕಾಲಿಕವಾಗಿ ಒಂದು ಗುಂಪನ್ನು ಉದ್ದೀಪಿಸುವ ಪ್ರಚಂಡ ಶಕ್ತಿ ಹೊಂದಿರುತ್ತದೆ. ಕ್ರಾಂತಿಯ ಮಹತ್ವ, ಧರ್ಮ ಸ್ಥಾಪನೆ, ದೇಶ ಭಕ್ತಿ, ಅಸಮಾನತೆ ನಿವಾರಣೆಯಂಥ ಉದ್ದೇಶ ಸಾಧನೆ ಕಥನಗಳೂ ಕೂಡ ಈ ಗುಂಪಿನ ಅಡಿಯಲ್ಲೇ ಬರುತ್ತದೆ. ಮನರಂಜನೆಯ ತಳಪಾಯ ಸಿಕ್ಕಿಬಿಟ್ಟರಂತೂ ಇವುಗಳಿಗೆ ಎಲ್ಲಿಲ್ಲದ ಬೇಡಿಕೆ. ಪ್ರಚೋದನೆ ಮತ್ತು ರಂಜನೆಯೇ ಮೇಲುಗೈ ಪಡೆದಾಗ ಆ ಕಥನವು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ಸಾಹಿತ್ಯದ ಓದು (ಅಥವಾ ಯಾವುದೇ ಕಲೆ) ನಮಗೆ ಪರಾಮರ್ಶೆಯ ಸಂಯಮವನ್ನು ಕಲಿಸಬೇಕೇ ವಿನಹ ರಾಗದ್ವೇಷದ ಉದ್ರೇಕವನ್ನು ಉದ್ದೀಪಿಸಬಾರದು. ದುರಂತವೆಂದರೆ ಈ ಸಿದ್ಧಸೂತ್ರಗಳು ಒಂದು ರೀತಿಯ ಸನ್ನಿಪಾತವನ್ನು ಓದುಗ-ನೋಡುಗ ವಲಯದಲ್ಲಿ ಉಂಟುಮಾಡುತ್ತದೆ, ಗಂಭೀರ ಬರೆಹಗಾರರು - ಪ್ರಾಜ್ಞ ಓದುಗರು ಕೂಡ ಇದಕ್ಕೆ ಬಲಿಯಾಗಿದ್ದಾರೆ, ಆಗುತ್ತಲೇ ಇರುತ್ತಾರೆ.

ಕಥನವು ರಸ, ಧ್ವನಿ, ಔಚಿತ್ಯ, ಮೌಲ್ಯಗಳನ್ನು ಒಳಗೊಂಡಿರಬೇಕೆ?
ದಾಸ್ತೋವಸ್ಕಿಯ ಕ್ರೈಂ ಅಂಡ್ ಪನಿಷ್ಮೆಂಟ್, ಪುಟ್ಟಪ್ಪರ ಮಲೆಗಳಲ್ಲಿ ಮದುಮಗಳು, ಭೈರಪ್ಪರ ಗೃಹಭಂಗ, ಇವುಗಳನ್ನೇ ತೆಗೆದುಕೊಳ್ಳಿ ಅಥವಾ ಅಕಿರಾ ಕುರಸೋವಾರ ಕಾಗೆಮುಷಾ, ಬರ್ಗಮನ್ನರ ಸವೆಂಥ್ ಸೀಲ್, ಸತ್ಯಜಿತ್ ರೇರ ನಾಯಕ್ ಮುಂತಾದ ಸಿನಿಮಾವನ್ನೇ ಗಮನಿಸಿ ಅಲ್ಲೇನೋ ಉಪದೇಶ ಮಾಡುವ ಧಾವಂತ ಇಲ್ಲ, ಜಗತ್ತನ್ನು ಬದಲಾಯಿಸಿಬಿಡುವ ಬೆಪ್ಪುತನವಿಲ್ಲ, ಧರ್ಮ, ರಾಜಕೀಯ, ಸಮಾಜ, ಸಂಬಂಧ, ಹಣ, ಅಧಿಕಾರ, ಜನಪ್ರಿಯತೆ ಇತ್ಯಾದಿ ಇತ್ಯಾದಿ ಮನುಷ್ಯ ವ್ಯವಸ್ಥೆಯ ಎಲ್ಲವೂ ಕಥನದಲ್ಲೇ ಬೆರೆತು ಅದೇ ಮೂಲವಾಗದೇ, ಮನುಷ್ಯ ಭಾವಮುಖೇನ ಸ್ಪರ್ಶಿಸಿ ನಿರೀಕ್ಷಿಸುತ್ತದೆ. ಅಲ್ಲಿ ರಸವೂ ಇದೆ, ಅದಕ್ಕೊಂದು ಧ್ವನಿಯೂ ಇದೆ, ಅದನ್ನು ಹೇಗೆ-ಎಷ್ಟು ಬಳಸಬೇಕು ಎಂಬ ಔಚಿತ್ಯವೂ ಇದೆ. ಇವೆಲ್ಲದರ ಹದಪಾಕವನ್ನು ಅಚ್ಚಿನಲ್ಲಿ ಹಾಕಿ ಕೃತಿಗೊಂದು ಸೌಂದರ್ಯ ಮತ್ತು ಮೌಲ್ಯ ಒದಗಿಸುವ ಜಾಣ್ಮೆಯೂ ಇದೆ.
“ಕತೆ ಹೊಡೀಬೇಡ” ಎಂಬುದನ್ನು ಒಬ್ಬರ ಮಾತನ್ನು ತಿರಸ್ಕರಿಸಲಿಕ್ಕೆ ನಾವು ಬಳಸುತ್ತೇವೆ. ಈ ರೂಪಕ ತುಂಬಾ ಅರ್ಥವತ್ತಾಗಿದೆ! ಕಥನವು ಕೇವಲ ಶಾಬ್ಧಿಕ ಹಾವ ಭಾವ ನಿರೂಪಣೆಯಲ್ಲ. ಕತೆಗಾಗಿ ಕತೆ, ಎಂಬ ಸ್ವರೂಪವನ್ನು ಪ್ರಮಾಣವಾಗಿಟ್ಟುಕೊಂಡರೆ ಎಲ್ಲಾ ಕಲ್ಲೂ ಕಲಾಕೃತಿಯೇ, ಎಲ್ಲರೂ ಕತೆಗಾರರೇ! ಆದ್ದರಿಂದ ಮೌಲ್ಯ ಪ್ರಜ್ಞೆ ಇಲ್ಲಿ ಬಹಳ ಮುಖ್ಯ. ಹೇಗೆ ಒಂದು ಕಲ್ಲು ಶಿಲ್ಪಿಯಿಂದ ಸಂಸ್ಕಾರ ಪಡೆದು ಕಲಾಕೃತಿಯಾಗಿ ಮೌಲ್ಯ ಪಡೆಯುತ್ತದೆಯೋ ಹಾಗೇ ಕಥನಕಾರ ಕಥೆಯೆಂಬ ಒಣಮಾತಿಗೆ ಸಂಸ್ಕಾರ ನೀಡಿ ಸಾಹಿತ್ಯಿಕ ಮೌಲ್ಯ ಒದಗಿಸಬೇಕು. “ಕತೆಯೆಲ್ಲಾ ಸಾಹಿತ್ಯ, ಪ್ರತಿಭೆ ಪ್ರದರ್ಶನವೆಲ್ಲಾ ಕಲೆ” ಎಂಬ ಸಾಮಾನ್ಯ ಧೋರಣೆಯ ಪ್ರಚಾರದ ಧೂಳು ಹೆಚ್ಚಾಗಿ ಈ ಸೂಕ್ಷ್ಮಗಳು ಗೋಚರಿಸುತ್ತಿಲ್ಲ.

-ಕರಣಂ ಪವನ್ ಪ್ರಸಾದ್
ಮಯೂರ-ನವೆಂಬರ್ ಸಂಚಿಕೆ-೨೦೧೮
25.10.2018
2 likes ·   •  0 comments  •  flag
Share on Twitter
Published on December 17, 2018 08:01

November 19, 2018

ಭಾರತೀಯ ರೂಢಿಯೂ ಮತ್ತು ವೈಚಾರಿಕತೆಯೂ...

ಯಾವುದೇ ಒಂದು ಗುಂಪನ್ನು ತೋರಿಸಿ ಇದರಲ್ಲಿ ಸಾಮಾನ್ಯ ಭಾವ ಗುರುತಿಸಿ ಎಂದರೆ ಸುಲಭವಾಗಿ ಗುರುತಿಸಬಲ್ಲೆವು. ಅದು ಪ್ರದೇಶ, ಜಾತಿ, ಭಾಷಾ ಆಧಾರಿತ ಗುಂಪು ಏನೇ ಆಗಿರಲಿ. ಮಲೆನಾಡಿನವರ ಸಾಮಾನ್ಯ ಭಾವ, ಅದಕ್ಕೆ ಬಯಲು ಸೀಮೆಯ ವಿರುದ್ಧ ಭಾವ. ಬ್ರಾಹ್ಮಣ ಪಂಗಡದ ಸಾಮಾನ್ಯ ಭಾವ ಅಬ್ರಾಹ್ಮಣರ ವಿರೋಧ ಭಾವ ಅಥವಾ ಕನ್ನಡಿಗರ ಸಾಮಾನ್ಯ ಭಾವ, ಹಿಂದಿ ಭಾಷಿಕರ ವಿರುದ್ಧ ಭಾವ, ಹೀಗೆ... ಅದರಂತೆ ಈಗಿನ ರಾಜಕೀಯ ರೇಖೆಯ ಅಡಿಯ ಇಂಡಿಯಾ ಅಥವಾ ಪಾರಂಪರಿಕ ನಂಬಿಕೆಯ ಭರತವರ್ಷದ ಅಡಿಯಲ್ಲಿ ಬದುಕಿದ ಜನರಲ್ಲಿ ಸಾಮಾನ್ಯ ಭಾವವನ್ನು ಗುರುತಿಸುವುದು ಕಷ್ಟವೇನಲ್ಲ, ಅದನ್ನೇ ನಾವು ಭಾರತೀಯ ಮನಸ್ಸು ಎಂದು ಸ್ವೀಕರಿಸೋಣ, ಆದರೆ ಮನಸ್ಸು ಎಂಬುದು ತೀರಾ ಚೌಕಟ್ಟಿಲ್ಲದ ದೊಡ್ಡ ಪದ, ಆದ್ದರಿಂದ ನಾನು ಅದನ್ನು ಭಾರತೀಯ ರೂಢಿ ಎಂದು ಸೀಮಿತಗೊಳಿಸುತ್ತೇನೆ.
ಭಾರತದಲ್ಲಿ ಬದುಕಿದ ಅಮೊನೈಟ್‍ಗಳ ಬಗ್ಗೆ ಆಗಲಿ ಅಥವಾ ಇನ್ನಾವುದೋ ಪಾರಂಭಿಕ ಹಂತದ ಪ್ರಾಣಿ ಪಕ್ಷಿಗಳ ಬಗ್ಗೆ ನಾವು ಮಾತಾಡುತ್ತಿಲ್ಲ. ವಿವೇಚನೆ ಹೊಂದಿರುವ ಮನುಷ್ಯನ ಕುರಿತಾಗಿ ಮಾತ್ರ ಮಾತನಾಡಬಲ್ಲೆವು. ಈ ಮನಸ್ಸು-ರೂಢಿ ಇವುಗಳಿಗೆಲ್ಲ ನೂರೆಂಟು ವ್ಯಾಖ್ಯಾನ ನೀಡಿದವನು ಅವನೇ ಅಲ್ಲವೇ? ಭಾರತದಲ್ಲಿ ಒಂದು ಬಿಂದುವಿನಿಂದ ಇಲ್ಲಿಯವರೆಗೂ ಜೀವಿಸಿದ ಜನರಲ್ಲಿ ಪ್ರಬಲವಾಗಿ ಬೆಳೆದಿರುವ ರೂಢಿ ಎಂದರೆ ಅದು “ಧರ್ಮ”, ಇದಕ್ಕೆ ಪಾಶ್ಚಿಮಾತ್ಯ ಸಮಾನಾರ್ಥಕ ಪದ ಇಲ್ಲ. ಹಾಗೆಯೇ ‘ಫಿಲಾಸಫಿ’ ಎಂಬ ಪದಕ್ಕೆ ಭಾರತೀಯರಲ್ಲಿ ಸಮಾನಾರ್ಥಕ ಪದವಿಲ್ಲ. ಈ ವ್ಯತ್ಯಾಸವೇ ಭಾರತೀಯ ರೂಢಿ ಎಂಬುದಿದೆ ಎಂದು ನಿರೂಪಿಸಿಬಿಡುತ್ತದೆ. ‘ಧರ್ಮ’ ಎಂಬುದು ನೀತಿ, ಸತ್ಯ, ಸೌಂದರ್ಯಗಳ ಶುದ್ಧ ಪರಿಪಾಕ. ಫಿಲಾಸಫಿ ಎಂದರೆ ಸೈನ್ಸ್, ಎಥಿಕ್ಸ್, ಮೆಟಾಫಿಸಿಕ್ಸ್ ಎಂಬ ಭೌತಿಕ-ಸಾಮಾಜಿಕ ಪ್ರಮೇಯಗಳ ಬಗೆಗಿನ ಬೌದ್ಧಿಕ ಸಾಫಲ್ಯತೆ. ನಾವು ಫಿಲಾಸಫಿ ಬದಲಿಗೆ “ದರ್ಶನ” ಎನ್ನುತ್ತೇವೆ, ಅದರಲ್ಲಿ ವೈದಿಕ, ಅವೈದಿಕ, ಶುಂಠಿ ಸುಡುಗಾಡು ಏನೇ ಇರಲಿ, ಬಹುಪಾಲು ಎಲ್ಲವೂ ‘ಧರ್ಮ’ ಎಂಬುದನ್ನು ಪ್ರತಿಪಾದಿಸುತ್ತದೆ. ನನ್ನಜ್ಜಿಗೆ ಅಂಥಹ ದೊಡ್ಡ ಪಾಂಡಿತ್ಯವೇನು ಇರಲಿಲ್ಲ, ಹಾಲಿನವನು; ಹಾಲಿಗೆ ನೀರು ಬೆರೆಸಿದ ಎಂಬ ಸಣ್ಣ ಕಾರಣಕ್ಕೂ “ಧರ್ಮ ಅಲ್ಲಯ್ಯಾ ಇದು” ಎನ್ನುತ್ತಿದ್ದಳು, ಇದು ಭಾರತೀಯ ರೂಢಿ.

ಆಶ್ರಮ ಧರ್ಮ, ಸ್ವಧರ್ಮ, ಆಪದ್ಧರ್ಮ ಎಂಬ ಕವಲುಗಳು ಇದ್ದರೂ ಅದು ತುಂಬಾ ಮೇಲ್ಮಟ್ಟದ ಬೌದ್ಧಿಕ ವರಸೆಗಳು. ಭಾರತೀಯರು ‘ಧರ್ಮ’ ಎಂಬುದಕ್ಕೆ ತಮ್ಮದೇ ಒಂದು ವ್ಯಾಖ್ಯಾನವನ್ನ ತಮ್ಮ ಜೀವನಕ್ಕೆ ಕೊಟ್ಟುಕೊಂಡಿದ್ದಾರೆ. ಭಾರತದಲ್ಲಿ ಹುಟ್ಟಿ ಬೆಳೆದವನಿಗೆ ಈ ಪ್ರಜ್ಞೆ ಬಲವಾಗಿ ಇರುತ್ತದೆ. ಭಾರತವನ್ನು ಖುದ್ದು ಬಾಲ್ಯಮುಖೇನ ಕಾಣದವರು ಮಾತ್ರ ಪಂಡಿತರ, ಸ್ಮೃತಿಕಾರರ ಮಾತುಗಳ ಕೊಳವೆ ತೂತಲ್ಲಿ ಭಾರತವನ್ನು ಕಾಣುತ್ತಾರೆ. ಅಪವಾದವೆಂಬಂತೆ ಎ ಕೆ ರಾಮಾನುಜನ್‍ರಂಥಹ ಬುದ್ಧಿವಂತರು ಕೂಡ Is there an Indian way of thinking? ಎಂಬ ತಮ್ಮ ಪ್ರಬಂಧದಲ್ಲಿ ಮಾತು ಮಾತಿಗೂ ಮ್ಯಾಕ್ಸ್ ಮುಲ್ಲರ್, ಮನು ಎನ್ನುತ್ತಾರೆ. ಮುಲ್ಲರ್ ತನ್ನ ಜೀವನದಲ್ಲಿ ಭಾರತವನ್ನು ನೋಡಿಯೇ ಇರಲಿಲ್ಲ. ಮನು ಭಾರತದ ವಕ್ತಾರನೂ ಆಗಬೇಕಿಲ್ಲ. ಯಾವಜ್ಜೀವೇತ್ ಸುಖಂಜೀವೇತ್ ಋಣಂ ಕೃತ್ವಾಘೃತಂಪಿಬೇತ್ |..... ಅಗ್ನಿಹೋತ್ರಂ ತ್ರಯೋವೇದಾಃ ತ್ರಿಪುಣ್ಡ್ರಭಸ್ಮಗುಣ್ಮನಂ ಬುದ್ಧಿ ಪೌರುಷಹೀನಾನಾಂ ಜೀವಿಕಾ ಧಾತೃನಿರ್ಮಿತಾ || ತತಸ್ತು ಜೀವನೋಪಾಯೋ ಬ್ರಾಹ್ಮಣೈರ್ವಿತಸ್ತ್ಪಿಹ | ಎಂದ ಚಾರ್ವಾಕನು ಭಾರತದವನೇ. ಭಾರತೀಯ ರೂಢಿಯಲ್ಲಿ ತರ್ಕವಿಲ್ಲ ಎಂಬ ಆಪಾದನೆ ಇದೆ, ಸೈಕೋ-ಫಿಸಿಕಲ್ ಪ್ಯಾರಲೆಲಿಸಮ್, ಬಿಹೇವಿಯರಿಸಮ್, ಮೆಟೀರಿಯಲಿಸಮ್, ಕಮ್ಯೂನಿಸಮ್ ಇವೆಲ್ಲವು ವೈಜ್ಞಾನಿಕ ತರ್ಕಕ್ಕೆ ನಿಲುಕುವ ಮುನ್ನವೇ ಚಾರ್ವಾಕ ಮುಂತಾದ ದರ್ಶನಕಾರರು ಈ ಬಗ್ಗೆ ಓಂಕಾರ ಹಾಕಿಲ್ಲವೇ? ಬುದ್ಧನಂಥಹ ವ್ಯಕ್ತಿ ಮಹಮದೀಯ ಮತದ ಆರಂಭದ ನಂತರದಲ್ಲಿ ಅರಬ್ಬಿನಲ್ಲಿ ಹುಟ್ಟಿ (ಹುಟ್ಟಲು ಸಾಧ್ಯವಿಲ್ಲ) ತಾನು ಕಂಡುಕೊಂಡ ಆರ್ಯ ಸತ್ಯ ಹೇಳಿದ್ದರೆ, ಬುದ್ಧನನ್ನು ಜೀವಂತವಾಗಿಯೇ ಉಳಿಸುತ್ತಿರಲಿಲ್ಲ. ಬುದ್ಧ ಭಾರತದವನಲ್ಲವೇ, ಅವನದ್ದು ಭಾರತೀಯ ರೂಢಿಯಲ್ಲವೇ?

ಭಾರತೀಯ ರೂಢಿಯನ್ನು ನಾವು ಎಷ್ಟು ವ್ಯಾಪಕವಾಗಿ ನೋಡುತ್ತೇವೋ ಅದರಂತೆ ವಿವರಣೆ ನಿಲ್ಲುತ್ತದೆ. ಸಾಮಾನ್ಯ ಗ್ರಹಿಕೆಗಾಗಿ ಆತ್ಮಚಿತ್ತ ಮತ್ತು ಲೋಕಚಿತ್ತ ಎಂದು ಭಾರತೀಯ ರೂಢಿಯನ್ನ ವಿಭಾಗಿಸಿಕೊಳ್ಳೋಣ. ಭಾರತೀಯ ಕಾಲಕಾಲಕ್ಕೂ ತನ್ನ ಲೋಕಚಿತ್ತವನ್ನು ಬದಲಾದ ಪ್ರಭುತ್ವ-ಭಾಷೆಯ ಪರಿಣಾಮವಾಗಿ ಬದಲಿಸಿಕೊಂಡ. ಅವನಲ್ಲಿನ ಆತ್ಮಚಿತ್ತ ಮಾತ್ರ ಬದಲಾಗಿಲ್ಲ. ಪಾಶ್ಚಿಮಾತ್ಯರ ಬಹುಪಾಲೆಲ್ಲವೂ ಲೋಕಚಿತ್ತವೇ ಆದ್ದರಿಂದ (ಉದಾ: ಆದರ್ಶ ರಾಜ್ಯ, ರೀಸನಿಂಗ್, ಅಸ್ತಿತ್ವವಾದ ಇತ್ಯಾದಿ) ಈ ಸಮಸ್ಯೆ ಅವರಲ್ಲಿ ಉದ್ಭವವಾಗಲೇ ಇಲ್ಲ. ತುಂಬಾ ಫಲವತ್ತಾದ ಭೂಮಿ, ಉತ್ತಮ ವಾತಾವರಣ, ಜೀವಯೋಗ್ಯ ಸೆಲೆಗಳು ಭಾರತದಲ್ಲಿ ಇದ್ದಿದ್ದರಿಂದ ನಾಳೆಯ ಅನ್ನದ ಚಿಂತೆಯ ಹೊರತಾದ ಆತ್ಮಚಿತ್ತ ಇಲ್ಲಿ ಬೇಗನೇ ಚಿಗುರೊಡೆಯಿತು. ನಾಳೆಯ ಅನ್ನದ ಚಿಂತೆಯೇ ದೊಡ್ಡದಾಗಿದ್ದ ಪ್ರದೇಶಗಳಲ್ಲಿ ಇದು ಬರಲು ಸಾಧ್ಯವಿರಲಿಲ್ಲ, ಆದ್ದರಿಂದ ಅಲ್ಲಿನ ವಿವೇಚನಾ ಲಹರಿಯೇ ಬೇರೆ. ಇಂದು ಪ್ರಪಂಚವೆಲ್ಲಾ ಒಂದು ಗೂಡು ಎಂಬಂತಾದರೂ ನಿರ್ದಿಷ್ಟ ಜನರು ಬೆಳೆದುಬಂದ ರೂಢಿ ಕಂಡೇ ಕಾಣುತ್ತದೆ. ಭಾರತೀಯರ ದೈವ-ಕರ್ಮ-ಪುನರ್ಜನ್ಮ-ಮೋಕ್ಷ ಎಂಬ ಕಲ್ಪನೆಗಳು ಲೋಕಚಿತ್ತವನ್ನು ಗೌಣ ಮಾಡಿರುವುದು ಸಹ ಸತ್ಯವೇ. ಭಾರತೀಯ ಮನಸ್ಸು ತುಂಬಾ ಸಂಪ್ರದಾಯವಾದಿಯಾದ್ದು. ಅದು ಸಂಪ್ರದಾಯದ ಮೂಲಕವೇ ಎಲ್ಲವನ್ನೂ ನಿರ್ಧರಿಸುತ್ತದೆ, ಅದೇ ಅದರ ಶಕ್ತಿ ಮತ್ತು ಮಿತಿ. ಈ ‘ಮಿತ್’ ಎಂಬುದಿದೆಯೆಲ್ಲಾ ಅದು ನಮ್ಮ ರೂಢಿಯ ವಾಹಕವೇ ಹೊರತು ಅದೇ ಮೂಲದ್ರವ್ಯವಲ್ಲ. ದುರಂತವೆಂದರೆ ಕೆಲ ಭಾರತೀಯರು ಮಿತ್ ಅನ್ನೇ ನಮ್ಮ ರೂಢಿ ಎಂದುಕೊಂಡಿದ್ದಾರೆ. ಭಾರತೀಯ ರೂಢಿಯನ್ನು ಅಟ್ಯಾಕ್ ಮಾಡುವವರು ಕೂಡ ‘ಮಿತ್’ ಅನ್ನೇ ಗುರಿಯಾಗಿಸುತ್ತಾರೆ ಹೊರತು, ಮೂಲದ ಅರಿವು ಅವರಿಗಿಲ್ಲ. ಏಕೆಂದರೆ ಪಶ್ಚಿಮವು ‘ಮಿತ್’ ಅನ್ನೇ ಪರಮಸತ್ಯವೆಂದುಕೊಂಡಿತ್ತು, ‘ಮಿತ್’ನ ಮಿತಿ ತಿಳಿದ ತಕ್ಷಣ ಅದು ಭ್ರಮನಿರಸನಕ್ಕೊಳಗಾಯಿತು, ಬಲವಾದ ಅಸ್ಥಿರತೆ ಅವರನ್ನು ಕಾಡಿತು, ಇದರಿಂದಲೇ ಅವರು ಲೋಕಚಿತ್ತಕ್ಕೆ ಮಾರುಹೋಗಿ ಅದರಲ್ಲೇ ಅಭಿವೃದ್ಧಿ ಮತ್ತು ಬದುಕಿನ ಸಾಫಲ್ಯವನ್ನು ಕಂಡುಕೊಳ್ಳಲು ಹಾತೊರೆದರು.

ವೈಚಾರಿಕತೆ ಮತ್ತು ರೂಢಿ ಬಹಳ ನಿಕಟವಾದ್ದು, ರೂಢಿಯನ್ನು ದಾಟುವುದೇ ವೈಚಾರಿಕತೆ ಎಂಬುದು ಪಶ್ಚಿಮದ ವಾದ. ರೂಢಿಯಲ್ಲೇ ವೈಚಾರಿಕತೆ ಕಂಡುಕೊಳ್ಳಬೇಕು ಎಂಬುದು ಭಾರತೀಯ ವಾದ. ಇವೆರೆಡರ ತಾಕಲಾಟದಲ್ಲಿ ಭಾರತೀಯನು ಪೂರ್ಣವಾಗಿ ವೈಚಾರಿಕನೂ ಅನ್ನಿಸಿಕೊಳ್ಳಲಾರ, ಪೂರ್ಣ ರೂಢಿನಿಷ್ಠನಾಗಿಯೂ ಉಳಿಯಲಾರ. ಅಥವಾ ಎರಡರ ಸಮನ್ವಯ ಕಾಯ್ದುಕೊಂಡು ಯಾವುದೂ ಅತಿಯಾಗಬಾರದು ಎಂಬುದೇ ಭಾರತೀಯ ದೃಷ್ಟಿಯಾಗಿರಬಹುದು.

-ಕರಣಂ ಪವನ್ ಪ್ರಸಾದ್
ಪ್ರಜಾವಾಣಿ ವಿಶೇಷಾಂಕ | 24.09.2018
1 like ·   •  0 comments  •  flag
Share on Twitter
Published on November 19, 2018 20:28

June 23, 2018

ಬದುಕಿನ ಇಚ್ಛಾಶಕ್ತಿ ಮತ್ತು ಸಮುದಾಯ ಪ್ರಜ್ಞೆ

ಈವರೆಗೂ ನಾವೇನೇನು ಹೇಳುತ್ತಿದ್ದೇವೋ, ಕಂಡುಕೊಂಡಿದ್ದೇವೋ, ಸದ್ಯ ನಾ ಬರೆಯುತ್ತಿರುವುದು ಎಲ್ಲವೂ ಮನುಷ್ಯ ಜೀವಿಯ ದಾಖಲೆ ಮತ್ತು ಗ್ರಹಿಕೆಗಳು. ತುಂಬಾ Anthropocentric ಆದ ಈ ಭೂಮಿಯಲ್ಲಿ ಮನುಷ್ಯ ತನ್ನ ಮಿತಿಯನ್ನೇ ಎಲ್ಲದರ ಮೇಲೆ ಆರೋಪಿಸುತ್ತಾ ಬಂದಿದ್ದಾನೆ. ನಾವು ನೋಡುತ್ತಿರುವ ಬಣ್ಣ ಕೆಂಪು ಬಣ್ಣ ಎಂದಿಟ್ಟುಕೊಳ್ಳಿ, ಅದು ಕೆಂಪೇ ಹೌದೇ ಅಥವಾ ಇಲ್ಲವೇ? ಆ ಬಣ್ಣಕ್ಕೊಂದು ಗ್ರೇಡ್ ಅಥವಾ ಗೋಚರತ್ವ ಬಿಂದು ಇಟ್ಟು ಕೆಂಪು ಎಂದು ಗುರುತಿಸುತ್ತೇವೆ. ಅಕಸ್ಮಾತ್ ಅನ್ಯಗ್ರಹ ಜೀವಿಗೆ (ಇದ್ದರೆ) ಅದು ಇನ್ನೇನೋ ಬಣ್ಣವಾಗಿ ಕಾಣಬಹುದು. ಅದಿರಲಿ, ಈ ಭೂಮಿಯಲ್ಲಿರುವ ಇತರೆ ಪ್ರಾಣಿಗಳಿಗೆ ಅದು ಯಾವ ರೀತಿ ಕಾಣುತ್ತದೆ ಎಂದು ವಿಜ್ಞಾನ ಕಡ್ಡಿ ಮುರಿದಂತೆ ಹೇಳಲಿಕ್ಕೆ ಸಾಧ್ಯವೇ ಆಗಿಲ್ಲ. ಬಣ್ಣದಲ್ಲಿ ಗೋಚರತ್ವದ ಪ್ರಮಾಣ, ಅಗೋಚರತ್ವದ ಪ್ರಮಾಣದ ಅಡಿಯಲ್ಲಿ ಇದು ಡಾರ್ಕ್ ಇದು ಲೈಟ್ ಎನ್ನುವ ನಿರ್ಣಯ ಮಾತ್ರ ಸತ್ಯಕ್ಕೆ ಹತ್ತಿರವಿರಬಹುದು. ಅದೂ ಸುಳ್ಳಾಗಬಹುದು... ನಮಗೆ ಬೆಳಕಿನಲ್ಲಿ ಗೋಚರವಾಗುವ ಬಣ್ಣ ಇನ್ನೊಂದು ಪ್ರಾಣಿಗೆ ಕತ್ತಲಲ್ಲಿ ಹೆಚ್ಚು ಗೋಚರವಾಗಬಹುದು. ಹೀಗಾಗಿ ಗೋಚರತ್ವದ ಗ್ರಹಿಕೆಯೇ ಸಂಕೀರ್ಣ. ಈ ಭೂಮಿಯೇ ಇಲ್ಲ, ಧ್ವಂಸವಾಯ್ತು, ಅಥವಾ ಇದು ಹುಟ್ಟೇ ಇರಲಿಲ್ಲ ಎಂದುಕೊಳ್ಳಿ... ಏನಿದು? ಯಾಕಿದು? ಹೇಗಿದು? ಎಂಬ ಕಲ್ಪನೆಯೇ ಒಂದು ರೀತಿ ಕಸಿವಿಸಿ ಮೂಡಿಸಿ, ಗೊಂದಲಕ್ಕೆ ತಳ್ಳುವಂಥದ್ದು. ಇದುವರೆಗೂ ದಾಖಲಿಸಿದ, ಗ್ರಹಿಸಿದ ಎಲ್ಲವೂ ಅಪ್ರಸ್ತುತವಾಗುತ್ತದೆ, ಭೂಮಿಯೇ ಅಪ್ರಸ್ತುತ, ಇಲ್ಲಿನ ಘನ, ದ್ರವ, ಅನಿಲಗಳು ಅಪ್ರಸ್ತುತ, ಇನ್ನು ಅಲ್ಲಿರುವ ಮನುಷ್ಯನ ದಾಖಲೆಗಳು ಯಾವ ರೀತಿ ಪ್ರಸ್ತುತ? ಡೈನೋಸಾರ್, ವೇದ, ಈಜಿಪ್ಟಿನ ಪಿರಮಿಡ್ಡು, ಅಲೆಗ್ಸಾಂಡರ್, ಮೌಂಟ್ ಎವರೆಸ್ಟು, ಕಾಳಿದಾಸ, ಕಂಪ್ಯೂಟರ್ ಎಲ್ಲವೂ ಅಪ್ರಸ್ತುತ. ಇವೆಲ್ಲಾ ಇದ್ದಿದ್ದರೂ ಇಲ್ಲದಿದ್ದರೂ ವ್ಯತ್ಯಾಸ ಆಗುತ್ತಿರಲಿಲ್ಲ ಎಂಬುದೇ ಭ್ರಮನಿರಸನ ಸತ್ಯ. ನಮ್ಮ ಪರಂಪರೆಯಲ್ಲಿ ಈ ರೀತಿಯ ಭ್ರಮನಿರಸನ ಗೊಂದಲ ಸ್ಥಿತಿಯಲ್ಲಿ ವಿವೇಚನೆ ಇರುವ ಜೀವಿ ಸ್ಥಿಮಿತ ಕಳೆದುಕೊಳ್ಳಬಾರದು ಎಂದೇ ಮೋಕ್ಷ, ಬ್ರಹ್ಮ, ಪರಮಾರ್ಥ ಎಂದೆಲ್ಲಾ ಸೃಷ್ಟಿಸಿದರು ಅನ್ನಿಸುತ್ತದೆ. ಇದೊಂದು ರೀತಿ "ಹಿತವಾದ" (ತರ್ಕ ಮಾಡಿ ಗೆಲ್ಲಲಾಗದ, ಮನಸ್ಸಿಗೆ ನೆಮ್ಮದಿ ತರಿಸುವ ವಾದ) ಮೋಕ್ಷ ಇದೆ... ಗುರಿ ಕೊಟ್ಟ ಹಾಗೆ ಆಯ್ತು. ಇದೆಯೋ ಇಲ್ಲವೋ ತರ್ಕ ಮಾಡಿ ಗೆಲ್ಲಕ್ಕೆ ಆಗೋಲ್ಲ, ಆದರೆ ಮನಸ್ಸಿಗೆ ಹಿತ, ಆದ್ದರಿಂದ ಒಪ್ಪಿತ. ಎಲ್ಲವೂ ಬ್ರಹ್ಮ, ಅದಕ್ಕೆ ಹುಟ್ಟಿಲ್ಲ ಸಾವಿಲ್ಲ, ಯೂನಿವರ್ಸ್ ಹೋಲೋಗ್ರಾಮ್ ಇದ್ದಂತೆ, ಅದಕ್ಕೆ ಬುಡವಿಲ್ಲ, ಕೊನೆಯಿಲ್ಲ, ಅದು ಬೆಳೆಯುತ್ತಿದೆ, ಸಾವು ಕೊನೆಯಲ್ಲ, ಪುನರ್ಜನ್ಮ ಇದೆ, ಬ್ಲಾಕ್ ಹೋಲ್ ಅಲ್ಲಿ ಹೋದದ್ದು ವಾಪಾಸ್ ಬರೋಲ್ಲ, ಕಾಲ ಸಾಪೇಕ್ಷವಾದ್ದು... ಇವೆಲ್ಲವೂ ಹಿತವಾದವೇ. ಸುಸ್ಪಷ್ಟ ತರ್ಕದಲ್ಲಿ ಇದನ್ನು ಸಾಬೀತು ಮಾಡಲು ಸಾಧ್ಯವೇ ಇಲ್ಲ. ಆದರೆ ಏನೋ ತಕ್ಕಮಟ್ಟಿಗೆ ಉತ್ತರ ಹಿತವೆನ್ನಿಸುತ್ತಿದೆ ಎಂದು ಒಪ್ಪಿಕೊಳ್ಳೋದು. ಇದನ್ನು ಫಿಲಾಸಫಿ ಹೇಳಿದರೆ ಹಿತವಾದ, ಸೈನ್ಸ್ ಹೇಳಿದರೆ ಒಪ್ಪಿತವಾದ. ಹಿತವಾದವು ಭಾವ ಕೇಂದ್ರಿತ, ಒಪ್ಪಿತವಾದವು ಧ್ವನಿ ಕೇಂದ್ರಿತ, ಇಷ್ಟೇ ವ್ಯತ್ಯಾಸ. ಎರಡೂ ಅಂತ್ಯದಲ್ಲಿ ಪರಮಸತ್ಯವೇನಲ್ಲ. ಇನ್ನು ದೇವರು ಎಂಬುದಂತೂ... ಬೇಡ ಬಿಡಿ. ಮನಸ್ಸು ಹಿತವಾದದಿಂದ ಹಿತವಾಗಿರಲಿ, ಕದಡುವುದು ಬೇಡ. ಇಷ್ಟು ಪೀಠಿಕೆ ಹಾಕಿದೆ ಉದ್ದೇಶ ಇಷ್ಟೇ. ಇವೆಲ್ಲವೂ ಮನುಷ್ಯ ಕೇಂದ್ರಿತ ಅಥವ ಮನುಷ್ಯ ಗ್ರಹಿಕೆಯ ಉತ್ಪನ್ನ. ಇಂಥಾ ಮಿತಿಶಿಖರಗಳನ್ನು ಹೊಂದಿರುವ ಕುಬ್ಜ ಮಹಾನ್ ಜೀವಿ ಮನುಷ್ಯ; ಯಾಕೆ ಬದುಕಬೇಕು? ಹೇಗೆ ಬದುಕಬೇಕು? ಎಂಬುದನ್ನು ಕ್ಷಣ ಕ್ಷಣಕ್ಕೂ ಚಿಂತಿಸುತ್ತಾನೆ. ಮನುಷ್ಯ ಇತಿಹಾಸವನ್ನು ಪರಿಗಣಿಸುವುದಾದರೆ ಬದಲಾಗದೇ ಪ್ರಾರಂಭದಿಂದ ಉಳಿದ ಎರಡು ಸಂಗತಿಗಳು; ವೈಯಕ್ತಿಕ ಅಸ್ತಿತ್ವ ಮತ್ತು ಸಮುದಾಯ. ಅದಕ್ಕೆ ಪೂರಕವಾದ ಇಚ್ಛಾಶಕ್ತಿ ಮತ್ತು ಪ್ರಜ್ಞೆ. ಭೂಗ್ರಹದ ಇತರ ಜೀವಿಗಳಲ್ಲೂ ಇದನ್ನು ಕಾಣಬಹುದಾದರೂ, ಭೂಗ್ರಹದ ಅತ್ಯಂತ ಪ್ರಗತಿಯುತ ಜೀವ ಉತ್ಪನ್ನವಾದ ಮನುಷ್ಯನನ್ನು ಮಾತ್ರ ಕೈಗೆತ್ತಿಕೊಂಡು ಇಲ್ಲಿ ಪರೀಕ್ಷಿಸೋಣ.

ಮನುಷ್ಯ ಬದುಕಬೇಕು...
ತನ್ನದೊಂದು ಕ್ಷೇತ್ರ, ಅಲ್ಲಿ ತನಗಾದದ್ದನ್ನು ಮಾಡುತ್ತಾ, ತನ್ನನ್ನು ಸಂತೈಸಿಕೊಳ್ಳುತ್ತಾ, ಪಾಲಿಸಿಕೊಳ್ಳುತ್ತಾ ಬದುಕುವುದೇ ಮನುಷ್ಯನ ಪ್ರಾಥಮಿಕ ಗುರಿ. ಹಾಗೆ ಆಗಬೇಕು, ಹೀಗೆ ಆಗಬೇಕು, ಇದೆಲ್ಲಾ ಮಾಡಬೇಕು, ಇಲ್ಲೆಲ್ಲಾ ಹೋಗಬೇಕು, ಇದೆಲ್ಲಾ ತಿಳಿಯಬೇಕು, ಹೀಗೆಲ್ಲಾ ಸವಿಯವೇಕು, ಹಾಗೆಲ್ಲಾ ನೋಡಬೇಕು ಇವೇ ಮುಂತಾದ ಸಾಫಲ್ಯತೆಯ ಬಯಕೆಯೇ ಅವನ ಜೀವನಕ್ಕೆ ಇಂಧನ. ಹುಟ್ಟಿದೆ ಇದ್ದೀನಿ ಸಾಯ್ತೀನಿ ಅನ್ನುವ ಸಾಮಾನ್ಯನಿಗೂ ಉಡಾಫೆಯ ಸಾಫಲ್ಯತೆ ಇದೆ. ವಿರಕ್ತ ನಾನು, ಒಬ್ಬಂಟಿ, ಇಂದ್ರಿಯಾತೀತ ನಿರಾಕಾರ ಬ್ರಹ್ಮ ಸೇರುತ್ತೇನೆ, ಎಲ್ಲದರಲ್ಲಿ ಒಂದಾಗುತ್ತೇನೆ ಎನ್ನುವವನಿಗೂ "ಅದಾಗುವ" ಸಾಫಲ್ಯದ ಕನಸು. ಬಿಡುತ್ತೇನೆ ಎನ್ನುವುದು ಬಯಕೆಯೇ! ತಮ್ಮ ಶಕ್ತಿ, ಯುಕ್ತಿಗನುಗುಣವಾದ ಸಾಫಲ್ಯದ ಸೆಳೆತವೇ ಬದುಕಬೇಕು ಎಂಬುದರ ಮೂಲ ದ್ರವ್ಯ. ನಾನು ಬದುಕೊಲ್ಲ ಎನ್ನುವವನಿಗೂ "ಸಾಕು" ಎನ್ನುವ ಸಾಫಲ್ಯದ ಬಯಕೆ! ತನಗೆ ಅನ್ನಿಸಿದ್ದನ್ನು ಸಾಕ್ಷೀಕರಿಸುವುದೇ ಮನುಷ್ಯನ ಗುಣ ಎಂದಾಯ್ತು. ಒಂದು ಹಂತದವರೆಗೂ ಅವನಿಗೆ ಅವನೇ ಅದನ್ನು ಸಾಬೀತುಮಾಡಿಕೊಳ್ಳುತ್ತಾ ಸಾಗುತ್ತಾನೆ, ಆದರೆ ಇತರರ ಮುಂದೆ ಅದನ್ನು ಸಾಬೀತು ಮಾಡುವ ಇಚ್ಛೆ ಅವನನ್ನು ಮೇಲಕ್ಕೂ, ಕೆಳಕ್ಕೂ ತಳ್ಳಾಡುತ್ತದೆ. ಸಾಬೀತು ಮಾಡಿಕೊಳ್ಳುವ ಪ್ರಕ್ರಿಯೆಯೇ ಅವನ ಬದುಕನ್ನು ನಿರ್ಧರಿಸುತ್ತದೆ. ಈ ಹಂತದಲ್ಲಿಯೇ ಮನುಷ್ಯ ತನ್ನ ಗುಣಕರ್ಮ ಆಧಾರದಲ್ಲಿ ವಿಭಾಗವಾಗುವುದು. ಸಾಬೀತು ಎಂಬ ಪದವಿದೆಯಲ್ಲ ಅದು ಎಷ್ಟು ಪದ-ವಸ್ತುಗಳನ್ನು ಸೃಷ್ಟಿಸುತ್ತದೆ ಗೊತ್ತೆ? ಸಾಬೀತುದಾರ, ಸಾಬೀತಿಗೆ ಸಾಕ್ಷಿ, ಅದಕ್ಕೆ ತೀರ್ಪುಗಾರ, ತೀರ್ಪುಗಾರನಿಗೆ ಕಟ್ಟಳೆ, ಕಟ್ಟಳೆ ಮಾಡುವ ಸಮಿತಿ, ಸಮಿತಿಗೊಂದು ಸಮಾಜ, ಸಾಬೀತು ಮಾಡಲಿಕ್ಕೆ ಆವರಣ, ಆ ಆವರಣಕ್ಕೊಂದು ವ್ಯಾಪ್ತಿ, ಅದಕ್ಕೊಂದು ಭೌಗೋಳಿಕ ರೇಖೆ, ಅದಕ್ಕೊಂದು ಸಂಸ್ಕೃತಿ, ಅದಕ್ಕೊಂದು ನಾಗರೀಕತೆ. ಇತ್ಯಾದಿ ಇತ್ಯಾದಿ ಎಲ್ಲವೂ ಪೂರಕ. ಮನುಷ್ಯ ಸಂಘಜೀವಿ ಎಂದರೆ... ಗುಂಪಾಗಿ ಬೇಟೆ ಮಾಡಿ ತಿನ್ನುತ್ತಾನೆ, ಒಟ್ಟಾಗಿ ಮಲಗುತ್ತಾನೆ, ಒಟ್ಟಾಗಿ ಉಣ್ಣುತ್ತಾನೆ, ಒಬ್ಬನೇ ಅಲೆಮಾರಿಯಾಗಿ ಬದುಕೊಲ್ಲ ಎಂಬ ಸಾಮಾನ್ಯ ಅರ್ಥ ತೆಗೆದುಕೊಳ್ಳಬಾರದು. ತಾನು ಇವೆಲ್ಲವನ್ನೂ ತ್ಯಜಿಸುತ್ತೇನೆ ಎಂದು ಸಾಬೀತು ಮಾಡಲೊರಡುವ ಮನುಷ್ಯನೂ ಸಹ ಈ ಎಲ್ಲಾ ಪೂರಕಗಳ ನೆರಳಲ್ಲೇ ಸಾಬೀತುಪಡಿಸಬೇಕು. ಇದರಿಂದ ಹೊರತಾಗೋಲ್ಲ. ಈ ಅವಲಂಬನೆಯೇ, ಅವಶ್ಯಕತೆಯೇ ಅವನು ಸಂಘಜೀವಿ ಎಂಬುದಕ್ಕೆ ತಕ್ಕ ಉತ್ತರ. ಸಾಮಾನ್ಯ ದೃಷ್ಟಾಂತ ಹೇಳುತ್ತೇವಲ್ಲ. ನಾನು ಎತ್ತರ ಎಂದು ತೋರಿಸಬೇಕಾದರೆ ಇನ್ನೊಂದು ಗಿಡ್ಡವಾದ್ದು ತೋರಿಸಬೇಕು. ನಾನೊಬ್ಬನೇ ಇದ್ದರೆ ನಾನು ಎತ್ತರವೋ, ಗಿಡ್ಡವೋ, ದಪ್ಪವೋ, ಸಣ್ಣವೋ ಹೇಗೆ ಗೊತ್ತಾಗುತ್ತದೆ. ಆದ್ದರಿಂದ ಮನುಷ್ಯ ತನ್ನ ಬದುಕನ್ನು ಸಮುದಾಯದ ಜೊತೆಯಲ್ಲಿ ಬೆಸೆದುಕೊಂಡ. ಸಮುದಾಯದ ನೆರಳಲ್ಲಿ ತನ್ನ ಅಸ್ತಿತ್ವ ಮತ್ತು ಇಚ್ಛಾಶಕ್ತಿ ನಿರೂಪಿಸಿಕೊಂಡ. ತಾನು ಬದುಕಬೇಕು ಎಂಬುದರ ಜೊತೆಗೆ ಸಮುದಾಯವು ಬದುಕಬೇಕು ಎಂಬ ಭಾವ, ಗಾಢವಾಗಿ ಅವನಲ್ಲಿ ಬೇರೂರಿದೆ. ಈ ಸಮುದಾಯ ಪ್ರಜ್ಞೆ... ಜಾತಿ, ವರ್ಣ, ದೇಶ, ವರ್ಗ, ಕುಲ, ನೆಲ, ಭಾಷೆ, ಊಟ, ಬಟ್ಟೆ, ಆಚಾರ, ವಿಚಾರ ಹೀಗೆ ಬೇರೆ ಬೇರೆ ರೀತಿಯಲ್ಲಿ ಗುಂಪುಗಳಾಗಿ ಅವನನ್ನು ಆವರಿಸಿರುತ್ತದೆ. ತನ್ನ ಹಿತಕ್ಕೆ ಅನುಗುಣವಾಗಿ ಆಯಾಯ ಸಂದರ್ಭದಲ್ಲಿ ಅವನು ಆ ಸಮುದಾಯ ಪ್ರಜ್ಞೆ ಪ್ರದರ್ಶಿಸುತ್ತಾನೆ. ಅದನ್ನು ಸಮರ್ಥಿಸಿಕೊಳ್ಳುತ್ತಾನೆ. ತನ್ನ ಅಸ್ತಿತ್ವವನ್ನು ಅದರಲ್ಲಿ ನಮೂದಿಸುತ್ತಾನೆ.

ಸಮುದಾಯಗಳ ಅಸ್ತಿತ್ವ...
ಪ್ರಾರಂಭದಲ್ಲಿ ದೊಡ್ಡ ಪ್ರಾಣಿಗಳನ್ನು ಬೇಟೆಯಾಡುವಾಗ ಗುಂಪಲ್ಲಿ ವಯಸ್ಸಾದ ಜನ ಮುಂದೆಯೂ, ಮಧ್ಯಮ ವಯಸ್ಕರು ಹಿಂದೆಯೂ, ಚಿಕ್ಕಮಕ್ಕಳು ದೂರದಲ್ಲಿ ತುರ್ತುಪರಿಸ್ಥಿತಿಯಲ್ಲಿ ಮಾತ್ರ ಬರುವಂತೆಯೂ ನೋಡಿಕೊಳ್ಳುತ್ತಿದ್ದರಂತೆ. ಕುಲದ ಮಕ್ಕಳಲ್ಲಿ ಒಬ್ಬನು ಮಾತ್ರ ಬೇಟೆಗೆ ಹೊರಡಬೇಕು, ಇಲ್ಲವಾದರೆ ಕುಲ ನಿರ್ಣಾಮ ಆಗುತ್ತದೆ. ದೊಡ್ಡವರು ಕುಲಕ್ಕಾಗಿ ಪ್ರಾಣ ಬಿಡಲಿಕ್ಕೂ ಸಿದ್ಧವಿದ್ದರು. ಅನೇಕ ಪ್ರಾಣಿಗಳಲ್ಲೂ ಈ ವರ್ತನೆ ಕಾಣಬಹುದು. ಅಂದಿನ ಕುಲ ಅಥವಾ ಕುಟುಂಬ, ಸಮಾಜವಾಯಿತು, ರಾಜ್ಯವಾಯಿತು, ಈಗ ದೇಶ ಎಂಬುದಕ್ಕೆ ಆ ಪ್ರವೃತ್ತಿ ನಿಷ್ಠವಾಗಿದೆ. ಮನುಷ್ಯ ಕುಲ ಉಳಿಯುವುದಕ್ಕೆ ಈ ಸಮುದಾಯ ಪ್ರಜ್ಞೆಯೇ ಕಾರಣ. ಇಲ್ಲದಾವರೆ ಎಷ್ಟೋ ಜೀವಿಗಳು ನಾಶವಾದಂತೆ ಮನುಷ್ಯ ಪ್ರಾಣಿ ನಶಿಸಿ ಹೋಗುತ್ತಿದ್ದ, ಅವನ ವಿಕಸನಕ್ಕೂ ಇದೇ ಕಾರಣ ಎನ್ನುತ್ತಾರೆ. ಭಾರತ ದೇಶದ ಎಲ್ಲರನ್ನೂ ಪೂರ್ಣವಾಗಿ ಒಂದು ಮತಕ್ಕೆ ಮತಾಂತರ ಮಾಡಲಿಕ್ಕೆ ಸಾಧ್ಯವಾಗದ್ದಕ್ಕೆ ಮುಖ್ಯ ಕಾರಣ "ಜಾತಿ" ಎನ್ನುವ ವಾದವಿದೆಯಲ್ಲ ಅದೂ ಹೀಗೆಯೇ ಇರಬಹುದು. ಅದರ ಸಾಧ್ಯಾಸಾಧ್ಯತೆ ಆಲೋಚಿಸಿ, ನಾನು ಮೂಲವನ್ನು ಮಾತ್ರ ಪ್ರಸ್ತಾಪಿಸುತ್ತೇನೆ. ಒಟ್ಟಾಗಿ ತಾನೊಂದು ಬುಡಕಟ್ಟು ಎಂಬ ಪ್ರಜ್ಞೆ ಮನುಷ್ಯನಲ್ಲಿದೆ. ಬುಡಕಟ್ಟುವಿಗೆ ಇರಬೇಕಾದ ಎಲ್ಲಾ ಗುಣಗಳನ್ನೂ ದೇಶ ಎಂಬುದರಲ್ಲೂ ಕಾಣಬಹುದು, ಆದರೆ ಪ್ರಮಾಣ ಮತ್ತು ಗಾತ್ರ ವ್ಯತ್ಯಾಸ ಅಷ್ಟೇ. ಪ್ರಮಾಣ ಮತ್ತು ಗಾತ್ರ ಹೆಚ್ಚಾದಂತೆ ಸಂಕೀರ್ಣತೆ, ವಿಭಾಗವೂ ಹೆಚ್ಚಾಗುತ್ತದೆ, ಆದರೆ ಮೂಲದ್ರವ್ಯ ಅದೇ. ಸಮುದಾಯವನ್ನು ಧಿಕ್ಕರಿಸುವ ಕೆಲಸ ಮಾಡುವಾಗ ಇನ್ನೊಂದು ಸಮುದಾಯದ ಸೃಷ್ಟಿಯಾಗುತ್ತದೆ. ಸಮುದಾಯಕ್ಕೆ ವ್ಯಕ್ತಿ ಪರ್ಯಾಯ ಆಗುವುದೇ ಇಲ್ಲ. ಸಮುದಾಯಕ್ಕೆ ಸಮುದಾಯವೇ ಪರ್ಯಾಯ. ಬದುಕಬೇಕು ಎಂಬ ಸಾಮಾನ್ಯ ಆಸೆಗೂ, ಸಮುದಾಯದ ಉಳಿವು ಎಂಬ ಅಸಮಾನ್ಯ ಬಯಕೆಯ ಮಧ್ಯೆ ಹಲವಾರು ಮಜಲು, ತಿರುವು ಇದೆ. ಆದರೆ ಇವು ಒಂದೇ ದಾರದ ಎರಡು ತುದಿ ಎಂಬುದು ಸಹಜ ವಿಸ್ಮಯ. ಅನ್ಯಗ್ರಹ ಜೀವಿಯ ಬಗ್ಗೆ ಮೊದಲು ಮಾತಾಡಿದೆ, ಅವರು ಬಂದು ದಾಳಿ ಮಾಡುವ, ನಾಶಗೊಳಿಸುವ ಕಾರ್ಟೂನ್ ಕಲ್ಪನೆ ಬದಿಗಿಡೋಣ. ಅವರ ಕಲ್ಪನೆ ನಮ್ಮಂತೆಯೇ ಇದೆಯೇ? ಅವರಿಗೆ ಕೆಂಪು, ಹಳದಿಯಾಗಿದ್ದರೇ? ನಮ್ಮ ನೀರು ಅವರಿಗೆ ಗಾಳಿಯಂತಾಗಿಯೂ, ಗಾಳಿಯೂ ನೀರಿನಂತೆ ಕೆಲಸ ಮಾಡುವ ದೇಹ ರಚನೆ ಹೊಂದಿದ್ದರೆ? ಎಂಬ ಪ್ರಶ್ನೆಗಳನ್ನು ಹಿಡಿಯಬೇಕಾಗುತ್ತದೆ. ವಿಷಯಕ್ಕೆ ಬರೋದಾದರೆ ಅವರೂ ಒಂದು ಸಮುದಾಯವೇ ಆಗಿರಬೇಕಲ್ಲವೇ. ಸಮುದಾಯವಲ್ಲದಿದ್ದರೆ ನಮ್ಮ ಭೂಗ್ರಹದ ಬಳಿ ಬರುವಷ್ಟು!? (ಬಂದರೆ) ವಿಕಸನವಾಗುತ್ತಿರಲಿಲ್ಲ ಅಲ್ಲವೇ. ಈ ಬ್ರಹ್ಮಾಂಡದಲ್ಲಿ ಏನೂ ಇಲ್ಲದೇ ಬರೀ ಭೂಗ್ರಹ ಮಾತ್ರ ಇದ್ದಿದ್ದರೇ!? ಮನುಷ್ಯ ಅದನ್ನು ತಾಳಿಕೊಳ್ಳುತ್ತಿದ್ದನಾ? ಹಾಗಾದರೆ ಭೂಮಿಗೂ ಸಮುದಾಯ ಬೇಕಲ್ಲವೇ? ಸಮುದಾಯ ಇರುವುದರಿಂದಲೇ ಭೂಮಿ; ಭೂಮಿ ಎನ್ನಿಸಿಕೊಂಡಿತಲ್ಲವೇ. ಭೂಮಿಗೆ ಬದುಕಬೇಕು ಎಂಬ ಇಚ್ಛಾಶಕ್ತಿ ಬೆಳೆದದ್ದು ತನ್ನ ಸೂರ್ಯ ಮಂಡಲ ಸಮುದಾಯದ ಆಧಾರದಲ್ಲೇ ಅಲ್ಲವೇ? ಈ ಭೂಮಿ ಇಲ್ಲ, ಸೂರ್ಯ ಇಲ್ಲ, ಕಣ ಇಲ್ಲ, ತೃಣ ಇಲ್ಲ, ಅಸಲಿಗೆ ಬ್ರಹ್ಮಾಂಡವೇ ಇಲ್ಲ ಎಂದರೆ... ಅಲ್ಲಿ ಕತ್ತಲೆಯೇ. ಕತ್ತಲೆ ಎನ್ನಲಿಕ್ಕಾದರೂ ಏನಾದರೂ ಇರಬೇಕಲ್ಲವೇ, ಬೆಳಕು ಇದ್ದರೆ ತಾನೆ ಕತ್ತಲು ಎಂಬುದಕ್ಕೆ ಅರ್ಥ. ಅಂದರೆ ಕತ್ತಲು, ಬೆಳಕು ಎಂಬುದು ಸಮುದಾಯ ವಾಚಕ!
 •  0 comments  •  flag
Share on Twitter
Published on June 23, 2018 22:52

July 24, 2017

ಸಾಹಿತ್ಯದಲ್ಲಿ ಸಾಮಾಜಿಕ ಸಿದ್ಧಾಂತ ಮತ್ತು ಕಲಾತ್ಮಕ ಸಿದ್ಧಾಂತ

ವಿವೇಕಿಗಳ ಜೊತೆಗಿನ ಮುಖತಃ ಚರ್ಚೆ ಮತ್ತು ಮಾತುಕತೆಯಲ್ಲಿ ‘ನಾನು ಸಂಪ್ರದಾಯವಾದಿ’ ಎಂದು ನೇರವಾಗಿ ಹೇಳಿದ್ದೇನೆ. ಇದರ ಬಗ್ಗೆ ಯಾವುದೇ ಗೊಂದಲ ನನಗಿಲ್ಲ. ಏಕಕಾಲದಲ್ಲಿ ನಾನು ಸಂಪ್ರದಾಯವಾದಿಯೂ, ಮಧ್ಯಮ ಮಾರ್ಗಿಯೂ ಆಗಿದ್ದೇನೆ. ಮಧ್ಯಮ ಮಾರ್ಗ ಎಂದರೆ “ಅದೂ ಅಲ್ಲದ, ಇದೂ ಅಲ್ಲದ, ಇನ್ನೊಂದು” ಎಂದು ಅರ್ಥೈಸುವವರು ಮತ್ತು ಅರ್ಥೈಸಿಕೊಳ್ಳುವವರು ಅವಿವೇಕಿಗಳೇ ಆಗಿದ್ದಾರೆ. ಸಂಪ್ರದಾಯವಾದಿಯಾಗಿಯೇ ಶುದ್ಧ ದೃಷ್ಟಿ ಇಟ್ಟುಕೊಂಡು ಸ್ವಂತಂತ್ರವಾದಿ-ವಾದವನ್ನು ಪರಿಶೀಲಿಸಿ ಆಲೋಚಿಸುವವನು ಮಧ್ಯಮ ಮಾರ್ಗಿ. ಹಾಗೆಯೇ ಸ್ವತಂತ್ರವಾದಿಯಾಗಿಯೇ ಶುದ್ಧ ದೃಷ್ಟಿ ಇಟ್ಟುಕೊಂಡು ಸಂಪ್ರದಾಯವಾದಿ-ವಾದವನ್ನು ಪರಿಶೀಲಿಸಿ ಆಲೋಚಿಸುವವನು ಮಧ್ಯಮ ಮಾರ್ಗಿ. ಮಧ್ಯಮ ಚಿಂತನೆ ಬುದ್ಧನ ದಾರಿಯೂ ಹೌದು. ಶುದ್ಧ ದೃಷ್ಟಿಯ ಪ್ರಮಾಣ ವೈಪರೀತ್ಯದಿಂದಾಗಿ ಅತಿರೇಕ, ಮಧ್ಯಮ ಅತಿರೇಕ, ಅತಿ ಅತಿರೇಕ ಹೀಗೆ ಸೀಳುತ್ತಾ ಹಲವಾಗುತ್ತದೆ. ಸಾಹಿತ್ಯದಲ್ಲಿ ಸಾಮಾಜಿಕ ಮತ್ತು ಕಲಾತ್ಮಕ ಸಿದ್ಧಾಂತ ವಿಷಯವನ್ನು ಮಂಡಿಸುವ ಮುನ್ನ ಮಧ್ಯಮ ಮಾರ್ಗದ ವ್ಯಾಖ್ಯಾನದ ಧಾವಂತ ಅವಶ್ಯವಾದದ್ದು. ಇಲ್ಲಿ ನಾನು ನನ್ನ ನಂಬಿಕೆಗಳನ್ನು suspend ಮಾಡಿ, ನನ್ನ ಧೋರಣೆಗಳಿಗೆ ಹೊರತಾದ ತೌಲನಿಕ ವಿಮರ್ಶೆಯನ್ನು ಈ ವಿಚಾರದ ಬಗೆಗೆ ನೀಡಲು ಯತ್ನಿಸುತ್ತೇನೆ.

ಸಂಪ್ರದಾಯವಾದಿಗಳು ಹೆಚ್ಚಾಗಿ ಕಲಾತ್ಮಕ ಸಿದ್ಧಾಂತವನ್ನು, ಸ್ವತಂತ್ರವಾದಿಗಳು ಪ್ರಮುಖವಾಗಿ ಸಾಮಾಜಿಕ ಸಿದ್ಧಾಂತವನ್ನು ಪ್ರತಿಪಾದಿಸುತ್ತಾರೆ. ಎಷ್ಟೇ ಕಾಲವನ್ನು ಹಿಂದಕ್ಕೆ ಎಳೆದರೂ, ಸಾಹಿತ್ಯ ರಚನೆ ಪ್ರಾರಂಭವಾದ ಕ್ಷಣದಿಂದ ತೆಗೆದುಕೊಂಡರೂ ಇವೆರೆಡು tendencyಯನ್ನು ಗುರುತಿಸಬಹುದಾಗಿದೆ. ಶುದ್ಧ ಸಾಹಿತ್ಯ ಆಸ್ವಾದ, ಶುದ್ಧ ಸಾಹಿತ್ಯ ಬರೆಹಗಾರ ಎಂಬಿತ್ಯಾದಿ ಮಾತುಗಳು ಸಹ ಮಧ್ಯಮ ಮಾರ್ಗದ್ದೇ ಆಗಿದೆ. ಮಧ್ಯಮ ಮಾರ್ಗದ ಪರಿಚಯ ನಿಮಗೆ ಮೇಲೆ ಮಾಡಿಕೊಟ್ಟಂತೆ ಮೂಲದಲ್ಲಿ ಯಾವುದೋ ಒಂದು tendencyಗೆ ಅವರು ಪಕ್ಕಾಗಿರುವುದು ಅಥವಾ ಸಾಮಾನ್ಯ ಪರಿಭಾಷೆಯಲ್ಲಿ ವಾಲಿರುವುದು ಸಹಜಗಣ್ಣಿಗೆ ನಿಲುಕುವ ಸತ್ಯವಾಗಿದೆ. ಹಾಗಾದರೆ ಇವುಗಳ ವ್ಯತ್ಯಾಸ ಮತ್ತು ಗುಣಾವಲೋಕನವನ್ನು ಕೈಗೆತ್ತಿಕೊಳ್ಳೋಣ.

ಸಾಮಾಜಿಕ ಸಿದ್ಧಾಂತ:

ಒಬ್ಬ ಬರೆಹಗಾರ ತನ್ನ ಬಾಲ್ಯದಿಂದ ಸಮಾಜವನ್ನು ಎದುರಾಳಿ ಎಂದು ಭಾವಿಸಿದಾಗ, ಸಾಮಾಜಿಕ ಸಿದ್ಧಾಂತ ಮೇಲೇಳುತ್ತದೆ. ಸಮಾಜ ಎದುರಾಳಿ ಆಗಬೇಕಾದರೆ... ಅದು ಆ ಮಟ್ಟಿನ ಕ್ರೌರ್ಯವನ್ನೋ, ಅವಮಾನವನ್ನೋ ಆತನಿಗೆ ನೀಡಿರಬೇಕು. ಆಗ ಆತನಲ್ಲಿ ರಮ್ಯತೆ ಗೌಣವಾಗುತ್ತದೆ. ಅನುಭವ ಆತನನ್ನು penetrate ಮಾಡುವಷ್ಟು, ಕಲಾತ್ಮಕತೆ ಮಾಡುವುದಿಲ್ಲ. ನಾನು ಯಾವ ಲೇಖಕನ ಉದಾಹರಣೆಯನ್ನೂ ನೀಡಲು ಬಯಸುವುದಿಲ್ಲ, ಅದು ವಿಚಾರದ ಹಾದಿಯನ್ನೇ ತಪ್ಪಿಸುತ್ತದೆ. ಮುಕ್ತವಾಗಿ ಒಂದನ್ನು ಗಮನಿಸೋಣ. ಎರಡು ಹುಡುಗರು... ಇಬ್ಬರೂ ಕಡು ಬಡವರು, ಇಬ್ಬರೂ ತಿನ್ನಲು ಅನ್ನವಿಲ್ಲದವರು. ಒಂದೇ ವ್ಯತ್ಯಾಸ ಶಾಲೆಯಲ್ಲಿ ಒಬ್ಬ ನೀರು ಮುಟ್ಟಬಹುದು, ಇನ್ನೊಬ್ಬ ನೀರು ಮುಟ್ಟುವಂತಿಲ್ಲ. ಮೇಲ್ನೋಟಕ್ಕೆ ಇಬ್ಬರೂ ಶೋಷಿತರೇ. ಆದರೆ ನೀರು ಮುಟ್ಟುವ ವ್ಯಕ್ತಿ ರಮ್ಯತೆ ಬಯಸುತ್ತಾನೆ, ಮುಟ್ಟಲಾಗದ ವ್ಯಕ್ತಿ ಸಿದ್ಧಾಂತಕ್ಕೆ ವಾಲುತ್ತಾನೆ. ಇಂದು ಈ ಪರಿಸ್ಥಿತಿಯಲ್ಲಿ ಇಲ್ಲ. ಹಲವು ಲೇಖಕರು ತಮ್ಮ ಬಾಲ್ಯ ವಿವರಣೆ ನೀಡುವುದರಿಂದ ಸತ್ಯದಲ್ಲಿ ಭಾರತದಲ್ಲಿ ಹಿಂದೆ ಜಾರಿಯಿದ್ದ ಈ ನಿದರ್ಶನ ನೀಡಿದೆ. ಆತ ಇದರಿಂದ ಹೊರತಾಗಿ ಹೊಟ್ಟೆ-ಬಟ್ಟೆ ಕಂಡ ನಂತರವೂ ರಮ್ಯತೆ ಅವನಿಗೆ ಹಿಡಿಸುವುದಿಲ್ಲ. ಆಗ ಆತ ತನ್ನ ಅಭಿವ್ಯಕ್ತಿಯನ್ನು ಹೆಚ್ಚು ಬಳಸುತ್ತಾನೆ, ಅದನ್ನೇ ಸಮರ್ಥಿಸುತ್ತಾನೆ. ಸಾಮಾಜಿಕ ಸ್ಥಿತ್ಯಂತರವಾಗದೇ ಸಾಹಿತ್ಯ ಜೊಳ್ಳು ಎಂದಾಡುತ್ತಾನೆ. ಸಾಹಿತ್ಯದ ರಸ-ಧ್ವನಿ-ಔಚಿತ್ಯಗಳು ಅವನಿಗೆ ಸೆಕೆಂಡರಿ. ಒಂದು ಕಥೆಯನ್ನು ಅವನು ನಿರೂಪಿಸಲು ಹೊರಟಾಗ ಅಭಿವ್ಯಕ್ತಿಯಲ್ಲಿರುವ ರಸವೇ ಎಲ್ಲಾ ಪಾತ್ರದಲ್ಲು ಬಂದುಬಿಡುತ್ತದೆ. ಒಳದನಿಯೇ ಸಾಹಿತ್ಯ, ಮಿಕ್ಕೆಲ್ಲವೂ ಮೇಕ್-ಅಪ್ ಎಂಬ ವಾದವನ್ನು ಅವರ ಸಾಹಿತ್ಯವು ಗಟ್ಟಿಯಾಗಿ ಪ್ರತಿಪಾದಿಸುತ್ತದೆ. ರಸೋತ್ಪಾದನೆಗಿಂತಲೂ, ದನಿ ಏಳಿಸುವ ಸಾಹಿತ್ಯವು ಸಮಾಜಕ್ಕೆ ಅವಶ್ಯಕ ಎಂಬುದು ಇದರ ಅಂತರಂಗ. ಸಮಾಜದ ಮೇಲೆ ಪರಿಣಾಮ ಬೀರಿ, ಅದರಲ್ಲಿನ ಅಸಮಂಜಸತೆಯನ್ನು ರಮ್ಯತೆಯಲ್ಲಿ ಮುಚ್ಚಿಹಾಕದೇ ವಾಸ್ತವವನ್ನು ಹಸಿಯಾಗಿ ತೆರೆದಿಡಬಲ್ಲ ಬರೆಹವು ಸಾಹಿತ್ಯದಲ್ಲಿ ಮೂಲವಾಗಬೇಕು ಎನ್ನುವುದನ್ನು ಸಾಮಾಜಿಕ ಸಿದ್ಧಾಂತದ ಲೇಖಕರು ಹೇಳುತ್ತಾರೆ.
ಸಾಮಾಜಿಕ ಸಿದ್ಧಾಂತ, ಕೇವಲ ಸಮಾಜದ ವಿರುದ್ಧವಾದ ಮುಖವಾಣಿ ಎಂಬುದನ್ನೂ ಇಲ್ಲಿ ಒಪ್ಪುವುದಿಲ್ಲ. ಸಮಾಜದಿಂದ ದಾಳಿಗೊಳಗಾಗದ ಒಬ್ಬ ವ್ಯಕ್ತಿಯೂ ಕೂಡ, ಸಾಮಾಜಿಕ ಸಿದ್ಧಾಂತವನ್ನು ಸಾಹಿತ್ಯದಲ್ಲಿ ತರುವುದಿದೆ. ಈ ಭಿನ್ನ ವರ್ಗದ ಲೇಖಕರು ಕಲಾತ್ಮಕತೆಯನ್ನು ಮತ್ತು ಸಾಮಾಜಿಕ ಸಿದ್ಧಾಂತವನ್ನು ಎರಡನ್ನೂ ನಂಬುತ್ತಾರೆ. ಆದರೆ ಕಲಾತ್ಮಕತೆಯ ಮೂಲವೇ ಸಾಮಾಜಿಕ ಸಿದ್ಧಾಂತ ಎಂದು ಅವರು ನಿರೂಪಿಸುತ್ತಾರೆ. ರಾಜಕೀಯ ಸಿದ್ಧಾಂತ ಸ್ಪಷ್ಟತೆ ಇಲ್ಲದವನು ಯಾವ ಸಾಹಿತ್ಯವನ್ನು ನಿಷ್ಠುರವಾಗಿ ಬರೆಯಲು ಆಗುವುದಿಲ್ಲ ಎಂಬ ಮಾತನ್ನು ಇವರಲ್ಲಿ ಗಮನಿಸಬಹುದು. ಜೀವನವನ್ನು ನೋಡುವ ಕ್ರಮದಲ್ಲು ಹಂತ ಹಂತವಾಗಿ ರಾಜಕೀಯ-ಸಾಮಾಜಿಕ ಸಿದ್ಧಾಂತವೇ ಪ್ರಭಾವ ಬೀರಬೇಕು ಎಂಬುದನ್ನು ಇವರ ಸಾಹಿತ್ಯ ಪಾತ್ರಗಳಲ್ಲಿ ಕಾಣಬಹುದು. ಇದರ ಅಚೆಗೆ ಸಾಮಾಜಿಕ ಸಿದ್ಧಾಂತ ಪ್ರೇರಿತ ಸಾಹಿತ್ಯ ಸ್ವಾದ ನೀಡುವುದಿಲ್ಲವೇ ಎಂದು ಕೇಳಿದರೆ, ನೀಡುತ್ತದೆ ಎಂದೇ ಹೇಳಬೇಕು. ತನ್ನ ದನಿಯಾಗಿ ಇನ್ನೊಬ್ಬನಿದ್ದಾನೆ ಎಂಬ ಭರವಸೆ ಇನ್ನಷ್ಟು ದನಿಯನ್ನು ಹೊರಡಿಸಬಲ್ಲದು. ಆ ದನಿಗೂಡಿಸುವಿಕೆ ಸ್ವಾದವಿಲ್ಲದೇ ಬರುವುದಿಲ್ಲ. ಅದು ಯಾವುದೋ ಒಂದು ರಸವನ್ನು ಅವನಲ್ಲಿ ಉತ್ಪತ್ತಿ ಮಾಡಿರಬಹುದು. ಆದರೆ ಖಂಡಿತಾ ಅದು ಆತನಿಗೆ ದಾಟಿದೆ-ನಾಟಿದೆ ಎನ್ನಬಹುದು.

ಕಲಾತ್ಮಕ ಸಿದ್ಧಾಂತ:

ರಸ-ಧ್ವನಿ-ಔಚಿತ್ಯವೇ ಸಾಹಿತ್ಯಕ್ಕೆ ಪ್ರಧಾನ ಎಂಬುದು ಕಲಾತ್ಮಕ ಸಿದ್ಧಾಂತದ ನಂಬಿಕೆ. ಅನುಭವವನ್ನು ಸಾರ್ವತ್ರಿಕ ಮಾಡಿಕೊಳ್ಳದೇ, ಹೊಸದನ್ನು ಹುಡುಕುವ ಪ್ರಯೋಗದಲ್ಲಿ ಕಲಾತ್ಮಕತೆ ಏಳುತ್ತದೆ. ಒಬ್ಬ ಬರೆಹಗಾರ ಕಲಾತ್ಮಕತೆಯನ್ನು ಹೇಗೆ ನಂಬುತ್ತಾನೆ ಎಂದು ಹೇಳುವುದು ಕಷ್ಟ. ಒಬ್ಬ ವ್ಯಕ್ತಿ ತನ್ನ ಇರುವಿನ ಬಗ್ಗೆ ಯೋಚಿಸುವಷ್ಟು ಪುರುಸೊತ್ತು ಮಾಡಿಕೊಂಡಾಗ ಕಲಾತ್ಮಕತೆಯನ್ನು ದಾಟಿಸುವ ಪ್ರಯತ್ನ ಮಾಡುತ್ತಾನೆ. ವ್ಯತ್ಯಾಸ ಗಮನಿಸಿ ಇರುವಿನ ಬಗೆಗಿನ ಹೋರಾಟ ಸಾಮಾಜಿಕ ಸಿದ್ಧಾಂತ, ಇರುವನ್ನು ಅರಿಯುವ ಹೋರಾಟ ಕಲಾತ್ಮಕ ಸಿದ್ಧಾಂತ. ಅಸ್ತಿತ್ವಕ್ಕೆ ಅನುಭವವೇ ಮುಖ್ಯ, ಅಸ್ತಿತ್ವ ಶೋಧಕ್ಕೆ ರಮ್ಯತೆಯೇ ಮುಖ್ಯ. ಇವರ ಸಾಹಿತ್ಯದಲ್ಲಿ ತಮ್ಮ ನಂಬಿಕೆಯನ್ನು ಬಣ್ಣಗಟ್ಟಿಸಿ ಹೇಳುವ ಪ್ರಕ್ರಿಯೆ ಹೆಚ್ಚಿರುತ್ತದೆ. ತುಂಬಾ ಸರಳವಾದುದು ಕೂಡ ಇಲ್ಲಿ ಗಹನ. ತುಂಬಾ ಗಹನವಾದದ್ದು ಇಲ್ಲಿ ಸರಳ. ಏಕೆಂದರೆ ಇಲ್ಲಿ ಸಾಹಿತ್ಯ ಸಾಧನಗಳು ಹೆಚ್ಚು. ಸಾಮಾಜಿಕ ಸಿದ್ಧಾಂತ ನಿರ್ಣಯಿಸುವ ಕಾರ್ಯವನ್ನೂ ಒಮ್ಮೊಮ್ಮೆ ಕಲಾತ್ಮಕತೆ ಮಾಡುತ್ತದೆ. ಆದರೆ ದಾಹವಾದಾಗ ನೀರು ಸಿಗುವ ಹಪಹಪಿ ಕಲಾತ್ಮಕ ಸಿದ್ಧಾಂತದಲ್ಲಿ ಸೃಷ್ಟಿಗೊಂಡರೆ, ನೀರು ಮುಟ್ಟಲಿಕ್ಕೂ ಬಿಡದ ಹತಾಶೆ ಸಾಮಾಜಿಕ ಸಿದ್ಧಾಂತದಲ್ಲಿ ಸೃಷ್ಟಿಗೊಳ್ಳುತ್ತದೆ. ಎರಡನ್ನೂ ತಿರಸ್ಕರಿಸುವುದು ಅಸಾಧ್ಯ. ರಾಜಕೀಯ ಆಯಾಮ ಇಟ್ಟುಕೊಂಡು ಪಾತ್ರ-ಕಥಾನಕ ಬರೆದಾಗ ಸಾಹಿತ್ಯದ ಸಾಂದ್ರತೆ ಹೊರಟುಹೋಗುತ್ತದೆ ಎಂದು ಇಲ್ಲಿ ಲೇಖಕ ಸಮರ್ಥಿಸುತ್ತಾನೆ. ಸಮಾಜದ ವೈಪರೀತ್ಯವನ್ನ ಹಸಿ ಹಸಿಯಾಗಿ ನಿಲ್ಲಿಸುವುದು ಎಂದಿಗೂ ಸಾಹಿತ್ಯವಾಗಲಾರದು, ಸಾಮಾಜಿಕ ಸಿದ್ಧಾಂತವು ಅಕ್ಕಿಯಾದರೆ, ಕಲಾತ್ಮಕ ಸಿದ್ಧಾಂತವು ಅನ್ನ. ಬೇಯಿಸುವುದೇ ಸಾಹಿತ್ಯ ಪ್ರಕ್ರ‍ಿಯೆ. ಅದು ರುಚಿ ಹೆಚ್ಚಿಸುತ್ತದೆ ಎಂಬ ಪ್ರತಿಪಾದನೆ ಇಲ್ಲಿದೆ.
ಕಲಾತ್ಮಕ ಸಿದ್ಧಾಂತವು ಕೇವಲ ರಮ್ಯತೆ ಎಂಬುದನ್ನೂ ಇಲ್ಲಿ ಒಪ್ಪುವುದಿಲ್ಲ. ಅನುಭವವಿಲ್ಲದ ರಮ್ಯತೆ, ಜೊಳ್ಳು ಎಂಬುದೂ ಕೂಡ ಇಲ್ಲಿನ ನಂಬಿಕೆ. ಸಂಪ್ರದಾಯವಾದಿ ಕಲಾತ್ಮಕ ಲೇಖಕರು ಸಾಮಾಜಿಕ ಅಸಮತೋಲನ ವಿರುದ್ಧ ಧೋರಣೆಯನ್ನು ಸಾಹಿತ್ಯದಲ್ಲಿ ತರುತ್ತಾರೆ. ಆದರೆ ಧೋರಣೆಯನ್ನು ನಿರೂಪಿಸುವಾಗ ವಾದಿ-ಪ್ರತಿವಾದಿ ಕಲಾತ್ಮಕ ಸಾಹಿತ್ಯ ತಂತ್ರ ಇಟ್ಟುಕೊಂಡು ಆಶಯವನ್ನು ದಾಟಿಸುವಾಗಲೂ ತಮ್ಮ ನಂಬಿಕೆಯ ಸಂಪ್ರದಾಯವೇ ಗೆಲ್ಲುವಂತೆ ನೋಡಿಕೊಳ್ಳುತ್ತಾರೆ. ಸೌಂದರ್ಯ ಮತ್ತು ಆನಂದ ಇವರ ಸಾಹಿತ್ಯ ಪಾತ್ರಗಳಲ್ಲಿ ಪ್ರಮುಖವೇ ಹೊರತು, ಜೀವನವನ್ನು ಸಾಮಾಜಿಕ ಸಿದ್ಧಾಂತ ಆಧಾರದಲ್ಲೇ ನೋಡುವುದನ್ನು ಒಪ್ಪುವುದಿಲ್ಲ. ಫಿಲಸಾಫಿಕಲ್ ಆಯಾಮವನ್ನು ಜೀವನದ ಮೇಲೆ ಪ್ರಯೋಗಿಸುವುದು ಕಲಾತ್ಮಕ ಸಿದ್ಧಾಂತಿಗಳ ಮುಖ್ಯ ಪ್ರಕ್ರಿಯೆ. ತನಗನ್ನಿಸಿದ್ದು ಮತ್ತು ತನ್ನಲ್ಲೇ ಶೋಧಿಸಿದ್ದನ್ನು ರಸ-ದನಿ-ಔಚಿತ್ಯದಲ್ಲಿ ನೀಡಿದರೆ ಮಾತ್ರ ಹೆಚ್ಚು ಕಾಲ ಜನರಲ್ಲಿ ಉಳಿಯುತ್ತದೆ ಎಂಬ ಕಲಾತ್ಮಕ ಪ್ರತಿಪಾದನೆ ಜನ ಸಾಮಾನ್ಯರನ್ನು ಪ್ರಬಲವಾಗಿ ತಲುಪಿದೆ.

ಒಟ್ಟು ಮಾತು:

ತಾಂತ್ರಿಕ ಆಂಶಗಳನ್ನು ನಾನು ಉಲ್ಲೇಖಿಸಲು ಹೋಗಿಲ್ಲ. ಯಾವ ಸಿದ್ಧಾಂತ ಶ್ರೇಷ್ಠ ಎಂಬ ತರ್ಕವೂ ಇಲ್ಲಿಲ್ಲ. ಒಪ್ಪಲಿ, ಬಿಡಲೀ, ಇವರೆಡು ಅಸ್ತಿತ್ವದಲ್ಲಿ ಇದೆ. ಇವೆರೆಡನ್ನೂ ಒಪ್ಪಿಕೊಂಡ, ಓದುಗರು, ಬರೆಹಗಾರರು ಇದ್ದಾರೆ. ತಮ್ಮ ತಮ್ಮ ನಂಬಿಕೆಯೇ ಶ್ರೇಷ್ಠ ಎಂದು ತಿಳಿದವರೂ ಇದ್ದಾರೆ. ಸಾಮಾನ್ಯವಾಗಿ ಎಲ್ಲಾ ಸಾಹಿತ್ಯ ಬರೆಹದಲ್ಲೂ ಇವೆರೆಡರ ಹದವಾದ ಮಿಶ್ರಣ ಕಂಡೇ ಕಾಣುತ್ತದೆ. ಆದರೂ ಲೇಖಕ ಯಾವ tendency ಹೆಚ್ಚಾಗಿ ಹೊಂದಿದ್ದಾನೆ ಎಂದು ಗಂಭೀರ ಓದುಗರಿಗೆ ತಿಳಿಯದೇ ಇರೋಲ್ಲ. ಅದೇ ಕಾರಣಕ್ಕೆ ಅವನನ್ನು ವಿರೋಧಿಸುವುದು ಅಥವಾ ಸಂಭ್ರಮಿಸುವುದು ಇದ್ದರೆ ಅಂಥಹದು ಬಲು ಅಪಾಯಕಾರಿ. ಎರಡರ ಅಸ್ತಿತ್ವವನ್ನು ಒಪ್ಪಿಕೊಳ್ಳಲೇಬೇಕು. ನೀವು ಒಪ್ಪದಿದ್ದ ಮಾತ್ರಕ್ಕೆ ಅದು ಸುಳ್ಳಾಗುವುದಿಲ್ಲ!
1 like ·   •  0 comments  •  flag
Share on Twitter
Published on July 24, 2017 23:29